ಜಾತಸ್ಯ ಮರಣಂ ದೃವಂ-ಮರಣದ ಸುತ್ತಮುತ್ತ (ಬಾಗ-2)
ಮರಣವೆಂದರೆ ಯಾರಿಗೂ ಇಷ್ಟವಿಲ್ಲದ ಯಾರು ಸ್ವಾಗತಿಸದ ಕ್ರಿಯೆ. ಆದರು ಅನಿವಾರ್ಯವಾದಗ ನಾವು ಸಹಜ ಸುಲುಭ ಮರಣವನ್ನೆ ಬಯಸುತ್ತೇವೆ. ವಸ್ತುಸ್ಥಿಥಿ ಹಾಗಿಲ್ಲ ಸಾವು ಎಂಬುದು ನಾವು ಇಷ್ಟಪಡುವಂತೆ ಬರುವ ಅತಿಥಿಯಲ್ಲ. ಅದರ ಇನ್ನೊಂದು ಮುಖ ಕರಾಳ, ರೌದ್ರ ಹಾಗು ಕ್ರೂರ. ನಮ್ಮಗೆ ಅರಿವಿಲ್ಲದೆ ಬಂದು ಗಪ್ಪನೆ ತನ್ನ ಬಲೆ ಬೀಸಿ ಸೆಳೆದು ಹೋಗಿಬಿಡುವ ಅದರ ಸ್ವಬಾವ ಒಮ್ಮೆ ರೌದ್ರ ಎನಿಸಿದರು ಕೆಲವೊಮ್ಮೆ ತನ್ನ ಪಾಶವನ್ನು ಬೀಸಿ ಕೆಳಗೆ ಕೆಡವಿ ತನ್ನ ಕಾಲುಗಳಿಂದ ಕುತ್ತಿಗೆಯನ್ನು ಅದುಮುತ್ತಿರುವ ಅ ಜವರಾಯ "ಸಾಕುಮಾಡು ನಿನ್ನ ಅಟಾಟೋಪವನ್ನು ನಾನು ಶರಣಾನಾಗಿದ್ದೇನೆ ದಯಮಾಡಿ ತೆಗೆದುಬಿಡು ಈ ಪ್ರಾಣವನ್ನು" ಎಂದು ಗೋಗರೆದರು ಸಾವು ದಯಪಾಲಿಸದೆ ತನ್ನ ಕ್ರೌರ್ಯವನ್ನು ಮುಂದುವರೆಸುತ್ತಾನೆ.
ನಮ್ಮ ಜೊತೆಯಲ್ಲಿಯೆ ಕೆಲಸ ಮಾಡುವ ಕಲೀಗ್ ಒಬ್ಬಾಕೆಯ ತಾಯಿ, ತಮ್ಮ ಜೀವನದ ವಸಂತಕಾಲದಲ್ಲಿ ಉತ್ತಮ ಬದುಕನ್ನು ಕಂಡವರು, ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದವರು, ಆದರೆ ಜೀವನದ ಕಡೆಯ ದಿನಗಳು? ಇರುವ ಒಬ್ಬ ಮಗ ವಿದೇಶದಲ್ಲಿ,ಬೇಕೆಂದಾಗ ಬರುವಂತಿಲ್ಲ. ಮಗಳ ಜೊತೆ ವಾಸ,ಕಳೆದ ಒಂದು ವರ್ಷಕ್ಕೂ ಮೀರಿದ ದಿನಗಳಲ್ಲಿ ಪದೇ ಪದೇ ಅಸ್ಪತ್ರೆಯ ವಾಸ. ಕಡೆಗೆ ಅಕೆಯೆ ಹೇಳಿಬಿಟ್ಟರು ನಾನಿನ್ನು ಅಸ್ಪತ್ರೆಗೆ ಬರಲಾರೆ ನನ್ನನ್ನು ಅಲ್ಲಿಗೆ ಸೇರಿಸದೆ ಮನೆಯಲ್ಲಿಯೆ ಪ್ರಾಣಬಿಡಲು ಬಿಡಿ ಎಂದು.ವೈದ್ಯರದ್ದು ಅದೇ ಅಭಿಪ್ರಾಯ ಮತ್ತೆ ಕರೆತರಬೇಡೀ ಅಂತ. ಕಡೆಗೆ ಸೇವಾ ಸಂಸ್ಥೆಯೊಂದರ ಸಹಾಯ ಪಡೆದು ಮನೆಯಲ್ಲಿಯೆ ಅವರ ಸೇವೆ ನಡೆಸಿದರು ಮಗಳು. ಕೊನೆಗೆ ಅಹಾರಸೇವೆಯನ್ನು ನಿಲ್ಲಿಸಿದ ಅಕೆ ಬಲವಂತವಾಗಿ ಕಣ್ಣು ಬಿಟ್ಟಾಗ ಒಂದೇ ಮಾತು 'ನಾನಿನ್ನು ಬದುಕೆ ಇದ್ದೀನ?'. ಸಾವು ಬರಲಿ ಅಂತ ಅಕೆಯ ಅನುಕ್ಷಣದ ಪ್ರಾರ್ಥನೆ ಕಡೆಗೂ ಆ ದೈವಕ್ಕೆ ಮುಟ್ಟಿದ್ದು ಮೊನ್ನಿನ ಅಕ್ಟೋಬರ್ 9 ರಂದು.ಕಡೆಗೂ ಅವರ ಮಗ ಸಾವಿನ ಸಮಯಕ್ಕೆ ಬರಲಾಗೆಲೇ ಇಲ್ಲ .
ಅದೇ ಅಕ್ಟೋಬರ 9 ರಂದು ಕಂಡ ಇನ್ನೊಂದು ಸಾವು ನಮ್ಮ ದೊಡ್ಡಮ್ಮನವರ ಮಗನದು ಮೂರುವಾರಗಳ ಹಿಂದೆ ಇದ್ದಕಿದ್ದಂತೆ ಪ್ರಜ್ಙಾಹೀನ ಸ್ಥಿಥಿಯಲ್ಲಿ ಸಿರಿಯಸ್ ಅಂತ ಹಿರಿಯೂರಿನಿಂದ ತಂದು ಬೆಂಗಳೂರಿನ ದೊಡ್ಡ ಅಸ್ಪತ್ರೆಗೆ ಸೇರಿಸಿದರು. ಹಿರಿಯೂರಿನಿಂದ ಬಂದಾಗ ಡಾಕ್ಟರ್ ಗುರುತಿಸಿದ್ದು ಮೆದುಳಿನ ಜ್ವರ ಅಂತ ನಂತರ ಅದಕ್ಕೆ ದಿನಕ್ಕೊಂದು ಹೆಸರಾಯಿತು. ಆದರೆ ರೋಗಿಯ ಸ್ಥಿಥಿ ಮಾತ್ರ ಯಥಾಪ್ರಕಾರ. ನಾವು ಚಿಕ್ಕವಯಸ್ಸಿನಿಂದ ನೋಡಿದ ನಮ್ಮೆಲರೊಡನೆ ಒಡನಾಡಿದ ಅವನು ಯಾವ ಪ್ರತಿಕ್ರಿಯೆ ಇಲ್ಲದೆ ಕೇವಲ ಉಸಿರಾಟಾವೊಂದೆ ಜೀವನವೆಂಬಂತೆ ಬಾಯಿ ಮೂಗಿಗೆಲ್ಲ ಕೊಳವೆಗಳನ್ನು ದರಿಸಿಕೊಂಡು ICU ನಲ್ಲಿ ಮಲಗಿದ್ದ. ಒಂದಡೆ ಏರುತ್ತಿರುವ ಅಸ್ಪತ್ರೆಯ ಬಿಲ್ಲಿನ ಯೋಚನೆ, ಮತ್ತೊಂದಡೆ ಅವನನ್ನು ಈ ಅಸಹಾಯ ಸ್ಥಿಥಿಯಲ್ಲಿ ಕಾಣುವ ಸಂಕಟ ಅವನ ಮನೆ ಹಾಗು ಬಂದು ಗಳಿಗೆ.ಕಡೆಗೆ ಡಾಕ್ಟರಾದರೋ ಎಲ್ಲ ಬರವಸೆಗಳನ್ನು ಮೀರಿ ಕೈ ಚೆಲ್ಲಿ ಬಿಟ್ಟರು ನೀವು ಒಪ್ಪಿದರೆ ವಾಪಸ್ಸು ಕರೆದುಕೊಂಡು ಹೋಗಿ ಎಂಬ ಮಾತು. ಮನೆಯವರಿಗೆ ಯಾವ ನಿರ್ದಾರಕ್ಕು ಬರಲಾರದ ಧರ್ಮಸಂಕಟ. 'ಅವನ ಸಂಕಟ ನೋಡಲಾರೆವು ಬಾಯಿ ಮೂಗಿಗೆ ಹಾಕಿರುವ ಆ ಕೊಳವೆಗಳನೆಲ್ಲ ತೆಗೆದುಬಿಡಿ' ಎಂಬ ಮನದ ಮಾತನ್ನು ಬಾಯಲ್ಲಿ ಆಡಲಾರದ ಅಸಾಹಯಕತೆ.ಕಡೇವರೆಗೂ ಹೋರಾಡುವ ಡಾಕ್ಟರಗಳ ಛಲ. ಅವನು ಬದುಕಿರುವಾಗಲೆ ಮನೆಯಲ್ಲಿ ಅಡರಿದ ಸೂತಕದ ಛಾಯೆಯ ದಟ್ಟವಾಸನೆ. ಮೃತ್ಯು ದೇವತೆ ನೀನಿಷ್ಟು ಕ್ರೂರಿಯಾ? ಕಡೆಗೂ ಸಾವು ಒಲಿದಾಗ ಎಲ್ಲರ ನಿಟ್ಟುಸಿರು.
ಹಾಗಾದರೆ ಸಾವು ನಿಜವಾಗಿ ಮಧುರವೋ ಕ್ರೂರಿಯೋ? ನಮ್ಮ ಪಾಲಿಗೆ ಹೇಗಿರಬಹುದು? ಈ ಪ್ರಶ್ನೆಯೆ ಅಪ್ರಸ್ತುತ. ಸಾವಿಗೆ ಯಾರು ಹೆದರುವ ಕಾರಣವೇ ಇಲ್ಲ.ಸಾವಿಗೆ ಹೆದರದ ಬಾಲಕ ನಚಿಕೇತ ಯಮನನ್ನು ದೈರ್ಯವಾಗಿ ಎದುರಿಸಿದ, ಅವನ ಹಾಗು ಯಮನ ನಡುವಿನ ಚರ್ಚೆಯೇ ’ಕಠೋಪನಿಷತ್" ಎಂಬ ಉಪನಿಷತ್ತಿಗೆ ನಾಂದಿಯಾಯಿತು. ಇನ್ನು ಮಾರ್ಕಂಡೇಯನ ಕಥೆ ಕೇಳದವರಾರು ಮರಣದೇವತೆಗೆ ಮರಣದ ಭಯ ತಂದ ಬಾಲಕ. ಸಾವಿನ ಸ್ವರೂಪ ತೀಳಿಯಬೇಕೆ ವಿನಃ ಅದೂ ಸದಾ ನಮ್ಮೆ ಬೆನ್ನ ಹಿಂದಿರುವುದು ನಿಜವೇ ಆದರೂ ನಾವದನ್ನು ನಿರ್ಲಕ್ಷ ಮಾಡಲೇ ಬೇಕು. ನಮ್ಮ ಆಸಕ್ತಿ ನಮ್ಮ ಬದುಕಿನ ಬಗೆಗೆ ಇರಬೇಕು ನಮ್ಮ ಸಮಾಜವನ್ನು ಕಟ್ಟುವ ಕಡೆಗೆ ಇರಬೇಕು. ನಮ್ಮ ಸರದಿ ಬಂದಾಗ ನಿರ್ಲಿಪ್ತರಾಗಿ ಅದನ್ನು ಸ್ವಾಗತಿಸುವುದು ಅನಿವಾರ್ಯ ಅದು ಯಾವ ರೂಪದಲ್ಲಿಯೆ ಬರಲಿ.
ಎಲ್ಲೋ ಎಂದೋ ಕೇಳಿದ ಹಾಡಿನ ಗುನುಗು.. ಆದೂ ಸಾಹಿತ್ಯ ನೆನಪಿಲ್ಲ
"ಜವರಾಯ ಬಂದರೆ ಬರಿಕೈಲಿ ಬರಲಿಲ್ಲ ... ಕುಡಗೋಲು ಕೊಡಲಿ ಕೈಯಲ್ಲಿ. ಹಿಡಿದು......."
-------ಮುಗಿಯಿತು----