"ಜನ ಗಣ ಮನ" - ಬಂಗಾಳ ಮತ್ತು ಒರಿಸ್ಸಾ ಪ್ರವಾಸಕಥನ. ಲೇಖಕ : ಡಾ. ಎಚ್. ಎಸ್. ರಾಘವೇಂದ್ರರಾವ್ [ರಾ. ರಾ]
ಪ್ರಕಾಶನ :
ಕರ್ನಾಟಕ ಸಾಹಿತ್ಯ ಅಕಾಡೆಮಿ
ಇದು ಹೊರ ನೋಟಕ್ಕೆ ಒಂದು ಪ್ರವಾಸ ಕಥನ. ಆದರೆ, ಅದರಲ್ಲಿ ಬರುವ ಸನ್ನಿವೇಶಗಳನ್ನೆ ಹೋಲಿಸಿ ರಾಯರ ಕೊಡುವ ಒಳನೋಟಗಳು ಅವರ್ಣನೀಯ. ಇದಕ್ಕೆ ಕಾರಣ ಅವರಲ್ಲಿ ಅಡಗಿರುವ ಅವರ ಅದ್ಭುತ ಜ್ಞಾನ ಭಂಡಾರ. ಅದಕ್ಕೆ ತಕ್ಕ ಹಾಗೂ ಪೂರಕವಾದ ಭಾಷಾ ಸಂಪತ್ತು. ಎಲ್ಲವನ್ನು ನಿಧಾನವಾಗಿ ನೋಡಿ ಅದನ್ನು ಸರಿಯಾಗಿ ಅರ್ಥೈಸಿಕೊಂಡು ಓದುಗರ ಮನಸ್ಸಿನಲ್ಲಿ ಒಂದು ಹೊಸ ಅನುಭವ ಲೋಕವನ್ನು ನಿರ್ಮಾಣಮಾಡುವಲ್ಲಿ ಅವರು ಸಾರ್ಥಕರಾರಿದ್ದಾರೆ. ಮುನ್ನುಡಿಯನ್ನು ಬರೆದ ಪ್ರಸಿದ್ಧ ವ್ಯಕ್ತಿ, ಹಾಗೂ ಅವರ ಮತ್ತು ನಮ್ಮೆಲ್ಲರ ಮೆಚ್ಚಿನ ಡಾ. ಶಿವರುದ್ರಪ್ಪನವರು. ನಮ್ಮ ಮಗಳು ಅವರನ್ನು ಸಂಬೋದಿಸುವ ರೀತಿ, ಹೇಗೆ; 'ಎಲ್ಲೊ ಹುಡುಕಿದೆ ಕಾಣದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ... ಆ ಪದ್ಯ ಬರ್ದಿದಾರಲ್ಲಪ್ಪ.. ಅವ್ರೆ .ಅವ್ರೆ .. ಶಿವರುದ್ರಪ್ಪ್ನೋರು, ಅಂತ.
ನನಗಂತೂ ಆ ಪದ್ಯ ಅತ್ಯಂತ ಪ್ರಿಯ. ನನಗೆ ಪ್ರಿಯವಾದ ಎಲ್ಲಾ ಮಕ್ಕಳ ಬಾಯಿನಲ್ಲೂ ಒಮ್ಮೆ ಅದನ್ನು ಹಾಡಿಸಿ ಅದರ ಹೊಸ ಸೊಬಗನ್ನು ಸವಿಯುವ ಹಂಬಲ ನನ್ನದು ! ಜಿ.ಎಸ್.ಎಸ್, ಜನ ಗಣ ಮನ ಪುಸ್ತಕವನ್ನು ಬಹಳ ಸೊಗಸಾಗಿ ವಿಶ್ಲೇಷಿಸಿದ್ದಾರೆ.
ರಾಘವೇಂದ್ರರಾಯರ ಒರಿಸ್ಸ ಮತ್ತು ಬಂಗಾಳದ ಭೇಟಿ ನಮಗೆಲ್ಲಾ ಮುದಕೊಡುವ ಪುಸ್ತಕ. ನಾನು ಮತ್ತು ನನ್ನ ಪರಿವಾರದವರೆಲ್ಲಾ ಬಹಳ ಹಿಂದೆ, ಕಾಮತ್ತರ 'ವಂಗದರ್ಶನ' ಮತ್ತು 'ನಾನೂ ಅಮೆರಿಕೆಗೆ ಹೊಗಿದ್ದೆ' ಅನ್ನುವ ಪುಸ್ತಕಗಳನ್ನು ಓದಿ ಆನಂದಿಸಿ, ಸುಮಾರು ತಿಂಗಳುಗಟ್ಟಲೆ ಅದರಲ್ಲಿ ಬರುವ ಸನ್ನಿವೇಷಗಳನ್ನು ಒಬ್ಬರಿಗೊಬ್ಬರು ಹೇಳಿಕೊಂಡು ನಗೆಯಾಡಿದ್ದೆವು. ಬಹುಶಃ ಇಲ್ಲಿಯೂ ಅದೇ ವಿಷಯವಾದದ್ದರಿಂದ ಅಂತಹ ಸುಯೋಗ ಮತ್ತೆ ಬಂದಿದೆ ಎಂದರೆ ತಪ್ಪಲ್ಲ.
ಪೀಠಿಕೆಯಲ್ಲಿ ಹೇಳಿರುವಂತೆ, ೧೯೮೮ ರ ಕನ್ನಡ ಸಾಹಿತ್ಯ ಅಕಾಡಮಿಯ ಪ್ರವಾಸ ಅನುದಾನ ಯೋಜನೆಯಲ್ಲಿ ಬಂಗಾಳ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಕೈಗೊಂಡ ಪ್ರವಾಸಾನುಭವದ ಕಥನವಿದು. ರಾಘವೇಂದ್ರರಾಯರ ಛಾಪು ಅವರ ವಿಮರ್ಶೆಯಲ್ಲಿ. ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ತುಂಬಾ ಗಂಭೀರವಾದ ಹಾಗೂ ಶ್ರೇಷ್ಟ ವಿಮರ್ಶಕರ ಹೆಸರುಗಳನ್ನು ನಮೂದಿಸಲಾಗಿದೆ. ಒರಿಸ್ಸ ರಾಜ್ಯದ ಭುವನೇಶ್ವರ, ರವೀಂದ್ರರ ಬಂಗಾಳದ ಸುತ್ತಮುತ್ತಲ ಜಾಗಗಳನ್ನು ವೀಕ್ಷಿಸಿ ತಾವು ಕಂಡ ನೋಟಗಳನ್ನು ಮತ್ತು ಭೇಟಿಮಾಡಿದ ಸಾಹಿತಿಗಳನ್ನು ಕಲಾವಿದರನ್ನು ಮತ್ತೆ ಅಲ್ಲಿ ಸಂದರ್ಶಿಸಿದ ಸಾಂಸ್ಕೃತಿಕವಾದ ಮಹತ್ತರ ಸ್ಥಳಗಳನ್ನು ಮತ್ತು ತಮ್ಮ ವೈಯಕ್ತಿಕ ಅನುಭವ ಭಂಡಾರವನ್ನು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ರೈಲ್ವೆ ಪ್ರಯಾಣದಲ್ಲಿ ಅವರ ವಿಮರ್ಶಾತ್ಮಕ ಕಣ್ಣುಗಳಿಂದ ಹಿಡಿದ ಚಿತ್ರಗಳು ಅವರ ಪ್ರಯಾಣದುದ್ದಕ್ಕೂ ಅನುಭವಿಸಿದ ತಮ್ಮ ಅನುಭಾವಗಳನ್ನು ಪರಿಚಯಿಸುವ ರೀತಿ ಅನನ್ಯ. ಅವರ ವಿಚಾರ ಲಹರಿಗಳು ಕಂಪ್ಯೂಟರಿನ "ಸ್ಲೈಡ್ ಶೋ "ನಲ್ಲಿ ನಿಧಾನವಾಗಿ ಒಂದಾದದೊಂದರ ಮೇಲೆ ತೆರೆಯ ಮೇಲೆ ಮೂಡಿಬರುವ ಚಿತ್ರಗಳಂತೆ. ಇಲ್ಲಿ ನಾವು ಅವರ ಹೃದಯ ವೈಶಾಲ್ಯತೆ, ಮತ್ತು ವ್ಯಕ್ತಿತ್ವದ ಅರಿವಾಗುತ್ತಾ ಹೋಗುವುದನ್ನು ನಾವು ಕಾಣುತ್ತೇವೆ.
ರವೀಂದ್ರರ ಅನೇಕ ಪುಸ್ತಕಗಳು ಬಹಳ ಹಿಂದೆಯೇ ಕನ್ನಡದಲ್ಲಿ ತರ್ಜುಮೆಯಾಗಿದ್ದು, ಅದನ್ನು ನಾನು ನನ್ನ ಬಾಲ್ಯದಲ್ಲಿ ಓದಿದ ನೆನಪು. ನಮ್ಮ ತಂದೆಯವರು ತಮ್ಮ ಪುಸ್ತಕಭಂಡಾರದಲ್ಲಿ, ನವಾಬ ನಂದಿನ, ಮಹಾಶ್ವೇತೆ, ದುರ್ಗೇಶನಂದಿನಿ, ವಂಗ ವಿಜೇತ, ಕಪಾಲಕುಂಡಲಿ, ದೇವಿ ಚೌಧುರಾಣಿ, ರೆಡ್ ಆಲೆಂಡರ್ಸ್, ಗೋರಾ, ಪೋಸ್ಟ್ ಆಫೀಸ್, ಗೀತಾಂಜಲಿ, ನೌಕಾಘಾತ (The Wreck) ಮುಂತಾದ ಪುಸ್ತಕಗಳು ನಮಗೆ ಒಂದು ಹೊಸ ಲೋಕವನ್ನೇ ತೆರೆದು ಕೊಟ್ಟಿದ್ದವು. ಅವುಗಳನ್ನು ಓದಿ ಅರ್ಥಮಾಡಿಕೊಂಡಿದ್ದೆವು ಎಂದು ಖಂಡಿತ ಹೇಳಲಾರೆ. ಮನೆಗೆ ಬಂದವರೆಲ್ಲಾ 'ಒಹ್ ನಿಮ್ಮ ಬಳಿ ಟ್ಯಾಗೋರ್ ಪುಸ್ತಕಗಳಿವೆಯೇ, ಮತ್ತು ಶರತ್ ಚಂದ್ರ ಛಟರ್ಜಿ, ಪ್ರೇಮ್ ಚಂದ್ ರ ವ್ಯಾಖ್ಯಾನಗಳ ಪುಸ್ತಕಳಿವೆ ಎಂದು ಕೇಳಿದೊಡನೆಯೇ, ಅತ್ಯಂತ ಮರ್ಯಾದೆಯಿಂದ ನಮ್ಮನ್ನು ಮಾತಾಡಿಸುತ್ತಿದ್ದರು. ಇದನ್ನು ಚಿಕ್ಕವರಾದ ನಾವೂ ಚೆನ್ನಾಗಿ ಅರಿತಿದ್ದೆವು.
ನಾನು ಮುಂಬೈಗೆ ಬಂದಮೇಲೆ ಓದಿದ ಪುಸ್ತಕ, ನಿರಾದ್ ಛೌಧರಿಯವರ, 'The Autobiography of an unknown Indian', ಮತ್ತೆ ವಿಕ್ಟರ್ ಬ್ಯಾನರ್ಜಿಯವರು ನಟಿಸಿದ್ದ ಚಲನಚಿತ್ರ, ದೆವಿಡ್ ಲೀನ್ ನಿರ್ದೇಶಿಸಿದ, "A Passage to India ," ನನಗೆ ಬೆಂಗಾಳಿಗಳ ಬಗ್ಗೆ ಹೆಚ್ಚು ಅರಿಯಲು ಪ್ರೇರಣೆ ನೀಡಿತ್ತು. ಟ್ಯಾಗೋರ್ ರ 'ಗೋರಾ' ಪುಸ್ತಕ ಓದಿದಮೇಲೆ ನಮ್ಮ ಅಣ್ಣನವರು ಎಷ್ಟು ಪ್ರಭಾವಿತರಾದರೆಂದರೆ, ಅವರ ಚೊಚ್ಚಲ ಮಗಳ ಹೆಸರನ್ನು 'ಸುಚರಿತ' ಎಂದು ಕರೆದೇಬಿಟ್ಟರು. ನಮಗೆ ಪ್ರಿಯರಾದ ಬೆಂಗಾಳಿ ಚಿತ್ರಕಲಾವಿದರು/ ಕಲಾವಿದೆಯರ ಸಂಖ್ಯೆ ಅಪಾರ !ಬೆಂಗಾಳಿ ಚಿತ್ರ ನಟರುಗಳಾದ- ದೇವಿಕಾರಾಣಿ, ಉತ್ಪಲ್ ದತ್, ಹರೀಂದ್ರನಾಥ ಚಟ್ಟೋಪಾಧ್ಯಾಯ, ಬಿಸ್ವಜಿತ್, ಕೆಸ್ಟೋ ಮುಖರ್ಜಿ, ಅಶೋಕ್ ಕುಮಾರ್, ಉತ್ತಮ್ ಕುಮಾರ್, ವಿಕ್ಟರ್ ಬ್ಯಾನರ್ಜಿ, ಚಿತ್ರನಟಿಯರಾದ, ಸುಚಿತ್ರ ಸೇನ್, ಶರ್ಮಿಳಾ ಟ್ಯಾಗೋರ್, ಮೌಶುಮಿ ಛಟರ್ಜಿ, ಇತ್ಯಾದಿ. ಸಂಗೀತಕಾರರು, ಮನ್ನಾಡೆ, ಕಿಶೋರ್, ಹೇಮಂತ್ ದಾ, ನಿರ್ಮಾಪಕ ನಿರ್ದೇಶಕರುಗಳು, ಬಿಮಾಲ್ ರಾಯ್, ಸತ್ಯಜಿತ್ ರಾಯ್, ಹೃಷೀಕೇಶ್ ಮುಖರ್ಜಿ, ಮತ್ತೆ ಕ್ವಿಝ್ ಮಾಸ್ಟರ್ ಸಿದ್ಧಾರ್ಥಬಸು, ಮೀಡಿಯ ರಾಜ, ಪ್ರಣೊಯ್ ರಾಯ್, ಇತ್ಯಾದಿ.
ರಾಜಾರಾಮ್ ಮೋಹನರಾಯ್, ವಿವೇಕಾನಂದ, ರಾಮಕೃಷ್ಣಪರಮಹಂಸರು, ಶಾರದಾದೇವಿ, ಅರವಿಂದೊ, ಭಕ್ತಿವೇದಾಂತ ಪ್ರಭುಪಾದರು, ಮದರ್ ಟೆರೇಸಾ, ಸುಭಾಷ್ ಚಂದ್ರಬೊಸರು, ಅಮಾತ್ಯಸೇನ್ , ಹೀಗೆ ಬಂಗಾಳದ ಕೊಡುಗೆ ಅಪಾರ.
ಪ್ರವಾಸ ಕಥನಗಳನ್ನು ಓದುವುದು ನನಗೆ ಒಂದು ಹವ್ಯಾಸ. ವೀ. ಸೀ. ಅವರ ಪಂಪಾಯಾತ್ರೆಯನ್ನು ಅದೆಷ್ಟು ಬಾರಿ ಓದಿದ್ದೆನೋ ನನಗೆ ನೆನಪಿಲ್ಲ. ವಿ. ಸೀಯವರು ತಮ್ಮ ಪದವಿಯ ಪರೀಕ್ಷೆ ಮುಗಿಸಿದ ಕೂಡಲೇ ಬೊಂಬಾಯಿಗೆ ನೌಕರಿ ಹುಡುಕಲು ಹೋಗಿದ್ದರಂತೆ. ಅವರಿಗೆ ರಿಸರ್ವ್ ಬ್ಯಾಂಕಿನಲ್ಲಿ 'ಕಾಯಿನ್ ಎಕ್ಸಾಮಿನರ್,' ಕಲಸ ಸಿಕ್ಕಿತ್ತು. ಆ ಸಂದರ್ಭದಲ್ಲಿ ತಮ್ಮ ಬೊಂಬಾಯಿ ಯಾತ್ರೆಯ ನೆನಪುಗಳನ್ನೆಲ್ಲಾ ಸಂಗ್ರಹಿಸಿದ ಪುಸ್ತಕವೊಂದು ಪ್ರಕಟವಾಗಿತ್ತು. ಅದನ್ನು ನಾನು, ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ ಓದಿದ ನೆನಪು. ಆಮೇಲೆ ಸಾಕಷ್ಟು ಸಾಹಿತಿಗಳ, ದೇಶ-ವಿದೇಶ ಪರ್ಯಟನೆಗಳ ಪುಸ್ತಕಗಳನ್ನು ನಾನು ಓದುತ್ತಾ ಬಂದಿದ್ದೇನೆ. ಎ. ಎನ್. ಮೂರ್ತಿರಾಯರು, ಕಾಮತ್, ಜೀ. ವೀ. ಕುಲಕರ್ಣಿ ಇತ್ಯಾದಿ.
ಕೀಟ ಶಾಸ್ತ್ರಜ್ಞ, ಶ್ರೀ ಕೃಷ್ಣಾನಂದ ಕಾಮತರ, ಪುಸ್ತಕ 'ನಾನೂ ಅಮೆರಿಕೆಗೆ ಹೋಗಿದ್ದೆ,' ನಮಗೆ ಬಹಳ ಖುಷಿ ತಂದಿತ್ತು. ಅವರ ಇನ್ನೊಂದು ಪುಸ್ತಕ- ವಂಗ ವಂಗದರ್ಶನ. ಜನಗಣಮನದಲ್ಲಿ ರಾಘವೇಂದ್ರರಾಯರ ಅಭಿರುಚಿ ಸ್ವಲ್ಪ ವಿಭಿನ್ನವಾದದ್ದು. ಬಂಗಾಳಿಗಳನ್ನು ಅವರು ಅವರ ವಿಸ್ಮಯ ಕಣ್ಣಿಂದ ನೋಡಿ ಅವರ ಹಲವು ವಿಶೇಷಗುಣಗಳನ್ನು ಕೊಂಡಾಡಿದ್ದಾರೆ. ರಾಯರ ಜೊತೆಯಲ್ಲಿ ಸಹಪ್ರಯಾಣಿಕರಾಗಿ ಅವರ ಪತ್ನಿ, ಶ್ರೀಮತಿ ಅನುಪಮರಾಘವೇಂದ್ರರಾವ್ ; ಇವರಿಬ್ಬರ ಪ್ರೀತಿಯ ಮಗ- ಮನು, ಆತ್ಮೀಯ ಗೆಳೆಯ- 'ಅಂಕಣ' ದ ರಾಜು, ಮತ್ತು ಕಲಾಪ್ರಿಯ, ಕಲಾರಾಧಕ, ಬಂಗಾಳದಲ್ಲಿದ್ದು ಅವರನ್ನು ಚೆನ್ನಾಗಿ ಅರ್ಥಮಾಡಿಕೊಂಡ ಗೆಳೆಯ-ಶ್ರೀನಿವಾಸಮೂರ್ತಿಗಳು, ಇವರುಗಳು ಪುಸ್ತಕದುದ್ದಕ್ಕೂ ನಮಗೆ ಒಬ್ಬರಾದಮೇಲೆ ಒಬ್ಬರಂತೆ ಕಾಣಿಸಿಕೊಂಡು ಒರಿಸ್ಸಾ-ಬಂಗಾಳಗಳ ಭೇಟಿಯ ರಸಸ್ವಾದವನ್ನು ಮಾಡಿಸುತ್ತಾರೆ.
ವಿಶೇಷವೆಂದರೆ ಈ ಕೃತಿ, ೧೯೮೯ ರ ಕರ್ಣಾಟಕ ಸಾಹಿತ್ಯ ಅಕಾಡಮಿಯ ಪುಸ್ತಕ ಬಹುಮಾನ ಪಡೆದಿದೆ. ೧೯೯೨ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ೨೦೦೫ ರಲ್ಲಿ ಮೈಸೂರು ವಿಶ್ವವಿದ್ಯಾಲಯಗಳ, ಎರಡನೆಯ ಬಿ. ಎ, ಮತ್ತು ಬಿ. ಎಸ್ಸಿ. ತರಗತಿಗಳಿಗೆ ಪಠ್ಯಪುಸ್ತಕವಾಗಿಟ್ಟಿರುವುದು ನಮಗೆ ಸಂತಸದ ಸಂಗತಿ, ಅಕಾಡಮಿಯ ಅಧ್ಯಕ್ಷರಾದ ಶ್ರೀಮತಿ ಗೀತಾ ನಾಗಭೂಷಣ್, ರಿಜಿಸ್ಟ್ರಾರ್ ಶ್ರೀ. ವಿ. ಎಸ್ ಮಲ್ಲಿಕಾರ್ಜುನಸ್ವಾಮಿ, ಪುಸ್ತಕದಲ್ಲಿ ತಮ್ಮ ಆಸಕ್ತಿ ತೋರಿಸಿದ್ದಾರೆ. ರಾಯರು ಒಬ್ಬ ಸಂಪದಿಗರು. ಸಹಜವಾಗಿ ನಮಗೆಲ್ಲಾ ಅತ್ಯಂತ ಆನಂದದ ಸಂಗತಿ. ನನಗೆ ಸಿಕ್ಕಿದ್ದು 'ಜನಗಣಮನ'ದ ಮೂರನೆಯ ಆವೃತ್ತಿ.
ಈ ಮಧ್ಯೆ ನನ್ನ ಬಗ್ಗೆ ಎರಡು ಮಾತುಗಳನ್ನು ಹೇಳುವುದು ಅನಿವಾರ್ಯ. ಏಕೆಂದರೆ ಸಾಹಿತ್ಯ ಮತ್ತು ವಿಮರ್ಶೆಯನ್ನು ನಾನು ಮಾಡುತ್ತಿಲ್ಲ. ಪುಸ್ತಕದಲ್ಲಿ ಬರುವ, ನನಗೆ ತೋರಿದ ಎಲ್ಲ ಆಸಕ್ತಿಕರ ಸನ್ನಿವೇಶಗಳ ಕೆಲವು ತುಣಕುಗಳನ್ನು ಹಾಗೆ ಹಾಗೆಯೇ ಓದುಗರಿಗೆ ಹಂಚುವ ನಿರ್ಧಾರ ನನ್ನದು. ಈ ಇಚ್ಛೆ ’ಅಲ್ಪಜ್ಞ ’ ನನೆಂದು ತಿಳಿದರೂ ಅಡ್ಡಿಯಿಲ್ಲ. ನನ್ನಂಥವನು ಸಾಹಿತ್ಯದ ಕೃಷಿಯನ್ನು ಮಾಡದ ವ್ಯಕ್ತಿ, ಏಕೆ ಬರೆಯುವ ಸಾಹಸ ಮಾಡಿದ್ದಾನೆ ? ಎಂಬುದು ಕೆಲವರನ್ನು ತಟ್ಟಿರಬಹುದು. ಇದು ನನ್ನನ್ನೂ ಅನೇಕ ವೇಳೆ ಕಾಡಿದ ಪ್ರಶ್ನೆ. ನನ್ನ ಅನಿಸಿಕೆಗಳು ಸಾಹಿತ್ಯ ಭೀರುಗಳಿಗಿಂತ ಸ್ವಲ್ಪವೇನು, ಇಡಿಯಾಗಿ ಭಿನ್ನವಾಗುವುದು ಸಹಜ. ಇಷ್ಟು ತಿಳುವಳಿಕೆ ಕೊಡದೆ ಮುಂದುವರೆಯುವುದು ನನಗೆ ಕ್ಷೇಮವಲ್ಲ. ಈಗಿನ ಪರಿಸ್ಥಿತಿ ಅಂದ್ರೆ, ' ಇಂಟರ್ ನೆಟ್ 'ನಂತಹ ಜಾಲದಲ್ಲಿ ಬೃಹತ್ ಕ್ರಾಂತಿಯಾಗಿದ್ದು, ವಿಪುಲವಾದ ಬರವಣಿಗೆ ಉಪಲಬ್ಧವಿದೆ. ಒಂದು ಗಮನಾರ್ಹ ಸಂಗತಿಯೆಂದರೆ ನನ್ನಂತಹವನೂ ಬರೆಯುವ ಪ್ರಯತ್ನಮಾಡುತ್ತಿರುವುದು, ಬಹುಶ: ಆ ಇಂಟರ್ ನೆಟ್ ಮಹಾನುಭಾವನ ದಯದಿಂದಲೇ ! ಅವೆಲ್ಲವೂ ಒಳ್ಳೆಯ ಸಾಹಿತ್ಯ ಎಂದು ಕರೆಯುವುದು ಎಷ್ಟು ಸೂಕ್ತವೋ ಆ ರಾಯರೇ, ಬಲ್ಲರು ( ಮಂತ್ರಾಲಯದ ರಾಯರೇ ? ) ಆದರೆ ಸೀರಿಯಸ್ ಆಗಿ ಓದುವವರ ಸಂಖ್ಯೆ ಕಡಿಮೆಯಾಗಿದೆ.
ರಾಘವೇಂದ್ರರಾಯರು, ಬಾಲ್ಯದ ಹಳ್ಳಿಯ ಪರಿಸರದಲ್ಲಿ ಚಿತ್ರದುರ್ಗದಂತಹ ಹಳ್ಳೀ-ಪಟ್ಟಣದಲ್ಲೇ ಶರತ್ ಚಂದ್ರರ ದೂರದ ಬಂಗಾಳದ ರವೀಂದ್ರರ ಶಾಂತಿನಿಕೇತನವನ್ನು, ಪುಸ್ತಕಗಳ ಪುಟಗಳಲ್ಲೋ ಅಥವಾ ಅತ್ಮೀಯ ಗೆಳೆಯರ ಬಾಯಿಂದ ಹೇಳಿದ್ದನ್ನು ಕೇಳಿ ತಿಳಿದುಕೊಂಡಿದ್ದರು. ಪುಸ್ತಕದಲ್ಲಿ ಓದಿದ್ದ ಪುಟಗಳು : ಪಲ್ಲಕ್ಕಿಯೊಳಗೆ ಕುಳಿತು ಗಂಗೆಯ ತಡಿಗೆ ಹೋಗಿ ಪಲ್ಲಕ್ಕಿ ಸಮೇತ ನದಿಯಲ್ಲಿ ಅದ್ದಿಸಿಕೊಂಡು ಮನೆಗೆಬರುವ ಜಮೀನ್ದಾರಿಣಿಯ ಪವಿತ್ರ ಸ್ನಾನ. ಅತ್ತಿಗೆಯರಿಂದ ತುಂಬಿದ ಅತಃಪುರದ ಹಲವು ವಾಸನೆಗಳು, ಹಾಗೆಯೇ ..ಅಪರಿಚಿತ ಲೋಕಕ್ಕೆ ಸಾಲು-ಸಾಲು ಬೆಳಕಿಂಡಿಗಳು !
ಚಲನ ಚಿತ್ರಗಳ ಮೂಲಕ ಕಂಡು ಕೇಳಿದ ಬಂಗಾಳವನ್ನು ಕಣ್ಣಿನಲ್ಲಿ ಹಿಡಿದಿಡುವ ಆಸೆಯೊಂದಿಗೆ ತಮ್ಮ ಯವ್ವನಾವಸ್ತೆಯನ್ನು ಕಳೆದರು ಮತ್ತು ನೌಕರಿಗೆ ಸೇರಿದ ಮೇಲೆ ಬರ್ಲಿನ್ನಿಗೆ ಹೋಗುವ ಅವಕಾಶ ಬೆನ್ನೇರಿತ್ತು. ಅಲ್ಲಿ ಬಂಗಾಳದ ಪ್ರತಿಭೆಗಳನ್ನು ಕಾಣುವ, ಮಾತಾಡಿಸುವ ಸುಯೋಗ ಸಿಕ್ಕಿತು. ಮದರ್ ಟೆರೇಸಾ, ಬಗ್ಗೆ ವಿಷಯಸಂಗ್ರಹ, 'ಸಿಟಿ ಆಫ್ ಜೋಯ್', ಚಲನಚಿತ್ರ ಮತ್ತು ಸತ್ಯಜಿತ್ ರೇ ರವರ ಚಿತ್ರಗಳು ಸಾಕಷ್ಟು ಅನುಭವನೀಡಿದರೂ ಬಂಗಾಳಿಗಳ ಜೊತೆ ಇದ್ದು ಅನುಭವಿಸುವ ವಿಚಾರವೇ ಬೇರೆ. ಕೊನೆಗೆ ಕೀಟಶಾಸ್ತ್ರಜ್ಞ ಕೃಷ್ಣಾನಂದ ಕಾಮತರ ವಂಗದರ್ಶದ ಓದು, ೧೯೮೮ ರಲ್ಲಿ ಕಾಲ ಒದಗಿಬಂದಿತ್ತು.
ಕೊಲ್ಕತ್ತಾದಲ್ಲಿ ಒಬ್ಬ ಸಾಮಾನ್ಯ ದರ್ಜಿಯವ, ತನ್ನ ೬ ಅಡಿ ಬೈ ೪ ಅಡಿ ಅಳತೆಯ ರೂಮ್ ನಲ್ಲಿ ಎಮ್. ಎಫ್. ಹುಸೇನರ ವರ್ಣಚಿತ್ರದ ನಕಲನ್ನು ಪ್ರದರ್ಶಿಸಿದ್ದ. ತನ್ನ ನೊಣಮುತ್ತಿದ ಹೋಟೆಲ್ ನೊಳಗೆ, ಅದರ ಮಾಲಿಕ ರವೀಂದ್ರರ ಬಗ್ಗೆ ಅತ್ಯಂತ ಅಧಿಕೃತವಾಗಿ ಮಾತಾಡಿ ಅವರ ಮನಸ್ಸನ್ನು ಗೆದ್ದಿದ್ದ. ೩ ವಾರಗಳ ಹೊರನೋಟದಲ್ಲಿ ಆದ ಅನುಭವ ಅವರ ಸ್ವಾಭಿಮಾನ, ತಮ್ಮ ಕೇವಲ ತೋರಿಕೆಗೆ ಮಾತ್ರವಲ್ಲದ ಪರಿಶುದ್ಧ ಮಾತೃಭಾಷಾ ಪ್ರೇಮ ಅನನ್ಯ. ಮೆಲಿನ ಜನರು ನಮಗೆ ಕಲಿಸುವುದು, ದುರಭಿಮಾನವನ್ನಲ್ಲ ! ಸ್ವಾಭಿಮಾನದ ಮಧುರ ಪಾಠಗಳನ್ನು. ಹೊರಗಿನದನ್ನು ಅರಗಿಸಿಕೊಂಡು ನಾವು ನಾವಾಗಿಯೇ ಉಳಿಯುವ ಬಗೆಗೆ ಇವರು ಭಾಷ್ಯವಾದರು. ತಮ್ಮೊಡನೆಯೇ ಬೆಳೆಯುತ್ತಾ ಬಂದಿದ್ದ ಬಂಗಾಳಕ್ಕೆ ಹೊಸಆಯಾಮಗಳನ್ನು ಕೊಟ್ಟರು. ಇವು ರಾ.ರಾ ರ ಬಂಗಾಳದಲ್ಲಿ ಕಂಡ ಪ್ರಥಮ ದೃಷ್ಯಾನುಭವಗಳು !
ಬಂಗಾಳ ತಲುಪುವ ಮೊದಲೆ ಸಾಕಷ್ಟು ಪುರ್ವಸಿದ್ಧತೆಯಿಂದ ಹೆಚ್ಚು ಕಡಿಮೆ ಪರಿಪೂರ್ಣ ಸ್ಥಿತಿಗೆ ತಲುಪಿದ ರಾ. ರಾ ರ ಬಂಗಾಳದ ದಟ್ಟ ಅನುಭವಗಳನ್ನು ಓದಿದ ಬಳಿಕ ನಿಜವಾಗಿಯೂ ಒಬ್ಬ ಕಳಕಳಿಯ ಲೇಖಕರಿಗೆ ಇರಲೇಬೇಕಾದ ಅತಿ ಮುಖ್ಯ ಪರಿಕರಗಳು ಎಂಬುದನ್ನು ಮನದಟ್ಟುಮಾಡಿವೆ.
ಶಾಂತಿನಿಕೇತನದ ವಿವರಗಳು : [ಪುಟ ೨೫]
ಶಾಂತಿನಿಕೇತನದಲ್ಲಿ ರಂವೀಂದ್ರರು ಜನ್ಮತಾಳಿದ ಮನೆಯನ್ನು ನೋಡುವ ಆಸೆ, ರಾಘವೇಂದ್ರರ ಡೈರಿಯಲ್ಲಿದ್ದ ಒಂದು ಪ್ರಮುಖ ಎನ್ಟ್ರಿ. ಬಹುಮುಖ್ಯ ವಿಷಯ. ಕಲ್ಕತ್ತಾದಲ್ಲಿ ರವೀಂದ್ರ ಸಂಗೀತ ಐಚ್ಛಿಕವಲ್ಲ. ಅದು ಖಡ್ಡಾಯ. ಬಂಗಾಳದ ಬದುಕಿನ ಒಂದು ಭಾಗ ರೊಬೀಂದ್ರ ಶೊಂಗೀತ್. ಸಂಗೀತ ಪಾಶ್ಚಿಮಾತ್ಯದ ಕೆಲವು ಉತ್ತಮ ಪರಿಕರಗಳನ್ನು ತನ್ನದಾಗಿಸುತ್ತ ದೇಸಿ ಧರ್ಮಕ್ಕೆ ಒಗ್ಗುತ್ತ ಬಗ್ಗುತ್ತ, ಜಾನಪದ ಶೈಲಿಯ ಪ್ರಾಕಾರಗಳನ್ನು ತನ್ನದಾಗಿಸುತ್ತ ಹೋಗುತ್ತದೆ. ಶಾಸ್ತ್ರೀಯ ಸಂಗೀತದ ಪರಿಚಯ ಸಾಕಷ್ಟು ಇದ್ದರೂ ಅವರು ಹೊಸ ರಾಗಗಳನ್ನು ಸೃಷ್ಟಿಸಿದರು . ಹಾರ್ಮೋನಿಯಂ ಅವರಿಗೆ ಹಿಡಿಸಲಿಲ್ಲ. ಆದರೆ ಪಾಶ್ಚಿಮಾತ್ಯ ಸಂಗೀತದ ಅತ್ಯುತ್ತಮ ಅಂಶಗಳನ್ನು ಗ್ರಹಿಸಿದರು. ಕೊನೆಯಲ್ಲಿ ಹೇಳುವುದಾದರೆ, ರವೀಂದ್ರ ಸಂಗೀತ ಇದೆಲ್ಲವೂ ಹೌದು. ಆದರೆ ಇದ್ಯಾವುದೂ ಅಲ್ಲ !
ಅವರ ಕವಿತೆಗಳೇ ಬೇರೆ ; ಹಾಡುಗಳೇ ಬೇರೆ. ಬೀ. ಚೈತನ್ಯದೇವ ಹೇಳುವಂತೆ, ( An Introduction to Indian Music) 'ತನ್ನದೇ ಆದ ಶ್ರೀಮಂತಿಕೆಯನ್ನು ಪಡೆದಿರುವ ಗೀತೆ,’ ಪದಗಳಿಗಾಗಿ ಏಕೆ ಕಾಯಬೇಕು ? ಹಾಗೆ ನೋಡಿದರೆ ಕೇವಲ ಪದಗಳು ಸೋತು ತಲೆಬಾಗುವಲ್ಲಿ ಸಂಗೀತ ಪ್ರಾರಂಭವಾಗುತ್ತದೆ. ಸಂಗೀತದ ಶಕ್ತಿಯಿರುವುದು ಅನಭಿವ್ಯಕ್ತವಾದುದರ ಸೀಮೆಯಲ್ಲಿ ಮಾತುಗಳು ಹೇಳಲಾರದ್ದನ್ನು ಹಾಡುಗಳು ಹೇಳುತ್ತವೆ.
ಜನ್ಮಜಾತವಾದ ಶ್ರೀಮಂತಿಕೆ, ನೋಬೆಲ್ ಪಾರಿತೋಷಕವು ತಂದುಕೊಟ್ಟ ಅಸಹಜ ಕೀರ್ತಿ ಮತ್ತು ತಮ್ಮ ಸಮಗ್ರ ಅಭಿಮಾನಕ್ಕೆ ಒಡ್ಡಿದ ಪ್ರತಿಮೆಯಾಗಿ ರವೀಂದ್ರರನ್ನು ಸ್ವೀಕರಿಸಿದ ಬಂಗಾಳಿಗಳು ರವೀಂದ್ರರ ಮಿಥ್ ಗೆ ಕಾರಣರಾದರೆಂಬುದು ರಾಯರ ಅಬಿಪ್ರಾಯ. ಅವರು ನಮಗೆ ಶಿಫಾರಿಸು ಮಾಡುವ ಪುಸ್ತಕಗಳು : ಕವಿ ಶೇ. ಗೋ ಅವರ " ನಾನು ಕಂಡಗೆಳೆಯರ ಗುಂಪು," ಪುಸ್ತಕದಲ್ಲಿ ತಮ್ಮ ಅನುಭವ ಸಾರವನ್ನು ಪ್ರತಿಬಿಂಬಿಸಿದ್ದಾರೆ. ರವೀಂದ್ರರ ತೀರ ಹತ್ತಿರದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಹೇಳುವ ಮಾತುಗಳಲ್ಲಿ ಸತ್ವವಿದೆ. ಆದರೆ ಇಂದು ರಾಯರ ಭೇಟಿಯಕಾಲದಲ್ಲಿ ರವಿಂದ್ರರಬಗ್ಗೆ ಇರುವ ಭಾವನೆಗಳು, ಗೌರವ ಇತ್ಯಾದಿಗಳು ಯಾವತರಹವಾದವುಗಳು ಎನ್ನುವ ಮಾತನ್ನು ಬಂಗಾಳದ ಅತ್ಯುನ್ನತ ವಿಮರ್ಶಕರಲ್ಲಿ ಒಬ್ಬರಾದ ಪ್ರೊ. ಶಿಶಿರ್ ಕುಮಾರ್ ದಾಸ್, ವರ್ಣಿಸಿದ ಇಂಗ್ಲೀಷ್ ವಿವರ ಹೀಗಿದೆ. " The immense popularity of Tagore in Bengali speaking areas is more elusive than real. His books are solid in thousands and preserved with care, but not necessarily read. They are used none- the -less as a limitless sourse of quotations which anyone is free to exploit...A handful of poems are recited with predictable regularity. His songs once confined to a select group of dedicated singers, have with their phenomenal popularity become a marketable commodity.
Barring a few, Tagore is to most only a symbol of cultural pride or pretention, a piece of decoration. Tagore, the poet, musician and the painter, Tagore the critic and translator, educationist and and social thinker all get blurred and what emerges is a vague and distorted apparition, a shadow without substance, as poet who used long words and had a long beard."
ನನಗೆ ಅತಿಪ್ರಿಯವಾದ ಮಾತುಗಳು ನಿಮಗೂ ಒಪ್ಪಿಗೆಯಾಗಿರಬಹುದು. ಶಾಂತಿನಿಕೇತನವನ್ನು ತಲುಪಬೇಕಾದರೆ ಮನುಷ್ಯ ತುಳಿತದ ರಿಕ್ಷಾದ ಅನುಭವ ಮನಸ್ಸಿಗೆ ಖೇದವನ್ನುಂಟುಮಾಡುತ್ತದೆ.
ತಮ್ಮ ಮಗ ಮನುವಿಗೆ ಅನಾರೋಗ್ಯವಾದಾಗ ಅಲ್ಲಿನ ಡಾ. ಅನಂತೋ ವೈದ್ಯರ ಮನೆಗೆ ಹೋಗುತ್ತಾರೆ. ಅಲ್ಲಿ ಅವರಿಗೆ ಬಂಗಾಳಿ ಪರಿವಾರವನ್ನು ನೋಡುವ ಅವಕಾಶ ದೊರೆಯುತ್ತದೆ. ಕೊಲ್ಕತ್ತಾದ ಪರಿಭ್ರಮಣ ಬಸ್ಸು, ಟ್ರಾಮ್ ಮತ್ತು ಮನುಷ್ಯ ಚಾಲಿತ ರಿಕ್ಷಾಗಳ ಮುಖಾಂತರ ನಡೆಯುತ್ತದೆ.
ಕಲ್ಕತ್ತಾ : [೧೨೪] ವಸ್ತುಸಂಗ್ರಹಾಲಯಗಳ ನಗರ. ಒಂದು ಸ್ವದೇಶಿ ಮತ್ತು ಇಂದು ಪರದೇಶಿ. ವಿಕ್ಟೋರಿಯ, ಪಾಶ್ಚಿಮಾತ್ಯ ವಿಷಯಗಳ ಆಗರ. ಇವುಗಳ ಪ್ರತ್ಯಕ್ಷವರದಿ ತುಂಬಾ ಸೊಗಸಾಗಿದೆ.
ದೇಸಿ ಶಾಖೆ :
ರಾಯರಿಗೆ ಪ್ರಿಯವಾದ ತಾಣ. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಏರ್ಪಾಡುಮಾಡಲಾಗಿದೆ. ಅಲ್ಲಿನ ಶೈಕ್ಷಣಿಕ ಮೌಲ್ಯ, ಕಲಾತ್ಮಕತೆ, ಅದರ ವಿವಿಧ ಪ್ರಾಕಾರಗಳು, ಗಾತ್ರ, ; ಸಸ್ಯ ಶಾಸ್ತ್ರದಿಂದ ಚಾರಿತ್ರ್ಯಿಕ ಸನ್ನಿವೇಷಗಳ ಭಂಡಾರ. ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ ಮಾಡಿದ ವಿಗ್ರಹಗಳು, ಪಿಕ್ಚರ್ ಪೋಸ್ಟ್ ಕಾರ್ಡ್ಗಳೂ ಚೆನ್ನಾಗಿವೆ. ಸಾಹಿತ್ಯ ಪತ್ರಿಕೆಗಳೆಂದರೆ ಬಂಗಾಳಿಗಳಿಗೆ ಅನ್ನ-ನೀರಿದ್ದಂತೆ ! ತತ್ವ ಬೋಧಿನಿ ಪತ್ರಿಕ [೧೮೪೩] ಸೋಮಪ್ರಕಾಶ, [೧೮೫೮], ಬಂಗದರ್ಶನ, ಭಾರತಿ, [೧೮೭೭], ಬಾಂಧವ [೧೯೭೪], ಸಾಹಿತ್ಯ, [ ೧೮೯೦] ಮುಂತಾದವು ಈ ಕ್ಷೇತ್ರದಲ್ಲಿ ಮೊದಲು ಬಂದವು. ಢಾಕಾ ಕೇಂದ್ರ. ಅದರದು ದೊಡ್ಡ ಪಾಲು. 'ಕಲ್ಲೋಲ್', 'ಕಾಲಿ ಕಲಮ್', 'ಪ್ರಗತಿ', ಬಹುತೇಕ ಪತ್ರಿಕೆಗಳಿವೆ. ಬಂಗಾಳಿಬಾಬುಗಳ ಉತ್ಸಾಹ ಅನನ್ಯ. ಕಾಳಿಪೂಜ, ದುರ್ಗಾಪೂಜ, ರಬೀಂದ್ರೊ ಉತ್ಸವ್ ಗಳಿಗೆ ಅವರು ಮಾಡುವ ಖರ್ಚನ್ನು ನೋಡಿದರೆ ಗೊತ್ತಾಗುತ್ತದೆ. ೯೦೦ ರಿಂದ ೧,೨೦೦ ವಿಶೇಶಾಂಕಗಳು ಹೊರಬರುತ್ತವೆ. ಕೊಂಡು ಓದುವವರ ಸಾಹಿತ್ಯಾಭಿಲಾಷಿಗನ್ನು ನೋಡಿದರೆ, ನಮ್ಮ ಕನ್ನಡ-ಸಾಹಿತ್ಯದ ಸ್ಥಿತಿ- ಗತಿಯ ಪರಿಚಯ ಆಗುತ್ತೆ. ಬಿರ್ಲಾ ಇಂಡಸ್ಟ್ರಿಯಲ್ ಅಂಡ್ ಟೆಕ್ನೊಲಜಿಕಲ್ ಮ್ಯೂಸಿಯಂ ನಲ್ಲಿ ಸಿ. ವಿ. ರಾಮನ್ ಮೇಲೆ ವಸ್ತುಪ್ರದರ್ಶನ ಮಾಹಿತಿಗಳು, ೪ ದಿನ ಚಲನ ಚಿತ್ರಪ್ರದರ್ಶನ ೩ ಬಾರಿ ಟೆಲಿಚಿತ್ರ ಪ್ರದರ್ಶನ, ಪ್ರತಿದಿನ, ಆಗಾಗ ಟೆಲಿಸ್ಕೊಪ್ ಮೂಲಕ ಆಕಾಶಕಾಯಗಳನ್ನು ನೋಡುವ ಅವಕಾಶ, ವಿಜ್ಞಾನದ ಇತಿಹಾಸ, ಜನಪ್ರಿಯ ವಿಜ್ಞಾನ ಉಪನ್ಯಾಸ, ಸಂಚಾರಿ ವಿಜ್ಞಾನ ವಸ್ತು ಪ್ರದರ್ಶನ., ಮ್ಯೂಸಿಯಾಲಜಿಗಳಲ್ಲಿ, ಅಪ್ ಟು ಡೇಟ್ ಪುಸ್ತಕ ಭಂಡಾರ, ಪ್ರಾತ್ಯಕ್ಷಿಕೆ, ಗ್ರಾಮೀಣ ಜಾಗದಲ್ಲಿ, ವಿದ್ಯಾರ್ಥಿಗಳ ಸೃಜನಶೀಲ ಶಕ್ತಿಯನ್ನು ಪ್ರಚೊದಿಸುವ 'ಹಾಬಿ ಸೆಂಟರ್', ವಿಶ್ವವಿದ್ಯಾಲಯದ. ಅಧ್ಯಾಪಕರ, ತರಬೇತಿ, ವಿಶ್ವವಿದ್ಯಾಲಯ, ಜನರಿಗೆ ತಲುಪಿಸುವಲ್ಲಿ ಸಕ್ರಿಯವಾಗಿದೆ. ಮ್ಯೂಸಿಯಮ್ ಒಳಗಿನ ಲೋಕದ ವಿವರಣೆ ಚೆನ್ನಾಗಿದೆ. ಬರಿ ಎಲ್ಲೋ ಓದಿದ್ದಕ್ಕಿಂತ ಪ್ರಾತ್ಯಕ್ಷಿಕೆಗಳು ಜೀವಂತವಾಗುತ್ತವೆ. ಎಲೆಕ್ಟಾನಿಕ್ಸ್ ವಿಭಾಗ ಚೆನ್ನಾಗಿದೆ. ಅಣು, ಚಾಲನಶಕ್ತಿಮೂಲಗಳು, ಸಾರಿಗೆ ಸಂಪರ್ಕ, ಜನಪ್ರಿಯ ವಿಜ್ಞಾನ, ಗಣಿವಿಭಾಗ, ತಾಮ್ರ, ಉಕ್ಕು ಮತ್ತು ಕಬ್ಬಿಣ, ಪೆಟ್ರೋಲಿಯಮ್, ವಿದ್ಯುಚ್ಛಕ್ತಿ, ಎಲೆಕ್ಟ್ರಾನಿಕ್ಸ್, ಟೆಲಿವಿಷನ್ ಯಂತ್ರಗಳು, ಇದೆಲ್ಲವನ್ನು ಅತ್ಯಂತ ಮೈನವಿರೇಳುವಂತೆ ಪ್ರೊ. ಸಿ. ವಿ. ರಾಮನ್ ರವರ ಮಹತ್ವದ ಸಾಧನೆಗಳ ವಿವರಣೆಗಳು, ಚೆನ್ನಾಗಿತ್ತು. ಬಿರ್ಲಾರವರ ಕೊಡುಗೆ ಅನನ್ಯ.
ಕಲ್ಕತ್ತದ ನ್ಯಾಷನಲ್ ಲೈಬ್ರರಿ, ಕನ್ನಡವನೊಬ್ಬನ ಕೊಡುಗೆ :
ಆಲಿಪುರದಲ್ಲಿ ಎರಡು ನೋಡಲೇ ಬೇಕಾದ ಸ್ಥಳಗಳಾದ ಅತಿ ದೊಡ್ಡ ಮೃಗಾಲಯ, ೨. ಬೆಲ್ವೆಡೋರ್ ಎಂಬ ಅರಮನೆಯಲ್ಲಿ ಸಜ್ಜುಗೊಂಡ ಪುಸ್ತಕ ಭಂಡಾರ. ಬೀ. ಎಸ್. ಕೇಶವನ್ ಅವರದು. ಪುಸ್ತಕಪ್ರೇಮಿ, ಪ್ರಥಮ ನಿರ್ದೇಶಕರಾದ ಅವರು ಈ ಚೆನ್ನಾಗಿ ಸಜ್ಜುಗೊಳಿಸಿ ಬೆಳೆಸಿದ್ದಾರೆ. ಅವರ ಆರಾಧನಾ ಭಾವ ಶ್ಲಾಘನೀಯ. ಈತ ಬಹಳ ಹಳಬ. ಎಲ್ಲರಿಗೂ ಪ್ರಿಯರಾದ ವ್ಯಕ್ತಿ. ಅಲ್ಲಿನ ತಮಿಳು ವಿಭಾಗದ (ಸತ್ಯಭಾಮ) ಶೊತ್ತೊಭಾಮ ಸಹಾಯವನ್ನು ನೆನೆಯುತ್ತಾರೆ. ೧೮೩೬ ರಲ್ಲಿ ಕಲ್ಕತ್ತಾ ಪಬ್ಲಿಕ್ಜ್ ಲೈಬ್ರರಿ ದ್ವಾರಕಾನಾಥ ಟ್ಯಾಗೋರ್ ಇದರ ಪ್ರಥಮ ಕಾರ್ಯಾಧ್ಯಕ್ಷರು. [ಇವರು ರವೀಂದ್ರನಾಥರ ತಾತ] ಅಮೃತಶಿಲೆಯ ಬಸ್ಟ್ ಈಗಲೂ ಇದೆ. ೧೯೪೭ ರ ವರೆಗೆ ಅಲ್ಲಿ ಮೂರು ಲಕ್ಷದ ಐವತ್ತು ಸಾವಿರ ಪುಸ್ತಕಗಳಿದ್ದವಂತೆ. ೧೯೩೫ ರಲ್ಲಿ ಈ ಪುಸ್ತಕ ಭಂಡಾರಕ್ಕೆ 'ನ್ಯಾಷನಲ್ ಲೈಬ್ರರಿ' ಎಂಬ ಹೊಸ ಹೆಸರು ಬಂತು. ಭಾರತ ಸರ್ಕಾರ ಇದರ ಆಡಳಿತ ವಹಿಸಿಕೊಂಡಿತು. ಪ್ರತಿಯೊಂದು ಭಾರತೀಯ ಭಾಷೆಯಲ್ಲಿಯೂ ಬಂದ ಪುಸ್ತಕ ಪ್ರತಿಗಳನ್ನು ಇಲ್ಲಿಗೆ ಕಳಿಸುವುದು ಖಡ್ಡಾಯವಾಯಿತು. ೧೯೬೧ ರ ವೇಳೆಗೆ ೧೦ ಲಕ್ಷ ಗ್ರಂಥಗಲಿದ್ದು ೫೭೮೧ ನಿಯತಕಾಲಿಕಗಳನ್ನು ತರಿಸಲಾಗುತ್ತಿತ್ತಂತೆ. ಆ ವರ್ಷ ಅದನ್ನು ಉಪಯೋಗಿಸಿದವರ ಸಂಖ್ಯೆ ೩,೧೮,೧೨೪. ಈಗಲಂತೂ ಅದರ ಸಂಖ್ಯೆ ಹಲವಾರು ಪಟ್ಟು ಬೆಳೆದಿದೆ. ಸರ್ ಅಶುತೋಷ್, ರಾಮ್ ದಾಸ್ ಸೇನ್ , ಎಸ್. ಎನ್. ಸೇನ್, ವೈಯ್ಯಾಪುರಿ ಪಿಳ್ಳೆಯಂತಹ ಹಲವು ಮಹನೀಯರು ತಮ್ಮ ಮನೆಯಲ್ಲಿದ ವೈಯಕ್ತಿಕ ಅಮೂಲ್ಯ ಪುಸ್ತಕಗಳನ್ನು ಈ ಸಂಸ್ಥೆಗೆ ದಾನಮಾಡಿದ್ದಾರೆ.
ರಾಘವೇಂದ್ರಾಯರ ಅತ್ಯಂತ ಪ್ರೀತಿಪಾತ್ರವಾದ ಸ್ಥಳ- ಅಲ್ಲಿನ ಕನ್ನಡವಿಭಾಗದ ಭೇಟಿ. ಕನ್ನಡಿಗರಾದ ಮಾರಪ್ಪನವರು ಕನ್ನಡ ವಿಭಾಗದ ಸಂಪಾದಕರು. ಆ ವಿಭಾಗದಲ್ಲಿ ಅಪರೂಪದ ಕೃತಿಗಳು ದೊರೆತಿವೆ. ೧೮೨೪ ರಲ್ಲಿ ವಿಲಿಯಮ್ ರೀವ್, ಕನ್ನಡ - ಇಂಗ್ಲೀಷ್ ನಿಘಂಟು, ಜಾನ್ ಬನ್ಯನ್ ನ ೧೮೩೩, ರ ಕೃತಿ ಅನುವಾದ, 'ದೇಶಾಂತರಿಯ ಪ್ರಯಾಣವು', ಕವಿರಾಜಮಾರ್ಗ, ಹಳಗನ್ನಡ, ನಡುಗನ್ನಡಕೃತಿಗಳು ಜಿ. ಟಿ. ಎ ಪ್ರೆಸ್, ಕಾವ್ಯಕಳಾನಿಧಿಮಾಲೆ, ಬಾಸೆಲ್ ಮಿಶನ್ ಪ್ರೆಸ್, ಕರ್ನಾಟಕ ಕಾವ್ಯಮಂಜರಿಮಾಲೆ ಮುಂತಾದ ನೂರಾರು ಪ್ರತಿಗಳು ಇದ್ದವು. ಎ. ವೆಂಕಟಸುಬ್ಬಯ್ಯನವರ, 'ಕೆಲವು ಕನ್ನಡ ಕವಿಗಳ ಜೀವನ ಕಾವ್ಯ ವಿಚಾರ' ಎಂಬ ಉದ್ದ ಹೆಸರಿನ ಪುಸ್ತಕ, ಇಷ್ಟವಾಯಿತಂತೆ. ಲೈಬ್ರರಿ ತಾಂತ್ರಿಕ ವಿಭಾಗ ಸೊಗಸಾಗಿದೆಯಂತೆ !
ಹವಾನಿಯಂತ್ರಿತ ಛೇಂಬರ್ ನಲ್ಲಿ ಪುಸ್ತಕ, ಹಸ್ತಪತ್ರಿಕೆಗಳನ್ನು ಸಂರಕ್ಷಿಸಲಾಗಿದೆ. ಪರ್ಶಿಯನ್, ಉರ್ದು, ಹಸ್ತ ಲಿಪಿಗಳು, ಕ್ಯಾಲಿಗ್ರಫಿ ಚಿತ್ತಾರ. ತಮಿಳು ಹಿಂದಿ ಪುಸ್ತಕಗಳು ಶತಮಾನದಷ್ಟು ಹಳೆಯವು. ಅಲ್ಲಿನ ಮೊಂಡಲ್ ಅವರ ಶಿಸ್ತು, ಹಾಗೂ ಕರ್ತವ್ಯನಿಷ್ಠೆ, ಪ್ರಾಮಾಣಿಕತನ ಕಲಿಯುವಂತಹದು. ಮೊಂಡಲ್ ಲೈಬ್ರರಿಯ ಅಂಗವಾಗಿದ್ದರು. ಮಹಾರಾಷ್ಟ್ರಿಯನ್ ಮೊಂಡಲ್ ದಲ್ಲಿ ಶ್ರೀಖಂಡ್, ತಿಂದರು. ಬಂಗೀಯ ಸಾಹಿತ್ಯ ಪರಿಷತ್ತು ಇರುವುದು ನಮ್ಮ ಬೆಂಗಳೂರಿನ ತರಹವೆ. ಅಂದರೆ ಎರಡು ಬದಿಯಲ್ಲೂ ಲಾರಿಗಳ ಮಧ್ಯೆ ದಾರಿಮಾಡಿಕೊಂಡು ಅಲ್ಲಿಗೆ ಹೋಗಬೇಕು. ಆದರೆ ೧೮೯೩ ರಲ್ಲೇ ಸ್ಥಾಪಿತವಾದ ಈ ಮಹಾ ಸಂಸ್ಥೆ ಬಂಗಸಾಹಿತ್ಯ ಮತ್ತು ಅದರ ಉಗಮಕ್ಕೆ ಮಾಡಿದ ಸಂಶೋಧನೆ ಇತ್ಯಾದಿಗಳು ಅನನ್ಯ. ವಿಷಯಾಸಕ್ತರುಗಳು, ಮತ್ತು ವಿದ್ಯಾರ್ಥಿಗಳಿಂದ ಯಾವಾಗಲೂ ತುಂಬಿ ತುಳುಕುವ ಪುಸ್ತಕಭಂಡಾರ ಇದು. ಹಳೆಯ ಶಾಸನಗಳು, ತಾಮ್ರ ಪತ್ರ, ವಿಗ್ರಹಗಳು ನಾಣ್ಯಗಳು ಇಲ್ಲಿವೆ.
" I have seen just three bronzes in this small museum which I think would be impossible to match anywhere in the world. I cannot conceive anything more noble and beautiful to exist than these three figures. " ಅಲ್ಲಿ ಪ್ರದರ್ಶನಗೊಂಡ ವಿಶಿಷ್ಟ ೩ ಕಂಚಿನ ವಿಗ್ರಹಗಳ ಬಗ್ಗೆ ವಿಲಿಯಮ್ ರಾಥೆನ್ ಸ್ಟೈನ್ ಹೇಳಿರುವ ಸಾಲುಗಳು ವಸ್ತುಸಂಗ್ರಹಾಲಯದ ಸೊಗಸನ್ನು ತಿಳಿಸುತ್ತವೆ.
ಬಂಗಾಳಿಗಳು ತಮ್ಮ ಭಾಷೆ, ನೆಲವನ್ನು ಅತಿಯಾಗಿ ಹಚ್ಚಿಕೊಂಡ ಜನ. ಅವಕ್ಕೆ, ಪ್ರತಿಮಾಗೃಹಗಳೇ ಸಾಕ್ಷಿ. ಅಲ್ಲಿ ರಾಜಾರಾಮ್ ಮೋಹನ ರಾಯ್, ಈಶ್ವರಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ, ಗಿರೀಶ್ ಚಂದ್ರ, ಘೋಷ್, ರೊಬೀಂದ್ರೊ, ಸಿಸ್ಟರ್ ನಿವೇದಿತ, ಮುಂತಾದವರ ಉಡುಗೆ ತೊಡಿಗೆಗಳು, ದಿನಚರಿ, ದಿನಬಳಕೆಯ ವಸ್ತುಗಳು, ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಬೆಂಗಾಲಿ ಪುಸ್ತಕ ಪ್ರದರ್ಶನದ ವಿವರಗಳನ್ನು ಓದದಿದ್ದರೆ ಸಮಾಧಾನವೆಲ್ಲಿ ? ೧೦ ನೇ ಶತಮಾನ ದಿಂದ ೧೮ ನೇ ಶತಮಾನದ ವರೆಗಿನ ಓಲೆಗರಿ ಹಸ್ತಪ್ರತಿಗಳು, ನಿಘಂಟುಗಳು, ಹಾಗೂ ಸಾಹಿತ್ಯ ಭಂಡಾರವೇ ಇದೆ.
ಏಷಿಯಾಟಿಕ್ ಲೈಬ್ರರಿ :
ಇದನ್ನು ಭೀಷ್ಮ ಸಂಸ್ಥೆ ಎನ್ನುವುದೇ ಸರಿ :ಮುಂಬೈನಲ್ಲೂ ಒಂದು ಸಮಕಾಲೀನ ಶಾಖೆಯಿದೆ. ಇಲ್ಲಿ ಒಟ್ಟು ೮ ಲಕ್ಷ ಅತಿ ಪ್ರಾಚೀನ ಗ್ರಂಥ ಭಂಡಾರವಿದೆ. ಡಾಂಟೆ ಬರೆದ "ಇನ್ಫರ್ನೋ' ಎಂಬ ಪುಸ್ತಕದ ಪ್ರಥಮ ಪ್ರತಿಯನ್ನು ಸಂಗ್ರಹಿಸಿಡಲಾಗಿದೆ. ಅಪರೂಪದ ಮೊಗಲರ ಕಾಲದ ನಾಣ್ಯಗಳು, ಅನೇಕ ವಿರಳವಾದ ಹಸ್ತಪ್ರತಿಗಳ ಸಂಗ್ರಹ ವಿದೆ. ಆದರೂ ಇದು ಖಂಡಿತಾ ಕೊಲ್ಕಟ್ಟಾದಷ್ಟು ಭವ್ಯತೆ ಪಡೆದಿಲ್ಲವೆನ್ನುವುದು ನಿಜವಾದ ಮಾತು. ೧೭೪೮ ರಲ್ಲೇ, ಸರ್ ವಿಲಿಯಮ್ ಜೋನ್ಸ್ ಇದನ್ನು ಸ್ಥಾಪಿಸಿದ್ದರು. ಸಂಸ್ಕೃತ, ಇಂಡಾಲಜಿ, ಮತ್ತು ಭಾಷಾಶಾಸ್ತ್ರಗಳ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಜೋನ್ಸ್ ಹೇಳುವಂತೆ, ("ನಮ್ಮ ಸಂಶೋಧನೆಗಳ ವಸ್ತು ಯಾವುದು ಎಂಬ ಪ್ರಶ್ನೆ ಅಂದರೆ ನಮ್ಮ ಉತ್ತರ, ಹೀಗಿರುತ್ತದೆ : ಮನುಷ್ಯ, ಮತ್ತು ಪ್ರಕೃತಿ. ಮನುಷ್ಯನ ಸಮಗ್ರ ಸಾಧನೆ ಮತ್ತು ಪ್ರಕೃತಿಯ ಸಮಗ್ರ ಸೃಷ್ಟಿ." )
ಸಂಸ್ಕೃತಿಯ ಹಲವು ವಲಯಗಳನ್ನು ಒಳಗೊಳ್ಳುವ ಪುಸ್ತಕ ಪ್ರಕಾಶನ ಈ ಸಂಸ್ಥೆಯ ಪ್ರಥಮ ಕಾರ್ಯ ಕ್ಷೇತ್ರ. ಸೊಸೈಟಿಯಲ್ಲಿ ನಡೆದ ಚರ್ಚೆ, ಉಪನ್ಯಾಸಗಳನ್ನು ೨೦ ಸಂಪುಟಗಳಲ್ಲಿ ೧೭೮೮ ರಿಂದ ೧೮೩೯ ರ ಅವಧಿಯಲ್ಲೇ ಹೊರತರಲಾಯಿತು. Quarterly Oriental Journal, Transactions of the Medical and Physical Society, Gleanings in Science ಎಂಬ ೩ ಮಾಲೆಗಳು, ೧೯ ನೇ ಶತಮಾನದದಲ್ಲೇ ಶುರುವಾದವು.
ಬಿಬ್ಲಿಯೋಥೆಕ ಇಂಡಿಕಾ, ಎಂಬ ಹೆಸರಿನಲ್ಲಿ ಸಂಸ್ಕೃತ, ಪರ್ಶಿಯನ್, ಅರೇಬಿಕ್, ಟಿಬೆಟಿಯನ್, ಬಂಗಾಳಿ ಮುಂತಾದ ಭಾಷೆಗಳ ಅತ್ಯಪರೂಪದ ನೂರಾರು ಕೃತಿಗಳನ್ನು, ಮೂಲ ಮತ್ತು ಇಂಗ್ಲಿಷ್ ಭಾಷೆಯ ಅನುವಾದದೊಂದಿಗೆ ಹೊರತರಲಾಗಿದೆ. ಸುಮಾರು ೨೪ ಮಾನೋಗ್ರಾಫ್ ಗಳು ವಿಜ್ಞಾನ ಮತ್ತು ಸಾಹಿತ್ಯ ಸಂಶೋಧನೆಗಳ ಸಂಬಂಧಪಟ್ಟ ಅನುವಾದಗಳೊಂದಿಗೆ ಹೊರತರಲಾಗಿದೆ.
ಸಾರ್ವಜನಿಕ ಉಪನ್ಯಾಸ ಗ್ರಂಥ ಮಾಲೆ, ಸೆಮಿನಾರ್ ಗ್ರಂಥಮಾಲೆ, ಬಿಮಾನ್ ಬಿಹಾರೀ ಮುಜುಂದಾರ್ ಸ್ಮಾರಕ ಉಪನ್ಯಾಸಮಾಲೆ, ಮುಂತಾದ ಅನೇಕ ಪುಸ್ತಕ ಸರಣಿಗಳು ಸೊಸೈಟಿಯ ಆಶ್ರಯದಲ್ಲಿ ಹೊರಬಂದಿವೆ.
ಸಂಶೋಧಕರಿಗಂತೂ ಇದು ಹೇಳಿಮಾಡಿಸಿದ ತಾಣ. ಎಲ್ಲಾ ಐರೋಪ್ಯ ಭಾಷೆಗಳಲ್ಲಿನ ೧೫ ನೇ ಶತಮಾನದಿಂದಲೇ ಪ್ರಾರಂಭವಾಗುವ ಒಂದು ಲಕ್ಷಕ್ಕೂ ಮೀರಿದಷ್ಟು ಪುಸ್ತಕಗಳಿವೆ. 'ಸಾಂಸ್ಕೃತಿಕ' ಎಂಬ ಶಿರ್ಷಿಕೆಯಡಿಯಲ್ಲಿ ಭಾರತೀಯ ಭಾಷೆ ಮತ್ತು ಲಿಪಿಗಳ ೩೦,೦೦೦ ಕೃತಿಗಳಿವೆ. ಇಸ್ಲಾಮಿಕ್ ವಿಭಾಗದಲ್ಲಿ ಮೊಘಲ್ ಚಕ್ರವರ್ತಿಗಳ ಪುಸ್ತಕ ಭಂಡಾರದಿಂದ ಸಂಗ್ರಹಿಸಿದ ಹೊತ್ತಿಗೆಗಳಿವೆ. ಪ್ರಾಚ್ಯ ಸಂಶೋಧಕರಿಗೆ ವಿಶೇಷ ಒತ್ತುಕೊಡಲಾಗಿದೆ. ಈ ಮೇರು ಕೃತಿಗಳ ಆಗರಕ್ಕೆ ಅತ್ಯಾಧುನಿಕ ಹವಾನಿಯಂತ್ರಣಗಳೇ ಆದಿಯಾಗಿ ಎಲ್ಲ ತಾಂತ್ರಿಕ ಸೌಲಭ್ಯಗಳಿವೆ. ಕೊಲ್ಕತ್ತಾದಲ್ಲಿ "ಇಂಡಿಯನ್ ಮ್ಯೂಸಿಯಮ್" ಸ್ಥಾಪಿತವಾಗುವುದಕ್ಕೆ ಸೊಸೈಟಿಯ ಪ್ರಯತ್ನಗಳೇ ಪ್ರಮುಖ ಎನ್ನಬಹುದು. ೧೮೬೬ ರಲ್ಲಿ ಅದು ಶುರುವಾದಾಗ ತನ್ನ ಸ್ವಂತ ಸಂಗ್ರಹದ ಮುಖ್ಯಭಾಗವನ್ನು ಸೊಸೈಟಿ ಅಲ್ಲಿಗೆ ದಾನಮಾಡಿತು.
ಅಶೋಕನ ಶಾಸನ, ಕ್ರಿ. ಪೂ. ೩ ನೇ ಶತಮಾನದ ತಾಮ್ರದ ಪತ್ರಗಳು, ಮತ್ತು ವ್ಯಾಪಕವಾದ ನಾಣ್ಯ ಸಂಗ್ರಹ ಚೆನ್ನಾಗಿದೆ. ರಾಬರ್ಟ್ ಹೋಮ್ ನ ರೂಬೆನ್ಸ್ ಗ್ವಿಡೋ, ಕೆಟೇಲ್, ಕ್ಯಾನ್ ಲೆಟ್ ಮುಂತಾದ್ ಕಲಾವಿದರ ಅಪ್ರತಿಮ ವರ್ಣಚಿತ್ರಗಳನ್ನು ಒಳಗೊಂಡ ಈ ಶಾಖೆ ಸೊಗಸಾಗಿದೆ. ವಿಶ್ವಮಾನ್ಯತೆ ಬರಲು ಸೊಸೈಟಿಯು ಮಾಡಿರುವ ಕಾರ್ಯಗಳೇ ಮಾನದಂಡಗಳಾಗಿವೆ. ಇಲ್ಲಿ ರಾ.ರಾಯರು ತಿಳಿಸುವ ವಾಕ್ಯಗಳು ನಮ್ಮನ್ನು ಎಚ್ಚರಿಸುತ್ತವೆ. ಸಾಮಾನ್ಯ ಓದುಗರೂ ಇಂಥ ಸಂಸ್ಥೆಗಳ ಸ್ಥೂಲ ಪರಿಚಯವನ್ನಾದರೂ ಪಡೆದಿರಬೇಕು. ಏಕೆಂದರೆ ನಮ್ಮ 'ಪಿಗ್ಮಿತನ' ನಮಗೆ ತಿಳಿಯುವುದು ಈ ಜ್ಞಾನ ದೈತ್ಯರುಗಳ ನಡುವೆ ನಿಂತಾಗಲೆ ' ಎಷ್ಟು ಸಮಂಜಸವಾದ ಮಾತು ! ಜೊರಾಸಂಕೋ, ರವೀಂದ್ರರ ಮನೆ. ಅದನ್ನು ನೋಡಲಾಗದ ಕೊರಗು. ನೋಡದೇ ಇರುವುದರ ಪಟ್ಟಿನೋಡಿದರೆ ಬೆಂಗಳೂರಿನಂತೆ ಅಲ್ಲಿಯೂ ಬರೀ ಹಿಂದಿ ಸಿನಿಮಾಗಳೇ ಅಂತೆ ! ಪ್ರಾದೇಶಿಕ ಭಾಷೆಗಳ ಅವಸ್ಥೆ ಎಲ್ಲಿಯೂ ಒಂದೇ ತರಹವೇ ?
ಒಟ್ಟಾರೆ ಹೇಳುವುದಾದರೆ ಸ್ವಲ್ಪ ಊರುಗಳನ್ನು ಸುತ್ತಿ ಪರಿಚಯಮಾಡಿಕೊಂಡ ನಮಗೆ " ಜನಗಣಮನ " ಓದಿದಾಗ ಅವರೇ ಹೇಳುವಂತೆ ನಮಗೆ ಗೊತ್ತಿರದ ಬಂಗಾಳ ; ಅದರ ಮೈಗೇ ಅಂಟಿಕೊಂಡಿರುವ ಸಾಹಿತ್ಯ ಸಂಸ್ಕೃತಿಯ ಪುನುಗು, ಅದೆಷ್ಟಿವೆಯೋ ! ಕಲ್ಕತ್ತ ದಲ್ಲಿ ಅಕ್ಟೋಬರ್ ನಲ್ಲಿ ದುರ್ಗಾ ಪೂಜೆ. ಮತ್ತೆ ನವೆಂಬರ್ ನಲ್ಲಿ, 'ಜೊಯ್ ಜೊಯ್ ಕಾಳೀ ಪೂಜೆ'. ಆಗ ನಮಗೆ ದೀಪಾವಳಿ. ಕಾಳಿ ಪೂಜೆ, ಬಂಗಾಳಿಗಳ ಸೌಂದರ್ಯಪ್ರಜ್ಞೆ ಗೆ ಸಮುದಾಯ ಸಂಸ್ಕೃತಿಗೆ ಸಾಕ್ಷಿ. ಕೊಲ್ಕತ್ತಾದಲ್ಲಿ ಎರಡು ಕಾಳಿಗಳು ; ಒಂದು ಹಳೆ ಕಾಳಿ. ಇನ್ನೊಂದು ದಕ್ಷಿಣೇಶ್ವರದ ಪರಮಹಂಸಕರಪೂಜಿತ ಕಾಳಿ. ರಾಣಿ ರಾಸಮಣಿ, ಇದನ್ನು ಕಟ್ಟಿಸಿದಳು. ಅವಳು ಶೂದ್ರಳಾದ ಕಾರಣಕ್ಕೆ ಅಲ್ಲಿನ ಬ್ರಾಹ್ಮಣರು ಪೂಜೆಪುನಸ್ಕಾರಗಳನ್ನು ಮಾಡಲು ಒಪ್ಪಲಿಲ್ಲ. ಆದರೆ ರಾಮಕೃಷ್ಣ ಪರಮಹಂಸರು ಕಾಳಿಮಾತೆಗೆ ಪೂಜೆಮಾಡಿ, ಆ ಆಲಯದ ಅಕ್ಕಪಕ್ಕದ ವನದಲ್ಲಿ ದೇವರನ್ನು ಕಂಡರಂತೆ.
ಬಂಗಾಳದ ಕಮ್ಯುನಿಸ್ಟ್ ಸರ್ಕಾರದ ಕಾರ್ಯವೈಖರಿ ಮತ್ತು ಅದು ಸಂಸ್ಕೃತಿ ಶಿಕ್ಷಣ ಮತ್ತು ಜನಜೀವನದ ಮೇಲೆ ಮಾಡಿರುವ ಪರಿಣಾಮ ತಿಳಿಯುವ ಕುತೂಹಲ. ಬುದ್ಧಿಜೀವಿಗಳೊಡನೆ ಚರ್ಚೆ ಅಥವಾ ಕುಟುಂಬದೊಡನೆ ಬರಿ ಮೇಲ್ಮುಖದ ಚಿತ್ರ ಅಷ್ಟು ಸಮರ್ಪಕವಾದದ್ದೆಂದು ಅರಿತರು. ಜನರ ಅತಂಕ. ರಾಜಕೀಯವನ್ನು ಬದುಕಿನ ಒಂದು ಅನಿವಾರ್ಯತೆ ಎಂದು ತಿಳಿದಿದ್ದಾರೆ. ಕ್ಲೊಲ್ಕತ್ತಾದಲ್ಲಿ 'ಲಾಕ್ ಔಟ್ ' ಆಗಿ ಸಾಲು ಸಾಲು ಕಾರ್ಖಾನೆಗಳು ಮುಚ್ಚಿವೆ, ಕೆಲವಂತೂ ಕೋಲ್ಕತ್ತಾ ಬಿಟ್ಟು ಬೇರೆ ರಾಜ್ಯಕ್ಕೆ ಹೋಗಿವೆ. ಕಮ್ಯೂನಿಸ್ಟ್ ಪಕ್ಷದ ಸಾಧನೆಯನ್ನು ಕೆಲವರು ಹೊಗಳಿ ಹಾಡಿದರೆ, ಕೆಲವರು 'ಗ್ರಡ್ಜಿಂಗ್ ಅಡ್ಮಿರೇಷನ್'. ಮೂಕ ಬಹುಮತ. ಬುದ್ಧಿಜೀವಿಗಳು ಪ್ರತಿಕ್ರಯಿಸುವುದಿಲ್ಲ. ಮಧ್ಯಮ ವರ್ಗ ಗೋಳಾಡುತ್ತಿದೆ.
ಪಠ್ಯ ಪುಸ್ಕಕಗಳನ್ನು ಜಾತ್ಯಾತೀತಗೊಳಿಸಲು ಪ್ರಯತ್ನ ನಡೆಯುತ್ತಿದೆ. ಕಲ್ಕತ್ತಾ ನಗರದಲ್ಲಿ ಅಲೊಪತಿ, ಹೊಮಿಯೊಪತಿ, ಯುನಾನಿ, ಆಯುರ್ವೇದ ವೈದ್ಯಾಲಯಗಳು ಔಷಧಿ ಅಂಗಡಿಗಳಿವೆ. ಸಿನಿಮಾಮಂದಿರಗಳು ಕಡಿಮೆ. ಬಿಧಾನ ಸರಣಿ ಎಂಬ ರಸ್ತೆಯಲ್ಲಿವೆ. ಬೀದಿ ಬದಿ, ಆಹಾರದಂಗಡಿಗಳಲ್ಲಿ ಒಳ್ಳೆ ಆಹಾರ ಸಿಗತ್ತೆ. ಅಗ್ಗಿಸ್ಟಿಕೆಯ ಮೇಲೆ ಸುಟ್ಟ ರೊಟ್ಟಿಗಳು, ಆಲೂಗೆಡ್ಡೆ ಭಾಜಿ, ಇಲ್ಲಿನ ವೈಶಿಷ್ಟ್ಯಗಳಲ್ಲೊಂದು. ಇಲ್ಲಿ ಅವರ ಗೆಳೆಯ ಮೂರ್ತಿಯವರ ಬಗ್ಗೆ ಅವರು ಹೇಳುವ ಮಾತು : ತಮ್ಮ ಕಲಾವಿದ ಗೆಳೆಯನೊಂದಿಗೆ ದಿನವಿಡಿ ಚರ್ಚೆ, ಮುಗಿಸಿ ಅಥವಾ ಮುಂದು ದೂಡಿ, ಮತ್ತೆ, ನಡುರಾತ್ರಿ ಬೆಕ್ಕಿನಂತೆ ನುಸುಳುತ್ತಿದ್ದ ಅವರ ಅನುದಿನದ ’ಪಲ್ಲವಿ” ಒಂದೆ. ಅವರು ತಿಂದ ರೊಟ್ಟಿಗಳ ಸಂಖ್ಯೆ ; " ಮೊದಲ ರಾತ್ರಿ ರೊಟ್ಟಿ ತಿಂದು ಬಂದರು. ಎರಡನೆಯ ದಿನದ ರಾತ್ರಿ ಆಂಲೆಟ್, ಮೂರನೆಯ ರಾತ್ರಿ ಮೊಟ್ಟೆಯನ್ನೇ ತಿಂದುಬಂದರು. ಹೀಗೆಯೇ ಒಂದು ವಾರ ಇದ್ದರೆ, ಅವರು ಎಲ್ಲಿ ಕುರಿ, ಕೋಳಿ, ಆನೆ, ಕುದುರೆಗಳವರೆಗೆ ಮುಂದುವರೆಯುತ್ತಾರೊ ಎಂದು ನಾವು ಪುರೋಹಿತರ ಮಗನಾದ ಅವರನ್ನು ಪಾಪಕಾರ್ಯದಿಂದ ಪಾರುಮಾಡಲು ಶಾಂತಿನಿಕೇತನವನ್ನೇ ಖಾಲಿಮಾಡಿದೆವು."
ಸಾಮಾನ್ಯ ಜನರಿಗೂ ಹೆಚ್ಚು ಖರ್ಚಿಲ್ಲದೆ ಕೂಡ ಬದುಕಲು ಸಾಧ್ಯವೆನ್ನುವ ಮಾತು ಇಲ್ಲಿ ಪ್ರಸ್ತುತ. ಕಲ್ಕತ್ತದ ಜನರಿಗೆ ಶಾಂತಿನಿಕೇತನ, ದಕ್ಷಿಣೇಶ್ವರ, ತೀರ್ಥ ಕ್ಷೇತ್ರಗಳಂತೆ. ಸರಳವಾದ ಅತಿ ಶುದ್ಧವಾದ ಜೀವನ ಅನಾಗರೀಕತೆ, ಅಥವಾ ಅತಿ ಸಂಸ್ಕೃತಿಯ ಹೊರೆ ಅವರ ಮೇಲೆ ಇರುವುದಿಲ್ಲ. ಆದರೆ ಇದರ ಜೊತೆಗೆ ಶಿಲ್ಪ ಕಲೆ ಮತ್ತು ಸಾಹಿತ್ಯದಲ್ಲಿ ತಮ್ಮ ಪರಿಸರಕ್ಕೆ ಇಷ್ಟವಾದ ಹಲವಾರು ಸಾಧನೆಗಳನ್ನು ಅವರು ಮಾಡಿದ್ದಾರೆ. [೬೩] ಗೋಪಿನಾಥ ಮೊಹಂತಿಯವರು ಹೇಳಿದ ಒಂದು ಆನೆಯ ಕಥೆ ಚೆನ್ನಾಗಿತ್ತು. ಆನೆ, ತನ್ನ ಮರಿ ಆನೆಯೊಂದಿಗೆ ಖೆಡ್ಡಾದಲ್ಲಿ ಸಿಕ್ಕಿಕೊಳ್ಳುತ್ತದೆ. ಅದಕ್ಕೆ ತನ್ನ ಹಾಗೂ ತನ್ನ ಕಂದನ, ಸ್ವಾತಂತ್ರ್ಯದ ಕಾಳಜಿ ಹೆಚ್ಚು. ಕೊನೆಗೆ ತನ್ನ ಮರಿಯನ್ನು ತನ್ನ ಕಾಲಕೆಳಗೆ ಹಾಕಿ ತುಳಿದು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಂತೆ. [೧೨೧] ಈ ಕಥೆಗೆ ಜೀವಂತಿಕೆ ಕೊಟ್ಟ ಮೊಹಂತಿಯವರನ್ನು ’ ಮನು’ ತುಂಬಾ ಮೆಚ್ಚಿಕೊಂಡನಂತೆ.
ಇಂದಿನ ಬಂಗಾಳಿಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಅವರ ಚರಿತ್ರೆ ಹಿನ್ನೆಲೆ ಮುಖ್ಯ. ಬಂಗಾಳಿಗಳು ಭಾವುಕರು. ತಮಗೆ ತೋಚಿದ್ದನ್ನು ತಕ್ಷಣಮಾಡುತ್ತಾರೆ, ನಿಮಗೆ ಬಂಗಾಳಿ ಬಂದರೆ ಸರಿ. ಅವರ ಮನ, ಮನೆಯಲ್ಲಿ ಎಲ್ಲಾ ದ್ವಾರಗಳೂ ನಿಮಗೆ ತೆರೆದಂತೆಯೇ ಸರಿ. ಅಥವಾ ಒಮ್ಮೆ ನಿಮ್ಮ ನಿಜವಾದ ಪರಿಚಯವಾದರೆ ಸಾಕು ಅವರು ನಿಮ್ಮನ್ನು ಪ್ರೀತಿಸಲು ತೊಡಗುತ್ತಾರೆ. ಬಿನೋದ್ ಬಿಹಾರಿ ಮುಖರ್ಜಿಯವರ ಬಿತ್ತಿ ಚಿತ್ರಗಳು ಶಾಂತಿನಿಕೇತನದ ಹಿಂದೀಭವನದ ಗೋಡೆಯಮೇಲೆ ರಾರಾಜಿಸುತ್ತಿತ್ತು. ತಮ್ಮ ಬದುಕಿನ ಕೊನೆಯದಶಕಗಳನ್ನು ಅಂಧರಾಗಿಯೇ ಕಳೆದವರನ್ನು ಕುರಿತು ಸತ್ಯಜಿತ್ ರೇ ಅವರು ' The Inner Eye ' ಎಂಬ ಚಲನ ಚಿತ್ರವನ್ನು ತಯಾರಿಸಿದರು. ಈತನ ಆತ್ಮಕಥೆ 'ಕಟ್ಟಾಮೋಶಾಯ್' ನ್ನು ಕೆ. ಜಿ. ಎಸ್. ಇಂಗ್ಲೀಷ್ ಗೆ ಅನುವಾದಿಸಿದ್ದಾರೆ. ಅದರ ವಿವರಗಳು ಚೆನ್ನಾಗಿವೆ. ರಾಮ ಕಿಂಕರ್ ಬೈಜ್ ಇನ್ನೊಬ್ಬ ಶಿಲ್ಪಿ. ನಂದಲಾಲ್ ಬೋಸ್ ಮತ್ತು ರವೀಂದ್ರರ ವರ್ಣಚಿತ್ರ ಗಳನ್ನು ಅವುಗಳ ಮೂಲದಲ್ಲಿ ನೋಡಲಾಗಲಿಲ್ಲವೆನ್ನುವುದು ಅವರಿಗೆ ಖೇದವನ್ನುಂಟುಮಾಡಿತ್ತಂತೆ !
ಕಲ್ಕೊತ್ತಾದ ಸಂಸ್ಕೃತಿ ಬ್ರಹ್ಮ : ಅಶುತೋಷ್ ಮುಖರ್ಜಿ.
ಕಲ್ಕೊತ್ತಾ ವಿಶ್ವವಿದ್ಯಾಲಯದ ಫೆಲೊ ತಮ್ಮ ೨೦ ರಲ್ಲಿ . ೧೯೦೪-೧೯೨೩ ರ ವರೆಗೆ ಕಲ್ಕೊತ್ತ ಹೈಕೋಟಿನ ನ್ಯಾಯಮೂರ್ತಿ. ೧೯೦೪-೧೯೧೪ ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿ. ೧೭೮೪ ರಲ್ಲಿ ಸ್ಥಾಪಿತವಾಗಿದ್ದ ಏಷಿಯಾಟಿಕ್ ಸೊಸೈಟಿ ಗೆ ೧೯೦೪ ರಲ್ಲಿ ಅಧ್ಯಕ್ಷರಾಗಿದ್ದರು. ೧೯೧೨ ರಲ್ಲಿ 'ಸರ್' ಪದವಿ ಕೊಡಲಾಯಿತು.
ಗಿರಿಜನರ ವಾಲ್ಮೀಕಿ ಗೋಪೀನಾಥ ಮೊಹಂತಿ, ಕೆ.ಜಿ.ಎಸ್. ಬರೋಡಾ, ಮತ್ತು ಶಾಂತಿನಿಕೇತನದಲ್ಲಿ ಕಲಿತು ಅಲ್ಲಿಯೇ ಶಿಕ್ಷಕರಾಗಿರುವ ಕಲಾಸಕ್ತರಿಗೆಲ್ಲರಿಗೂ ಅದರ್ಶಪ್ರಾಯರು ಮತ್ತು ಗೌರವಾನ್ವಿತರು. ಕಲಾಸೃಷ್ಟಿ ಮತ್ತು ಕಲೆ, ಕಲಾಸೃಶ್ಟಿಯಲ್ಲಿ ತಾತ್ವಿಕ ಚಿಂತನೆಗೆ ಅವರು ಎತ್ತಿದ ಕೈ. ಕಲಾವಿದ ಸೋಮನಾಥ ಹೋರ್, ವಿನಯವಂತಿಕೆಯ ಪ್ರತೀಕದಂತಿದ್ದ, ಮಣಿದಾ ಅವರ ಮ್ಯೂರಲ್ [ಭಿತ್ತಿಚಿತ್ರ] ಮಣಿದಾ ಅವರೊಡನೆ ಕಳೆದ ರಸ ನಿಮಿಷಗಳು. ಸೃಜನಶೀಲತೆ ಅನುವಂಶಿಕವೋ ಅಥವಾ ಕಲಿಕೆಯ ಫಲವೋ, ಎಂಬ ವಿಷಯದ ಮೇಲೆ ಸುದೀರ್ಘ ಚರ್ಚೆ ! ಇತ್ಯಾದಿ. ರವೀಂದ್ರರ ಉತ್ತರಾಧಿಕಾರಿ ಕೆ. ಜಿ. ಎಸ್. ಶಾಂತಿನಿಕೇತನ ಸ್ಪಷ್ಟಕಲ್ಪನೆ ಕೆ. ಜಿ. ಎಸ್ ಅವರಿಂದ ಅವರ ಪ್ರಭಾವಿತವಾಗಿತ್ತು.
ಶಿಶಿರ್ ಕುಮಾರ್ ಘೋಷ್, ಶಾಂತಿನಿಕೇತನದ ಅಶಾಂತ ತಪಸ್ವಿ. ಅವರ ಪ್ರಕಾರ, ರವೀಂದ್ರನಾಥ ಠಾಕೂರರು ಒಬ್ಬ ಶ್ರೇಷ್ಟ ಪ್ರವರ್ತಕ. ವ್ಯವಸ್ಠಾಪಕ. ಜಾಣ. ತಮ್ಮ ಪ್ರಭಾವಳಿಯ ಸುತ್ತಲೂ ಒಂದು ಮಿಥ್ಯವಂತ ದಂತ ಕಥೆಯಾಗಲು ರವೀಂದ್ರಸಂಗೀತವೆಂಬ ಮಾರ್ಗದ ಪ್ರವರ್ತಕರು. ಸಹಾಯವಾಯಿತು. ಬಂಗಾಳಿಬರದೆ ಇಂಗ್ಲೀಷ್ ಅನುವಾದ ನಿರರ್ಥಕ. ಸಾಂಸ್ಕೃತಿಕವಾದ ಎಲ್ಲ ಸಂಗತಿಗಳಬಗ್ಗೆ ಅನಾದರ. ೨೦ ನೆಯ ಶತಮಾನದ ದುರಂತ. ಬಹುಪಾಲು ಸಾಕ್ಷರಕ್ಕೆ ಬೆಳೆದರೂ ಸಾಹಿತ್ಯ ಪ್ರಸಾರ ಕಡಿಮೆಯಾಯಿತು. ರವೀಂದ್ರರು ರೈತರ ಬಗ್ಗೆ ಬರೆದರು. ಅವರಿಗಾಗಿ ಬರೆಯಲಿಲ್ಲ. ಹೀಗಾಗಿ ಜನಸಾಮಾನ್ಯರನ್ನು ಅವರು ತಲುಪಲೇ ಇಲ್ಲ. ತಮ್ಮ ಬಾಳ ಶಿಶಿರದಲ್ಲೂ, ಕುಮಾರರಾಗಿಯೇ ಉಳಿದಿರುವ ಅವರ ದಿಟ್ಟ ಮಾತುಗಳ 'ಘೋಷ' ನಮ್ಮ ಕಿವಿಯನ್ನು ತುಂಬಿತ್ತು. ಒಟ್ಟು ಸನ್ನಿವೇಶದ ಬಗೆಗಿನ ನಮ್ಮ ಅನಿಸಿಕೆಗಳು ನಮ್ಮದು ಮಾತ್ರವಲ್ಲವೆಂಬ ತಿಳುವಳಿಕೆ ನಮ್ಮ ಧೈರ್ಯವನ್ನು ಹೆಚ್ಚಿಸಿತ್ತು. ಈಗಿನ ಪ್ರಿನ್ಸಿಪಲ್, ಸನತ್ ಕರ್. ಗ್ರಾಫಿಕ ಕಲಾವಿದ. ಕರ್ನಾಟಕದ ಚಂದ್ರನಾಥ ಆಚಾರ್ಯ, ಶ್ಯಾಮಸುಂದರ್ ಮುಂತಾದ ಪ್ರತಿಭಾವಂತ ಕಲಾವಿದರು ಅವರ ಶಿಷ್ಯರು.
ಬೋಲ್ಪುರನಿಲ್ದಾಣದಿಂದ ಹಲವು ಕಿ. ಮೀ. ದೂರದ ಶಾಂತಿನಿಕೇತನ, ಪುರೋಹಿತರು ಪಂಡರು ಸತಾಯಿಸದ ಯಾವುದೋ ತೀರ್ಥ ಕ್ಷೆತ್ರದಂತೆ ಕಂಡಿತಂತೆ. ಅಲ್ಲಿಂದ ಶ್ರೀನಿಕೇತನಕ್ಕೆ ಹೋಗುವ ದಾರಿಯಲ್ಲಿ 'ಬಲ್ಲಭ್ ಹರಿಣವನ'ದಲ್ಲಿ ಜಿಂಕೆಗಳ ಮೇಲೆ ಬಿಳಿಯ ಚುಕ್ಕಿಗಳನ್ನು ನೋಡುವ ಸಂತಸ. ದಾರಿಯಲ್ಲಿ ಪುಸ್ತಕದ ಅಂಗಡಿಗಳು. ಶಾಂತಿನಿಕೇತನದ ಸೀರೆ, ಪರ್ಸ್, ಜೇನುತುಪ್ಪ, ಪ್ಲಾಸ್ಟರ್ ಆಫ್ ಪ್ಯಾರಿಸ್, ನಲ್ಲಿ ಅಚ್ಚುಹಾಕಿದ ಗುರುದೇವ ರವೀಂದ್ರರ ವಿಗ್ರಹಗಳು. ಇಪ್ಪತ್ತೈದು ರುಪಾಯಿಗೆ ಮೂರು !
ಪ್ಲಾನೆಟೋರಿಯಮ್ ನಲ್ಲಿ ರಾಜು, ತಮ್ಮ ಸುಖಾಸನದಲ್ಲಿ ಒರಗಿ ಮೈದಣಿವಾರಿಸಿಕೊಂಡ ದೃಷ್ಯ- ಪ್ರಸಂಗದ ಚಿತ್ರಣ ಚೆನ್ನಾಗಿತ್ತು. ಬೆಂಗಾಲಿ ಊಟ -ತಿಂಡಿ ತಿನಸುಗಳಿಗೆ ಹೆಸರುವಾಸಿಯಾಗಿದ್ದ 'ಸುರಚಿ' ಹೋಟೆಲ್ ಹುಡುಕಾಟದ ಪ್ರಸಂಗವನ್ನು ಬಹಳ ಚೆನ್ನಾಗಿ ವರ್ಣಿಸಿದ್ದಾರೆ. "ಇಂಡಿಯನ್ ಬಟಾನಿಕಲ್ ಗಾರ್ಡನ್ಸ್ "ನಲ್ಲಿ ತಪ್ಪು ತಪ್ಪಾಗಿ ಆಲದ ಮರದ ವರ್ಣನೆ ಮತ್ತು ಮಾಹಿತಿಗಳ ವಿವರಣೆ ಸರಿಯಿರಲಿಲ್ಲ. ರಾಜು ಮಾರ್ಗದರ್ಶಿಯನ್ನು ತರಾಟೆಗೆ ತೆದುಕೊಂಡ ಸಂಗತಿ ನಗುತರುವಂತಿತ್ತು.
ಭುವನೇಶ್ವರದಲ್ಲಿ : [೫೧]
ನಾನೂ ಒಮ್ಮೆ ಭುವನೇಶ್ವರಕ್ಕೆ ಹೋಗಿ ಕಂಡ ನೆನಪು ಇನ್ನೂ ಹಸಿರಾಗಿದೆ. ಭಾರತ ಪಂಕಜದಳಂ, ಇದಂ ಉತ್ಕಲ ಮಂಡಲಂ' ಎನ್ನುವ ಪರಿಕಲ್ಪನೆ. ಇಡೀ ದೇಶದ ಸಂಸ್ಕೃತಿಯನ್ನು ಒಂದು ತಾವರೆಗೆ ಹೋಲಿಸಿ, ಪ್ರಾದೇಶಿಕ ಸಂಸ್ಕೃತಿಯನ್ನು ಅದರ ದಳಗಳಲ್ಲೊಂದೆನ್ನುವ ಖಜುರಾಹೋ ಮತ್ತು ಕೋನಾರ್ಕ್ ದೇವಸ್ಥಾನಗಳ ಮಿಥುನ ಶಿಲ್ಪಕಲೆ. ಅಲ್ಲಿನ ಧವಳಗಿರಿಯ ಭೇಟಿ. ಅಲ್ಲಿನ ಅಶೋಕಚಕ್ರವರ್ತಿಯ ಶಾಸನ. ' ದೇವಾನಾಂಪ್ರಿಯ ' ನೆಂದೇ ಪ್ರಸಿದ್ಧನಾದ ಆತ ಬೌದ್ಧ ಧರ್ಮ ಸ್ವೀಕರಿಸುತ್ತಾನೆ. ಜಗನ್ನಾಥ ದೇಗುಲದೊಳಗೆ 'ಉಲುಲುಉ..' ಶಬ್ದ ಮಾಡಿದ ವಿಧವೆಯರ ಸಮೂಹ. ಒಡೆದ ಮಡಿಕೆಗಳಲ್ಲಿ ಇಟ್ಟ 'ಪ್ರಶೊದ್' ತಿನ್ನುತ್ತಾ ಕುಳಿತ ವಿಧವೆಯರು. ಜಗನ್ನಾಥ ದೇವಾಲಯದಲ್ಲಿ ಕಂಡ ದೃಷ್ಯ, ನಮ್ಮ ಮುಂಬೈ ನಲ್ಲಿ ಮಾಟುಂಗದ ಜೈನ ದೇಗುಲವನ್ನು ನೆನಪಿಸುತ್ತಿತ್ತು. ಭದ್ರವಾದ ಕಲ್ಲಿನ ದೊಡ್ಡ ಕಟ್ಟಡದ ವಿಶಾಲವಾದ ಹಾಲಿನಲ್ಲಿ ಬಾಲೆಯರಿಂದ ವೃದ್ಧ ಸ್ತ್ರೀಯರು ಬಿಳಿಸೀರೆಯನ್ನುಟ್ಟು, ಬಾಯಿಗೆ ಬಿಳಿ ಬಟ್ಟೆ ಕಟ್ಟಿಕೊಂಡು ಭಜನೆ ಮಾಡುವ ದೃಷ್ಯದ ನೆನಪು ಮಾಸಲು ಸಾಧ್ಯವಿಲ್ಲ.
ಒಂದು ಉನ್ನತ ಧ್ಯೇಯದ ವಿಷಯವೆಂದರೆ, ಗುಡಿಯ ಪ್ರಾಂಗಣದಲ್ಲಿ ಜಾತಿ-ಭೇದವಿಲ್ಲ. ಪ್ರಸಾದವನ್ನು ಎಲ್ಲಾಜಾತಿಯವರೂ ತಯಾರಿಸಲು ಅಡ್ದಿಯಿಲ್ಲ. ಉದಯಗಿರಿ ಖಂಡಗಿರಿಯ ಗುಹೆಗಳಲ್ಲಿ ಅವುಗಳ ಗೋಡೆಯಮೇಲೆ ಕೆತ್ತಿದ ಭಿತ್ತಿ- ಚಿತ್ರ ಜಾತ್ಯತೀತವಾದದ್ದು. ಉದಯನ, ವಾಸವದತ್ತೆಯರ ಕಥೆಗಳು, ಸ್ತ್ರೀ ಪುರುಷರು, ಹೂವು ಹಣ್ಣು ಪ್ರಾಣಿಗಳು ಎಲ್ಲಾ ಸೇರಿ ಧವಳಗಿರಿಗೆ ಒಂದು ವಿಶೇಷ ಸೊಬಗನ್ನು ಕೊಟ್ಟಿವೆ. ಲಿಂಗರಾಜ ಮಂದಿರ. ಭುವನೇಶ್ವರದ ಶಿವಕ್ಷೇತ್ರವಾದರೆ, ಕೊನಾರ್ಕ್, ಪುರಿ ಸೂರ್ಯಕ್ಷೇತ್ರ, ಶಂಖಕ್ಷೇತ್ರಗಳು. ಬಂಗಾಳಿ ವಿದ್ವಾಂಸ ಶಿಶಿರ್ ಕುಮಾರ್ ಛಟರ್ಜಿ, ಶಿಶಿರ್ ಕುಮಾರ್ ಘೋಷ್ ಸ್ವಲ್ಪ ಗೊಂದಲ. ಕೇರಳದ ಫಣಿಕ್ಕರ್ ಇಲ್ಲವೆ. ಎಲ್ಲಾ ಕರ್ ಗಳೂ ಮಹಾರಾಷ್ಟ್ರದವರೇ ಎನ್ನುವ ಹಾಗಿಲ್ಲ.
ಪ್ರವಾಸದುದ್ದಕ್ಕೂ ಬರುವ ಕಟ್ಟಾಮೋಶಾಯ್, ಬಾಬುಮೋಶಾಯ್, ಸೊಂದೇಶ್, ರೊಶೊಗುಲ್ಲ, ಚಟ್ಟೋಪಾಧ್ಯಾಯ್, ಮೊಹೊಂತೀ, ಘೋಷ್, ಕುಮಾರ್, ಮಿತ್ರೊ, ಮೊಂಜೊರಿ, ಚಕ್ರೊಬೊರ್ತಿ, ಭೊಕ್ತೊ, ಬಿಡೊ, ಕೊರ್ನಾಟಕೊ, ರೊಬಿಂದ್ರೊ, ಬೊಂಗೊಬೊಂಧು, ಇತ್ಯಾದಿಗಳನ್ನು ಮತ್ತೆ ಮತ್ತೆ ನೆನೆಸಿಕೊಳ್ಳಲು ಅಡ್ಡಿಯಿಲ್ಲ. ನಾವು ನಗೆಯಾಡಿದ್ದೇ ಆಡಿದ್ದು. ಪುಸ್ತಕದಲ್ಲಿ ಇನ್ನೂ ಅನೇಕ ಅಂಶಗಳನ್ನು ಗುರುತಿಸಿ ದಾಖಲಾತಿ ಮಾಡಿರುವ ರಾಘವೇಂದ್ರೊ, ನಿಜಕ್ಕೂ ಶ್ಲಾಘನೀಯರು. ಜನ-ಗಣ- ಮನ, ನಮ್ಮನ್ನು ಬಹಳ ಸಲ ಓದಲು ಪ್ರೇರಣೆ ನೀಡುತ್ತದೆ. ನನ್ನ ತಲ್ಲಣಗಳನ್ನು ಬಂಗಾಳದ ತಲ್ಲಣಗಳನ್ನು ಈ ತಲ್ಲಣಗಳ ಮಧ್ಯೆ ಅರಳಿಸುವ ಉಲ್ಲಾಸದ ಹೂವನ್ನು ಅಲ್ಲಿಷ್ಟು ಇಲ್ಲಿಷ್ಟು ನಿಮ್ಮ ಎದೆಯೊಳಗೆ ತಂದಿದ್ದರೆ ಅಷ್ಟು ಸಾಕು. [೫೦] ಒರಿಸ್ಸಾದ ಜನರು ತಾವು ಬದುಕುವ ಮಣ್ಣಿಗೆ ಸಂಬಂಧಿಸಿದ ಕೆಲವು ಲಕ್ಷಣಗಳನ್ನು ಹೊಂದಿರುತ್ತಾರೆ.
ಇನ್ನೊಂದು ಬಾರಿ ಜನ-ಗಣ- ಮನ, ಓದಲು ತೆಗೆದುಕೊಂಡರೆ ಇನ್ನೂ ಬೇರೆ ಬೇರೆ ಪಕ್ಕಗಳು ಗೋಚರಿಸುತ್ತಾ ಹೋಗುತ್ತವೆ. ಬಂಗಾಳದಲ್ಲಿ ಇದ್ದು, ಬಂಗಾಳಿ ಕಲಿತ, ಶ್ರೀನಿವಾಸಮೂರ್ತಿಯವರಿಗೆ ತಾವಿದ್ದ ದಿನಗಳ ನೆನಪುಗಳು ಮರುಕಳಿಸಿದ್ದರೆ ಆಶ್ಚರ್ಯವೇನೂ ಇಲ್ಲ.
ಕೊನೆಯಲ್ಲಿ ಒಂದಾದರೂ ನನ್ನ ಚಾಲಾಕಿತನ , ಬುದ್ಧಿ-ಪ್ರದರ್ಶನ ಮಾಡಬೇಕಲ್ಲ. ( ಬುದ್ಧಿ ಇದೆಯೇ ?) ಮುಖ ಪುಟದ ವಿನ್ಯಾಸ ಬೇರೆ ಇದ್ದಿದ್ದರೆ, ಪುಸ್ತಕ ಎತ್ತಿ ತಮ್ಮ ತೊಡೆಯಮೇಲೆ ಇಟ್ಟು, ಸವರಿ ಓದುವ ನವಿರಾದ ಸವಿ ಭಾವನೆಗಳು ಹೊಮ್ಮಿಬರುತ್ತಿದ್ದವೇನೋ ! ಇದು ತಪ್ಪಿರಲೂ ಸಾಕು.
ಕೊಲ್ಕತ್ತಾದ ಕಾಳಿಯ ನಾಲಿಗೆ, ಅದನ್ನು ಪ್ರತಿಪಾದಿಸುವ Abstract ಚಿತ್ರ (ಅಮೂರ್ತ ) Readers' friendliness , ಸವಾಲಾಗಿವೆ. ಆದರೆ, ರಾಘವೇಂದ್ರರಾಯರೆಂಬ ಹೆಸರು ಕಣ್ಣಿಗೆ ಕಂಡಕೂಡಲೇ ಕನ್ನಡದ ವಿಮರ್ಶೆಯ ಬ್ರ್ಯಾಂಡ್ ತಾನೆ. ಜನ ಮೊದಲು ನೋಡುವುದು ಬ್ರ್ಯಾಂಡ್ ಹೆಸರು ! ಗೆಳೆಯರ ಮಮತೆ, ಅವರ ಸ್ನೇಹವನ್ನು ಕಡೆಗಾಣಿಸುವುದು ಸಾಧ್ಯವೇ !
ರಾ. ರಾಯರು ಒರಿಸ್ಸಾ ಬಂಗಾಳದ ಭೇಟಿಮಾಡಿದ್ದು, ೧೯೮೮ ರಲ್ಲಿ. ಈ ೧೯ ವರ್ಷಗಳಲ್ಲಿ ವಿಶ್ವದ ಚಲನವಲನಗಳು ಬಹಳಷ್ಟು ಬದಲಾಗಿವೆ. ಹೂಗ್ಲಿ ಮತ್ತು ಕಾವೇರಿಯಲ್ಲಿ ಸಾಕಷ್ಟು ನೀರು ಹರಿದಿದೆ. ಕೊಲ್ಕತ್ತಾದ ಜನ, ಜ್ಯೋತಿಬಸುರವರಿಲ್ಲದೆ, ತಮ್ಮ ರಾಜ್ಯದ ಆಗುಹೋಗುಗಳನ್ನು ನಿರ್ಧರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾ. ರಾಯರು ಮತ್ತು ಅವರ ಆಪ್ತಗೆಳೆಯರು ಸೇವಾನಿವೃತ್ತರಾಗಿದ್ದಾರೆ. ರಾಯರ ಮಗ ದೊಡ್ಡವನಾಗಿ ಮನೆಗೆ ಸೊಸೆಯನ್ನು ತಂದುಕೊಟ್ಟಿದ್ದಾನೆ. ಬೆಂಗಳೂರಿನಲ್ಲಿ "ಪ್ಲಾನೆಟೋರಿಯಮ್ " ಸ್ಥಾಪಿಸಿದ್ದಾಗಿದೆ. ಕನ್ನಡದಲ್ಲಿ ಅರ್ಥವತ್ತಾಗಿ, ರಸವತ್ತಾಗಿ ನಕ್ಷತ್ರ, ಗ್ರಹಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿಹೇಳುವ ಯುವ ಪ್ರತಿಭೆಗಳನ್ನು ತಯಾರುಮಾಡಲಾಗಿದೆ.
ರವೀಂದ್ರರ ಸಾಹಿತ್ಯದ ಬಗ್ಗೆ, ಅಕ್ಕ ನವನೀತಾದೇವ್ ಸೇನ್ ರೊಂದಿಗೆ ಮಾತುಕತೆ ನಡೆಸಿದ ರಾ.ರಾ ಅವರಿಗೆ ಅಕ್ಕನವರ ಮಾತುಗಳು ಹೀಗಿದ್ದವು. ಆಕೆಗೆ ರವೀಂದ್ರರೇ ಈಗಿನ ಹೆಸರನ್ನು ಇಟ್ಟಿದ್ದರಂತೆ. ರವೀಂದ್ರರ ಕಟ್ಟಾ ಅಭಿಮಾನಿಯಾದ ಆಕೆ, ಭಾವೋದ್ವೇಗದಲ್ಲಿ ಹೇಳಿದ ಮಾತುಗಳು ತುಂಬಾ ಸ್ವಾರಸ್ಯಕರ.
"His English translations are rubbish. His own translations are the worst. When we translate, the music is lost. The 'ಕಾವ್ಯ' in the 'ಕವಿತಾ' is lost. "
ನವನೀತಾದದೇವ್, ಬಂಗಳದ ಖ್ಯಾತ ಕವಯತ್ರಿ, ಕಥೆಗಾರ್ತಿ, ವಿಮರ್ಶಕಿ, ಖ್ಯಾತ ಪತ್ರಿಕಾಕರ್ತೆ, ಅನುವಾದಕಿ ಯು. ಎಸ್. ಎ ಮುಂತಾದ ಖ್ಯಾತ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರೊಫೆಸರ್ ಆಗಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿರುವವರು. ಆಕೆಯ ತಂದೆ, ಸಾಹಿತಿ, ನರೇಂದ್ರದೇವ್. ತಾಯಿ- ಪ್ರಖ್ಯಾತ ರವೀಂದ್ರ ಪ್ರಶಸ್ತಿ ವಿಜೇತೆ, ರಾಧಾರಾಣೀದೇವಿ. "ಶೆಷೇರ್ ಪರಿಚೊಯ್" ಎಂಬ ಟ್ಯಾಗೋರರ ಅಂತಿಮ, ಅಪೂರ್ಣ ಕಾದಂಬರಿಯನ್ನು ರಾಧಾರಾಣಿದೇವಿ, ಪೂರ್ಣಗೊಳಿಸಿದಳಂತೆ. ನವನೀತಾದೇವಿ ಅಸ್ವಸ್ಥರಾಗಿದ್ದರು. ಬಂಗಾಳದ ೩ ಮಹಾಲೇಖಕಿಯರಲ್ಲಿ ಈಕೆಯೂ ಒಬ್ಬರು. ಇನ್ನಿಬ್ಬರು; ಆಶಾಪೂರ್ಣಾದೇವಿ, ಮತ್ತು ಮಹಾಶ್ವೇತಾದೇವಿ. ಸಂದರ್ಶನ ನಡೆಸಿದ ಸಮಯದಲ್ಲಿ ಆಕೆ ಜಾಧವ್ ಪುರ್ ವಿಶ್ವವಿದ್ಯಾಲಯದಲ್ಲಿ Comparitive Indian Literature ವಿಭಾಗವನ್ನು ನಡೆಸುತ್ತಿದ್ದರು.
ಇನ್ನೊಂದು ಪ್ರಸಂಗ : ಧೀರೇಂದ್ರನಾಥ್ ಕರ್ ರ ಕವಿತಾವಾಚನ. ೨೧ ವರ್ಷದ ವಯಸ್ಸಿನಲ್ಲೇ ಕ್ಷಯರೋಗದಿಂದ ಬಳಲಿ ಮೃತರಾದ, ಸುಶಾಂತ್ ಭಟ್ಟಾಚಾರ್ಯರ ಕವಿತೆ, 'Runner ' ಹೃದಯಸ್ಪರ್ಶಿಯಾಗಿತ್ತಂತೆ.
ಅಲ್ಲಿ ನೋಡಿದ ಹಲವು ನಾಟಕಗಳು : ಗೆಲಿಲಿಯೊ, ಹಿಂದಿ ನಾಟಕ ರಾಜಾ ಲಿಯರ್.
ಬೆಂಗಳೂರಿನಲ್ಲೂ ಸುಲಭವಾಗಿ ಲಭ್ಯವಾಗದ ಬ್ಯಾಲೆ ನೃತ್ಯದ ವೀಕ್ಷಣೆಯ ಹಲವಾರು ಮಧುರ ಕ್ಷಣಗಳು. ಥಿಯೇಟರ್ ನಲ್ಲಿ ಹಿಂದೆ ಕುಳಿತಿದ್ದ ಕುಳ್ಳಿಗೆ (೫’ ೩") ಕಾಣಿಸಲೆಂದು ರಾ.ರಾ. ತಮ್ಮ ಮೈಯನ್ನು ಬಗ್ಗಿಸಿ, ತಗ್ಗಿಸಿ ಕುಳಿತುಕೊಳ್ಳುತ್ತಾರೆ. ಮಧ್ಯಾಂತರದಲ್ಲಿ ಹಿಂತಿರುಗಿ ನೋಡಿದಾಗ, ಆ ಕುಳ್ಳಿ ಬೇರೆಲ್ಲಿಗೋ ತನ್ನ ಜಾಗವನ್ನು ಸ್ಥಳಾಂತರಿಸಿರುತ್ತಾಳೆ . ನಂತರ ರಾಯರು ಸ್ವಲ್ಪ ಆರಾಮಾಗಿ ಹೇಗೆ ಕುಳಿತುಕೊಳ್ಳುತ್ತಾರೆ ಎನ್ನುವುದನ್ನು ಓದೋಣ : ನಾನು ತ್ರಿವಿಕ್ರಮನಾದೆ ; ಜಿರಾಫೆಯಾದೆ !
ಟ್ಯಾಗೋರರ ಬರವಣಿಗೆ ಸಾಮಾನ್ಯಜನರಿಗೆ ತಲುಪುತ್ತಿದೆಯೇ ? ಎಂಬ ಪ್ರಶ್ನೆಗೆ, ಘೋಷ್ ಪ್ರತಿಕ್ರಿಯಿಸುವ ಬಗೆ :
ಅವರನ್ನು Provoke ಮಾಡಿದಂತೆಲ್ಲಾ ಅವರು ವ್ಯಗ್ರರಾದರು. ವ್ಯಗ್ರರಾದಂತೆಲ್ಲಾ ಸತ್ಯಕ್ಕೆ ಹತ್ತಿರವಾದರು. ಇತ್ಯಾದಿ. ಪದಗಳ ಸಮಯೋಜಿತ ಬಳಕೆ ಓದುಗರಿಗೆ ಮುದಕೊಡುತ್ತದೆ. ’ ಕಾಲೇಜ್ ಸ್ಟ್ರೀಟ್” ’ ಕಾಫೀ ಹೌಸ್” ’ ಪಾರ್ಕ್ ಸ್ಟ್ರೀಟ್ ’ಗಳನ್ನು ಕುರಿತು ಲಘು ಉಪನ್ಯಾಸವನ್ನು ಬರೆದಿರುವುದು ಚೆನ್ನಾಗಿದೆ.
ಬಂಗಾಳದ ರಂಗಭೂಮಿಯ ಜೀವಂತಿಕೆಯನ್ನು ಮೆಚ್ಚಿಕೊಂಡಾಡುವಂತಹದು. ಜಾನಪದ, ಪ್ರೊಫೆಷನಲ್, ಮತ್ತು ಹವ್ಯಾಸಿ ರಂಗ ಮಂಚಗಳು ಒಂದೇ ಕಡೆ ಮೇಳವಿಸಿರುವ ಸಹಜತನಕ್ಕೆ ನಮಿಸಬೇಕು. ಒಂದೆರಡು ಅತಿ ಸುಸಜ್ಜಿತ ರಂಗಮಂದಿರಗಳ ಬದಲು, ಇಡೀ ನಗರದ ತುಂಬಾ ಅನೇಕ ಚಿಕ್ಕ ಚಿಕ್ಕ ರಂಗಮಂಚಗಳಿರುವ ಸಂಗತಿ ಬೆರಗುಗೊಳಿಸುತ್ತದೆ.
ಕಲಿಯಲು ಬೇಕಾದಷ್ಟು ವಿಷಯಗಳ ಗ್ರಾಸವನ್ನು ನಮಗೆ ಕೊಡುವ "ಯಾತ್ರಾ ವಿವರ " ನಿಜಕ್ಕೂ ನೆನೆಯುವಂ(ಬಂ)ತಹದು. ಕೊನೆಗೆ, ಇದನ್ನು ಓದಿದ ಮೇಲೆ ನಾವೂ ’ ವ ’ ಬದಲು ’ಬ ’ ಪ್ರಯೋಗ ಮಾಡುವ ಸ್ಥಿತಿಗೆ ಬರುತ್ತೇವೆ !
ಒಮ್ಮೆ ಪುಸ್ತಕದ ರಸ ಹೀರಕ್ ಶುರು ಮಾಡಿದ್ಮೇಲೆ ಅದನ್ನ ಬಿಡೋರ್ ಯಾರು ?