ಜಾಗತಿಕ ಅಯೋಡಿನ್ ಕೊರತೆಯನ್ನು ತಡೆಗಟ್ಟುವ ದಿನ

ಜಾಗತಿಕ ಅಯೋಡಿನ್ ಕೊರತೆಯನ್ನು ತಡೆಗಟ್ಟುವ ದಿನ

ನಾವು ಶಾಲೆಯಲ್ಲಿ ಕಲಿಯುವಾಗ ಪಾಠದಲ್ಲಿ ಒಂದು ಪ್ರಶ್ನೆಯನ್ನಂತೂ ಸದಾ ಕೇಳುತ್ತಿದ್ದರು. ಅಯೋಡಿನ್ ಕೊರತೆಯಿಂದ ಮಾನವನಿಗೆ ಯಾವ ಕಾಯಿಲೆ ಬರುತ್ತದೆ? ಎಂದು. ಗ್ವಾಯಿಟರ್ ಎಂದು ನಾವು ಉತ್ತರ ನೀಡುತ್ತಿದ್ದೆವು. ಆ ಸಮಯ ನಮಗೆ ಇದ್ದ ಜ್ಞಾನ ಅಷ್ಟೇ. ಈ ರೋಗ ಗಂಟಲಲ್ಲಿ ಕಾಣಿಸಿಕೊಳ್ಳುತ್ತದೆ, ನಮ್ಮ ಆಹಾರದಲ್ಲಿ ಉಪ್ಪಿನ ಅಂಶ ಸರಿಯಾದ ಪ್ರಮಾಣದಲ್ಲಿರಬೇಕು ಎಂದೆಲ್ಲಾ ವಿಷಯ ನಮಗೆ ಗೊತ್ತಿರುತ್ತಿತ್ತು. 

ನಾವು ಸಣ್ಣವರಿರುವಾಗ ಉಪ್ಪಿನ ಹರಳುಗಳು (ಕಲ್ಲುಪ್ಪು) ಮಾತ್ರ ಸಿಗುತ್ತಿದ್ದವು. ನಂತರದ ದಿನಗಳಲ್ಲಿ ಉಪ್ಪಿನ ಹುಡಿ ಮಾರುಕಟ್ಟೆಗೆ ಬಂದವು. ಅಯೋಡಿನ್ ಕೊರತೆ ಎಂಬ ಕಾರಣ ನೀಡಿ ‘ಅಯೋಡಿನ್ ಹೊಂದಿದ ಉಪ್ಪು' ಬರತೊಡಗಿದವು. ಕರಾವಳಿ ಭಾಗದ ನಮಗೆ ಈ ಅಯೋಡಿನ್ ಕೊರತೆಯಾಗುವ ಸಾಧ್ಯತೆ ಕಮ್ಮಿ. ಏಕೆಂದರೆ ನಮಗೆ ಸಮುದ್ರ ಹತ್ತಿರದಲ್ಲೇ ಇರುವುದರಿಂದ, ನಾವು ತಿನ್ನುವ ಹಣ್ಣು ತರಕಾರಿಗಳನ್ನು ಬೆಳೆಸುವ ಮಣ್ಣಿನಲ್ಲಿ ಅಯೋಡಿನ್ ಅಂಶ ಧಾರಾಳವಾಗಿರುತ್ತದೆ. ಆದರೆ ವ್ಯಾಪಾರೀ ಮನೋಭಾವದ ಕಂಪೆನಿಗಳು ಹತ್ತಾರು ಬಗೆಯ ಉಪ್ಪನ್ನು ಮಾರುಕಟ್ಟೆಗೆ ತಂದಿವೆ. ಕಡಿಮೆ ಸೋಡಿಯಂ ಇರುವ ಉಪ್ಪು, ಅಯೋಡಿನ್ ಉಪ್ಪು, ಸಮಪ್ರಮಾಣದ ಅಯೋಡಿನ್ ಹೊಂದಿರುವ ‘ಲೈಟ್' ಉಪ್ಪು, ಕಪ್ಪು ಉಪ್ಪು (ಬ್ಲಾಕ್ ಸಾಲ್ಟ್) ಹೀಗೆ ಮಾರುಕಟ್ಟೆ ತುಂಬಾ ಉಪ್ಪಿನದ್ದೇ ಕಾರುಬಾರು. ಕಿಲೋಗೆ ೨-೩ ರೂಪಾಯಿಗೆ ಸಿಗುತ್ತಿದ್ದ ಉಪ್ಪು ಈಗ ೧೫ ರೂ ನಿಂದ ೩೫ ರೂಪಾಯಿ ತನಕದ ಬೆಲೆಯಾಗಿದೆ. 

‘ಉಪ್ಪಿಗಿಂತ ರುಚಿಯಿಲ್ಲ' ಎಂಬ ಮಾತಿನಂತೆ ನಾವು ತಿನ್ನುವ ಯಾವುದೇ ಆಹಾರಕ್ಕೆ ಸಮ ಪ್ರಮಾಣದ ಉಪ್ಪಿನ ಅಗತ್ಯತೆ ಇದೆ. ಇದು ಹೆಚ್ಚಾಗಲೂ ಬಾರದು, ಕಮ್ಮಿಯೂ ಆಗಬಾರದು. ನಾವು ತಿಂದ ಆಹಾರದಲ್ಲಿರುವ ಅಯೋಡಿನ್ ಅಂಶ ಥೈರಾಯಿಡ್ ಗ್ರಂಥಿಯಲ್ಲಿ ಸಂಗ್ರಹವಾಗುತ್ತದೆ. ಈ ಥೈರಾಯಿಡ್ ಗ್ರಂಥಿಗಳು ಹಾರ್ಮೋನ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಹಾರ್ಮೋನ್ ಗಳು ನಮ್ಮ ದೇಹದ ಎಲ್ಲಾ ಜೀವಕೋಶಗಳು, ನರಗಳು ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ನಾವು ತಿನ್ನುವ ಆಹಾರದಲ್ಲಿ ಅಯೋಡಿನ್ ಕೊರತೆಯಾದರೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇದೆ.

ನಮ್ಮ ದೇಶದಲ್ಲಿರುವ ಕರಾವಳಿ ತೀರದ ಜನರಲ್ಲಿ ಅಯೋಡಿನ್ ಕೊರತೆ ಕಂಡು ಬರುವುದಿಲ್ಲ. ಆದರೆ ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ಅಯೋಡಿನ್ ಕೊರತೆ ಇದೆ. ಅಲ್ಲಿನ ಮಣ್ಣಿನಲ್ಲೂ ಅಯೋಡಿನ್ ಅಂಶ ಕಡಿಮೆ ಇರುತ್ತದೆ. ಭಾರತದಲ್ಲಿ ಸುಮಾರು ೧೬೦ ದಶಲಕ್ಷ ಜನರು ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಸುಮಾರು ೫೦ ದಶಲಕ್ಷ ಜನರಿಗೆ ಗ್ವಾಯಿಟರ್ ರೋಗದ ಸಮಸ್ಯೆಯಿದೆ. ವಿಶ್ವ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ವಿಶ್ವದ ೫೪ ದೇಶಗಳಲ್ಲಿ ಅಯೋಡಿನ್ ಸಮಸ್ಯೆ ಇದೆ. 

ಪ್ರತೀ ವರ್ಷ ಅಕ್ಟೋಬರ್ ೨೧ರಂದು ಜಾಗತಿಕ ಅಯೋಡಿನ್ ಕೊರತೆ ತಡೆಗಟ್ಟುವ ದಿನ (Global Iodine Deficiency Disorders Preventions Day) ಎಂದು ಆಚರಣೆ ಮಾಡಲಾಗುತ್ತದೆ. ಈ ದಿನದಂದು ವಿಶ್ವದಾದ್ಯಂತ ಅಯೋಡಿನ್ ಕೊರತೆಯಿಂದಾಗುವ ಪರಿಣಾಮಗಳು, ನಿಯಂತ್ರಣ ಹಾಗೂ ಅವುಗಳ ಪರಿಹಾರಗಳ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ. ದೇಹದಲ್ಲಿ ಅಯೋಡಿನ್ ಕೊರತೆಯುಂಟಾದರೆ ಅವುಗಳ ಪರಿಣಾಮಗಳು ಕೂಡಲೇ ಕಣ್ಣಿಗೆ ಕಾಣಿಸದೇ ಇರಬಹುದು. ಮುಖ್ಯವಾಗಿ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಇದರಿಂದ ಬಹಳ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅಯೋಡಿನ್ ಕೊರತೆಯಿಂದ ಗರ್ಭಪಾತವಾಗುವ ಹಾಗೂ ಮಗು ಜನಿಸುವ ಮುನ್ನವೇ ಸಾಯುವ ಸಾಧ್ಯತೆ ಇದೆ. ಜೀವಂತವಾಗಿ ಹುಟ್ಟಿದ ಮಕ್ಕಳು ಅಷ್ಟೊಂದು ಚುರುಕಾಗಿರದೆ, ಕಲಿಕೆಯಲ್ಲೂ ಹಿಂದಿರುತ್ತದೆ. ಮಕ್ಕಳ ದೃಷ್ಟಿ, ಶ್ರವಣ ಹಾಗೂ ಸಂವಹನ ಕ್ರಿಯೆಗಳೂ ಭಾಧಿತವಾಗುವ ಸಾಧ್ಯತೆ ಇರುತ್ತದೆ. 

ಮೊದಲೇ ಹೇಳಿದಂತೆ ಅಯೋಡಿನ್ ಕೊರತೆಯಿಂದ ಮುಖ್ಯವಾಗಿ ಕಾಡುವ ಕಾಯಿಲೆ ಗ್ವಾಯಿಟರ್. ಇದರಿಂದಾಗಿ ಥೈರಾಯಿಡ್ ಗ್ರಂಥಿಗಳು ಊದಿಕೊಂಡು ಗಾತ್ರದಲ್ಲಿ ದೊಡ್ಡದಾಗುತ್ತವೆ. ನಾವು ಸೇವಿಸುವ ಆಹಾರದಲ್ಲಿರುವ ಅಯೋಡಿನ್ ಅಂಶವನ್ನು ನಿಯಂತ್ರಿಸಿಕೊಂಡರೆ ಈ ಕೊರತೆಯನ್ನು ಸರಿಪಡಿಸಿಕೊಳ್ಳಬಹುದಾಗಿದೆ. ನೀವು ನಿಮ್ಮ ಆಹಾರದಲ್ಲಿ ಕ್ಯಾಬೇಜ್, ಕಾಲಿಫ್ಲವರ್, ನವಿಲುಕೋಸು, ಬ್ರೋಕೋಲಿ ಮುಂತಾದುವುಗಳ ಬಳಕೆಯನ್ನು ನಿಯಂತ್ರಣದಲ್ಲಿಡಬೇಕು. ಈ ತರಕಾರಿಗಳಲ್ಲಿ ತಯೋಸಯನೇಟ್ ಎಂಬ ಅಂಶ ಇರುತ್ತದೆ. ಇದು ಥೈರಾಯಿಡ್ ಗ್ರಂಥಿಯು ಅಯೋಡಿನ್ ಅನ್ನು ಗ್ರಹಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.

ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆ ಇರುವವರು ಉಪ್ಪಿನ ಅಂಶ ಕಮ್ಮಿ ಸೇವಿಸುವುದರಿಂದ ಅಯೋಡಿನ್ ಕೊರತೆ ಕಾಣಬಹುದು. ಹಾಗೆಯೇ ಗರ್ಭಿಣಿಯರಿಗೂ ಅಯೋಡಿನ್ ಅವಶ್ಯಕತೆ ಸಾಕಷ್ಟಿದೆ. ನಮ್ಮ ಗ್ರಾಮೀಣ ಭಾಗದಲ್ಲಿ ಇನ್ನೂ ಅಯೋಡಿನ್ ಹೊಂದಿರುವ ಉಪ್ಪನ್ನು ಸರಿಯಾದ ಪ್ರಮಾಣದಲ್ಲಿ ಬಳಸುತ್ತಿಲ್ಲ. ಭಾರತದ ಶೇಕಡಾ ೮೦ ರಷ್ಟು ಮಂದಿ ಮಾತ್ರ ಅಯೋಡಿನ್ ಹೊಂದಿದ ಉಪ್ಪನ್ನು ಬಳಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಕರಾವಳಿ ಪ್ರದೇಶದ ಜನರಿಗೆ ಅಯೋಡಿನ್ ಪ್ರಮಾಣ ಅಷ್ಟೇನೂ ಅಗತ್ಯವಿರುವುದಿಲ್ಲ. ಅವರ ದೈನಂದಿನ ಆಹಾರದಲ್ಲಿ ನೈಸರ್ಗಿಕವಾಗಿಯೇ ಇದು ಇರುತ್ತದೆ. 

ಅಯೋಡಿನ್ ದೊರೆಯುವ ಪ್ರಮುಖ ಮೂಲ ಉಪ್ಪು. ಅದಲ್ಲದೇ ಸಿಗಡಿ, ಕಡಲ ಮೀನುಗಳು, ಮೊಟ್ಟೆ, ಹಾಲಿನ ಉತ್ಪನ್ನಗಳು, ಗೆಣಸು, ಬಾಳೆಹಣ್ಣುಗಳಲ್ಲಿ ಅಯೋಡಿನ್ ಅಂಶ ಇರುತ್ತದೆ. ಅಯೋಡಿನ್ ಪ್ರಮಾಣ ನಮ್ಮ ದೇಹದಲ್ಲಿ ಅಧಿಕವಾಗಿರುವುದೂ ಅಪಾಯಕಾರಿ. ಆ ಕಾರಣದಿಂದ ಅಯೋಡಿನ್ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು, ಆಹಾರ ಕ್ರಮವನ್ನು ರೂಪಿಸಿಕೊಳ್ಳಬೇಕು.

ಚಿತ್ರ ಕೃಪೆ: ಅಂತರ್ಜಾಲ ತಾಣ