ಜಮೀನು ರೈತರಿಗೆ ವಾಪಾಸ್: ಚತ್ತಿಸ್ ಘರ್ ಸರಕಾರದ ದಿಟ್ಟ ಕ್ರಮ

ಜಮೀನು ರೈತರಿಗೆ ವಾಪಾಸ್: ಚತ್ತಿಸ್ ಘರ್ ಸರಕಾರದ ದಿಟ್ಟ ಕ್ರಮ

ಚತ್ತಿಸ್‍ಘರ್ ರಾಜ್ಯದ ಬುಡಕಟ್ಟು ಜಿಲ್ಲೆ ಬಸ್ತಾರಿನ ಸಾವಿರಾರು ರೈತರಿಗೆ ಸಂಭ್ರಮ. ಪ್ರತಿ ದಿನವೂ ಲೊಹಾಂಡಿಗುಡ ಮತ್ತು ತಾಕರ್‍ಗುಡ ತಾಲೂಕುಗಳ ಹತ್ತಾರು ರೈತರಿಂದ ಪಂಚಾಯತ್ ಕಚೇರಿಗೆ ಭೇಟಿ – ತಮ್ಮ ಭೂದಾಖಲೆಗಳ ಪರಿಶೀಲನೆಗಾಗಿ.

ಇದಕ್ಕೆಲ್ಲ ಕಾರಣವೇನು? ಮುಖ್ಯಮಂತ್ರಿ ಭೂಪೇಶ ಬಾಘೆಲ್ ಅವರ ಘೋಷಣೆ: “ಟಾಟಾ ಉಕ್ಕಿನ ಕಾರ್ಖಾನೆ”ಗಾಗಿ ರೈತರಿಂದ ವಶಪಡಿಸಿಕೊಂಡ ಜಮೀನನ್ನು ಆಯಾ ರೈತರಿಗೆ ಹಿಂತಿರುಗಿಸಲಾಗುವುದು.” ಅದನ್ನು ಕಾರ್ಯಗತಗೊಳಿಸಲಿಕ್ಕಾಗಿ ಪಟ್ವಾರಿಗಳಾದ ಪ್ರಮೋದ್ ಕುಮಾರ್ ಬಾಘೆಲ್ ಮತ್ತು ಅನಿಲ್ ಬಾಘೆಲ್ ರೈತರ ಭೂದಾಖಲೆಗಳನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಿದ್ದಾರೆ.

“ನ್ಯಾಯಬದ್ಧ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ಸ್ಥಾಪನೆ ಮತ್ತು ಪುನರ್ವಸತಿಗಳಲ್ಲಿ ಪಾರದರ್ಶಕತೆ ಕಾಯಿದೆ, ೨೦೧೩” ಅನುಸಾರ ಅಲ್ಲಿನ ಮುಖ್ಯಮಂತ್ರಿ ಈ ಘೋಷಣೆ ಮಾಡಿದ್ದಾರೆ. ಇದು ಕಾರ್ಯಗತವಾದಾಗ, ಭಾರತದಲ್ಲೇ ರೈತರಿಂದ ಸ್ವಾಧೀನ ಪಡಿಸಿಕೊಂಡ ಜಮೀನನ್ನು ಅವರಿಗೆ ಹಿಂತಿರುಗಿಸಿದ ಮೊತ್ತಮೊದಲ ರಾಜ್ಯ ಎಂಬ ಹೆಗ್ಗಳಿಕೆ ಚತ್ತಿಸ್‍ಘರ್ ರಾಜ್ಯದ್ದಾಗಲಿದೆ.

ಹತ್ತು ವರುಷಗಳ ಮುಂಚೆ, ಟಾಟಾ ಸ್ಟೀಲ್ ಸ್ಥಾವರಕ್ಕಾಗಿ ಹತ್ತು ಹಳ್ಳಿಗಳಲ್ಲಿ ೧,೭೬೫ ಹೆಕ್ಟೇರ್ ಭೂಸ್ವಾಧೀನ ಮಾಡಲಾಗಿತ್ತು. ರೂ.೧೯,೫೦೦ ಕೋಟಿ ವೆಚ್ಚದಲ್ಲಿ ಲೊಹಾಂಡಿಗುಡದಲ್ಲಿ ಸ್ಥಾವರ ಸ್ಥಾಪಿಸುವ ಯೋಜನೆ ಅದಾಗಿತ್ತು. ಆದರೆ, ಸರಕಾರ ಸ್ವಾಧೀನ ಪಡಿಸಿಕೊಂಡ ಬಹುಪಾಲು ಜಮೀನು ಫಲವತ್ತಾಗಿತ್ತು. ಬೆಳಾರ್ ಗ್ರಾಮದ ರೈತ ಪಿಲು ರಾಮ್ ಮನ್‍ ಡಾವಿ ಹೀಗೆಂದು ನೆನಪು ಮಾಡಿಕೊಳ್ಳುತ್ತಾರೆ, “ನಾವು ವರುಷವರುಷವೂ ಎರಡು – ಮೂರು ಬೆಳೆ ಬೆಳೆಯುತ್ತಿದ್ದೆವು. ನಮ್ಮ ಕುಟುಂಬಗಳ ನಿರ್ವಹಣೆಗೆ ಅವುಗಳ ಫಸಲು ಸಾಕಾಗುತ್ತಿತ್ತು.”

ಆದ್ದರಿಂದಲೇ ಅಲ್ಲಿ ಭೂಸ್ವಾಧೀನಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಯಿತು. ಜಮೀನು ಕಳೆದುಕೊಂಡ ಬಹುಪಾಲು ರೈತರು ಪರಿಹಾರ ಹಣ ಸ್ವೀಕರಿಸಲು ನಿರಾಕರಿಸಿದರು. ಪ್ರತಿಭಟನೆಯಲ್ಲಿ ಪಾಲುಗೊಂಡದ್ದಕ್ಕಾಗಿ ೨೦೦೯ – ೨೦೧೦ ಅವಧಿಯಲ್ಲಿ ೨೫೦ಕ್ಕಿಂತ ಅಧಿಕ ರೈತರನ್ನು ಬಂಧಿಸಲಾಯಿತು. “ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಸರಕಾರ ನನ್ನನ್ನು ೪೫ ದಿನ ಜೈಲಿನಲ್ಲಿ ಬಂಧಿಸಿಟ್ಟಿತ್ತು” ಎಂದು ಅವಲತ್ತುಕೊಳ್ಳುತ್ತಾರೆ ಪಿಲು ರಾಮ್.

ಹತ್ತಿರದ ಬಡಾಂಜೀ ಗ್ರಾಮದ ಮದ್ದಾ ರಾಮರನ್ನು ಪೊಲೀಸರು ಮೂರು ಸಲ ಬಂಧಿಸಿದ್ದರು. “ಟಾಟಾ ಕಾರ್ಖಾನೆಗಾಗಿ ನನ್ನ ೬.೪೭ ಹೆಕ್ಟೇರ್ ಜಮೀನೆಲ್ಲವನ್ನೂ ಸರಕಾರ ತಗೊಂಡಿತು. ನಾನು ಪ್ರತಿಭಟಿಸಿದೆ. ಸರಕಾರ ಕೊಟ್ಟ ಪರಿಹಾರದ ಹಣ ನಾನು ತಗೊಳ್ಳಲಿಲ್ಲ. ಆವಾಗಿನಿಂದ ನಮಗೆ ಬದುಕುವುದೇ ಕಷ್ಟವಾಗಿದೆ. ನಮ್ಮ ಜಮೀನು ನಮಗೆ ವಾಪಾಸು ಸಿಗುತ್ತದೆಂದು ನಾವು ನಿರೀಕ್ಷಿಸಿರಲಿಲ್ಲ” ಎನ್ನುತ್ತಾರೆ ಮದ್ದಾ ರಾಮ್.

ಆ ಕಾಯಿದೆಯ ಸೆಕ್ಷನ್ ೧೦೧ ಅನುಸಾರ, ಈ ಚಾರಿತ್ರಿಕ ಕ್ರಮಕ್ಕೆ ಮುಂದಾಗಿದೆ ಚತ್ತಿಸ್‍ಘರ್ ಸರಕಾರ. “ಜಮೀನನ್ನು ಸ್ವಾಧೀನಪಡಿಸಿಕೊಂಡ ದಿನದಿಂದ ಐದು ವರುಷ ಉಪಯೋಗಿಸದಿದ್ದರೆ, ಅದನ್ನು ಮೂಲ ಮಾಲೀಕನಿಗೆ ಹಿಂತಿರುಗಿಸಬಹುದು ಅಥವಾ ಲ್ಯಾಂಡ್ ಬ್ಯಾಂಕಿಗೆ (ಜಮೀನು ಖಜಾನೆಗೆ) ಸೇರಿಸಿಕೊಳ್ಳ ಬಹುದು” ಎನ್ನುತ್ತದೆ ಸೆಕ್ಷನ್ ೧೦೧. ಜಮೀನು ಬಳಕೆಗೆ ಸಂಬಂಧಿಸಿದಂತೆ, ಪೂರ್ವಾನ್ವಯದ ಅಂಶವೂ ಕಾಯಿದೆಯಲ್ಲಿದೆ. ಪರಿಹಾರದ ಹಣವನ್ನು ೨೦೧೩ರ ಮುಂಚೆ ಘೋಷಿಸಿದ್ದು, ಜಮೀನು ಸ್ವಾಧೀನ ಪಡೆದುಕೊಳ್ಳದ ಮತ್ತು ಪರಿಹಾರದ ಹಣ ಪಾವತಿಸದ ಅಪೂರ್ಣ ಪ್ರಕ್ರಿಯೆಯ ಪ್ರಕರಣಗಳಲ್ಲಿ ಜಮೀನು ಸ್ವಾಧೀನ ರದ್ದಾಗುತ್ತದೆ.

“ಭಾರತದಲ್ಲಿ ಜಮೀನು ಸ್ವಾಧೀನ: ಸುಪ್ರೀಂ ಕೋರ್ಟ್ ಪ್ರಕರಣಗಳ ಪರಿಶೀಲನೆ (೧೯೫೦ – ೨೦೧೬)” ಎಂಬ ವರದಿಯನ್ನು ಢೆಲ್ಲಿಯ “ಸೆಂಟರ್ ಫಾರ್ ಪಾಲಿಸಿ ರೀಸರ್ಚ್” ಪ್ರಕಟಿಸಿದೆ. ಆ ಕಾಯಿದೆಯ ಪೂರ್ವಾನ್ವಯದ ವಿಧಿಯ ಅನುಸಾರ, ೨೦೧೪ – ೨೦೧೬ ಅವಧಿಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ೨೮೦ ಪ್ರಕರಣಗಳು ದಾಖಲಾಗಿವೆ. ಶೇಕಡಾ ೯೫ ಪ್ರಕರಣಗಳಲ್ಲಿ ಜಮೀನು ಸ್ವಾಧೀನವನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ. ಇದರಿಂದಾಗಿ ಹಲವಾರು ರೈತ ಮಾಲೀಕರು ತಮ್ಮ ಜಮೀನು ವಾಪಾಸು ಪಡೆಯಲು ಅಥವಾ ಪರಿಹಾರ ಪಡೆಯಲು ಸಾಧ್ಯವಾಯಿತು.

ಪಶ್ಚಿಮ ಬಂಗಾಳ ರಾಜ್ಯದಲ್ಲಿಯೂ ರೈತರ ಕೃಷಿ ಜಮೀನು ಅವರಿಗೆ ವಾಪಾಸು ನೀಡಲಾಗಿದೆ. ಅಲ್ಲಿಯೂ ರೈತರ ೪೦೩ ಹೆಕ್ಟೇರ್ ಜಮೀನು ಸ್ವಾಧೀನ ಪಡಿಸಿಕೊಂಡದ್ದು ಟಾಟಾ ಕಂಪೆನಿ – ತನ್ನ ಸಣ್ಣ ಕಾರು “ನ್ಯಾನೋ” ಉತ್ಪಾದಿಸಲಿಕ್ಕಾಗಿ. ದೀರ್ಘಾವಧಿ ಹೋರಾಟದ ನಂತರ ರೈತರು ತಮ್ಮ ಜಮೀನು ವಾಪಾಸು ಪಡೆದರು; ಆದರೆ ಟಾಟಾ ಕಂಪೆನಿ ಅಲ್ಲಿ ಕಾರು ಉತ್ಪಾದನೆಗಾಗಿ ಕಟ್ಟಡಗಳನ್ನು ನಿರ್ಮಿಸಿತ್ತು. ರೈತರಿಗೆ ಜಮೀನು ಹಿಂತಿರುಗಿಸುವ ಮುನ್ನ, ಅಲ್ಲಿನ ಕಟ್ಟಡಗಳನ್ನು ಕೆಡವಲಾಯಿತು. ಆದರೆ ಈ ಅವಾಂತರಗಳಿಂದಾಗಿ, ಅಲ್ಲಿನ ಜಮೀನು ಕೃಷಿಗೆ ಯೋಗ್ಯವಾಗಿ ಉಳಿದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಅನುರಾಧಾ ತಲ್ವಾರ್.

ಅದೇನಿದ್ದರೂ, ಹಲವು ರಾಜ್ಯಗಳಲ್ಲಿ ಉಪಯೋಗಿಸದ ರೈತರ ಜಮೀನನ್ನು ಅವರಿಗೆ ಹಿಂತಿರುಗಿಸಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿಲ್ಲ. ಆ ರಾಜ್ಯಗಳಲ್ಲಿ ಅಂತಹ ಜಮೀನನ್ನು ಲ್ಯಾಂಡ್ ಬ್ಯಾಂಕಿಗೆ ಸೇರಿಸಲಾಗುತ್ತಿದೆ. ಇನ್ನು ಕೆಲವು ರಾಜ್ಯಗಳು ರೈತರ ಕೃಷಿ ಜಮೀನನ್ನು ಸುಲಭವಾಗಿ ಸ್ವಾಧೀನ ಪಡಿಸಿಕೊಳ್ಳಲಿಕ್ಕಾಗಿ, ಕಾಯಿದೆಯನ್ನೇ ತಿದ್ದುಪಡಿ ಮಾಡಿವೆ! ಇದೆಲ್ಲ ರೈತರಿಗೆ ಮಾಡುವ ಅನ್ಯಾಯ, ಅಲ್ಲವೇ? ಉದಾಹರಣೆಗೆ, ಒಡಿಸ್ಸಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪೋಸ್ಕೋ ಯೋಜನೆಯನ್ನು ಕೊರಿಯಾದ ಕಂಪೆನಿ ೨೦೧೭ರಲ್ಲಿ ಕೈಬಿಟ್ಟರೂ, ಸ್ವಾಧೀನ ಪಡಿಸಿಕೊಂಡ ಜಮೀನನ್ನು ರೈತರಿಗೆ ಹಿಂತಿರುಗಿಸಲಿಲ್ಲ. ಒರಿಸ್ಸಾ ಸರಕಾರ ೨೦೧೧ ಮತ್ತು ೨೦೧೩ರಲ್ಲಿ ಮೂರು ಪಂಚಾಯತುಗಳಲ್ಲಿ ಬಲಾತ್ಕಾರದಿಂದ ಸ್ವಾಧೀನ ಪಡಿಸಿಕೊಂಡ ೧,೦೯೨ ಹೆಕ್ಟೇರ್ ಜಮೀನನ್ನು ಲ್ಯಾಂಡ್ ಬ್ಯಾಂಕಿಗೆ ಸೇರಿಸಿಕೊಂಡಿತು. ಆ ಅರಣ್ಯಭೂಮಿಯನ್ನು ಲ್ಯಾಂಡ್ ಬ್ಯಾಂಕಿಗೆ ಸೇರಿಸುವುದು ಕಾನೂನಿನ ಉಲ್ಲಂಘನೆ ಎಂಬುದನ್ನು ಕಾರ್ಯಕರ್ತರು ತೋರಿಸಿಕೊಟ್ಟ ನಂತರ, ಅದನ್ನು ಜಿಂದಾಲ್ ಸ್ಟೀಲ್ ವರ್ಕ್ಸ್ ಕಂಪೆನಿಗೆ ೨೦೧೮ರಲ್ಲಿ ನೀಡಲಾಗಿದೆ!

ತಮ್ಮ ಜಮೀನಿನ ಮೇಲಿನ ಹಕ್ಕುಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಾದರೆ ದೇಶವ್ಯಾಪಿ ಆಂದೋಲನದ ಅಗತ್ಯವಿದೆ. ಇಲ್ಲವಾದರೆ, ತಮ್ಮ ಏಕೈಕ ಜೀವನಾಧಾರವಾದ ಜಮೀನನ್ನೇ ರೈತರು ಕಳೆದುಕೊಂಡು, ಅವರ ಬದುಕು ದಿಕ್ಕೆಟ್ಟು ಹೋದೀತು. ಈ ನಿಟ್ಟಿನಲ್ಲಿ, ಚತ್ತಿಸ್‍ಘರ್ ರಾಜ್ಯ ರೈತರ ಹಿತರಕ್ಷಣೆಗಾಗಿ ನ್ಯಾಯಬದ್ಧ ಕ್ರಮ ಕೈಗೊಂಡಿದೆ. ಇತರ ರಾಜ್ಯಗಳೂ ಈ ಮಾದರಿಯನ್ನು ಅನುಸರಿಸಿ ತಾವು ರೈತಪರ ಎಂಬುದನ್ನು ತೋರಿಸಿ ಕೊಡಲಿ.