ಜಲವಿವಾದಗಳ ಸುಳಿಗೆ ರಾಜ್ಯ ಸರ್ಕಾರ

ರಾಜ್ಯವೀಗ ಮತ್ತೊಮ್ಮೆ ಜಲ ಸಂಕಟಕ್ಕೆ ಸಿಲುಕಿದೆ. ಬೀದರ್ ನಿಂದ ಚಾಮರಾಜನಗರದವರೆಗೆ ಬರದ ಕರಿನೆರಳು, ಬತ್ತಿದ ಕೆರೆ ಕುಂಟೆ, ಸೊರಗಿದ ಜೀವನದಿ, ಗ್ರಾಮೀಣ ಕರ್ನಾಟಕದಲ್ಲಿ ಜನ, ಜಾನುವಾರುಗಳಿಗೆ ಬಿಂದಿಗೆಯ ನೀರಿಗೂ ತುಟ್ಟಿ ! ಮಳೆರಾಯನ ಅವಕೃಪೆ ಈ ಸಾರಿ ನಾಡಿನ ಜನತೆಗೆ ಕಳವಳಕಾರಿಯಾದರೆ ಸರ್ಕಾರಕ್ಕೆ ಇದೊಂದು ಸವಾಲು. ಒಂದು ತಿಂಗಳಿನ ಹಿಂದೆಯಷ್ಟೆ ನಾಡಿನ ಉತ್ತರದಲ್ಲಿ ರುದ್ರ ಮಳೆ ಸಂಭವಿಸಿದರೂ ಈಗ ಕುಡಿಯುವ ನೀರಿಗೆ ಪರಿತಪಿಸುವಂತಾಗಿರುವುದು ದುರದೃಷ್ಟಕರ. ಮಲೆನಾಡು ಮತ್ತು ಹಳೇ ಮೈಸೂರಿನ ಭಾಗದಲ್ಲಿ ಈ ಸಾರಿ ವಾಡಿಕೆಗಿಂತಲೂ ಕಡಿಮೆ ಮಳೆ.
ಇಂತಹ ಸಮಯದಲ್ಲಿಯೇ ಕೃಷ್ಣಾ, ಕಾವೇರಿ ಕಣಿವೆಯ ಜಲವಿವಾದಗಳು ತಲೆಯೆತ್ತುತ್ತವೆ ! ಕರ್ನಾಟಕದ ಪಾಲಿಗೆ ಇದೊಂದು ಶಾಪ. ಇಡೀ ದಕ್ಷಿಣದ ನಾಲ್ಕು ರಾಜ್ಯಗಳಿಗೆ ಜೀವನದಿಗಳಿಂದ ನೀರು ಉಣಿಸುವ ರಾಜ್ಯ ಕರ್ನಾಟಕವಾದರೂ ಇಲ್ಲಿನ ಜನತೆಗೆ ಕೊನೆಗೆ ಸಿಗುವುದು ಕಡಿಮೆ ಪಾಲು, ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳಿರುವುದು ವಿಜಯಪುರದಲ್ಲಿ. ತುಂಗಭದ್ರಾ ಜಲಾಶಯ ಮತ್ತು ಅಣೆಕಟ್ಟು ನಿರ್ಮಾಣವಾಗಿರುವುದು ವಿಜಯನಗರ ಜಿಲ್ಲೆಯಲ್ಲಿ. ಸಂಪತ್ ಭರಿತ ಅಣೆಕಟ್ಟು ನಾಡಿನಲ್ಲಿದ್ದರೂ ಕೃಷ್ಣಾ ನದಿಯ ಸಿಂಹಪಾಲಿನ ನೀರು ಪೂರೈಕೆಯಾಗುವುದು ಆಂಧ್ರ ಮತ್ತು ತೆಲಂಗಾಣಕ್ಕೆ. ತುಂಗಭದ್ರಾ ಅಣೆಕಟ್ಟು ಕನ್ನಡನಾಡಿನ ಹೆಮ್ಮೆಯಾದರೂ ಅಧಿಕ ಪ್ರಮಾಣದ ನೀರಿನ ಪಾಲು ಆಂಧ್ರಕ್ಕೆ ಮೀಸಲು ! ಇನ್ನು ಹಳೇ ಮೈಸೂರಿನ ಹೃದಯವಾದ ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ಅಧಿಕ ಲಾಭವಿರುವುದೇ ತಮಿಳುನಾಡಿನ ತಂಜಾವೂರು, ನಾಗಪಟ್ಟಣಂ ಮತ್ತು ಕೊಯಮುತ್ತೂರು ಮತ್ತು ತಿರುವಳ್ಳವರ್ ಪ್ರಾಂತ್ಯಗಳಿಗೆ. ಒಟ್ಟಿನಲ್ಲಿ ಮಳೆಯಿಲ್ಲದೆ ಗತಿಗೆಟ್ಟ ಕಾಲದಲ್ಲಿಯೂ ಕರ್ನಾಟಕವು ಒಂದಷ್ಟು ನೀರು ಬಿಡದೆ ತಪ್ಪಿಸಿಕೊಳ್ಳುವ ಹಾಗಿಲ್ಲ. ಅದರಲ್ಲಿಯೂ ಮುಖ್ಯವಾಗಿ ಕಾವೇರಿ ಪ್ರಾಧಿಕಾರವಾಗಲೀ, ಉಸ್ತುವಾರಿ ಮಂಡಳಿಯಾಗಲೀ ಎಂದೂ ಕರ್ನಾಟಕದ ಜಲಸಂಕಷ್ಟಕ್ಕೆ ಸ್ಪಂದಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿದ ಉದಾಹರಣೆಗಳಿಲ್ಲ. ಸಾಮಾನ್ಯವಾಗಿ ಭಾರೀ ಮಳೆಯ ಸಮಯದಲ್ಲಿ ಕಾವೇರಿ ನ್ಯಾಯಾಧಿಕರಣ ಹಾಗೂ ಸುಪ್ರೀಂಕೋರ್ಟ್ ತಮ್ಮ ತೀರ್ಪುಗಳಲ್ಲಿ ಸೂಚಿಸಿರುವ ನೀರಿನ ಪ್ರಮಾಣಕ್ಕಿಂತ ನೂರು ಪಟ್ಟು ನೀರು ತಮಿಳುನಾಡಿಗೆ ಹರಿದರೂ, ಇವರ ಬಾಯಿಯಿಂದ ಹೆಚ್ಚು ನೀರು ಹರಿಯಿತು ಎಂಬ ಸೌಜನ್ಯದ ಮಾತಿಲ್ಲ! ಆದರೆ ಮಳೆಯ ಅಭಾವದಿಂದ ರಾಜ್ಯದ ಪರಿಸ್ಥಿತಿ ತುಸು ಹದಗೆಟ್ಟ ಕೂಡಲೇ ದಾಯಾದಿಗಳು ಆಸ್ತಿಯಲ್ಲಿ ಪಾಲು ಕೇಳುವಂತೆ ತಮಿಳುನಾಡು ಮುಗಿಬೀಳುತ್ತೆ. ಇದು ಎಷ್ಟರ ಮಟ್ಟಿಗೆ ಸರಿ? ಒಕ್ಕೂಟದ ವ್ಯವಸ್ಥೆಯಲ್ಲಿ ಭಾರತದ ರಾಜ್ಯಗಳಿಂದು ಬದುಕುತ್ತಿರುವಾಗ ತಮ್ಮ ಹಕ್ಕುಗಳನ್ನೇ ಮುಂದಿಟ್ಟುಕೊಂಡು ಮೊಂಡುಪಟ್ಟು ಹಿಡಿಯುವುದು ಸ್ವಾರ್ಥ ರಾಜಕಾರಣ. ಕೊಡುಕೊಳ್ಳುವುದೆಂದರೆ ಏನರ್ಥ? ಕಾವೇರಿ ಒಳಹರಿವು ಕಡಿಮೆಯಾದಾಗ ತಮಿಳುನಾಡು, ಕೃಷ್ಣಾ ನದಿ ಸೊರಗಿದಾಗ ಆಂಧ್ರವು ಕಾನೂನಾತ್ಮಕ ಜಲ ಹಕ್ಕುಗಳಿಗಾಗಿ ಬೊಬ್ಬಿರಿಯುವುದು ಸರಿಯಲ್ಲ. ಕಾನೂನು ಮತ್ತು ಕಟ್ಟಳೆಗಳ ಆಚೆ ಮಾನವೀಯತೆ ಮತ್ತು ಸೌಹಾರ್ದತೆ ಎಂಬುದೊಂದಿದೆ. ಇದನ್ನು ನೆರೆ ರಾಜ್ಯಗಳು ಒಂದು ಕ್ಷಣ ಆಲೋಚಿಸಲಿ.
ಕೃಪೆ: ಹೊಸದಿಗಂತ, ಸಂಪಾದಕೀಯ, ದಿ: ೨೩-೦೮-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ