ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ

ಬರಹ

ತೇಜಸ್ವಿ ಮೌನದ ಬಗ್ಗೆ ನಮ್ಮ ಪೊಸೆಸಿವ್ ಚಳವಳಿಗಾರರ ಮನಸ್ಸಿನಲ್ಲಿ ಒಂದು ರೀತಿಯ ಸಿಟ್ಟಿದೆ. ತೇಜಸ್ವಿಯವರು ಮಾತಾಡಬೇಕಾದ ಸಮಯದಲ್ಲಿ ಮಾತಾಡ್ತಾ ಇರಲಿಲ್ಲ. ಯಾವುದೋ ಒಂದು ಚಳುವಳಿ ಸಂದರ್ಭದಲ್ಲಿ ಇವರು ಯಾವುದೋ ಮೀನಿಗೆ ಗಾಳ ಹಾಕ್ತಾ ಇದಾರೆ, ಯಾವುದೋ ಹಕ್ಕಿಯ ಚಿತ್ರಕ್ಕಾಗಿ ಕಾಯ್ತಾ ಕೂತಿದ್ದಾರೆ ಅಂತ. ಇದನ್ನು ನಾನು ಅವರ ಸಂದರ್ಶನ ಮಾಡುವಾಗ ಕೇಳಿದೆ. ‘ಇದೇನಪ್ಪ ಇದು ಈ ಮೌನ’ ಅಂತ. ಅವರಂದ್ರು ‘ಮೌನವೇ ಒಂದು ಭಾಷೆ. ಮೌನವೇ ಒಂದು ಉತ್ತರ.’
ನಾನು ಅವರಿಗೆ ಆಪ್ತನಾಗಿ ಅವರನ್ನ ಅರ್ಥ ಮಾಡಿಕೊಳ್ಳುವ ಒಂದು ಪ್ರಯತ್ನ ಏನಂದ್ರೆ; ಅವರಿಗೆ ಕಳೆದ ೧೫ ವರ್ಷಗಳಲ್ಲಿ ಎಲ್ಲಾ ಚಳುವಳಿಗಳಲ್ಲೂ, ಸಿದ್ಧಾಂತಗಳಲ್ಲೂ ಆವೇಶ ಇತ್ತು, ಆದ್ರೆ ಸಿದ್ಧಾಂತಿಗಳಲ್ಲಿ, ಚಳವಳಿಗಾರರಲ್ಲಿ ನಂಬಿಕೆ ಹೊರಟೋಗ್ಬಿಟ್ಟಿತ್ತು. ಈಗ ಭ್ರಷ್ಟರಾದಂತ, ಪ್ರಚಾರಕ್ಕೆ ಹಾತೊರೆಯುವಂತ, ಮಾಧ್ಯಮಗಳಲ್ಲಿ ಮಿಂಚಬೇಕೂ ಅಂತ ನೋಡುವವರನ್ನ ಅಥವಾ ಜಾತಿ, ಹಣ ಅಂತ ರಾಜಕಾರಣ ಮಾಡುವ ಮುಂದಾಳುಗಳ ಬಗ್ಗೆ ಅವರಿಗೆ ಮುಜುಗರ ಉಂಟಾಗಿಬಿಟ್ಟಿತ್ತು. ನಾನು ಆ ಸಿದ್ಧಾಂತವನ್ನ ಸಪೋರ್ಟ್ ಮಾಡಿದ್ರೆ ಆ ವ್ಯಕ್ತಿಗಳನ್ನ ಸಪೋರ್ಟ್ ಮಾಡಿದ ಹಾಗಾಗುತ್ತೆ, ಒದು ವೇಳೆ ಮಾಡ್ದೇ ಇದ್ರೆ ಇವುಗಳಿಂದ ದೂರವಾಗೋ ಹಾಗಾಗುತ್ತೆ ಅಂತ ಭಾಳಾ ಪಜೀತಿನಲ್ಲಿ ಅವರಿದ್ರು.

ಅವರು ತುಂಬ ಸರಳವಾಗಿ ಮಾತಾಡ್ತಾ ಇದ್ರು, ಒಂದು ಹೋಲಿಸ್ಟಿಕ್ ಸೆನ್ಸಿಬಿಲಿಟಿ ಅಂತ ಇರುತ್ತೆ, ಸರ್ವಗ್ರಾಹಿ ಸಂವೇದನೆ ಅಂತ. ನಮ್ಮ ಶಿಕ್ಷಣದಲ್ಲಿ ಒಂದು ದೊಡ್ಡ ದುರಂತ ಇದೆ. ಅದಕ್ಕೆ ನಾವೆಲ್ರೂ ಹೊಣೆ, ಅದಕ್ಕೆ ನಾವೆಲ್ರೂ ತುತ್ತಾಗಿದ್ದೇವೆ. ಏನಂದ್ರೆ ಶಿಕ್ಷಣದಲ್ಲಿ ಆರ್ಟ್ಸ್ ಮತ್ತು ಸೈನ್ಸ್ ಎಂಬ ವಿಭಾಗ ನಮ್ಮ ಶಿಕ್ಷಣ ಕ್ರಮದಲ್ಲಿ ಬ್ರಿಟೀಷರ ಕಾಲದಿಂದ ಬಂದಂತ ಒಂದು ಪಿಡುಗು. ಎಸ್ಸೆಸ್ಸೆಲ್ಸೀಲಿ ಮಾರ್ಕ್ಸ್ ಜಾಸ್ತಿ ಬಂತೋ ಅವ್ನು ಜಾಣ, ಅವನು ಸೈನ್ಸ್ ಗೋಗ್ಬೇಕು, ಅವನು ಐ.ಟಿ.ಗೋಗ್ಬೇಕು, ಅವನಿಗೆ ಕ್ಯಾಂಪಸ್ ಸೆಲೆಕ್ಷನ್ ಆಗ್ತದೆ, ಅವನಿಗೆ ತಿಂಗಳಿಗಿಷ್ಟು ಪಗಾರ ಬರ್ತದೆ.
ಅದೇ ಮಾರ್ಕ್ಸ್ ಕಡಿಮೆ ಸಿಕ್ಕೋರೆಲ್ಲಾ ಆರ್ಟ್ಸ್‌ಗೋಗ್ಬೇಕು. ಇದು ಭಾಳ ವಿಚಿತ್ರವಾದದ್ದು. ಆರ್ಟ್ಸ್ ಡಿಪಾರ್ಟ್‌ಮೆಂಟು ಸೈನ್ಸ್ ಡಿಪಾರ್ಟ್‌ಮೆಂಟು ಎರಡೂ ನಮ್ಮ ಜೀವನಕ್ಕೆ ಬೇಕಾದದ್ದು, ಈಗ ಪರಿಸ್ಥಿತಿ ಹೇಗಿದೆ ಅಂದ್ರೆ ಅತ್ಯಂತ ಜಾಣರಾದಂತ ವಿಜ್ಞಾನಿಗಳು, ಇಂಜಿನಿಯರುಗಳು ಇದಾರೆ, ಅವರಿಗೆ ಸೋಷಿಯಲ್ ಡೈಮೆನ್ಷನ್ ಇಲ್ಲ. ಅವರಿಗೆ ಪೊಲಿಟಿಕಲ್ ಸೈನ್ಸ್ ಗೊತ್ತಿಲ್ಲ. ಅವರಿಗೆ ಕುವೆಂಪು ಯಾರೂಂತ ಗೊತ್ತಿಲ್ಲ, ತೇಜಸ್ವಿ ಯಾರೂಂತ ಗೊತ್ತಿಲ್ಲ.
ಇತ್ತ ಪೊಲಿಟಿಕಲ್ ಸೈನ್ಸ್, ಎಕನಾಮಿಕ್ಸ್ ಮುಂತಾದುವುಗಳಲ್ಲಿ ಅತ್ಯಂತ ಉನ್ನತಿಗೋಗಿರುವವರಿಗೆ ಸೈನ್ಸ್ ಗೊತ್ತಿಲ್ಲ. ವೈಜ್ಞಾನಿಕ ತರ್ಕ ಗೊತ್ತಿಲ್ಲ. ಅವರಿಗೆ ಒಂದು ರೇಷನಲ್ ಥಿಂಕಿಂಗ್ ಗೊತ್ತಿಲ್ಲ, ಅವರಿಗೆ ಒಂದು ರೀತಿ ಕೀಳರಿಮೆ, ನಾವು ಆರ್ಟ್ಸ್‌ನವರು ಅಂತ. ಇದರಿಂದಾಗಿ ಒಂದು ಬಿರುಕು ಬಿಟ್ಟಂತ ಸೊಸೈಟಿನಲ್ಲಿ ನಾವು ಜೀವಿಸ್ತಾ ಇದೀವಿ.
ಇದರ ಬಗ್ಗೆ ತೇಜಸ್ವಿಯವರಿಗೆ ತುಂಬಾ ಬೇಸರ ಇತ್ತು. ಯಾಕಂದ್ರೆ ಅವರು ಯಾವತ್ತೂ ಅನಾಲಿಸಿಸ್ ಅಥವಾ ವಿಶ್ಲೇಷಣೆ ಅಂತ ಹೇಳ್ತಿರಲಿಲ್ಲ. ಸಂಶ್ಲೇಷಣೆ ಅಂತಾನೇ ಹೇಳ್ತಿದ್ರು. ‘ಅಣ್ಣನ ನೆನಪು’ ನಲ್ಲಿ ಅವರು ಹೇಳಿದ್ದು ಅದೇ ‘ನಾನು ನನ್ನ ತಂದೆಯ ವ್ಯಕ್ತಿತ್ವವನ್ನ ಅನಲೈಸ್ ಮಾಡೋದಿಲ್ಲ ಸಂಶ್ಲೇಷಣೆ ಮಾಡ್ತೀನಿ’. ನಾನು ಅವರ ಜೊತೆ ಮಾತಾಡ್ದಾಗೆಲ್ಲಾ ‘ಈ ಆರ್ಟ್ಸು ಸೈನ್ಸು ಅಂತ ಮಾಡಿ ಹಾಳ್ ಮಾಡಿದ್ದಾರೆ ಮಾರಾಯ’ ಅಂತ ಹೇಳ್ತಾ ಇದ್ರು.
ಈಗ ನಮ್ಮನ್ನ ನೋಡಿ ಎಷ್ಟು ಬೋಳೆ ಆಗ್ಬಿಟ್ಟಿದ್ದೀವಿ “ತೇಜಸ್ವಿಯವರು ಇಷ್ಟು ದೊಡ್ಡ ಲೇಖಕರಾಗಿದ್ದುಕೊಂಡೂ ಅವರು ಹಕ್ಕಿಗಳ ಫೋಟೋ ತೆಗೆಯುವುದು, ಮೀನು ಹಿಡಿಯುವುದು ವಿಸ್ಮಯಕಾರಿ” ಅಂತ ನಾವು ಮಾತಾಡ್ತೀವಲ್ಲ ಆ ನಮ್ಮ ಭಾಷೆಯೇ ದುರಂತದ ಸೂಚನೆ. ಯಾಕಂದ್ರೆ ಅವೆಲ್ಲಾ ಬೇರೆ-ಬೇರೆ ಸಂಗತಿಗಳೇ ಅಲ್ಲ ಅಂತ ತೇಜಸ್ವಿಯವರೇ ಹೇಳ್ತಾ ಇದ್ರು. ಇವತ್ತಿಗೂ ಒಬ್ಬ ವ್ಯಕ್ತಿ ನಾಗರಿಕನಾಗಿ ರೂಪುಗೊಳ್ಳೋದಿಕ್ಕೆ ವೈಜ್ಞಾನಿಕ ದೃಷ್ಟಿಕೋನ ಎಷ್ಟು ಅವಶ್ಯಕವೋ, ಪರಿಸರ ಪ್ರೇಮ ಎಷ್ಟು ಅವಶ್ಯಕವೋ, ಮನುಷ್ಯ ಪ್ರೀತಿ ಎಷ್ಟು ಅವಶ್ಯಕವೋ ಇವೆಲ್ಲಾ ಒಟ್ಟಾಗಿ ರೂಪುಗೊಂಡಾಗಲೇ ಮನುಷ್ಯ ರೂಪುಗೊಳ್ಳಲು ಸಾಧ್ಯ. ಇದರಲ್ಲಿ ತೇಜಸ್ವಿ ನಂಬಿಕೆ ಉಳ್ಳವರಾಗಿದ್ರು. ಹೀಗಾಗಿ ಅವರು ಅಭಿಜ್ಞವಾದ ವಿಜ್ಞಾನ, ಆರ್ಟ್ಸ್ ಸೈನ್ಸ್ ಎಂಬ ಕೃತಕವಾದ ಭೇದವನ್ನ ತೆಗೆಯುವಂತಹ ಅಥವಾ ಅವೆರಡನ್ನೂ ಬೆಸೆಯುವಂತಹ ಮೂರ್ತ ರೂಪಕವಾಗಿ ಕಾಣ್ತಾ ಇದ್ರು.
ಅವರ ಬಗ್ಗೆ ನನಗೆ ಬಹಳವಾದ ಕುತೂಹಲಕರ ಬೆರಗು, ಭಯ, ಕುತೂಹಲ, ವಿಸ್ಮಯ ಇತ್ತು. ನನ್ನ ವಾರಿಗೆಯ ಬಹಳಷ್ಟು ಮಂದಿಗೆ ತೇಜಸ್ವಿಗೆ ಭಾಳಾ ಸಿಟ್ಟಂತೆ, ಬೈತಾರಂತೆ ಅಂತ ಭಾವನೆ ಇತ್ತು, ನನಗೂ ಇತ್ತು. ಆದ್ರೆ ಒಮ್ಮೆ ಅವರನ್ನ ಸಮೀಪದಿಂದ ಭೇಟಿ ಆದ್ಮೇಲೆ ಅವೆಲ್ಲ ತೊಡೆದು ಹೋದ್ವು, ನಾನು ಒಮ್ಮೆ ಅವರನ್ನ ಸಂದರ್ಶನ ಮಾಡ್ದೆ, ಅವರು ಬರ್ತಾರೋ ಇಲ್ವೋ ಅಂತ ಗೊತ್ತಿರ್ಲಿಲ್ಲ. ನಾನು ‘ಭಾವನಾ’ ಪತ್ರಿಕೆ ಮಾಡ್ತಾ ಇದ್ದಾಗ ಅದರ ಬಗ್ಗೆ ಅವರಿಗೆ ಮೆಚ್ಚುಗೆ ಇದೆ ಅಂತ ಮತ್ಯಾರಿಂದಲೋ ಗೊತ್ತಾಯ್ತು. ಹಾಗಾಗಿ ಧೈರ್ಯವಾಗಿ ಸಂದರ್ಶನಕ್ಕೆ ಬರ್ತೀರಾ ಅಂತ ಕೇಳ್ದೆ, ‘ಆಯ್ತಪ್ಪ ಅದೇನ್ ಮಾಡ್ತೀಯೋ ಮಾಡು ಹೋಗತ್ಲಗೆ’ ಅಂದ್ರು. ಅವರನ್ನ ನಾನು ಈಟೀವಿ ಆಫೀಸ್‌ಗೆ ಕರ್ಕೊಂಬಂದೆ, ನನಗಿನ್ನೂ ನೆನಪಿದೆ. ನಾನು ಜೀಪಿಂದ ಇಳ್ದು ಅವರನ್ನ ಇಳಿಸ್ತಾ ಇದ್ದೆ. ಆಗ ಅವ್ರು “ ನೀನೇನಾದ್ರೂ ನನಗೆ ಲಿಪ್‌ಸ್ಟಿಕ್- ಗಿಪ್‌ಸ್ಟಿಕ್ ಹಚ್ಚಿದ್ರೆ ಕಾಲ್ ಮುರ್ದು ಬಿಡ್ತೀನಿ ನೋಡು” ಅಂದ್ರು. ಆ ಒಂದು ಕ್ಷಣದಲ್ಲಿ ನನ್ನ ಮತ್ತು ಅವರ ಮಧ್ಯೆ ಇದ್ದಂತ ಎಲ್ಲಾ ಬಿಗುಮಾನಗಳೂ ಕಳೆದುಹೋದ್ವು.
ಆ ಸಂದರ್ಭದಲ್ಲಿ ಬಹಳ ಕಷ್ಟವಾದ ಒಂದು ಪ್ರಶ್ನೆ ಕೇಳ್ದೆ, ಅದು ನನಗೆ ಯಾವಾಗ್ಲೂ ಕಾಡ್ತಾ ಇತ್ತು. ‘ಸೌಂದರ್ಯ ಎಂದರೇನು? ಪ್ರಕೃತಿಯಲ್ಲಿ ಎಲ್ಲವೂ ಚೆಂದ, ಮನುಷ್ಯರಲ್ಲೂ ಎಲ್ಲರೂ ಚೆಂದ ಕಾಣಲೇಬೇಕು, ಆದರೆ ಈ ಸೌಂದರ್ಯ ಶಾಸ್ತ್ರ ಅನ್ನೋದು ಯಾಕೆ ಬಂತು, ಅದರ ಮೂಲ ಎಲ್ಲಿದೆ’. ಅವರು ‘ಇದರ ಬಗ್ಗೆ ನಾನು ಚಿಂತನೆ ಮಾಡ್ಬೇಕು ಆಮೇಲೆ ಉತ್ತರ ಕೊಡ್ತೀನಿ’ ಅಂದ್ರು. ಸಂದರ್ಶನ ಮುಗೀತಾ ಬಂತು, ಕೊನೇಲಿ ಐದು ನಿಮಿಷ ಇದ್ದಾಗ ‘ಸಾರ್ ಒಂದು ಕಾಫಿ ಕುಡ್ದು ಮಾಡೋಣ ಅಂದಾಗ “ನೀನು ಆಗ್ಲೆ ಒಂದು ಪ್ರಶ್ನೆ ಕೇಳಿದ್ಯಲ್ಲ ಅದನ್ನ ಈಗ ಕೇಳು” ಅಂದ್ರು. ‘ಉತ್ತರ ಸಿಗ್ತಾ ಸರ್’ ಅಂದೆ ‘ಸಿಕ್ಕಬಹುದು ಮಾರಾಯ ಕೇಳು’ ಅಂದ್ರು. ನನ್ನ ಪ್ರಶ್ನೆಗೆ ಅವರು ಹೇಳಿದ್ರು.
“ನೈಸರ್ಗಿಕವಾಗಿದ್ದಾಗ ಎಲ್ಲವೂ ಸುಂದರ, ಆದ್ರೆ ಮನುಷ್ಯನಾದವನು ಇಲ್ಲೇನೋ ದಾರಿಗಡ್ಡಬರುತ್ತೆ ಅಂತ ನಾಲ್ಕು ಮರ ಕಡಿದು ಬಿಡ್ತಾನೆ, ಅಲ್ಲೆನೋ ದೇವಸ್ಥಾನ ಮಾಡ್ಬೇಕು ಅಂತ ಗುಡ್ಡ ಕಡಿದು ಬಿಡ್ತಾನೆ, ಇನ್ನೇನೋ ಅಭಿವೃದ್ಧಿ ಕಾರ್ಯಕ್ಕೆಂದು ನದೀಗೆ ಅಣೆಕಟ್ಟು ಕಟ್ಟಿಬಿಡ್ತಾನೆ, so ಕಣ್ಣಿಗೆ ಕಾಣುವಂತಾ ನೈಸರ್ಗಿಕ ರೂಪಗಳನ್ನ ನಾವು ಡಿಸ್ಟ್ರಾಕ್ಟ್ ಮಾಡ್ತೀವಿ, ಈ ರೀತೀಲಿ ಮಾಡ್ದಾಗ ಇಂಬ್ಯಾಲೆನ್ಸ್ ಆಗುತ್ತೆ, ಹೀಗೆ ಇಂಬ್ಯಾಲೆನ್ಸ್ ಆದಾಗ ಬ್ಯಾಲೆನ್ಸ್ ಆಗಿರುವಂತ ರೂಪಗಳಿಗಾಗಿ ಮನಸ್ಸು ಕಾತರಿಸುತ್ತೆ, ಹೀಗಾಗಿ ಸೌಂದರ್ಯ ಶಾಸ್ತ್ರ ಹುಟ್ತು.” ಈ ಉತ್ರ ನನಗೆ ತುಂಬಾ ತೃಪ್ತಿ ಕೊಡ್ತೂ ಅಂತಲ್ಲ. ಆದ್ರೆ ಆ ರೀತಿ ಚಿಂತನೆ ಮಾಡಿದ ಅವರ ರೀತಿ ಇದ್ಯಲ್ಲ, ಸೌಂದರ್ಯ ಶಾಸ್ತ್ರದ ಮೂಲ ನಿಸರ್ಗದಿಂದ ದೂರವಾಗುತ್ತಿರುವ ಮನುಷ್ಯ ಮತ್ತೆ ನಿಸರ್ಗದ ಕಡೆ ಹೋಗುವುದು ಅಂತ ಆ ಕ್ಷಣದಲ್ಲಿ ಚಿಂತಿಸಿದ ರೀತಿ ಅದು ತುಂಬಾ ಇಷ್ಟವಾಯ್ತು. (ಮುಂದುವರಿಯುವುದು)
(ತುಮಕೂರಿನ ಗೆಳೆಯರು ಏರ್ಪಡಿಸಿದ್ದ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ
ಜಯಂತ್ ಕಾಯ್ಕಿಣಿಯವರು ಆಡಿದ ಮಾತುಗಳು.)
ಬರಹ ರೂಪ- ಮಲ್ಲಿಕಾರ್ಜುನ ಹೊಸಪಾಳ್ಯ