ಜಾಗರ - ಇದು ಪ್ರತಿಸ್ಪಂದನೆಯ ಮೊಳಕೆ

ಜಾಗರ - ಇದು ಪ್ರತಿಸ್ಪಂದನೆಯ ಮೊಳಕೆ

ಪುಸ್ತಕದ ಲೇಖಕ/ಕವಿಯ ಹೆಸರು
ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಮತ್ತು ಶ್ರೀರಾಮ ದಿವಾಣ, ಮೂಡುಬೆಳ್ಳೆ
ಪ್ರಕಾಶಕರು
ಸನ್ಮತಿ ಚಿಂತನ, ಮುಖ್ಯ ರಸ್ತೆ, ಮೂಡುಬೆಳ್ಳೆ, ಕಾಪು, ಉಡುಪಿ -೫೭೬೧೨೦
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೩

ಇಬ್ಬರು ಪತ್ರಕರ್ತರು ಜಂಟಿಯಾಗಿ ಬರೆದ ಬಿಡಿ ಲೇಖನಗಳ ಸಂಗ್ರಹವೇ “ಜಾಗರ- ಇದು ಪ್ರತಿಸ್ಪಂದನೆಯ ಮೊಳಕೆ.” ಅಶ್ವಿನ್ ಲಾರೆನ್ಸ್ ಮತ್ತು ಶ್ರೀರಾಮ ದಿವಾಣ ಎಂಬ ಇಬ್ಬರು ಪತ್ರಕರ್ತರು ಬರೆದ ಮಾಹಿತಿಪೂರ್ಣ ಲೇಖನಗಳ ಸಂಗ್ರಹವೇ ಈ ಕೃತಿ. ಈ ಕೃತಿಗೆ ಯಾವುದೇ ಮುನ್ನುಡಿ, ಬೆನ್ನುಡಿ ಇಲ್ಲ. ನೇರವಾಗಿ ಬರಹಗಳನ್ನೇ ಪ್ರಕಟ ಮಾಡಿದ್ದಾರೆ. 

ಮೊದಲ ಲೇಖನವೇ ‘ಜಾಗರ : ಇದು ಪ್ರತಿಸ್ಪಂದನೆಯ ಮೊಳಕೆ’ ಇದನ್ನು ಬರೆದಿದ್ದಾರೆ ಅಶ್ವಿನ್ ಲಾರೆನ್ಸ್ ಅವರು. ಅವರು ಈ ಲೇಖನದಲ್ಲಿ “ಸಾಹಿತ್ಯ ಎಂಬುದು ಸಾಮಾಜಿಕ ಸಮಸ್ಯೆಗಳಿಗೆ ಬೆಳಕು ಚೆಲ್ಲದ ಪಾಂಡಿತ್ಯ ಪ್ರದರ್ಶನ ಹಾಗೂ ಮನೋರಂಜನೆಗೆ ಮಾತ್ರ ಸೀಮಿತವಾಗಿರದೆ ನಿರಂತರವಾಗಿ ಜನರನ್ನು ತಲುಪಿ ಪ್ರಚಲಿತದ ಅವರ ನೋವುಗಳನ್ನು ಅಭಿವ್ಯಕ್ತಿಸುವಂತಾಗಿರಬೇಕು. ಸಾಹಿತ್ಯ ಸಮ್ಮೇಳನಗಳು ಜನರ ನೈಜ ಬದುಕನ್ನು ಬಿಂಬಿಸುವ ಹಾಗೂ ಆ ಪ್ರದೇಶಗಳ ಬಿಕ್ಕಟ್ಟುಗಳ ಬಗೆಗೆ ಜನರ ಧ್ವನಿಯನ್ನು ಪ್ರತಿನಿಧಿಸುವ ವೇದಿಕೆಗಳಾಗಿ ತನ್ಮೂಲಕ ಆ ದಿಸೆಯಲ್ಲಿ ಸಾಹಿತ್ಯ, ಲೇಖಕರ ಸೃಜನೆಗೆ ಪೂರಕವಾಗಬೇಕು. ಸಮ್ಮೇಳನಗಳಿಗೆ ಬರುವ ಪ್ರತಿನಿಧಿಗಳು, ಸಾಹಿತಿಗಳು ಈ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುವ ‘ಜಾಗರ' ಅವರ ಮನಸ್ಸಿನಲ್ಲಿ ಸಾಮಾಜಿಕ ಪ್ರತಿಸ್ಪಂದನೆಯಂತೆ ಮೊಳಕೆಯೊಡೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಬೇಕು. 

ಸಾಹಿತ್ಯ ಸಮ್ಮೇಳನಗಳು ನುಡಿಜಾತ್ರೆ, ಸಾಂಸ್ಕೃತಿಕ ಸಂಭ್ರಮ. ಇದನ್ನು ಪ್ರತಿಸ್ಪಂದನೆಯ ವೇದಿಕೆಯನ್ನಾಗಿ ರೂಪಿಸಬಹುದೇ? ಎಂಬ ಪ್ರಶ್ನೆ ಆಗ ಸಹಜವಾಗಿಯೇ ಏಳುತ್ತದೆ. ಪ್ರತಿಸ್ಪಂದನೆಯ ವೇದಿಕೆ ಎಂದರೇನು ಎಂಬುದನ್ನು ಮೊದಲು ವ್ಯಾಖ್ಯಾನಿಸಬೇಕಾದ ಅಗತ್ಯವಿದೆ. ಜನಜೀವನವನ್ನು ಹೊರತುಪಡಿಸಿದ ಸಾಹಿತ್ಯ, ಜನರಿಗೆ ಅರ್ಥವಾಗದ ಸಾಹಿತ್ಯ ಜನರಿಂದ ದೂರವಿತ್ತು ಮತ್ತು ಜನರೂ ಅದನ್ನು ದೂರ ಇರಿಸಿದ್ದರು. ಇಂಥ ಕಾಲಘಟ್ಟದಲ್ಲಿ ವಚನ ಸಾಹಿತ್ಯ ಜನಮುಖಿಯಾಗಿ ಮೂಡಿಬಂತು. ಜನರು ಅದನ್ನು ಪ್ರೀತಿಸಿದರು. ಅದು ಜನರ ಸಂಕಟಗಳಿಗೆ ಸ್ಪಂದನೆಯಾಗಿ ನಿಂತಿತು. ಅಸ್ಪೃಶ್ಯತೆಯ ಕರಾಳತೆಗೆ ಒಳಗಾಗಿ ಕಲ್ಪಿತ ನರಕವನ್ನು ಇಲ್ಲಿಯೇ ಅನುಭವಿಸಿದ ದಲಿತರ ರಕ್ಷಣೆಗಾಗಿ ಬಾಬಾಸಾಹೇಬರ ಆದಿಯಾಗಿ ರಚಿತವಾದ ಸಾಹಿತ್ಯ ಇಂದಿಗೂ ಶೋಷಿತ ವರ್ಗದ, ಮಹಿಳೆಯರ, ಅಲ್ಪಸಂಖ್ಯಾತರ ಭರವಸೆಯ ಕಿರಣವಾಗಿದೆ. ಹಾಗಾಗಿ ಸರಕಾರದ ಅನುದಾನದಲ್ಲಿ ಸ್ವಾಯತ್ತತೆಯಿಂದ ನಡೆಯುವ ಸಾಹಿತ್ಯ ಸಮ್ಮೇಳನಗಳು ಈ ನಿಟ್ಟಿನಲ್ಲಿ ಆಲೋಚಿಸಬೇಕಾದದ್ದು ಬಹಳಷ್ಟಿದೆ” ಎಂದು ಅಭಿಪ್ರಾಯ ಪಡುತ್ತಾರೆ.

ಈ ಕೃತಿಯಲ್ಲಿನ ಎರಡನೇ ಲೇಖನ ಅಶ್ವಿನ್ ಲಾರೆನ್ಸ್ ಅವರು ಬರೆದ ಕನ್ನಡ ಶಾಲೆಗಳ ಅವನತಿಯ ಕುರಿತಾದ “ಸುವರ್ಣ ಕರ್ನಾಟಕ ಸಂಭ್ರಮ : ನಲುಗುತ್ತಿರುವ ಶತಮಾನದ ಅನುದಾನಿತ ಕನ್ನಡ ಶಾಲೆಗಳು”. ಈ ಬರಹದಲ್ಲಿ ಕನ್ನಡ ಶಾಲೆಗಳ ದುಸ್ಥಿತಿಯ ಬಗ್ಗೆ ಸವಿವರವಾಗಿ ಬಣ್ಣಿಸಲಾಗಿದೆ. ಮುಂದಿನ ಲೇಖನವಾದ “ಕರಾವಳಿಯಲ್ಲಿ ರೆವೆನ್ಯೂ ಸರ್ವೆ, ತೀವ್ರೆ ಸೆಟಲ್ ಮೆಂಟ್' ಸರ್ವೇ: ಕನ್ನಡ ಅಂಕಿಯಲ್ಲೇ ದಾಖಲೆ ವಿತರಿಸುವ ಏಕೈಕ ಇಲಾಖೆ" ಎಂಬುದು ಅಪರೂಪದ ಬರಹ. ಇದರ ಜೊತೆಗೆ ಕರ್ನಾಟಕ ಸ್ವರ್ಣ ಮುಕುಟಕ್ಕೆ ತುಳು ಸಿನೇಮಾದ ಪ್ರಭಾವಳಿ, ಕಟಪಾಡಿ ಪ್ರಜಾ ಫಿಲಂಸ್ ನ ‘ಕೋಟಿ ಚೆನ್ನಯ' ತುಳು ಚಿತ್ರಕ್ಕೆ ೫೦ ವರ್ಷ, ದೊರಕದ ಕೋವಿಡ್ ಪೂರ್ಣ ಪರಿಹಾರ: ಸರಕಾರದ ಎಷ್ಟು ಪಟ್ಟಿಗಳಲ್ಲಿ ಸಾಯಬೇಕು?, ಸ್ವಾತಂತ್ರ್ಯ ಸೇನಾನಿಗಳ ಸ್ಮರಣೆಯಲ್ಲಿ.. ಮೊದಲಾದ ಅಪರೂಪದ ಮಾಹಿತಿಪೂರ್ಣ ಬರಹಗಳು ಇವೆ. ಇವೆಲ್ಲವನ್ನೂ ಅಶ್ವಿನ್ ಲಾರೆನ್ಸ್ ಅವರು ಬರೆದಿದ್ದಾರೆ.

ನಂತರದ ಭಾಗದಲ್ಲಿ ಶ್ರೀರಾಮ ದಿವಾಣರು ಬರೆದ “ನಾಮಾವೇಷಗೊಂಡ ಐತಿಹಾಸಿಕ ಮಲ್ಲಾರು ಕೋಟೆ ; ಉಳಿದರೂ ಉಳಿಸದ ನಿನ್ನಿಕೆರೆ", ಕುಂಟಲಗುಡ್ಡೆಯ ಐತಿಹಾಸಿಕ ನೆಲೆಗಳ ಸಂರಕ್ಷಣೆ ಅಗತ್ಯ, ಕವಿ ಮಹರ್ಷಿ ‘ವಾಲ್ಮೀಕಿ' ಯಾರು? ಎನ್ನುವ ಬರಹಗಳು ಹೊಸ ಹೊಸ ಚಿಂತನೆಗೆ ದಾರಿ ಮಾಡಿಕೊಡುತ್ತವೆ. ವಾಲ್ಮೀಕಿ ಲೇಖನದ ಕೊನೆಗೆ ‘ಅಧ್ಯಯನ/ಲೇಖನ ಮುಂದುವರೆಯಲಿದೆ' ಎಂದು ಬರೆದಿರುವುದು ಈ ಕೃತಿಯ ಪುಟ್ಟ ಲೋಪ ಎನ್ನಬಹುದು. ಏಕೆಂದರೆ ಇದೊಂದು ಪತ್ರಿಕೆ ಅಲ್ಲ, ಪುಸ್ತಕವಾದುದರಿಂದ ಮುಂದುವರೆಯುವುದು ಎನ್ನುವ ಪದ ಅಷ್ಟೊಂದು ಸೂಕ್ತವಲ್ಲ. ಆದರೂ ಈ ಕೃತಿಯಲ್ಲಿ ಉಭಯ ಲೇಖಕರು ವ್ಯಕ್ತ ಪಡಿಸಿದ ಕಳಕಳಿ ಶ್ಲಾಘನೀಯ. ೫೮ ಪುಟಗಳ ಈ ಪುಟ್ಟ ಪುಸ್ತಕ ಓದಿದ ಬಳಿಕವೂ ಹಲವಾರು ಪ್ರಶ್ನೆಗಳನ್ನು ಉಳಿಸಿ, ಮನಸ್ಸನ್ನು ಕಾಡುತ್ತಾ ಇರುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ.