ಜಾತಸ್ಯ ಮರಣಂ ದೃವಂ-ಮರಣದ ಸುತ್ತಮುತ್ತ (೧)

ಜಾತಸ್ಯ ಮರಣಂ ದೃವಂ-ಮರಣದ ಸುತ್ತಮುತ್ತ (೧)

ಬರಹ

"ಜಾತಸ್ಯ ಮರಣಂ ದೃವಂ" ಹುಟ್ಟಿದವನಿಗೆ ಸಾವು ನಿಶ್ಚಿತ ಮರಣದ ಬಗ್ಗೆ ನಮ್ಮ ವೇದ ಪುರಾಣಗಳು ಹೀಗೆ ಸಾರುತ್ತವೆ. "ಮಾನವನಿಗೆ ಕಡೆಯವರೆಗು ಉಳಿಯುವ ಮಿತ್ರನಾರು?" ಮಹಾಭಾರತದಲ್ಲಿ ಧರ್ಮರಾಯನಿಗೆ ಯಕ್ಷನಿಂದ ಪ್ರಶ್ನೆ. ಮನುಷ್ಯನಿಗೆ ಹುಟ್ಟಿನಿಂದ ಕಡೆಯವರೆಗೂ ಜೊತೆಯಲ್ಲಿಯೆ ಉಳಿಯುವ ಗೆಳೆಯನೆಂದರೆ ಸಾವು ಎಂದು ಧರ್ಮರಾಯನ ಉತ್ತರ. ಪುರಾಣ ಕಾಲದಿಂದಲು ಸಾವಿನ ಬಗ್ಗೆ ಮನುಷ್ಯನ ಚಿಂತನೆ ತರ್ಕಗಳು ನಡೆದೆ ಇದೆ.ಸಾವನು ತಡೆಯಲು ಮುಂದೆ ಹಾಕಲು ಗೆಲ್ಲಲು ಮಾನವ ಜನಾಂಗ ಸತತ ಪ್ರಯತ್ನಪಡುತ್ತಿದೆ ಅಂತಹ ಎಷ್ಟೋ ಪ್ರಸಂಗಗಳ ಉದಾಹರಣೆ ನಮ್ಮ ಇತಿಹಾಸದಲ್ಲಿದೆ. ಇಂತಹ ಸಾವನ್ನು ಎದುರಿಸುವಾಗ ಮನುಷ್ಯ ಏಕಾಂಗಿಯೆ.ಸದಾ ನಮ್ಮ ಬೆನ್ನ ಹಿಂದೆ ತಿರುಗುವ ಮೃತ್ಯು ನಮ್ಮ ಕೈ ಅಳತೆಯಲ್ಲಿಲ್ಲ. ನಾವು ಕರೆದಾಗ ಬರುವ ಅತಿಥಿಯು ಅಲ್ಲ. ಸಾವೆಂದರೆ ಬರಿ ಭಯ ಸಾವಿನ ನಂತರ ಮುಂದೆ ಏನೊ ಎಂಬ ಆತಂಕ. ಅಷ್ಟೆ ಅಲ್ಲ ಸಾವಿನ ನಂತರದ ಸ್ವರ್ಗ ನರಕಗಳ ಕಲ್ಪಿತ ಹೆದರಿಕೆ. ಆದರೂ ಇಂತಹ ಸಾವಿನ ಆಗಮನ ಕೆಲವೊಮ್ಮೆ ಅನೀರಿಕ್ಷತ ಹಾಗು ಮಧುರ. ಸಾವನ್ನು ಮಧುರ ಎಂದು ಕರೆದಾಗ ಅಶ್ಚರ್ಯವೆನಿಸುವುದೆ? ಅಂತಹ ಎರಡು ಘಟನೆಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.


ಅದು ತೊಂಬತ್ತರ ದಶಕದ ಮಾತು, ನಾನಾಗ ಬೆಂಗಳೂರಿನ ಜಯನಗರದ ಮನೆಯೊಂದರಲ್ಲಿ ಬಾಡಿಗೆಗೆ ವಾಸವಾಗಿದ್ದೆ. ಮನೆಯ ಒಡೆಯರು ಶ್ರೀ.ಸುಬ್ಬರಾಮಯ್ಯ ಎಂಬ ವಯಸ್ಕರು ನನ್ನನ್ನು ಚಿಕ್ಕ ಹುಡುಗನಿಂದ ನೋಡಿದವರು. ಮನೆಯ ಹಿಂದಿನ ಔಟ್ ಹೌಸ್ ನಲ್ಲಿ ನಾನಿದ್ದೆ. ಮದುವೆಯಾದ ಹೊಸದು, ದಿನವೂ ಸಂಜೆ ಪತ್ನಿಯ ಜೊತೆ ಜಯನಗರದ ನಂದಾ ಟಾಕೀಸಿನಿಂದ ಉದ್ದಕ್ಕೆ ಇದ್ದ ಪಾರ್ಕ್ ನಲ್ಲಿ ವಾಕಿಂಗೆಗೆ ಹೋಗುತ್ತಿದ್ದೆ (ಈಗ ಮೆಟ್ರೋ ಕಾಮಗಾರಿಯಿಂದಾಗಿ ಆ ಪಾರ್ಕನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ).


ಆದಿನವೂ ಅಷ್ಟೆ ಸಂಜೆ ಆರರ ಸಮಯ,ವಾಯುವಿಹಾರಕ್ಕಾಗಿ ಹೊರಟೆ,ಎರಡು ಮನೆಗೂ ಗೇಟ್ ಒಂದೇ ಹಾಗಾಗಿ ಅವರ ಮನೆಯ ಮುಂದಿನಿಂದ ಬರುತ್ತಿರುವಾಗ ಅವರು ನನ್ನನ್ನು ಕಿಟಕಿಯಿಂದಲೇ ಕೂಗಿದರು " ಪಾರ್ಥ ವಾಕಿಂಗ್ ಹೊರಟೆಯಾ?" ನಾನು ಹೌದೆಂದು ಉತ್ತರಿಸಿದೆ. ಅವರು ಬಾರಪ್ಪ ನನ್ನ ಸೊಸೆ ಟೀ ಮಾಡ್ತಿದ್ದಾಳೆ ಕುಡಿದುಹೋಗು ಅಂದರು. ನಾನು "ನನ್ನದು ಆಯಿತು ನೀವು ಕುಡಿಯಿರಿ ಹತ್ತು ನಿಮಿಷ ಪುನಃ ಬರುತ್ತೇನೆ" ಎಂದೆ. ಅವರು ನಗುತ್ತ "ನಿನ್ನನ್ನು ಅಮ್ಮನವರು ಬಿಡಬೇಕಲ್ಲಪ್ಪ ಸರೀ ಹೋಗಿಬಾ" ಎಂದರು.ನಾನು ನಗುತ್ತ ಹೊರಟೆ ಆದಿನವೇಕೋ ಹೆಚ್ಚು ನಡೆಯಲಾಗಲಿಲ್ಲ. ಬರೀ ಇಪ್ಪತ್ತು ನಿಮಿಷದಲ್ಲಿ ಹಿಂದೆ ಬಂದೆವು.ದೂರದಿಂದಲೆ ಗಮನಿಸಿದೆ ಮನೆಯ ಮುಂದೆ ಐವತ್ತಕ್ಕೂ ಹೆಚ್ಚು ಜನ ಸೇರಿದ್ದಾರೆ. ಏಕೆ ಎಂದು ಆಶ್ಚರ್ಯ, ಗೇಟ್ ಹತ್ತಿರವೆ ನಿಂತಿದ್ದರು ಸುಬ್ಬರಾಮಯ್ಯನವರ ಮಗ, ಏನು ಎಂದು ವಿಚಾರಿಸಿದೆ , " ಭಾವ ಹೋಗಿಬಿಟ್ಟರು" ಅಂದರು. ನನಗೆ ಅಘಾತ ಹೇಗೆ ಸಾದ್ಯ!! ತಕ್ಷಣ ಅವರ ಮನೆಯೊಳಗೆ ಓಡಿದೆ , ನಿಜ ನಂಬಲೇ ಆಗುತ್ತಿಲ್ಲ , ಕೇವಲ ಅರ್ದ ಗಂಟೆಯಹಿಂದೆ ನನ್ನನ್ನು ಮಾತನಾಡಿಸಿ ಕಳಿಸಿದ ವ್ಯಕ್ತಿ ಬದುಕಿಲ್ಲ. ಅವರ ಸೊಸೆ ಹೇಳಿದಿಷ್ಟು, ಟೀ ಕೊಟ್ಟನಂತರ ಕಪ್ಪನ್ನು ಕೈಯಲ್ಲಿ ಹಿಡಿದು ಟಿ.ವಿ. ನೋಡುತ್ತ ಸೋಫಮೇಲೆ ಕುಳಿತರು ಒಂದುಸಾರಿ ಕುಡಿದು ಹಾಗೆ ಕುಳಿತಿದ್ದ ಅವರನ್ನು ಸೊಸೆ "ಬಾವ ಟೀ ಕುಡಿಯಿರಿ ಆರಿ ಹೋಗುತ್ತೆ, ಟಿ.ವಿ. ಆಮೇಲೆ ನೋಡಿ" ಎಂದರು. ಏನು ಪ್ರತಿಕ್ರಿಯೆ ಇಲ್ಲ , ಮತ್ತೆರಡು ಸಾರಿ ಕರೆದು ಹತ್ತಿರ ಹೋಗಿ ಮುಟ್ಟಿ ನೋಡಿದಾಗಲೆ ತಿಳಿದಿದ್ದು ಅವರು ಬದುಕಿಲ್ಲ!! ಅನ್ನುವ ಸತ್ಯ.


ಮತ್ತೋಮ್ಮೆ ಉತ್ತರಬಾರತದ ದರ್ಶನಕ್ಕೆ ಹೋಗಿದ್ದೆವು. ವಾರಣಾಸಿಯಲ್ಲಿನ ಕರ್ನಾಟಕ ಛತ್ರದಲ್ಲಿ ನಮ್ಮ ವಾಸ.ರಾತ್ರಿ ಎಲ್ಲರೂ ರೂಮಿನಲ್ಲಿ ಮಲಗಿದ್ದರು ನಾನು ಮಾತ್ರ ಹೊರಗಿನ ಬಾಲ್ಕನಿಯಲ್ಲಿ ಉದ್ದಕ್ಕೆ ಹಾಸಿದ್ದ ಜಮಖಾನದಲ್ಲಿ ಬಂದು ಮಲಗಿದೆ. ಬಾಲ್ಕನಿಯಲ್ಲಿ ನಿಂತು ನೋಡಿದರೆ ಉದ್ದಕ್ಕೆ ಹರಿಯುತ್ತಿದ್ದ ಪರಮಪವಿತ್ರ ಗಂಗೆ ರಾತ್ರಿಯಾದರು ಅಲ್ಲಲ್ಲಿ ಸಂಚರಿಸುವ ದೋಣಿಗಳ ದೃಷ್ಯ ನನಗೆ ಇಷ್ಟವಾಗಿತ್ತು. ಆಗಿನ್ನು ನಿದ್ದೆ ಹತ್ತುತ್ತಿತ್ತು ಗಲಾಟೆ ಮಾಡುತ್ತ ಹೊರಗಿನಿಂದ ಮತ್ತೊಂದು ಗುಂಪು ಒಳಗೆ ಬಂದರು, ಕೆಲವರು ರೂಮಿಗೆ ಹೋದರೆ , ವಯಸ್ಕರೋಬ್ಬರು ಬಂದು ನನ್ನ ಬಳಿ ನಿಂತು "ನಿಮ್ಮ ಅಭ್ಯಂತರವಿಲ್ಲದಿದ್ದಲ್ಲಿ ಇಲ್ಲಿ ಮಲಗಬಹುದಾ?" ಎಂದು ಖಾಲಿಯಿದ್ದ ಜಮಖಾನ ತೋರಿಸಿ ನನ್ನನ್ನು ಕೇಳಿದರು. ನಾನು ದಾರಳವಾಗಿ ಮಲಗಿ ಎಂದು ತಿಳಿಸಿದೆ. <ಸ್ವಗತ: ಛತ್ರದ ಜಮಖಾನ ನನ್ನದೇನು ಹೋಗಬೇಕು?> ಪಕ್ಕದಲ್ಲಿ ಮಲಗಿದ ಅವರು ತಾವಾಗೆ ತಮ್ಮ ವಿಷಯ ತಿಳಿಸಿದರು, ಭದ್ರಾವತಿಯಿಂದ ಬಂದಿದ್ದ ಸಂಸಾರವದು, ಬೆಳಗ್ಗೆ ಗಯಾಕ್ಕೆ ಹೋದವರು ಈಗ ಬರುತ್ತಿದ್ದಾರೆ. ಇವರಿಗೆ ಅತಿ ಅಯಾಸ ಮತ್ತು ಕೆಮ್ಮಿನ ಕಾರಣ ಅವರ ಮನೆಯಾಕೆ ಇವರಿಗೆ ಕಷಾಯ ಮಾಡಿತರಲು ರೂಮಿಗೆ ಹೋಗಿದ್ದಾರೆ. ಅಲ್ಲಿಯವರೆಗು ಇಲ್ಲಿ ಮಲಗುತ್ತಾರೆ. ನಾನು ಸ್ವಲ್ಪ ಸಮಯ "ಹ್ಹೂ"ಗುಟ್ಟಿದೆ, ನಂತರ ಆಯಾಸಕ್ಕೋ ಏನೊ ನಿದ್ದೆ ಎಳೆಯುತ್ತಿತ್ತು ಹಾಗೆ ಕಣ್ಣು ಮುಚ್ಚಿದ ನೆನಪು, ಆತ ತನ್ನ ಮಾತು ನಿಲ್ಲಿಸಿದರು ಅನ್ನಿಸುತ್ತೆ. ಇದ್ದಕ್ಕಿದ್ದಂತೆ ಎಚ್ಚರವಾಯಿತು, ಪಕ್ಕದಲ್ಲಿ ಕುಳಿತು ಯಾರೋ ಅಳುತ್ತಿದ್ದಾರಾ?. ನಿಜ ನನ್ನ ಪಕ್ಕ ಸ್ವಲ್ಪದೂರದಲ್ಲಿ ಮಲಗಿದ್ದ ಆ ಮಹಾಶಯನ ಪಕ್ಕ ಆತನ ಪತ್ನಿ ಕುಳಿತು ಜೋರಾಗಿ ಅಳುತ್ತಿದ್ದಾರೆ. ಅಲ್ಲದೆ ಇನ್ನು ಯಾರೊ ಮೂರು ನಾಲಕ್ಕು ಜನ. ನನಗೆ ಪರಿಸ್ಥಿಥಿಯೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಒಳಗಿನಿಂದ ಬಂದ ನನ್ನ ಪತ್ನಿ ನನ್ನನ್ನು ಕೂಗಿ ಎಬ್ಬಿಸಿದಳು. ಇದೇನು ಎಂದು ಎದ್ದು ಕುಳಿತೆ. ನಡೆದ ವಿಷಯವಿಷ್ಟು. ಕಷಾಯ ಮಾಡಿ ತರುತ್ತೇನೆ ಎಂದು ಹೋದ ಅಕೆ ಅದನ್ನು ತಂದು ಎಬ್ಬಿಸುವದರಲ್ಲಿ ಆಕೆ ಪತಿ ಬದುಕಿಲ್ಲ. ಮಲಗಿದಲ್ಲಿಯೆ ಅವರ ಜೀವ ಹೋಗಿದೆ. ಎಂತಹ ಮರಣ!!!. ಬಹುಶಃ ಶರಣರ ಬದುಕನ್ನು ಮರಣದಲ್ಲಿ ನೋಡು ಎಂಬ ಮಾತು ಹೀಗೆ ಸೃಷ್ಟಿಯಾಯಿತೇನೊ?.ನಂತರ ಕಣ್ಣೆದುರೆ ಅವರ ದಹನದ ಬೆಂಕಿಯನ್ನು ಪಕ್ಕದ ಹರೀಶ್ಚಂದ್ರ ಘಾಟಿನಲ್ಲಿ ನೋಡಿದೆವು.


ಅಂದರೆ ಮರಣವೆಂದರೆ ಇಷ್ಟು ಸುಲುಭವೇ..? ಇಷ್ಟು ಮಧುರವೇ..? ಎಷ್ಟು ಚೆನ್ನ .. ಈ ಮರಣ. ಹೀಗಿದ್ದಲ್ಲಿ ವಿಚಾರವೆ ಇಲ್ಲ,ಅದನ್ನು ಸುಲುಭವಾಗಿ ಸ್ವಾಗತಿಸಬಹುದು ಅಲ್ಲವೆ? ನಮ್ಮ ಕೆಲಸವೆಲ್ಲ ಮುಗಿಯುತ್ತಿದ್ದಂತೆ ವಿರಾಮವಾಗಿ ಕುಳಿತು "ಬಾರಯ್ಯ ಜವರಾಯ ತೆಗೆ ನಿನ್ನ ಪಾಶವನ್ನು" ಎಂದು ಕರೆದುಬಿಡಬಹುದು. ಆದರೆ ಮರಣವೆಂದರೆ ಇಷ್ಟು ಸುಲುಭವೇನಿಲ್ಲ , ಅದರ ಇನ್ನೊಂದು ಘೋರ ರೂಪವು ಇದೆ.


.......ಮುಂದುವರೆಯುತ್ತದೆ