ಜರ್ನಿ ಆಫ್ ಜ್ಯೋತಿ

ಜರ್ನಿ ಆಫ್ ಜ್ಯೋತಿ

ಪುಸ್ತಕದ ಲೇಖಕ/ಕವಿಯ ಹೆಸರು
ಜ್ಯೋತಿ ಶಾಂತರಾಜು
ಪ್ರಕಾಶಕರು
ಅಮೃತ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೦೦.೦೦, ಮುದ್ರಣ: ೨೦೨೪

‘ಜರ್ನಿ ಆಫ್ ಜ್ಯೋತಿ’ ಜ್ಯೋತಿ ಎಸ್ ಅವರ ಅಂಕಣ ಬರಹಗಳ ಸಂಕಲನವಾಗಿದೆ. ಈ ಕೃತಿಯ ಕುರಿತು ಎಚ್.ಎಸ್. ಸತ್ಯನಾರಾಯಣ ಅವರು ಹೀಗೆ ಹೇಳಿದ್ದಾರೆ; ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣ ಕಳೆದುಕೊಂಡು ಹೆಣಗಾಡುತ್ತಿರುವ, ಆದರೆ ಜೀವನೋತ್ಸಾಹವನ್ನು ಕುಂದಿಸಿಕೊಳ್ಳದ ಚಿತ್ರ ಕಲಾವಿದರಿದ್ದಾರೆ, ಛಾಯಾಗ್ರಾಹಕರಿದ್ದಾರೆ, ಬೀದಿ ಬದಿಯ ವ್ಯಾಪಾರಿಗಳಿದ್ದಾರೆ, ರಂಗಭೂಮಿ-ತೊಗಲುಬೊಂಬೆಯಾಟದ ಕಲಾವಿದರಿದ್ದಾರೆ, ಸಮಾಜಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ, ಅನಾಥ ಹೆಣಗಳನ್ನು ಹುಡುಕಿತಂದು ಅವಕ್ಕೆ ಗೌರವದಿಂದ ಶವಸಂಸ್ಕಾರ ಮಾಡುವವರಿದ್ದಾರೆ, ಸಾಹಸಿ ಕೃಷಿಕರಿದ್ದಾರೆ, ಮಣ್ಣಿನ ಆಭರಣಗಳನ್ನು ತಯಾರಿಸುವವರಿದ್ದಾರೆ, ಭಿಕ್ಷೆಬೇಡುವ ಸಮುದಾಯದವರಿದ್ದಾರೆ, ತೃತೀಯ ಲಿಂಗಿಗಳಿದ್ದಾರೆ, ದೈಹಿಕ ನ್ಯೂನತೆಯ ನಡುವೆಯೂ ಬದುಕುವ ಹಕ್ಕನ್ನು ಸಾರ್ಥಕಗೊಳಿಸಿಕೊಂಡವರಿದ್ದಾರೆ, ಕೊಳಲುಗಳನ್ನು ತಯಾರಿಸಿ, ಅದನ್ನು ನುಡಿಸುತ್ತಾ ಮಾರುವ ಸಹೋದರರಿದ್ದಾರೆ, ಮಸಣದಲ್ಲಿ ಬದುಕು ನಡೆಸುವ ವೀರಬಾಹುಗಳಿದ್ದಾರೆ, ಸಾವನ್ನು ಗೆದ್ದವರಿದ್ದಾರೆ, ಅವಮಾನಗೊಂಡಲ್ಲೇ ಎತ್ತರಕ್ಕೆ ಬೆಳೆದು ನಿಲ್ಲಬೇಕೆಂಬ ಕನಸುಗಣ್ಣಿನವರಿದ್ದಾರೆ, ಕೌದಿ ಹೊಲಿದು ಮಾರುವವರಿದ್ದಾರೆ, ಇತ್ತೀಚೆಗೆ ಅಸುನೀಗಿದ ಅರ್ಜುನನೆಂಬ ಆನೆಯ ಮಾವುತರಿದ್ದಾರೆ, ಸೂಪರ್ ಕಾಪ್, ಲೇಖಕರು, ಕ್ರೀಡಾಪಟುಗಳು ಎಲ್ಲರೂ ಇದ್ದಾರೆ. ಪುಸ್ತಕವನ್ನು ಅವಲೋಕಿಸಿದವರಿಗೆ ಇಂತಹ ಹತ್ತು ಹಲವಾರು ಚೇತನಗಳು ಎದುರಾಗುತ್ತವೆ. ಇವೆಲ್ಲವೂ ಲೇಖಕಿಯ ಆಸಕ್ತಿಯ ಫಲವಾಗಿ ಪುಸ್ತಕದಲ್ಲಿ ಕಾಣಬರುವ ಸಾಹಸಮಯ ವ್ಯಕ್ತಿಚಿತ್ರಗಳು. ಬದುಕಿನಲ್ಲಿ ಬದುಕು ಗೆದ್ದ ‘ರಿಯಲ್ ಹೀರೋ’ಗಳು!

ಜ್ಯೋತಿ ಶಾಂತರಾಜು ಅವರ ಅಂಕಣ ಬರಹಗಳ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಪ್ರಸಾದ್ ಶೆಣೈ ಆರ್ ಕೆ ಇವರು. ತಮ್ಮ ಮುನ್ನುಡಿಯಲ್ಲಿ ಪ್ರಸಾದ್ ಶೆಣೈ ಅವರ್ಯು ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಭಾಗಗಳು ನಿಮ್ಮ ಓದಿಗಾಗಿ..."ಲೋಕದಲ್ಲಿರುವ ಒಂದೊಂದು ಮನಸ್ಸಿಗೂ ನೂರಾರು ಕನಸು, ಒಂದೊಂದು ಕನಸಿಗೂ ಒಂದೊಂದು ಬಣ್ಣ, ಎಲ್ಲಾ ಕನಸುಗಳಿಗೂ ಒಂದೇ ಬಣ್ಣವಾಗಿದ್ದರೆ, ಲೋಕ ಕಾಮನಬಿಲ್ಲಾಗುತ್ತಿರಲಿಲ್ಲ, ಹೂದೋಟದ ಬಗೆ ಬಗೆ ಹೂವುಗಳು ಬಣ್ಣವಾಗಿ ಪರಿಮಳ ಬೀರುತ್ತಿರಲಿಲ್ಲ. "ನಾವು ಎಲ್ಲರಂತೆ ಸುಮ್ಮನಿದ್ದುಬಿಡುತ್ತೇವೆ, ಯಾರಿಗೂ ಸ್ಫೂರ್ತಿಯಾಗದೇ, ನಮ್ಮ ಕೆಲಸವಷ್ಟೇ ಮಾಡಿ ನಮ್ಮ ಪಾಡಿಗೆ ನಾವು ಬದುಕೋದು ಮುಖ್ಯ" ಎನ್ನುವವರಿದ್ದಾರೆ. "ನಾವು ಏನು ಕೆಲಸ ಮಾಡಿದರೂ ಮಾದರಿಯಾಗಿ ಬದುಕಬೇಕು, ಜನ ನೋಡಿ ಒಂದಿಷ್ಟಾದರೂ ನನ್ನಿಂದ ಸ್ಫೂರ್ತಿ ಪಡೆಯಬೇಕು, ಮಣ್ಣಲ್ಲೇ ನಿಂತು ನಮ್ಮತನದಲ್ಲೇ ಇಷ್ಟಿಷ್ಟೇ ಮುಗಿಲು ಮುಟ್ಟಬೇಕು ಎನ್ನುವ ಕನಸು ಕಾಣುವವರೂ, ಏನಾದರೂ ಹೊಸತನ್ನು ಮಾಡಬೇಕು ಎನ್ನುವ ಜೀವಗಳೂ ನಮ್ಮ ಸುತ್ತ ಮುತ್ತಲೂ ಧಾರಾಳವಾಗಿದ್ದಾರೆ. ಆದರೆ ಆ ಜೀವಗಳ ಬದುಕು, ಬವಣೆ, ಖುಷಿ, ಸಾಧನೆ, ವೇದನೆ, ಸಂವೇದನೆಗಳನ್ನು ನೋಡಿ, ಅವರ ಬದುಕನ್ನು ಬರಹವಾಗಿಸುವ, ನಮ್ಮೊಳಗೂ ಅಕ್ಷರಗಳ ಮೂಲಕ ಕಾಡಿಸುವ ಬರಹಗಾರರು ಸ್ವಲ್ಪ ಕಡಿಮೆಯಾಗಿದ್ದಾರೆ ಅಷ್ಟೆ. ಅಲ್ಲೆಲ್ಲೋ ಪತ್ರಿಕೆಗಳಲ್ಲಿ ಇಂತಹ ಬರಹಗಳು ಬಂದರೂ ಅವು ಓದುಗರರ ಕಂಗಳನ್ನು ತಾಕಿದಂತೆ ಮಾಡಿ ಅಲ್ಲೆಲ್ಲೋ ಕಳೆದುಹೋಗುತ್ತವೆ ಬಿಟ್ಟರೆ ನದಿಯಂತೆ ಹರಿದು ಭಾವದ ಕಡಲಿಗೆ ಸೇರುವುದೇ ಇಲ್ಲ. ಆದರೆ ಸೃಜನಶೀಲ ಕಲಾವಿದೆ, ಬರಹಗಾರ್ತಿ, ಜ್ಯೋತಿ ಅವರ ಈ "ಜರ್ನಿ ಆಫ್ ಜ್ಯೋತಿ" ಬದುಕಿನ ಬಣ್ಣಗಳನ್ನು ತುಂಬಿಕೊಂಡ ದೋಣಿ.

“ಜರ್ನಿ ಆಫ್ ಜ್ಯೋತಿ"ಯ ಬರಹಗಳ ರಾಶಿಯಲ್ಲಿ, ಓದಿನ ನದಿಯಲ್ಲಿ ಈಜಲಾಗದಿದ್ದರೂ ಬಣ್ಣಗಳ ಕಡಲಲ್ಲಿ ಈಜಿ ನೂರಾರು ಮಕ್ಕಳ ಕೈಗಳಿಗೆ ಚಿತ್ರ ಕಲೆ ಹೇಳಿಕೊಟ್ಟ ಕಲಾವಿದನೊಬ್ಬನ ಸ್ಫೂರ್ತಿಯ ಸೆಲೆ ಇದೆ. ಕನ್ನಡನಾಡಿನ ಭವ್ಯ ಪರಂಪರೆಯನ್ನು ಕಿನ್ನಾಳ ಎನ್ನುವ ಚೆಂದದ ಕಲೆಯನ್ನು ಅಪ್ಪಿಡಿಯುತ್ತಲೇ ಅದರಲ್ಲೇ ಬೆಳಕು ಕಂಡು ಆ ಕಲೆಯ ನೆನಪನ್ನು ಮತ್ತೆ ಎಲ್ಲರೊಳಗೆ ಜೀವಂತವಾಗಿಸಿದ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲಾವಿದನ ಯಶೋಗಾಥೆ ಇದೆ. ಕೊಳಲು ತಯಾರಿಕೆಯಲ್ಲಿ ಮತ್ತೆ ಮತ್ತೆ ವಿಫಲವಾಗಿ ಕೊನೆಗೆ ಕೊಳಲು ತಯಾರಿಸಿ, ಬದುಕಿನ ರಾಗಗಳನ್ನೆಲ್ಲಾ ಆ ಕೊಳಲಲ್ಲೇ ನುಡಿಸಿ ಯಶಸ್ವಿಯಾದ ಸಿಂಧನೂರಿನ ಸಹೋದರರ ಸಾಹಸಗಾಥೆ, ನಲವತ್ತೇಳು ವರುಷಗಳಿಂದ ಸ್ಮಶಾನದಲ್ಲಿ ಹೆಣಗಳನ್ನು ಹೂಳುವ, ಸುಟ್ಟು ಹೋಗುವವರೆಗೂ ಹೆಣಗಳನ್ನು ಕಾಯುವ ಕಾಯಕವನ್ನ ಸತ್ಯಹರಿಶ್ಚಂದ್ರನಂತೆ ನಿಯತ್ತಾಗಿ ಮಾಡುತ್ತ, ಮಣ್ಣಾಗಿ ಹೋಗುವ ಬದುಕಿನ ಕೊನೆಯ ಪ್ರಕ್ರಿಯೆಗೆ ಸಾಕ್ಷಿಯಾಗುವ ಆಧುನಿಕ ಹರಿಶ್ಚಂದ್ರ ಶೌರಿರಾಜು ಅವರ ಸ್ಮಶಾನಗಾಥೆ ಇಲ್ಲಿದೆ.

ಅವಮಾನ ಆದಲ್ಲೇ ಎದ್ದು ಬೆಳೆದು ಚೆಂಡುಹೂವಿನಂತೆ ಅರಳಿ, ನೇಯ್ದೆ, ಬರವಣಿಗೆ. ಟೈಲರಿಂಗ್, ಬ್ಯುಟಿಶಿಯನ್ ಹೀಗೆ ಎಲ್ಲವೂ ತಾನಾಗಿ ಮುಳ್ಳಿನ ಹಾಸಿಗೆಯನ್ನೇ ರತ್ನಗಂಬಳಿಯಾಗಿ ಪರಿವರ್ತಿಸಿದ ಶಶಿರೇಖಾ ಎನ್ನುವ ಹೆಣ್ಣು ಮಗಳ ಕಥನವಿದೆ. ಪ್ರಕೃತಿಯೇ ನಮ್ಮ ಬದುಕಿಗೆ ದೊಡ್ಡ ಜೀವಚೈತನ್ಯ ತನ್ನೂರಿನ ಒಡಲೊಳಗೆ ಹಸಿರ ಉಸಿರು ಎಂದು ಸಾವಿರಾರು ತುಂಬಿಸಿದ ಗಿಡಗಳನ್ನು ನೆಡುತ್ತ, ದಕ್ಷಿಣ ಕನ್ನಡದ ವೃಕ್ಷಜೀವಿ ಮಾಧವ ಉಲ್ಲಾಳರ ಕತೆ ನಮ್ಮೊಳಗೂ ಹಸಿರ ಪ್ರೀತಿಯನ್ನು ಒಡಮೂಡಿಸುತ್ತದೆ.

ಇಲ್ಲಿನ ಬರಹಗಳಲ್ಲಿರುವ ವ್ಯಕ್ತಿಗಳು ನಮ್ಮನ್ನು ಆವರಿಸುತ್ತಾರೆ. ಇಲ್ಲಿ ಬರುವ ನಿಜ ಜೀವನದ ಪಾತ್ರಧಾರಿಗಳು ಬರೀ ಬದುಕಿನ ಸಿಹಿಯೇ ತುಂಬಿಕೊಂಡಿರುವ ಜೀವಗಳಲ್ಲ, ಅವರೊಳಗೆ ಆಗಾಗ ಹೊಮ್ಮುವ ಕಣ್ಣೀರಿದೆ, ಆಗಾಗ ಎದುರಿಸುವ ಅವಮಾನದ ಬೆಟ್ಟವಿದೆ. ಏನಿಲ್ಲದಿದ್ದರೂ ಇದ್ದಿದ್ದರಲ್ಲೇ ಸ್ವರ್ಗ ಕಾಣುವ ವಿಶಾಲತೆ ಇದೆ.

ಕೌದಿ ಹೊಲಿಯುತ್ತಲೇ, ಕಷ್ಟ, ನಷ್ಟ, ಬಡತನಗಳಿಗೆ ಹೊಲಿಗೆ ಹಾಕುತ್ತಲೇ ಮಕ್ಕಳನ್ನು ಬೆಳೆಸಿ ಅವರೀಗ ದೊಡ್ಡ ಮನುಷ್ಯರಾಗಿರುವುದನ್ನು ಕಣ್ಣುಂಬಿಕೊಂಡಾಗ ಖುಷಿಯ ಬೆಟ್ಟವಾಗುವ ಯಾದಗಿರಿಯ ದುಂಡಮ್ಮ ಇಲ್ಲಿ ಕಾಡುತ್ತಾರೆ. ದೇವದಾಸಿ ಪದ್ಧತಿಯನ್ನು ವಿರೋಧಿಸಿ, ಆ ಪದ್ಧತಿಯ ಬಿಸಿಗೆ ಬಿದ್ದು ಇನ್ನೇನು ಬಳಲಿ ಬೆಂಡಾಗುವ ಹೆಣ್ಣು ಮಕ್ಕಳನ್ನು ಉಳಿಸಿದ ಹೊಸಪೇಟೆಯ ಹೆಣ್ಣುಮಗಳು ಇಲ್ಲಿ ಮಹಾನ್ ಸಮಾಜ ಸುಧಾರಕಿಯಂತೆ ಭಾಸವಾಗುತ್ತಾಳೆ.

ಅಲೆಮಾರಿ, ನೇಕಾರ ಕುಟುಂಬ, ಹಳ್ಳಿಗಳಲ್ಲಿ ತಮ್ಮ ಹಾಡುಗಾರಿಕೆ, ಕವಿತ್ವ, ಕುಲ ಕಸುಬು, ತಾವು ನಂಬಿರುವ ಆದರ್ಶ ವೃತ್ತಿ, ಹವ್ಯಾಸಗಳಲ್ಲೇ ನಿರ್ಲಿಪ್ತವಾಗಿ ಬದುಕಿರುವ ಜೀವಗಳೆಲ್ಲಾ ಇಲ್ಲಿ ಸಾಲು ಸಾಲು ನಕ್ಷತ್ರಗಳಂತೆ ಹೊಳೆಯುತ್ತಾರೆ. ಅವರ ವೃತ್ತಿ, ಅವರ ಕನಸು, ಅವರ ಛಲ, ಅವರ ಜೀವನೋತ್ಸಾಹ, ಅವರ ಮುಗ್ಧತೆ. ಅವರ ಸ್ವಾವಲಂಬನೆ, ಬಡತನದಲ್ಲೂ ಕರಗಿಹೋಗದೇ ಸೃಜನಶೀಲತೆ, ತಾಳ್ಮೆ, ಕೌಶಲ್ಯಗಳಲ್ಲೇ ಹೊಸತನ್ನು ಕಾಣುವ ಅವರ ಅನನ್ಯ ಕಸುಬುಗಾರಿಕೆ, ಸಹಜ ಜೀವಂತಿಕೆ ನಮಗೂ ದೊಡ್ಡ ಸ್ಫೂರ್ತಿಶಕ್ತಿ.

ಕೃತಿಯಲ್ಲಿ ಬರುವ ಸಿದ್ಧಿ, ಲಂಬಾಣಿ ಸಮುದಾಯದ ಸಾಂಸ್ಕೃತಿಕ ಜೀವನಶೈಲಿಯ ವಿವರಗಳು ಕೃತಿಯೊಂದರಲ್ಲಿ ಪುಟ್ಟ ದಾಖಲೀಕರಣವಾಗಿರುವುದು ಶುಭ ಸೂಚನೆ. ರಾಜ್ಯದ ಎಲ್ಲಾ ಜಿಲ್ಲೆಯ ಸೃಜನಶೀಲ ವ್ಯಕ್ತಿಗಳ ಪರಿಚಯದ ಜೊತೆಗೆ ಇಲ್ಲಿನ ಬರಹಗಳು, ಆಯಾ ಊರಿನ ಜನಪದ, ಸೊಗಡು-ಸೊಗಸುಗಳನ್ನೂ ಪರೋಕ್ಷವಾಗಿ ಓದುಗನ ಎದೆಯೊಳಗೆ ಮೂಡಿಸುತ್ತದೆ.

ಇಲ್ಲಿನ ಬರಹಗಳನ್ನು ಓದುವಾಗ ಕೌಶಲ್ಯ, ನಿಜವಾದ ಪ್ರತಿಭೆ ಸೃಜನಶೀಲತೆ ಇದ್ದವರನ್ನು ಎಲ್ಲಾ ಸರಕಾರಗಳು ತೀರಾ ಕಡೆಗಣಿಸುತ್ತಿವೆ ಎನ್ನುವ ಬೇಸರ ಆವರಿಸಿಕೊಳ್ಳುತ್ತದೆ. ತನ್ನ ಪ್ರತಿಭೆಯ ಕುರಿತು ಬಡಾಯಿಕೊಚ್ಚಿಕೊಳ್ಳುತ್ತ, ಆರ್ಥಿಕವಾಗಿ ಮುಂದಿರುವವರಷ್ಟೇ ಗೆಲ್ಲುತ್ತಾರೆ ಬಿಟ್ಟರೆ ನಿಜವಾದ ಪ್ರತಿಭೆಗಳು, ಇವೆಲ್ಲವನ್ನು ಮಾಡಲಾಗದೇ ಹುಲ್ಲಿನ ಮರೆಯಲ್ಲಿ ಹೊಳೆಯುವ ಇಬ್ಬನಿಯಂತೆ ಅಲ್ಲೇ ಉಳಿದುಬಿಡುತ್ತಾರೆ. ಸಸಿಯೊಂದು ಮಣ್ಣು, ಗಾಳಿ, ಬೆಳಕಿನ ಕಣಗಳನ್ನೆಲ್ಲಾ ಹೀರಿ ಬೆಳೆಯುವಂತೆ ಇವರೂ ಬದುಕಿನ ಸಿಹಿ-ಕಹಿಗಳನ್ನೆಲ್ಲಾ ಹೀರಿ ಬದುಕಿನಲ್ಲಿ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತಾರೆ. ತಮ್ಮ ಕನಸುಗಳನ್ನು, ನನಸಿನ ಆಕಾಶಕ್ಕೆ ಚಾಚಿ ಎಷ್ಟೋ ಮನಸ್ಸುಗಳಿಗೆ ಸ್ಫೂರ್ತಿಯ ನಕ್ಷತ್ರಗಳಾಗಿ ಹೊಳೆಯುತ್ತಾರೆ.”

ಸುಮಾರು ೨೩೦ ಪುಟಗಳ ಈ ಕೃತಿಯಲ್ಲಿ ಬರುವ ಪಾತ್ರಗಳು ನಮಗೆ ಆಪ್ತವಾಗುತ್ತವೆ ಮತ್ತು ಪ್ರೇರಣಾದಾಯಕವಾಗುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ.