ಜರಾಸಂಧ - ಕಥಾ ಸಂಕಲನ

ಜರಾಸಂಧ - ಕಥಾ ಸಂಕಲನ

ಪುಸ್ತಕದ ಲೇಖಕ/ಕವಿಯ ಹೆಸರು
ಜೋಗಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ.೮೦.೦೦, ಮುದ್ರಣ: ೨೦೧೦

ಜೋಗಿ ಅಂದರೆ ಗಿರೀಶ್ ಹತ್ವಾರ್ ನಮ್ಮ ನಡುವಿನ ಅದ್ಭುತ ಬರಹಗಾರರು. ಇವರ ಸಣ್ಣ ಕಥೆ ತುಂಬಾನೇ ಸೊಗಸಾಗಿರುತ್ತದೆ. ‘ಜರಾಸಂಧ' ಕಥಾ ಸಂಕಲನವು ಬರೆಯದೇ ಉಳಿದ ಕಥೆಗಳು ಎಂದು ಅವರೇ ಹೇಳಿಕೊಂಡಿದ್ದಾರೆ. ತಮ್ಮ ಮುನ್ನುಡಿ ‘ಕತೆ ಕತೆ ಕಾರಣ'ದಲ್ಲಿ ಬರೆಯುತ್ತಾರೆ ‘...ಎಂದಿನಂತೆ ಇವುಗಳ ಪೈಕಿ ಹೆಚ್ಚಿನ ಕತೆಗಳನ್ನು ಗೆಳೆಯ ರವಿ ಬೆಳಗೆರೆ ತಮ್ಮ ‘ಹಾಯ್ ಬೆಂಗಳೂರು' ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಒಂದು ಕಥೆ ‘ದೇಶಕಾಲ' ಪತ್ರಿಕೆಯಲ್ಲೂ, ಮತ್ತೊಂದು ತರಂಗ ವಿಶೇಷಾಂಕದಲ್ಲೂ ಪ್ರಕಟವಾಗಿದೆ. ಉಳಿದೆಲ್ಲಾ ಕಥೆಗಳಿಗೆ ನಾನೇ ಹೊಣೆಗಾರ.’

ಪರಿವಿಡಿಯಲ್ಲಿ ೧೭ ಕಥೆಗಳಿವೆ. ನಾನು ಅವನು ಮತ್ತು ಹೇಳದೇ ಉಳಿದ ಕತೆ, ಸದಾಶಿವನ ಧ್ಯಾನ, ಪೇಜಾವರ, ತಥಾಸ್ತು, ಸುಮ್ಮನೆ, ಮಂಜುನಾಥನ ಎರಡನೇ ಮದುವೆ, ಗೊತ್ತಿಲ್ಲ, ಡಾಕ್ಟರ್ ಪ್ರಭು, ಕರ್ನಾಟಕ ರಾಜಕೀಯ ಪುರಾಣವು, ವಿಚಾರಣೆ, ಉತ್ಸವ ಮೊದಲಾದ ಕಥೆಗಳಿವೆ. ಪ್ರತಿಯೊಂದು ಕಥೆಯಲ್ಲಿ ಜೋಗಿಯವರ ಅಪರೂಪದ ಶೈಲಿ ಹೊರಹೊಮ್ಮಿದೆ.

ಜರಾಸಂಧ ಕಥೆಯ ಬಗ್ಗೆಯೇ ಹೇಳುವುದಾದರೆ, ಯಕ್ಷಗಾನ ವೇದಿಕೆಯಲ್ಲಿ ಜರಾಸಂಧ ಪಾತ್ರ ಮಾಡುವ ರಂಗನಾಥ ಎಂಬ ವ್ಯಕ್ತಿಯ ಬಗ್ಗೆ ಕಥೆ ಹೆಣೆದಿದ್ದಾರೆ. ರಂಗನಾಥನ ಪ್ರೇಮದ ಬಗ್ಗೆ, ಜರಾಸಂಧ ಪಾತ್ರವು ಅವನಲ್ಲಿ ಮೂಡುವ ಬಗ್ಗೆ ವಿವರಗಳು ಸೊಗಸಾಗಿವೆ. ಯಕ್ಷಗಾನದಲ್ಲಿ ಪಾತ್ರ ಮಾಡುವುದನ್ನು ಬಿಟ್ಟು ನಿವೃತ್ತಿ ಜೀವನವನ್ನು ಸಾಗಿಸುತ್ತಿದ್ದ ರಂಗನಾಥನನ್ನು ಸನ್ಮಾನ ಮಾಡಲು ಕರೆದು ಅವನಿಂದ ಕೊನೆಯ ಸಲ ಅದೇ ಪಾತ್ರವನ್ನು ಮಾಡಿಸುವ ಯೋಚನೆಯಲ್ಲಿರುತ್ತಾರೆ ಸಂಘಟಕರು. ರಂಗನಾಥನಿಗೂ ಖುಷಿ ತಂದ ಈ ಸಂಗತಿ ಕೊನೆಗೊಮ್ಮೆ ತನ್ನ ಪಾತ್ರ ಜರಾಸಂಧ ತನ್ನಲ್ಲಿ ಮೂಡಿ ಬರುತ್ತಿಲ್ಲವೆಂಬ ಆತಂಕಕ್ಕೆ ಒಳಗಾಗುತ್ತಾನೆ. ಅವನ ಪ್ರೇಯಸಿ ಯಮುನೆಯ ಬಗ್ಗೆಯೂ ನೆನಪಾಗುತ್ತದೆ. ಯಮುನೆಗೆ ಈಗಾಗಲೇ ಮದುವೆಯಾಗಿದೆ ಎಂಬ ಸಂಗತಿ ಅವನನ್ನು ಇನ್ನಷ್ಟು ದುಃಖಕ್ಕೆ ಒಳ ಮಾಡುತ್ತದೆ. ಆದರೂ ಜರಾಸಂಧ ಪಾತ್ರ ರಂಗದಲ್ಲಿ ಎಂದಿನಂತೆ ವಿಜೃಂಭಿಸುತ್ತಾನೆ. ಆ ಸಮಯದಲ್ಲಿ ಭೀಮನ ಜೊತೆ ಜರಾಸಂಧನ ಮಾತುಗಳು ಕಥೆಯಲ್ಲಿ ಹೀಗೆ ಮೂಡಿವೆ...

“ನನಗೆ ಸಾವಿಲ್ಲ, ನೀನು ನನ್ನನ್ನು ಸೀಳಿ ಎಸೆಯಲಾರೆ. ಹೇಗೆ ಸೀಳಿ ಎಸೆದರೂ ನಾನು ಕೂಡಿಕೊಳ್ಳಬಲ್ಲೆ. ಯಾಕೆಂದರೆ ನಾನು ಜರಾಸಂಧ. ನಿನಗೆ ಕೃಷ್ಣ ಹೇಳಿಕೊಡುವ ತಂತ್ರ ಕೂಡಾ ಒಂದು ಕ್ಷುಲ್ಲುಕ ಆಲೋಚನೆ. ನೀಚ ಜಾಣತನ" ಎಂದು ಜರಾಸಂಧ ಹೇಳುತ್ತಿದ್ದಂತೆಯೇ ಅವನ ಮೂಗಿಗೆ ಅದೇ ಸುಗಂಧ ಅಡರಿತು. ಜರಾಸಂಧ ಸಭೆಯತ್ತ ನೋಡಿದ. ಎದುರು ಸಾಲಿನಲ್ಲಿ ಖಾಲಿಯಿದ್ದ ಎರಡು ಕುರ್ಚಿಗಳಲ್ಲಿ ಯಮುನೆ ಮತ್ತು ಅವಳ ಗಂಡ ಕುಳಿತುಕೊಂಡರು. ಅಕ್ಕಪಕ್ಕ ಕುಳಿತವರು ಎದ್ದು ನಿಂತು ಗೌರವ ಸೂಚಿಸಿದರು. ಡಿ.ಸಿ.ಸಾಹೇಬರು ಎಂದು ಭಾಗವತ ಯಾರದೋ ಕಿವಿಯಲ್ಲಿ ಪಿಸುಗುಟ್ಟಿದ್ದು ರಂಗನಾಥನಿಗೂ ಕೇಳಿಸಿತು.

ರಂಗನಾಥ ಮೌನವಾದ. ಅವನ ಮಾತಿಗೆ ಕಾಯುತ್ತಿದ್ದ ಭೀಮನ ಹತ್ತಿರ ‘ಎತ್ತಿಕೋ ನಿನ್ನ ಗಧೆಯನ್ನು, ಅಖಾಡಕ್ಕೆ ಇಳಿ, ನೋಡೇ ಬಿಡೋಣ' ಎಂದು ತಣ್ಣಗಿನ ದನಿಯಲ್ಲಿ ಹೇಳಿದ. ಆ ಅಚಾನಕ್ ನಿರುತ್ಸಾಹವನ್ನು ಊಹಿಸದೇ ಇದ್ದ ಭೀಮ, ಮೊದಲು ಮಾತಿನ ಯುದ್ಧ, ಆಮೇಲೆ ಮಲ್ಲ ಯುದ್ಧ ಎಂದು ಮತ್ತೆ ಅವನನ್ನು ಮಾತಿಗೆಳೆಯಲು ನೋಡಿದ.

ರಂಗನಾಥ ಗದೆಯೆತ್ತಿಕೊಂಡು ಎದ್ದು ನಿಂತೇ ಬಿಟ್ಟ. ಭೀಮನೂ ಬೇರೆ ದಾರಿಯಿಲ್ಲದೇ ಗದೆಯನ್ನೆತ್ತಿಕೊಂಡ.

ಮೂರು ನಿಮಿಷಗಳ ನಂತರ ಭೀಮ, ಜರಾಸಂಧನನ್ನು ಎರಡು ಹೋಳಾಗಿ ಸೀಳಿ ಎಸೆದ. ತನ್ನನ್ನು ಸೀಳಿ ಎಸೆದದ್ದು ಕೃಷ್ಣನ ಕುತಂತ್ರವೋ, ಭೀಮನ ಬಲವೋ, ಯಮುನೆಯ ಫಲಿಸದ ಒಲವೋ ಎಂದು ಯೋಚಿಸುತ್ತಾ ಜರಾಸಂಧ ಕಣ್ಮುಚ್ಚಿದ."

ಸುಮಾರು ೧೨೦ ಪುಟಗಳ ಈ ಕಥಾ ಸಂಕಲನವನ್ನು ಅಂಕಿತ ಪುಸ್ತಕದವರು ೨೦೧೦ರಲ್ಲಿ ಮುದ್ರಿಸಿದ್ದಾರೆ.