"ಜಮೀನು ಮಾರಲಿಲ್ಲ, ಅದಕ್ಕೆ ಚೆನ್ನಾಗಿದ್ದೇವೆ"

"ಜಮೀನು ಮಾರಲಿಲ್ಲ, ಅದಕ್ಕೆ ಚೆನ್ನಾಗಿದ್ದೇವೆ"

"ನಮ್ಮ ಹಳ್ಳಿಗೆ ಐಟಿ ಕಂಪೆನಿಗಳು ೨೦೦೮ರಲ್ಲಿ ಬಂದು ಮಾಡಿದ್ದೇನು? ರೈತರ ಜಮೀನು ಖರೀದಿಸಿದ್ದು. ಯಾವ ರೇಟಿಗೆ ಅಂತೀರಾ? ಒಂದು ಎಕ್ರೆಗೆ ಐದು ಕೋಟಿ ರೂಪಾಯಿಗೆ. ಐವತ್ತಮೂರು ರೈತರು ಐಟಿ ಕಂಪೆನಿಗಳಿಗೆ ಜಮೀನು ಮಾರಿದ್ರು. ಅವರಿಗೆ ಸಿಕ್ಕಿದ್ದು ೮೩ ಕೋಟಿ ರೂಪಾಯಿ. ಅನಂತರ ಏನಾಯಿತು? ಅಪ್ಪ ಐಟಿ ಕಂಪೆನಿಯ ಸೆಕ್ಯುರಿಟಿವಾಲಾ, ಮಗ ಗಾರ್ಡನ್‍ವಾಲಾ ಆಗಬೇಕಾಯಿತು. ಈಗ, ನಾಲ್ಕು ವರುಷದಲ್ಲಿ ಕೈಗೆ ಬಂದ ಹಣವೆಲ್ಲ ಖರ್ಚಾಗಿದೆ. ಇನ್ನೇನು ಮಾಡೋದಂತ ಅವರಿಗೆ ಗೊತ್ತಿಲ್ಲ. ಅವರಲ್ಲಿ ೩೫ ಜನರಿಗೆ ಈ ಚಿಂತೆಯೂ ಇಲ್ಲ. ಯಾಕೆಂದರೆ ಅವರೀಗ ಬದುಕಿಯೇ ಇಲ್ಲ. ದಿನದಿನವೂ ಮದ್ಯಪಾನ ಮಾಡಿ, ಲಿವರ್ ಫೈಲ್ ಆಗಿ ಸತ್ತೇ ಹೋದರು."

 ಹೀಗಂತ ಪುಣೆ ಹತ್ತಿರದ ಹಳ್ಳಿಯೊಂದರ ಕತೆಯನ್ನು ಕೆಲವೇ ಮಾತುಗಳಲ್ಲಿ ಕಟ್ಟಿ ಕೊಟ್ಟವರು ಜ್ನಾನೇಶ್ವರ ಬೋಡ್‍ಕೆ - ಪುಣೆಯಲ್ಲಿರುವ ರಿಜರ್ವ್ ಬ್ಯಾಂಕಿನ "ಕೃಷಿ ಬ್ಯಾಂಕಿಂಗ್ ಕಾಲೇಜಿ"ನಲ್ಲಿ ಜುಲಾಯಿ ೨೦೧೨ರಲ್ಲೊಂದು ದಿನ ಮುಖಾಮುಖಿಯಾದಾಗ.

 ಜೊತೆಗೆ ತನ್ನದೇ ಕತೆಯನ್ನು ಅವರು ಇದೊಂದೇ ಮಾತಿನಲ್ಲಿ ಕಟ್ಟಿ ಕೊಟ್ಟರು: "ನಾವು ಅವರ ಹಾಗೆ ಜಮೀನು ಮಾರಲಿಲ್ಲ. ಅದಕ್ಕೇ ಚೆನ್ನಾಗಿದ್ದೇವೆ." ಅದೇ ಉಸಿರಿನಲ್ಲಿ ತನ್ನ ಕತೆಯನ್ನು ಬೋಡ್‍ಕೆ ಬಿಚ್ಚಿಟ್ಟರು.

 "ನಾನು ಶಾಲೆಗೆ ಹೋಗುತ್ತಿದ್ದಾಗ ತಂದೆಯವರ ಕೃಷಿ ಕೆಲಸಕ್ಕೆ ಕೈಗೂಡಿಸುತ್ತಿದ್ದೆ. ಅನಂತರ "ಇಂಟೀರಿಯರ್ ಡಿಸೈನಿಂಗ್" ಕೋರ್ಸ್ ಮುಗಿಸಿ, ಒಂದು ಕೆಲಸಕ್ಕೆ ಸೇರಿದೆ. ಹತ್ತು ವರುಷ ನಾನು ಕೆಲಸ ಮಾಡಿದೆ. ಪ್ರತಿ ತಿಂಗಳು ತಪ್ಪದೆ ಸಂಬಳ ಸಿಗುತ್ತಿತ್ತು.

 ಅದೊಂದು ದಿನ ಪತ್ರಿಕೆಯಲ್ಲಿ ಒಂದು ಲೇಖನ ಓದಿದೆ - ಸಾಂಗ್ಲಿಯ ರೈತ ಪ್ರಕಾಶ್ ಪಾಟೀಲರ ಸಾಧನೆ ಬಗ್ಗೆ. ಅಲ್ಲಿಗೆ ಹೋಗಿ ಕಣ್ಣಾರೆ ಕಂಡು ಬಂದೆ. ಅವರದು ಸರಳ ಕೃಷಿ. ನಾನೂ ಹಾಗೆ ಕೃಷಿ ಮಾಡಬೇಕು ಅನಿಸಿತು.

 ಅನಂತರ ಪೂನಾದ ತೋಟಗಾರಿಕಾ ತರಬೇತಿ ಕೇಂದ್ರದಲ್ಲಿ ಐದು ದಿನಗಳ ಕೋರ್ಸ್ ಮಾಡಿದೆ - ಹೂವಿನ ಕೃಷಿ ಬಗ್ಗೆ. ಅಲ್ಲೇ ಕೆಲಸ ಮಾಡುತ್ತೇನೆ ಎಂದೆ. "ಇಲ್ಲಿ ಕೆಲಸ ಮಾಡಿ ಕಲಿಯಬಹುದು. ಆದರೆ ಸಂಬಳ ಇಲ್ಲ" ಎಂದರು. ಪರವಾಗಿಲ್ಲ ಅಂತ ಅಲ್ಲಿ ಒಂದು ವರುಷ ಕೆಲಸ ಮಾಡಿದೆ. ಹೂಕೃಷಿಗಾಗಿ ಬೆಡ್ ಮಾಡೋದು, ಗೊಬ್ಬರ ಹಾಕೋದು, ನೀರು ಬಿಡೋದು, ಪೆಸ್ಟಿಸೈಡ್ ಸಿಂಪರಣೆ ಇದೆಲ್ಲ ಕೆಲಸ ಚೆನ್ನಾಗಿ ಕಲಿತೆ.

 ನನ್ನ ಅಜ್ಜ ೨೦೦ ರೂಪಾಯಿ ತಗೊಂಡು, ನಮ್ಮ ಒಂದೆಕ್ರೆ ಜಮೀನು ಯಾರಿಗೋ ಕೊಟ್ಟಿದ್ದರು. ಅಪ್ಪ ಹೇಳಿದರು, "ಅದರಲ್ಲಿ ನೀನು ಕೃಷಿ ಮಾಡೋದಿದ್ರೆ ಮಾಡು" ಅಂತ. ನಾನು ೨೦,೦೦೦ ರೂಪಾಯಿ ಕೊಟ್ಟು ಆ ಜಮೀನು ಬಿಡಿಸಿಕೊಂಡೆ. ಪೂನಾದಿಂದ ೨೦ ಕಿಮೀ ದೂರದ ಆ ಜಮೀನಿನಲ್ಲಿ ಹೂವಿನ ಕೃಷಿಗೆ ತಯಾರಿ  ಮಾಡಿದೆ.

 ಕೆನರಾ ಬ್ಯಾಂಕಿಗೆ ಹೋಗಿ ಸಾಲ ಕೇಳಿದೆ. ಹತ್ತು ಗುಂಟೆ ಜಮೀನಿನಲ್ಲಿ ಕಾರ್ನೇಷನ್ ಹೂವಿನ ಕೃಷಿ ಮಾಡುತ್ತೇನೆ; ಹತ್ತು ಲಕ್ಷ ರೂಪಾಯಿ ಸಾಲ ಕೊಡಿ ಅಂತ ಕೇಳಿದೆ. ಯಾಕೆಂದರೆ ನಾಟಿಗೆ ೨೦,೦೦೦ ಸಸಿ ಬೇಕಾಗಿತ್ತು. ಆಗ ಒಂದು ಸಸಿಗೆ ಎರಡು ರೂಪಾಯಿ ರೇಟ್. ಬ್ಯಾಂಕಿನವರು "ನಾಡದು ಬಾ" ಅಂತ ಹೇಳಿದರು. ಆ ದಿನ ಎಗ್ರಿಕಲ್ಚರ್ ಆಫೀಸರ್ ಬಂದರು. ಅವರಿಗೆ ನನ್ನ ಪ್ರಾಜೆಕ್ಟಿನ ಎಲ್ಲ ವಿವರ ಹೇಳಿದೆ. ಎಲ್ಲ ಕೇಳಿದ ನಂತರ ಅವರು ಹೇಳಿದ್ದೇನು ಗೊತ್ತೇ? "ಇದೆಲ್ಲ ಆಗೋದಿಲ್ಲ. ಇದಕ್ಕೆ ಸಾಲ ಕೊಡೋದಿಲ್ಲ." ಯಾಕೆಂದರೆ ಅವರು ಯಾವತ್ತೂ ಕೃಷಿ ಮಾಡಿಲ್ಲ.

ನನ್ನ ಪುಣ್ಯದಿಂದ ಬ್ಯಾಂಕಿನ ಮೆನೇಜರ್ ಭೋಗಲೆ ಅವರಿಗೆ ಇದೆಲ್ಲ ಆಗುತ್ತದೆ ಅನಿಸಿತು. ಅಂತೂ ಹತ್ತು ಲಕ್ಷ ರೂಪಾಯಿ ಸಾಲ ಕೊಟ್ತರು.

 ಆ ಸಾಲದ ಹಣದಿಂದ (ಇಸವಿ) ೨೦೦೦ದಲ್ಲಿ ಕಾರ್ನೇಷನ್ ಹೂವಿನ ಕೃಷಿ ಶುರು ಮಾಡಿದೆ. ಢೆಲ್ಲಿಯಲ್ಲಿ ಹೂವಿನ ಮಾರಾಟ ಮಾಡತೊಡಗಿದೆ. ಅದರಿಂದಾಗಿ ಪ್ರತಿ ತಿಂಗಳು ಒಂದೂವರೆ ಲಕ್ಷ ರೂಪಾಯಿ ಆದಾಯ. ಎಂಟೇ ವರುಷದಲ್ಲಿ ೨೦೦೮ರಲ್ಲಿ ಆ ಸಾಲ ಬಡ್ಡಿ ಸಮೇತ ಚುಕ್ತಾ ಮಾಡಿದೆ.

 ನಮ್ಮ ಹಳ್ಳಿಯವರಿಗೆ ಇದನ್ನೆಲ್ಲ ಹೇಳಿದರೆ ಆರಂಭದಲ್ಲಿ ಅವರು ನಂಬಲೇ ಇಲ್ಲ. "ಏನು? ಒಂದು ಎಕ್ರೆಗೆ ಹತ್ತು ಲಕ್ಷ ರೂಪಾಯಿ ಭಂಡವಾಳ ಹಾಕೋದಾ? ಇದೆಲ್ಲ ಆಗಲ್ಲ, ಹೋಗಲ್ಲ" ಎಂದು ಬಿಟ್ಟರು.

 ನಾನು ಹೂ ಬೆಳೆಸಿ ಲಕ್ಷಗಟ್ಟಲೆ ಆದಾಯ ಸಂಪಾದಿಸಿದ ನಂತರ ಅವರಿಗೂ ನಂಬಿಕೆ ಬಂತು. ಒಬ್ಬೊಬ್ಬರಾಗಿ ಬಂದು ಹೂವಿನ ಕೃಷಿಯ ವಿವರ ಕೇಳತೊಡಗಿದರು. ಎಲ್ಲರಿಗೂ ವಿವರಿಸಿ ಹೇಳಿದೆ, ನಾನು ಬೆಳೆಸಿದ ಹೂ ಸಸಿಗಳನ್ನು ತೋರಿಸಿದೆ, ನನ್ನ ಖರ್ಚು ಮತ್ತು ಆದಾಯದ ವಿವರ ಕೊಟ್ಟೆ. ಐದಾರು ರೈತರು ಹೂವಿನ ಕೃಷಿ ಶುರು ಮಾಡಿದ್ರು. ಈಗ ಸುಮಾರು ೫೦ ರೈತರು ಹೂಬೆಳೆಸಿ, ಮಾರಾಟ ಮಾಡಿ ತಿಂಗಳುತಿಂಗಳೂ ಲಕ್ಷಗಟ್ಟಲೆ ಹಣ ಎಣಿಸುತ್ತಿದ್ದಾರೆ."

Comments

Submitted by venkatb83 Tue, 05/14/2013 - 22:27

ಕೃಷಿ -ವ್ಯವಸಾಯದ ಬಗೆಗಿನ ವಿಷಯ ವಸ್ತುವಿನ ಬರಹಗಳತ್ತ ನನ್ನ ಚಿತ್ತ ಯಾವತ್ತು .. ಮಣ್ಣು ನಿಜವಾದ ಅರ್ಥದಲ್ಲಿ ಹೊನ್ನು ,ಆದರೆ ಅದರ ಮೌಲ್ಯ ಅರಿಯದ ಕೆಲ ಅವಿವೇಕಿಗಳು ಕ್ಷಣಿಕ ಲೋಭಕ್ಕೆ ಆಶೆ ಬಿದ್ದು ಆ ಹೊನ್ನನ್ನು ಮಾರಿಕೊಳ್ಳುವರು ಆಮೇಲೆ ಪರಿತಪಿಸುವರು :((( ಕೃಷಿಕ ರೈತ ದೇಶದ ಬೆನ್ನೆಲುಬು ಎಂದೆಲ್ಲ ಹೇಳಿ ರೈತನ ಜೀವನ ದುಸ್ಥಿತಿಗೆ ತಂದ ಆಳಿದ ಸರಕಾರಗಳ ದುಷ್ಟ ನೀತಿ ರಹಸ್ಯ ಕಾರ್ಯ ತಂತ್ರಗಳಿಂದಾಗಿ ಹಲವು ಜನ ಭೂಮಿ ಕಳೆದುಕೊಂಡು ನಿರ್ಗತಿಕರೂ ಆಗಿದ್ದರೆ ಎಲ್ಲೋ ಕೆಲವು ಜನ ಮಾತ್ರ ಭೂಮಿಯ ಬೆಲೆ ಅರಿತು ಅದನ್ನು ಜತನವಾಗಿ ಕಾಯ್ಕೊಂಡು ಬರುತ್ತಿರುವರು .. ಅಂತವರ ಸಂಖ್ಯೆ ಹೆಚ್ಚಲಿ.... ಸಕಾಲಿಕ ಬರಹ..ಕಾಳಜಿಗೆ ನನ್ನಿ.. ಶುಭವಾಗಲಿ... \|
Submitted by makara Wed, 05/15/2013 - 11:22

ಅಡ್ಡೂರ್ ಸರ್, ನಿಮ್ಮ ಲೇಖನ ಕೃಷಿಯಿಂದಲೂ ನಾವು ಅಧಿಕ ಮಟ್ಟದ ವರಮಾನವನ್ನು ಪಡೆಯಬಹುದು ಎನ್ನುವುದನ್ನು ಮನದಟ್ಟು ಮಾಡುತ್ತದೆ. ಹಳ್ಳಿ ಬಿಟ್ಟು ಪೇಟೆಯಲ್ಲಿ ಉದ್ಯೋಗ ಹಿಡಿಯಬೇಕೆನ್ನುವವರಿಗೆ ಮಾರ್ಗದರ್ಶಿಯಾಗಿದೆ ಈ ಲೇಖನ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
Submitted by abdul Thu, 05/16/2013 - 15:24

ಕೈಗಾರಿಕಾ ಕ್ರಾಂತಿ, ಇಂಟರ್ನೆಟ್ ಕ್ರಾಂತಿ ಮುಂತಾದ ಭ್ರಾಂತಿಗಳು ನಮ್ಮನ್ನು ಆವರಿಸಿ ಕೊಳ್ಳುವ ಮುನ್ನ ಲಕ್ಷಾಂತರ ವರ್ಷ ನಮಗೆ ಆಸರೆಯಾಗಿ ನಿಂತಿದ್ದು ಭೂಮಿ. ಮರುಭೂಮಿಯನ್ನೂ ಹಸಿರಾಗಿಸಿ ಬದುಕನ್ನು ಹಸನಾಗಿಸಿ ಕೊಂಡವರು ಹೇರಳ. ಅಂಥದ್ದರಲ್ಲಿ ನಮ್ಮ ಫಲವತ್ತಾದ ಭೂಮಿಯಲ್ಲಿ ಚಿನ್ನ ಬೆಳೆಯಬಹುದು. ಆದರೆ ಅದಕ್ಕೆ ಬೇಕಿರುವುದು ದುಡಿಯುವ ಇಚ್ಛೆ, ಸಾಧಿಸುವ ಛಲ. ಫಾಸ್ಟ್ ಫುಡ್ ನ ಮೋಹಕ್ಕೆ ಬಿದ್ದು ರೋಗ ತಗುಲಿಸಿಕೊಂಡಂತೆ, 'ಫಾಸ್ಟ್ ಮನಿ' ಲಾಲಸೆಗೆ ಬಿದ್ದಾಗ ಅಪ್ಪ ಸೆಕ್ಯುರಿಟಿವಾಲಾ, ಮಗ ಗಾರ್ಡನ್‍ವಾಲಾ. ಅಡ್ಡೂರರಿಗೆ ಧನ್ಯವಾದಗಳು.
Submitted by addoor Fri, 05/17/2013 - 18:50

In reply to by abdul

ಪ್ರಿಯ ವೆಂಕಟ್, ಮಕರ ಹಾಗೂ ಅಬ್ದುಲ್ ಅವರಿಗೆ, ನಿಮ್ಮ ಪ್ರತಿಕ್ರಿಯೆ ಗಮನಿಸಿದೆ. ಜ್ನಾನೇಶ್ವರ ಬೋಡ್ಕೆ ಅವರ ಆತ್ಮವಿಶ್ವಾಸ ಯಾರೇ ರೈತರಲ್ಲಿ ಆತ್ಮಾಭಿಮಾನ ಹುಟ್ಟಿಸಲು ಶಕ್ತ. ಇಂಥವರ ಸಂಖ್ಯೆ ಹೆಚ್ಚಬೇಕು.ಇಂಥವರ ಸಾಧನೆಗಳ ದಾಖಲಾತಿಯೂ ಹೆಚ್ಚಬೇಕು.