ಜಾಣ ಪ್ರಕೃತಿ

ಕಳೆದ ಲೇಖನದಲ್ಲಿ ಒಂದು ಮರ ತನ್ನ ಆಹಾರ ತಯಾರಿಸಲು ಎಷ್ಟೊಂದು ಒತ್ತಡವನ್ನನುಭವಿಸುತ್ತವೆ ಎಂದು ನೋಡಿದೆವು. ಸಣ್ಣ ತಂಗಾಳಿ, ಒಂದು ಮೋಡ, ಹಕ್ಕಿ ಬಂದು ಕುಳಿತಾಗ ಉಂಟಾಗುವ ಕದಲಿಕೆ, ತುದಿಯ ಟೊಂಗೆಯ ಮೇಲೆ ಇಣಚಿಯ ಸಣ್ಣ ಓಡಾಟ, ಮರದಿಂದ ಸ್ವಲ್ಪ ಮೇಲ್ಗಡೆ ಹಾರಾಡುತ್ತಿರುವ ಗಿಡುಗನ ಗಾಢ ನೆರಳು, ಸೂರ್ಯನ ಮೇಲೆ ಸರಿದು ಹೋಗುವ ಒಂದು ಮೋಡದ ತುಂಡು, ಜೋರಾಗಿ ಬೀಸುವ ಗಾಳಿ ಹೀಗೆ ಎಲ್ಲವೂ ಮರವೆದುರಿಸುವ ಸವಾಲುಗಳೇ. ಆದ್ದರಿಂದ ಮರ ಈ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಏನು ಮಾಡುತ್ತದೆ? ಅದರಲ್ಲಿಯೂ ವೋಲ್ಟೇಜ್ ಸ್ಟೆಬಿಲೈಸರ್ ಇದೆಯೇ? ಎಂಬ ಪ್ರಶ್ನೆ ಕೇಳಿದ್ದೆ. ಇಂತಹ ಕುತೂಹಲ ಘಟ್ಟದಲ್ಲಿ ಏಕೆ ಲೇಖನವನ್ನು ಮುಗಿಸುತ್ತೀರಿ ಎಂದು ಶ್ರೀಮತಿ ವಿಜಯಾ ಟೀಚರ್ ಗದರಿದ್ದಾರೆ. ನೀವೆಲ್ಲಾ ಉತ್ತರ ಏನಿರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದೀರಿ. ಶ್ರೀ ರಮೇಶ ಬಾಯಾರು ಸರ್ ಕೂಡಾ ಹಾಗೆ ಹೇಳಿದ್ದಾರೆ. ಕುತೂಹಲಕ್ಕಾಗಿ ಎಲೆಗಳೇಕೆ ಹಸಿರು ಎಂಬ ಪ್ರಶ್ನೆಯನ್ನು ಕೈಗೆತ್ತಿಕೊಂಡದ್ದು ನಾನು. ಆದರೆ ವಿಷಯ ಇಷ್ಟೊಂದು ಸುದೀರ್ಘವಾಗಬಹುದು ಎಂಬ ಕಲ್ಪನೆಯೇ ನನಗೆ ಇರಲಿಲ್ಲ. ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಹೀಗೆ ಕಲಸುಲೋಗರ ಆಗಿಬಿಟ್ಟಿದೆ ವಿಷಯ. ವಿಷಯವನ್ನು ಹುಡುಕಿ ಹುಡುಕಿ ಸೋತು ಹೋಗಿದ್ದೇನೆ. ಆದರೆ ನಿಮ್ಮ ನಿರೀಕ್ಷೆಗಳನ್ನು ತಣ್ಣಗಾಗಿಸಬೇಕಲ್ಲ. ಆದ್ದರಿಂದ ವಿಷಯಗಳ ನಿರಂತರ ಹುಡುಕಾಟ ಖುಷಿ ಕೊಡುತ್ತದೆ.
ವಿಜ್ಞಾನಿಗಳು ಕ್ಲೋರೋಪ್ಲಾಸ್ಟ್ ನ ಪ್ರತಿಕೃತಿಗಾಗಿ ನ್ಯಾನೋ ದ್ಯುತಿ ವಿದ್ಯುತ್ ಫಲಕಗಳು, ನ್ಯಾನೋ ತಂತಿಗಳೊಂದಿಗೆ ತಮ್ಮ ಪ್ರಯೋಗವನ್ನು ಆರಂಭಿಸಿದರು. ಅವರಿಗೆ ಕಂಡು ಬಂದ ವಿಷಯವೆಂದರೆ ಸೂರ್ಯನ ವರ್ಣಪಟಲದ ನೀಲಿ ಹಸಿರು ವ್ಯಾಪ್ತಿಯಲ್ಲಿ ಗರಿಷ್ಠ ವಿದ್ಯುತ್ ಪ್ರವಾಹ ಉತ್ಪತ್ತಿಯಾಗುತ್ತದೆ ಎನ್ನುವುದು. ಆದರೆ ಸಸ್ಯಗಳು ನೀಲಿಯನ್ನೇನೋ ಬಳಸುತ್ತವೆ ಆದರೆ ಹಸಿರನ್ನಲ್ಲ ಎಂಬುದು ಅವರಿಗೆ ಅಚ್ಚರಿಯನ್ನುಂಟು ಮಾಡಿತು. ಈ ಬಿಸಿಲಿನಲ್ಲಿನ ಹಸಿರು ವರ್ಣ ಮರೆಯಾದಾಗ ವೋಲ್ಟೇಜ್ ಒಮ್ಮೆಲೇ ಪಾತಾಳ ತಲುಪಿ ಬಿಡುತ್ತಿತ್ತು. ಆದರೆ ನೀಲಿ, ಹಸಿರು, ಕಿತ್ತಳೆ ಮತ್ತು ಹಳದಿ ವಿಷಯದಲ್ಲಿ ಈ ಕುಸಿತ ಗಣನೀಯವಾಗಿರಲಿಲ್ಲ. ಆದ್ದರಿಂದ ಸಸ್ಯಗಳಿಗೆ ಆಯ್ಕೆ ಲಭ್ಯವಾಯಿತು. ಮೊದಲನೆಯದು ಹೆಚ್ಚು ಶಕ್ತಿ ನೀಡುವ ಹಸಿರು ತರಂಗಾಂತರವನ್ನು ಬಳಸಿಕೊಳ್ಳುವುದು ಮತ್ತು ವೋಲ್ಟೇಜ್ ಸ್ಟೆಬಿಲೈಸರ್ ಬಳಸುವುದು. ಎರಡನೆಯದು ಹಸಿರು ತರಂಗಾಂತರವನ್ನು ತ್ಯಾಗ ಮಾಡಿ ಉಳಿದ ತರಂಗಾಂತರಗಳನ್ನು ಬಳಸಿಕೊಳ್ಳುವುದು ಮತ್ತು ವೋಲ್ಟೇಜ್ ಸ್ಟೆಬಿಲೈಸರ್ ಸಂಶೋಧನೆಯಿಂದ ಮುಕ್ತಿ ಪಡೆಯುವುದು. ಆದರೆ ಮಾನವ ನಡೆಸುವ ಸಂಶೋಧನೆಗಳು ಅಥವಾ ಸಂಶೋಧನೆ ಮತ್ತು ಅಭಿವೃದ್ಧಿ (Research and Development R&D) ನಡೆಯುವುದು ಪ್ರಯೋಗಶಾಲೆಯಲ್ಲಿ. ಆದರೆ ಈಗ ಈ R&D ಯನ್ನು ರೂಪಿಸಬೇಕಾದದ್ದು ಪ್ರಕೃತಿ. ಅದಕ್ಕೆ ಪ್ರಯೋಗಶಾಲೆ ಎಲ್ಲಿದೆ? ಪ್ರಕೃತಿಯೇ ಪ್ರಯೋಗಶಾಲೆ. ಮತ್ತೆ R&D ಯಾರು ಮಾಡ್ತಾರೆ? ಅದನ್ನು ಸಮಯ ಎಂದು ಕರೆಯುತ್ತೇವೆ. ಈ ಪ್ರಕ್ರಿಯೆಯನ್ನು ಏನೆಂದು ಕರೆಯುತ್ತೇವೆ? ಈ R&D ಯನ್ನು ನಾನು ಜೀವ ವಿಕಾಸ (Evolution) ಅಂತ ಕರೆಯುವುದು. ಇದಕ್ಕೆ ತಗಲುವ ಸಮಯವೆಷ್ಟು? ಮಿಲಿಯಾಂತರ ವರ್ಷಗಳು. ಹಾಗೆದರೆ ಇದು ಎಲ್ಲರಿಗೂ ಏಕ ಪ್ರಕಾರವಾಗಿ ಅನ್ವಯವಾಗುತ್ತದೆಯೇ? ಇಲ್ಲ. ಯಾರಿಗೆ ಅಗತ್ಯವಿದೆಯೋ ಅವರಿಗೆ ಮಾತ್ರ. ಜಿರಾಫೆಯ ಕತ್ತಿನ ಹಾಗೆ. ಮಾನವನಿಗೂ ಜಿರಾಫೆಯ ಕತ್ತನ್ನು ಕೊಟ್ಟರೆ ಮನುಷ್ಯ ಮನೆಯ ಒಳಗೆ ಹೋಗುವುದಾದರೂ ಹೇಗೆ ಅಲ್ಲವೇ. ಆದ್ದರಿಂದ ಮಾನವನಿಗೆ ಉದ್ದನೆಯ ಕತ್ತಿಲ್ಲ. ಅಂದರೆ ಜೀವ ವಿಕಾಸದಲ್ಲಿ ಜಿರಾಫೆಗೆ ಮಾತ್ರ ಉದ್ದ ಕತ್ತು ಉಳಿದವರಿಗೆ ಇಲ್ಲ. ಹಾಗೆಯೇ ಹಸಿರು ಸಸ್ಯಗಳು, ಪಾಚಿಗಳು ಮತ್ತು ಸಯಾನೋ ಬ್ಯಾಕ್ಟೀರಿಯಾಗಳಿಗೆ ಹಸಿರು ಬಣ್ಣ ಕೊಟ್ಟು ಅವುಗಳು ನೀಲಿ ಮತ್ತು ಕೆಂಪು ಬಣ್ಣಗಳನ್ನು ಬಳಸುವಂತೆ ಮಾಡಿದ ಈ ವಿಕಾಸದ ಸರಪಣಿ ಹಸಿರು ಬಣ್ಣವನ್ನು ಬಳಸುವ ಒಂದು ಕೊಂಡಿಯನ್ನು (missing link) ಬಿಟ್ಟಿರಬೇಕಲ್ಲ. ಹೌದು. ಉಳಿದ ತರಂಗಾಂತರಗಳು ಲಭ್ಯವಿಲ್ಲದ ವಾತಾವರಣದಲ್ಲಿ ಬದುಕುವ ಕೆಲವೊಂದು ಬ್ಯಾಕ್ಟೀರಿಯಾಗಳು ಹಸಿರು ಬೆಳಕನ್ನು ಬಳಸಿಕೊಳ್ಳುತ್ತವೆ. ಇವುಗಳಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಕ್ಲೋರೊಫಿಲ್ (bacterial chlorophyll) ಹಸಿರು ಬಣ್ಣವನ್ನೇ ಬಳಸುತ್ತವೆ. ಅಮ್ಮ ಚಿತ್ರಾನ್ನ ಮಾಡುವಾಗ ನಿಂಬೆಹಣ್ಣು ಸಿಗದೇ ಇದ್ದರೆ ಹುಣಿಸೆ ಹಣ್ಣು ಬಳಸುತ್ತಾರಲ್ಲ ಹಾಗೆ ಬೇರೆ ಆಯ್ಕೆಯಿಲ್ಲದಿದ್ದಲ್ಲಿ ಹಸಿರು ಬಣ್ಣವನ್ನು ಬಳಸುತ್ತವೆ.
ಈ ಪ್ರಕೃತಿ ಎಂತಹ ಜಾಣ ನೋಡಿ. ವೋಲ್ಟೇಜ್ ಸ್ಟೆಬಿಲೈಸರ್ ಸಂಶೋಧಿಸುವ ಬದಲಾಗಿ ಆ ಬಣ್ಣವನ್ನೇ ಬಳಸದಿರಲು ನಿಶ್ಚಯಿಸಿದೆ. ಹಾಗಾದರೆ ಸಸ್ಯಗಳು ಹಸಿರು ಬಣ್ಣವನ್ನು ಬಳಸುವುದೇ ಇಲ್ಲವೇ? ಬಳಸುತ್ತವೆ. ಏಕೆಂದರೆ ಬುದ್ದಿವಂತರು ಇಂತಹ ಶಕ್ತಿಯ ಖಜಾನೆಯನ್ನು ಬಿಟ್ಟುಕೊಡುತ್ತಾರೆ? ಸಸ್ಯಗಳು ಅಲ್ಪ ಪ್ರಮಾಣದ ಹಸಿರು ಬೆಳಕನ್ನು ಬಳಸಿಕೊಳ್ಳುತ್ತವೆ. ಇದು ದ್ಯುತಿ ಸಂಶ್ಲೇಷಣೆ ಮತ್ತು ಸಸ್ಯಗಳ ಬೆಳವಣಿಗೆಗೆ ಬೇಕು. ಉಳಿದ ಭಾಗವನ್ನು ಪ್ರತಿಫಲಿಸುವ ಮೂಲಕ ಹಸಿರು ಸಸ್ಯಗಳು ಎಂದು ಕರೆಸಿಕೊಳ್ಳುತ್ತವೆ. ಕಳೆದ ವಾರದ ಲೇಖನ ಓದಿ ಎಲ್ಲ ಸಸ್ಯಗಳೊಂದಿಗೆ ಚೆನ್ನಾಗಿ ವ್ಯಾಪಾರ ಮಾಡಿ ಲಾಭ ಗಳಿಸುವ ಎಂದು ಬಹಳ ಸಂಖ್ಯೆಯ ವೋಲ್ಟೇಜ್ ಸ್ಟೆಬಿಲೈಸರ್ ಗಳನ್ನು ಖರೀದಿಸಿದ್ದೀರಾ? Sorry…
ಹಾಗಾದರೆ ಸಸ್ಯಗಳು ಎಲ್ಲಾ ಹಸಿರು ಬೆಳಕನ್ನು ಹೀರಿಕೊಂಡರೆ ಏನಾಗುತ್ತದೆ? ಮುಂದಿನ ವಾರ...
-ದಿವಾಕರ ಶೆಟ್ಟಿ ಎಚ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ