ಜಮೀನು ಕಳಕೊಂಡ ರೈತರ ಹೋರಾಟಕ್ಕೆ ಜಯ

ಜಮೀನು ಕಳಕೊಂಡ ರೈತರ ಹೋರಾಟಕ್ಕೆ ಜಯ

"ನಮ್ಮ ಜಮೀನು ನಮ್ಮ ತಾಯಿ. ಹಲವು ತಲೆಮಾರುಗಳ ಕಾಲ ಅದು ನಮ್ಮನ್ನು ಕಾಪಾಡಿದೆ. ಸರಕಾರವು ನನ್ನ ಜೀವ ಕಿತ್ತುಕೊಳ್ಳಬಹುದೇ ಹೊರತು ಜಮೀನನ್ನಲ್ಲ” ಎಂದು ವೃದ್ಧೆ ಧಾಕಿ ಬಾಯಿ ಠಾಕೂರ್ ಹೇಳುತ್ತಿದ್ದಂತೆ ನೆರೆದವರಲ್ಲಿ ವಿದ್ಯುತ್ ಸಂಚಾರ.

ಅದು 15 ಸಪ್ಟಂಬರ್ 2009ರಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ದಿವ್ ಗ್ರಾಮದಲ್ಲಿ ರೈತರ ಸಮಾವೇಶದ ಸಂದರ್ಭ. ಮಹಾರಾಷ್ಟ್ರದ ಎಂಟು ಜಿಲ್ಲೆಗಳ ಸುಮಾರು 300 ರೈತರು ಅಲ್ಲಿ ಜಮಾಯಿಸಿದ್ದರು - ವಿಶೇಷ ಆರ್ಥಿಕ ವಲಯಗಳ (ಎಸ್.ಇ.ಜಡ್) ಮೊತ್ತಮೊದಲ ಸಾರ್ವಜನಿಕ ಅಡಿಟ್ ನಡೆಸಲಿಕ್ಕಾಗಿ.

ಅಲ್ಲಿ ರೈತರ ಸಮಾವೇಶ ಸಂಘಟಿಸಿದ ಪ್ರಧಾನ ಸಂಸ್ಥೆಗಳು ಎಂ.ಕೆ.ಎಸ್.ಎಸ್., ಟಿ.ಐ.ಎಸ್.ಎಸ್., ಎನ್.ಸಿ.ಎ.ಎಸ್. ಇತ್ಯಾದಿ. ಈ ಸಂಸ್ಥೆಗಳು ವಿಶೇಷ ಆರ್ಥಿಕ ವಲಯಗಳಿಂದ ತೊಂದರೆಗೆ ಒಳಗಾದ ರೈತರನ್ನು ಗುರುತಿಸಿ ಅವರಿಗೆ ಪ್ರಶ್ನಾವಳಿ ಹಂಚಿದವು. ಉದ್ದೇಶ: ವಿಶೇಷ ಆರ್ಥಿಕ ವಲಯದ ಬಗ್ಗೆ ಜನಾಭಿಪ್ರಾಯ ತಿಳಿಯುವುದು ಮತ್ತು ಅದರಿಂದಾದ ತೊಂದರೆ ದಾಖಲಿಸುವುದು.

"ಆ ಪ್ರಶ್ನಾವಳಿ ಮರಾಠಿ ಭಾಷೆಯಲ್ಲಿತ್ತು. ಓದು-ಬರಹ ತಿಳಿಯದವರಿಗೆ ಸಂಸ್ಥೆಗಳ ಸ್ವಯಂಸೇವಕರು ಪ್ರಶ್ನಾವಳಿಗೆ ಉತ್ತರಿಸಲು ಸಹಕರಿಸಿದರು. ಪ್ರಶ್ನಾವಳಿಯ ಬಗ್ಗೆ ಗ್ರಾಮಮಟ್ಟದಲ್ಲಿ ಚರ್ಚೆ ನಡೆಯಿತು. ಹಳ್ಳಿಗರ ಪ್ರತಿಕ್ರಿಯೆಗಳನ್ನು ದಾಖಲಿಸಿ ಪರಿಶೀಲಿಸಲಾಯಿತು” ಎಂದು ಸುರೇಖಾ ದಲವಿ ತಿಳಿಸುತ್ತಾರೆ. ಅವರು ವಕೀಲರೂ, ರೈತರ ಜಮೀನು ಹಕ್ಕು ಹೋರಾಟದ ಕಾರ್ಯಕರ್ತೆಯೂ ಆಗಿದ್ದಾರೆ.

ನಮ್ಮ ದೇಶದಲ್ಲೇ ಅತ್ಯಧಿಕ, ಅಂದರೆ 202 ವಿಶೇಷ ಆರ್ಥಿಕ ವಲಯಗಳಿಗೆ ಮಂಜೂರಾತಿ ನೀಡಲಾಗಿರುವ ಮಹಾರಾಷ್ಟ್ರದಲ್ಲಿ ಇಂತಹ ಪ್ರತಿಭಟನೆ ಮುಖ್ಯವಾಗುತ್ತದೆ. “ಸಾರ್ವಜನಿಕ ಅಡಿಟ್‌ನ ಉದ್ದೇಶ ಏನು? ಜನಸಾಮಾನ್ಯರ ಆಶೋತ್ತರಗಳನ್ನು ಸರಕಾರಕ್ಕೆ ತಿಳಿಸುವುದು ಮತ್ತು ಈ ವಲಯ ಬೇಕೇ? ಎಂದು ಪ್ರಶ್ನಿಸುವುದು” ಎಂದು ಧ್ವನಿ ಎತ್ತುತ್ತಾರೆ ಲಾಭರಹಿತ ಸಂಘಟನೆ ಎಂ.ಕೆ.ಎಸ್.ಎಸ್.ನ ಸ್ಥಾಪಕರಾದ ಅರುಣಾ ರಾಯ್.

“ವಿಶೇಷ ಆರ್ಥಿಕ ವಲಯಗಳು ರೈತರ ಆತ್ಮಹತ್ಯೆಗೆ ಹೊಣೆ” ಎಂದು ಅಲ್ಲಿನ ರೈತರು ಘೋಷಿಸಿದ್ದಾರೆ. ನಾಗಪುರದಿಂದ ಬಂದ ರೈತರ ತಂಡವಾದ ಮಿಹಾನ್ ವಿಶೇಷ ಆರ್ಥಿಕ ವಲಯಗಳನ್ನು ತೀವ್ರವಾಗಿ ಪ್ರತಿಭಟಿಸಿತು. “ಈ ಯೋಜನೆ ಹದಿನಾಲ್ಕು ಜಿಲ್ಲೆಗಳ 4,025 ಹೆಕ್ಟೇರ್ ಜಮೀನನ್ನು ಕಬಳಿಸುತ್ತದೆ. ಇದರ ಅರ್ಧ ಭಾಗ ಜಮೀನನ್ನು ಸರಕಾರ ವಶಪಡಿಸಿಕೊಂಡಿದ್ದು, ಅದೀಗ ಪಾಳು ಬಿದ್ದಿದೆ” ಎನ್ನುತಾರೆ ಶಿವಗಾಂವ್‌ನ ರೈತ ಬಾಬಾಜಿ ದಾವ್‌ರೆ.

“ಸರಕಾರ ವಶಪಡಿಸಿಕೊಂಡದ್ದು ಫಲವತ್ತಾದ ಜಮೀನು. ಇಸವಿ 2000ದಿಂದೀಚೆಗೆ ಅಲ್ಲಿದ್ದ ಒಂದು ದಶಲಕ್ಷಕ್ಕಿಂತ ಹೆಚ್ಚಿನ ಕಿತ್ತಳೆ ಗಿಡಗಳನ್ನು ನಾಶ ಮಾಡಲಾಗಿದೆ” ಎಂಬ ಅವರ ಸಂಕಟದ ಮಾತು ನಮ್ಮನ್ನು ತಟ್ಟುತ್ತದೆ. ಆ ಜಮೀನಿನಲ್ಲಿ ವಿಮಾನ ನಿಲ್ದಾಣದ ಏರ್ ಸ್ಟ್ರಿಪ್ ನಿರ್ಮಾಣವಾಗಲಿದೆ. “ಅದನ್ನು ಹೇಗೆ ಮಾಡುತ್ತಾರೆ ನೋಡ್ತೀನಿ. ಸರಕಾರ ನನ್ನ ಶವದ ಮೇಲೆ ಏರ್ ಸ್ಟ್ರಿಪ್ ಮಾಡಬೇಕಾದೀತು" ಎಂದು ಅವರ ಆಕ್ರೋಶ ಸಿಡಿಯುತ್ತದೆ.

ಶಿವಗಾಂವ್‌ನ ಡೈರಿ ಉದ್ಯಮದ ಮೌಲ್ಯ 25ರಿಂದ 30 ಕೋಟಿ ರೂಪಾಯಿಗಳು. ಏರ್ ಸ್ಟ್ರಿಪ್ ನಿರ್ಮಾಣವಾದರೆ ಇಂತಹ ಅಮೂಲ್ಯ ಉದ್ದಿಮೆಯ ಅಂತ್ಯ. ನಾಸಿಕ್ ಮತ್ತು ಪುಣೆಯ ರೈತರೂ ಸಮಾವೇಶದಲ್ಲಿ ಇಂತಹ ದಾರುಣ ಕತೆಗಳನ್ನೇ ಹಂಚಿಕೊಂಡರು. ರೈತರಿಗಾದ ನಷ್ಟ, ಅಲ್ಪ ಪರಿಹಾರದ ಹಣ ಮತ್ತಿತರ ಅನ್ಯಾಯದ ಕತೆಗಳನ್ನು ಹೇಳಿದರು.

ಅಂತೂ ಈ ರೈತ ಸಮಾವೇಶ ವ್ಯರ್ಥವಾಗಲಿಲ್ಲ. ಯಾಕೆಂದರೆ, ಕೆಲವೇ ದಿನಗಳಲ್ಲಿ ಮಹಾರಾಷ್ಟ್ರ ಸರಕಾರವು ಸ್ಥಳಾಂತರಗೊಂಡ ರೈತರಿಗೆ, ಅವರಿಂದ ವಶಪಡಿಸಿಕೊಳ್ಳದಾದ ಜಮೀನಿನ ಶೇಕಡಾ 12.5 ವಿಸ್ತೀರ್ಣಕ್ಕೆ ಸಮವಾದ ಅಭಿವೃದ್ಧಿ ಪಡಿಸಿದ ಜಮೀನನ್ನು ಪರಿಹಾರವಾಗಿ ಕೊಡುವುದಾಗಿ ಘೋಷಿಸಿತು. ಅದಕ್ಕಾಗಿ 29 ಆಗಸ್ಟ್ 2009ರ ಸುಗ್ರೀವಾಜ್ನೆ ಮೂಲಕ 1999ರ ಕಾಯಿದೆಯನ್ನೇ ತಿದ್ದಿತು. ಇದು ರೈತರ ಹೋರಾಟಕ್ಕೆ ಸಂದ ಜಯ.

ರೈತರ ಪ್ರತಿಭಟನೆಯ ಎರಡು ಪ್ರಾತಿನಿಧಿಕ ಫೋಟೋಗಳು ... ಕೃಪೆ: ಟೈಮ್.ಕೋಮ್ ಮತ್ತು ಸಿಎನ್‌ಎನ್.ಕೋಮ್