ಜಲಿಯನ್ವಾಲಾ ಬಾಗ್ ರಾಕ್ಷಸಿ ಕಗ್ಗೊಲೆ: ನೂರು ವರುಷಗಳ ಕರಾಳ ನೋವು
೧೩ ಎಪ್ರಿಲ್ ೧೯೧೯ ನೆನಪಿದೆಯಾ? ಅದು ಶತಮಾನದ ಕರಾಳ ದಿನ. ಅದುವೇ ಪಂಜಾಬಿನ ಅಮೃತಸರದ ಜಲಿಯನ್ವಾಲಾ ಬಾಗ್ನಲ್ಲಿ ಕ್ರೂರ ರೌಲತ್ ಕಾಯಿದೆಯನ್ನು ಪ್ರತಿಭಟಿಸಲು ಸಭೆ ಸೇರಿದ್ದ ದೇಶಭಕ್ತ ಭಾರತೀಯರನ್ನು ರಾಕ್ಷಸಿ ಪ್ರವೃತ್ತಿಯ ಬ್ರಿಟಿಷ ಅಧಿಕಾರಿಯೊಬ್ಬ ರೈಫಲುಗಳಿಂದ ಗುಂಡುಗಳ ಸುರಿಮಳೆಗೈದು ಕಗ್ಗೊಲೆ ನಡೆಸಿದ ಕರಾಳ ದಿನ.
ಅದಾಗಿ ಒಂದು ಶತಮಾನವೇ ದಾಟಿದೆ. ಅಂದು ಬ್ರಿಟಿಷರ ಗುಂಡುಗಳಿಗೆ ಬಲಿಯಾದವರು ಸುಮಾರು ೧,೦೦೦ ನಿರಾಯುಧ ಜನರು ಮತ್ತು ತೀವ್ರವಾಗಿ ಗಾಯಾಳುಗಳಾದವರು ೧,೧೧೫ ಜನರು. ಅದನ್ನು ಪ್ರತಿಭಟಿಸಿ ದಿವಂಗತ ನಾನಕ್ ಸಿಂಗ್ ಎಂಬವರು ಬರೆದಿದ್ದ ಕವನ “ಖೂನಿ ವೈಶಾಖಿ”. ಆಗಿನ ತಲೆಮಾರಿನ ಸುಪ್ರಸಿದ್ಧ ಪಂಜಾಬಿ ಬರಹಗಾರ ನಾನಕ್ ಸಿಂಗ್.
ಗುರುಮುಖಿಯಲ್ಲಿ ಬರೆಯಲಾದ ಆ ದೀರ್ಘ ಕವನವನ್ನು ನಿಷೇಧಿಸಲಾಗಿತ್ತು. ಹಾಗಾಗಿ ದಶಕಗಳ ಕಾಲ ಅದು ನಾಪತ್ತೆಯಾಗಿತ್ತು. ಗಿಯಾನಿ ಜೈಲ್ ಸಿಂಗ್ ಅವರು ದಿ. ಇಂದಿರಾ ಗಾಂಧಿಯ ಕೇಂದ್ರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿದ್ದಾಗ, ಆ ಕವನದ ಪ್ರತಿಯನ್ನು ನಾನಕ್ ಸಿಂಗ್ ಅವರ ಕುಟುಂಬಕ್ಕೆ ಒದಗಿಸಿದ್ದರು.
ಆ ಚಾರಿತ್ರಿಕ ಕವನವನ್ನು ನಾನಕ್ ಸಿಂಗರ ಮೊಮ್ಮಗ ನವದೀಪ್ ಸುರಿ ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ನವದೀಪ್ ಸಿಂಗ್ ಯುನೈಟೆಡ್ ಅರಬ್ ಎಮಿರಾಟಿಸಿನಲ್ಲಿ (ಯು.ಎ.ಇ.) ಭಾರತೀಯ ರಾಯಭಾರಿಯಾಗಿದ್ದಾರೆ.
ಅಜ್ಜ ನಾನಕ್ ಸಿಂಗ್ ವಿಧಿವಶರಾದಾಗ ಮೊಮ್ಮಗ ನವದೀಪ್ ಸುರಿ ೧೨ ವರುಷದ ಬಾಲಕ. “ಜಲಿಯನ್ವಾಲಾ ಬಾಗ್ನ ಕಗ್ಗೊಲೆಗೆ ನನ್ನ ಅಜ್ಜ ಹೇಗೆ ಸಾಕ್ಷಿಯಾಗಿದ್ದರು ಅನ್ನೋದನ್ನು ನಮಗೆ ಹೇಳಿದವರು ನಮ್ಮ ಅಜ್ಜಿ. ಆ ಭೀಕರ ಸಂದರ್ಭದಲ್ಲಿ, ಅಜ್ಜನ ಅತ್ತಿತ್ತ ಹಾರಿ ಬಂದ ಬುಲೆಟುಗಳಿಂದಾಗಿ ಜನರು ತೊಪತೊಪನೆ ಸತ್ತು ಬಿದ್ದರು ಮತ್ತು ಗುಂಡುಗಳ ಸದ್ದಿನಿಂದಾಗಿ ಅಜ್ಜ ಶಾಶ್ವತವಾಗಿ ಕಿವುಡರಾದರು” ಎಂದು ನೆನಪು ಮಾಡಿಕೊಳ್ಳುತ್ತಾರೆ ನವದೀಪ್.
ನಾನಕ್ ಸಿಂಗ್ ಅವರಿಗೆ ಬ್ರಿಟಿಷರು ನಡೆಸಿದ ಕಗ್ಗೊಲೆಯಿಂದ ಎಂತಹ ಆಘಾತವಾಗಿತ್ತು ಎಂದರೆ, ಅವರು ೧೯೭೧ರ ವರೆಗೆ ಬದುಕಿದ್ದರೂ ಆ ಪೈಶಾಚಿಕ ಘಟನೆಯ ಬಗ್ಗೆ ಕುಟುಂಬದವರೊಂದಿಗೆ ಮಾತಾಡಿದ್ದೇ ಇಲ್ಲವೆನ್ನಬಹುದು. ಅವರ ಆಕ್ರೋಶವೆಲ್ಲ ಕುದಿಕುದಿದು ದೀರ್ಘ ಕವನವಾಗಿ ಹೊರಹೊಮ್ಮಿತು. ಬ್ರಿಟಿಷರು ಆ ಕವನವನ್ನು ೧೯೨೩ರಲ್ಲಿ ನಿಷೇಧಿಸಿ, ಅದರ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಂಡರು.
೧೨ ಎಪ್ರಿಲ್ ೨೦೧೯ರಂದು ಪ್ರಕಟವಾಗಿರುವ “ಖೂನಿ ವೈಶಾಖಿ”ಯ ಇಂಗ್ಲಿಷ್ ಅನುವಾದದೊಂದಿಗೆ ಒಂದು ಪ್ರಬಂಧವೂ ಇದೆ. ಅದನ್ನು ಬರೆದವರು ಸಿಡ್ನಿ ರೌಲತ್ ಅವರ ಮರಿಮೊಮ್ಮಗ ಹಾಗೂ ಪತ್ರಕರ್ತ ಜಸ್ಟಿನ್ ರೌಲತ್. ಅಂದ ಹಾಗೆ, ರೌಲತ್ ಕಾಯಿದೆಯನ್ನು ರೂಪಿಸಿದವರೇ ಸಿಡ್ನಿ ರೌಲತ್. ಆ ಕಾಯಿದೆ ಎಲ್ಲ ಪ್ರಜಾ ಸ್ವಾತಂತ್ರ್ಯವನ್ನು ರದ್ದು ಪಡಿಸಿತು ಮಾತ್ರವಲ್ಲ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರಿತು. ಜಲಿಯನ್ವಾಲಾ ಬಾಗ್ ಕಗ್ಗೊಲೆಯಿಂದಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರತಿಭಟನೆಯ ಅಗ್ನಿಸ್ಫೋಟ ಆದದ್ದನ್ನು ತಮ್ಮ ಪ್ರಬಂಧದಲ್ಲಿ ದಾಖಲಿಸಿದ್ದಾರೆ ಜಸ್ಟಿನ್ ರೌಲತ್. ಜೊತೆಗೆ, ಆ ಕಾಯಿದೆಯನ್ನು ರೂಪಿಸಿದ ತನ್ನ ಪಿಜ್ಜನಿಗೆ ಬ್ರಿಟಿಷ್ ಸರಕಾರ “ನೈಟ್” ಪುರಸ್ಕಾರ ನೀಡಿ ಗೌರವಿಸಿದ್ದರ ಬಗ್ಗೆ ತಾನು ದಿಗ್ಮೂಢನಾಗಿದ್ದೇನೆ ಎಂಬುದನ್ನೂ ದಾಖಲಿಸಿದ್ದಾರೆ.
ಬ್ರಿಟಿಷರು ನಡೆಸಿದ ಆ ರಾಕ್ಷಸಿ ಸಮುದಾಯ ಕೊಲೆಗಳ ಬಗ್ಗೆ ಬ್ರಿಟಿಷ್ ಪ್ರಧಾನ ಮಂತ್ರಿ ಥೆರೆಸಾ ಮೇ, ೧೩ ಎಪ್ರಿಲ್ ೨೦೧೯ರಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ “ಸಂತಾಪ” ವ್ಯಕ್ತ ಪಡಿಸಿದರು, ಅಷ್ಟೇ. ಗಮನಿಸಿ: ಒಂದು ನೂರು ವರುಷಗಳ ನಂತರವೂ, ಮಾನವ ಚರಿತ್ರೆಯ ಅತ್ಯಂತ ಅಮಾನುಷ ಕೊಲೆಗಳನ್ನು ನಡೆಸಿದ್ದು ತಪ್ಪು ಎಂದು ತಪ್ಪೊಪ್ಪಿಕೊಳ್ಳಲು ಬ್ರಿಟಿಷ್ ಸರಕಾರ ತಯಾರಿಲ್ಲ!
(ಜಲಿಯನ್ ವಾಲಾ ಬಾಗ್ ಸ್ಮಾರಕದ ಫೋಟೋ ಕೃಪೆ: ಹಿಂದುಸ್ಥಾನ್ ಟೈಮ್ಸ್)