ಜಪ ಮಾಡುವುದರಿಂದ ಆಗುವ ಪ್ರಯೋಜನಗಳು
ಜಪಗಳಲ್ಲಿ ಹನ್ನೆರಡು ವಿಧ. ಅವು ನಿತ್ಯ ಜಪ, ನೈಮಿತ್ತಿಕ ಜಪ, ಕಾಮ್ಯ ಜಪ, ಪ್ರಾಯಶ್ಚಿತ್ತ ಜಪ, ಅಚಲ ಜಪ, ಜಲ ಜಪ, ಅಖಂಡ ಜಪ, ಪ್ರದಕ್ಷಿಣ ಜಪ, ಅಜಪಾ ಜಪ, ವಿಲೋಮ ಜಪ, ನಿಷಿದ್ಧ ಜಪ, ಲಿಖಿತ ಜಪ. ಜಪ ಮಾಡುವಾಗ ಮಣಿಗಳನ್ನು ಎಣಿಸಲು ಹೆಬ್ಬೆರಳು, ಮೂರು ಮತ್ತು ನಾಲ್ಕನೇ ಬೆರಳುಗಳನ್ನು ಮಾತ್ರ ಉಪಯೋಗಿಸಬೇಕು. ತೋರು ಬೆರಳು ಅಹಂಕಾರ ಸೂಚಕವಾದುದರಿಂದ ಅದನ್ನು ಉಪಯೋಗಿಸಬಾರದು. ಹಾಗಾದರೆ ಜಪ ಮಾಡುವುದರಿಂದ ನಮಗೆ ಆಗುವ ಉಪಯೋಗಗಳೇನು?
ಸ್ವಾಮಿ ಶಿವಾನಂದ ಮಹಾರಾಜರು ತಮ್ಮ ಜಪಯೋಗ ಎಂಬ ಪುಸ್ತಕದಲ್ಲಿ ಈ ರೀತಿ ಬರೆದಿದ್ದಾರೆ. ವಿಷಯ ವಸ್ತುಗಳತ್ತ ಹರಿದಾಡುವ ಮಾನಸಿಕ ಚಿಂತನಾ ತರಂಗಗಳನ್ನು ಜಪವು ನಿಯಂತ್ರಿಸುತ್ತದೆ. ಅದು ಮನಸ್ಸನ್ನು ಪರಮಾತ್ಮನತ್ತ ವಾಲಿದಂತೆ ಮಾಡಿ ಚಿರಶಾಂತಿ ಒದಗಿ ಬರಲು ನೆಲೆ ನೀಡುತ್ತದೆ. ಪ್ರತಿಯೊಂದು ಮಂತ್ರದಲ್ಲಿಯೂ ಚೈತನ್ಯಶಕ್ತಿ ಅಡಗಿದೆ. ಸಾಧಕನು ಶಕ್ತಿ ಕುಂದಿದಾಗ ಮಂತ್ರ ಶಕ್ತಿಯು ಸಾಧನಾ ಶಕ್ತಿಗೆ ನೆಲೆ ನಿಂತು ಸಾಧಕನನ್ನು ಹುರಿದುಂಬಿಸುತ್ತದೆ.
ಜಪವು ಕಾಮನೆಯನ್ನು ಪರಿಶುದ್ಧಗೊಳಿಸುವ ಮಾನಸಿಕ ಶಕ್ತಿಗೆ ನೆರವು ನೀಡಿ ರಜಸ್ಸನ್ನು ಸತ್ವವನ್ನಾಗಿ ಪರಿವರ್ತಿಸುತ್ತದೆ. ಅದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಮನಸ್ಸನ್ನು ಬಾಹ್ಯ ವೃತ್ತಿಗೆ ತೊಡಗದಂತೆ ತಡೆಯುತ್ತದೆ. ಎಲ್ಲಾ ವಿಧವಾದ ದುಷ್ಟ ಚಿಂತನೆಗಳನ್ನೂ, ಪ್ರಕೃತಿಗಳನ್ನೂ ತಡೆಗಟ್ಟುತ್ತದೆ. ಧೃತಿಯನ್ನೂ, ತಪಶ್ಚರ್ಯವನ್ನೂ ಪ್ರೇರೇಪಿಸುತ್ತದೆ.
ಸತತ ಜಪ ಸಂಪೂಜನೆಯಿಂದ ಮನಸ್ಸು ಪರಿಶುದ್ಧಗೊಳ್ಳುವುದು. ಮಂತ್ರ ಜಪವು ಸಂಪೂಜನೆಯ ಒಳ್ಳೆಯ ಸಂಸ್ಕಾರಗಳಿಗೆ ಬಲ ನೀಡುವುದು. ಜಪದ ಕಾಲದಲ್ಲಿ ಮತ್ತು ಸಂಪೂಜನೆಯ ಕಾಲದಲ್ಲಿ ಮನಸ್ಸು ಪರಮಾತ್ಮನ ಮೂರ್ತಿಯನ್ನೇ ಚಿಂತಿಸಿದರೆ, ಅಂತಹ ಸಾಧಕನ ಮಾನಸಿಕ ಸತ್ವವು ಪರಮಾತ್ಮನ ಸ್ವರೂಪವನ್ನೇ ತಾಳುವುದು. ಇಂತಹ ಈ ರೂಪವು ಮನಸ್ಸಿನಲ್ಲಿ ನೆಲೆಗೊಳ್ಳುವುದು ಇದೇ ಸಂಸ್ಕಾರ. ಧಾನಾಸಕ್ತನೂ ಮತ್ತು ಧ್ಯಾನ ವಸ್ತುವೂ, ಸಂಪೂಜಕನೂ ಮತ್ತು ಸಂಪೂಜನಾ ವಸ್ತುವೂ ಚಿಂತಕನೂ ಮತ್ತು ಚಿಂತನಾ ವಸ್ತುವೂ ಒಂದಾಗಿ ಐಕ್ಯಗೊಳ್ಳುವುದು.
ಜಪಕ್ಕೆ ಲೆಕ್ಕ ಬೇಕೇ? : ಪ್ರಾತಃ ಕಾಲ ಎದ್ದ ನಂತರ ಮುಖ ತೊಳೆದುಕೊಂಡು ಕಾಫಿ ಅಥವಾ ಹಾಲು ಸೇವನೆ ಮಾಡುವುದಕ್ಕೆ ಮುಂಚೆ ಕೊನೆಯ ಪಕ್ಷ ಒಂದು ಮಾಲೆಯ ಜಪವನ್ನಾದರೂ ಮಾಡಬೇಕು. ಜಪದ ಸರದ ಕೊನೆಯ ಮಣಿಗೆ ಬಂದಾಗ, ಎರಡನೆಯ ಮಾಲೆಗೆ ಕೊನೆಯ ಮಣಿಯನ್ನು ಮೊದಲನೆಯದನ್ನಾಗಿ ಮಾಡಿಕೊಳ್ಳಬೇಕು. ‘ಅಸಂಖ್ಯಾ ಮಸುರಂ ಯಸ್ಮಾತ್ ತಸ್ಮಾತದ್ ಗಣಯೇತ್ ದೃವಂ’ ಲೆಕ್ಕವಿಲ್ಲದ ಜಪವು ಅಸುರ ಜಪವೆಂದು ಕರೆಯಲ್ಪಡುತ್ತದೆ. ಆದುದರಿಂದ ಜಪಕ್ಕೆ ಲೆಕ್ಕವಿಡಬೇಕು. ಹಾಗಾದರೆ ಇನ್ನೇಕೆ ತಡ ಶೃದ್ಧೆ, ನಿಷ್ಟೆಯಿಂದ ಜಪ ಮಾಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ