ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

ಬರಹ

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಜಯಂತರ ಕತೆಗಳಲ್ಲಿ ಕಂಡು ಬರುವ ಆಶಯ, ಅವರು ನಮಗೆ ಕಟ್ಟಿಕೊಡುವ ನೋಟ ಮತ್ತು ಅದಕ್ಕೆ ಅವರು ಬಳಸುವ ಆಕೃತಿ ಮೂರನ್ನೂ ಒಟ್ಟಾಗಿ ಗಮನಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ ಜಯಂತ್ ಮೂಲತಃ ಕವಿ. ಅವರೊಳಗಿನ ಕವಿ ಅನೇಕ ಬಿಂಬಗಳನ್ನು, ಪ್ರತಿಮೆಗಳನ್ನು, ಕೆಲವೊಮ್ಮೆ ಶಬ್ದಗಳಿಂದಲೂ ತಮಗೆ ಬೇಕಾದ ಸಂವೇದನೆಯನ್ನು ಮರುಸೃಷ್ಟಿಸಿಕೊಳ್ಳಬಲ್ಲ. ಇದನ್ನು ಅವರು ಕತೆಯ ಪರಿಸರದ, ಪಾತ್ರಗಳ ಒಳಗಿನಿಂದಲೇ ಮಾಡುವುದರಿಂದ ಅನೇಕ ಬಾರಿ ಅವು ಓದುಗನ ಮೇಲೆ ಉದ್ದೇಶಿತ ಪರಿಣಾಮವನ್ನು ಉಂಟುಮಾಡಿಯೂ ಅದಕ್ಕೆ ಯಾವೆಲ್ಲ ಅಂಶಗಳು ಕಾರಣವಾದವು ಎಂಬುದು ನಮಗೆ ನಿಲುಕುವುದಿಲ್ಲ.