ಜಾತಸ್ಯ ಮರಣಂ ಧ್ರುವಂ…!

ಜಾತಸ್ಯ ಮರಣಂ ಧ್ರುವಂ…!

ಹುಟ್ಟಿದ ಕ್ಷಣದಿಂದ ಮನುಷ್ಯ ಸಾಗುವುದೇ ಮರಣದ ಕಡೆ. ಕೆಲವು ಅನಿರೀಕ್ಷಿತ ಮತ್ತು ಅಕಾಲಿಕ ಸಾವುಗಳು ನಮ್ಮನ್ನು ಕದಡಿ ಬಿಡುತ್ತವೆ. ಅವರು ಹತ್ತಿರದವರೇ ಆಗಿರಲಿ ಅಥವಾ ದೂರದ ವ್ಯಕ್ತಿಗಳೇ ಆಗಿರಲಿ ಅಥವಾ ಜನಪ್ರಿಯತೆ ಹೊಂದಿದವರೇ ಆಗಿರಲಿ ಏನೋ ಒಂದು ಸಂಕಟ ಮನಸ್ಸಿನಲ್ಲಿ ಉಂಟಾಗುತ್ತದೆ. ಸಾವು ಅನಿವಾರ್ಯ. ಅದು ಎಲ್ಲರಿಗೂ ತಿಳಿದಿದೆ. ಸಮಯ ಮಾತ್ರ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಆದರೂ ಇನ್ನೆಂದೂ ಬಾರದ ಲೋಕಕ್ಕೆ ಜೀವ ಹೊರಟು ಹೋಗುತ್ತದೆ ಎಂಬ ಭಾವವೇ ನಮ್ಮನ್ನು ಕುಸಿಯುವಂತೆ ಮಾಡಿ ಅಪಾರ ತಲ್ಲಣಗಳನ್ನು ಸೃಷ್ಟಿಸುತ್ತದೆ. ನಮ್ಮ ಪ್ರೀತಿ ಪಾತ್ರರ ಈ ರೀತಿಯ ಸಾವುಗಳನ್ನಂತೂ ಊಹಿಸಿಕೊಳ್ಳುವುದು ಸಹ ತುಂಬಾ ಯಾತನಾಮಯ.

ಸಹಜವಾಗಿ ಸಾವೆಂದರೆ ದೇಹದ ಚಲನೆಯ ನಿಲ್ಲುವಿಕೆ ಅಥವಾ ತಟಸ್ಥವಾಗುವಿಕೆ. ಅದಕ್ಕಿಂತ ಹೆಚ್ಚಿನ ಅರ್ಥ ಹುಡುಕತೊಡಗಿದರೆ ನಮ್ಮ ಒತ್ತಡ ಹೆಚ್ಚುತ್ತದೆ. ಏನೇ ಅರ್ಥಗಳು ಇದ್ದರೂ ನಾವು ಇಲ್ಲಿರುವುದಿಲ್ಲ ಎಂಬುದಷ್ಟೇ ಸತ್ಯ. ಉಳಿದದ್ದೆಲ್ಲ ಅದರ ವ್ಯಾಖ್ಯಾನ ಮಾತ್ರ. ಸಾವೇ ಅಂತಿಮ ಅಲ್ಲಿಂದ ಮುಂದೆ ಏನೂ ಉಳಿದಿರುವುದಿಲ್ಲ. ಆದರೆ ಸಮಸ್ಯೆ ಇರುವುದು ಅವರ ಅವಲಂಬಿತರು ಮತ್ತು ಪ್ರೀತಿ ಪಾತ್ರರದು. ಸಾವನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಬಹುಶಃ ವಿಶ್ವದ ಯಾರಲ್ಲಿಯೂ ಕಾಣುವುದಿಲ್ಲ. ಕೇವಲ ಕೆಲವು ತೀರಾ ಅಪರೂಪದ ಆಧ್ಯಾತ್ಮಿಕ ಸಾಧಕರು ಆ ಸ್ಥಿತಿ ತಲುಪಿರಬಹುದು. ಅಷ್ಟೊಂದು ಭಾವನಾತ್ಮಕ ನಿಯಂತ್ರಣ ಸಾಮಾನ್ಯ ಜನರಲ್ಲಿ ಇರುವುದಿಲ್ಲ. ಅದು ತಡೆಯಲಾಗದ ಅಳುವಿನ ರೂಪದಲ್ಲಿ ವ್ಯಕ್ತವಾಗುತ್ತದೆ. ನೆನಪುಗಳು ಅಲೆಅಲೆಯಾಗಿ ಅಪ್ಪಳಿಸಿ ದುಃಖ ಉಮ್ಮಳಿಸಿ ಬರುತ್ತದೆ.

ಇನ್ನು‌ ಆ ಜೀವ ನಮ್ಮೊಂದಿಗೆ ಇರುವುದಿಲ್ಲ ಎಂಬುದರ ಜೊತೆಗೆ ಅದರಿಂದ ಮುಂದಿನ ನಮ್ಮ ಮೇಲಾಗುವ ಪರಿಣಾಮಗಳು ಸಹ ದುಃಖದ ಪ್ರಭಾವ ಹೆಚ್ಚಿಸುತ್ತದೆ. ಮರಣವೇ ಮಹಾ ನವಮಿ ಎಂಬ ಶರಣರ ಮಾತುಗಳನ್ನು ವಾಸ್ತವಕ್ಕೆ ಅಳವಡಿಸಿಕೊಳ್ಳುವಷ್ಟು ನಮ್ಮ ಸಮಾಜದ ವೈಯಕ್ತಿಕ ಅಥವಾ ಸಾಮೂಹಿಕ ಮನೋಭಾವ ಬೆಳೆದು ಬಂದಿಲ್ಲ. ಸಾವಿನ ನೋವನ್ನು ತಡೆಯಲು ಯಾವುದೇ ಸಿದ್ದ ಸೂತ್ರಗಳು ಇಲ್ಲ. ಆದರೆ ಸಲಹೆಗಳು ಸಿದ್ದವಾಗಿರುತ್ತವೆ. ಸಾವು ಅನಿವಾರ್ಯ ಅದನ್ನು ಒಪ್ಪಿಕೊಳ್ಳಲೇ ಬೇಕು. ಬದುಕಿರುವವರ ಜೀವನ ಮುಂದೆ ಸಾಗಲೇ ಬೇಕು. ಆ ಸಾಗುವ ಪಯಣದಲ್ಲಿ ದಿನನಿತ್ಯದ ಚಟುವಟಿಕೆಗಳು ಜವಾಬ್ದಾರಿಗಳು ಸಮಯ ಸರಿದಂತೆ ಸಾವಿನ ತೀವ್ರತೆ ಕಡಿಮೆ ಮಾಡುತ್ತದೆ. ಅಪಾರ ಜ್ಞಾನದಿಂದ ಮೂಡುವ ಮನಸ್ಸಿನ ನಿಯಂತ್ರಣ ಸಹ ಸಾವಿನ ದುಃಖವನ್ನು ಕಡಿಮೆ ಮಾಡುತ್ತದೆ. ಆದರೆ ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.

ಆಧ್ಯಾತ್ಮಿಕವಾಗಿ ಈ ಸಾವಿನ ನೋವುಗಳನ್ನು ನಿಯಂತ್ರಿಸಲು ಸಾಕಷ್ಟು ಅರ್ಥಗಳನ್ನು ಹುಡುಕಿಕೊಳ್ಳಲಾಗಿದೆ. ಆಚರಣೆಗಳನ್ನು ಪಾಲನೆ ಮಾಡಲಾಗುತ್ತದೆ. ಮನಸ್ಸಿಗೆ ಸಾವನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಇವು ಬೆಳೆದು ಬಂದಿದೆ.  ಒಂದು ರೀತಿಯಲ್ಲಿ ಆಧ್ಯಾತ್ಮಿಕದ ಅಸ್ತಿತ್ವವೇ ಬದುಕಿಗಿಂತ ಸಾವಿನ ಭಯದಿಂದಲೇ ಹೆಚ್ಚು ಪ್ರಚಲಿತವಾಗಿದೆ ಎಂದು ಹೇಳಬಹುದು. ಜೀವ ಮರಳಿಸುವ ಶಕ್ತಿ ಯಾರಿಗೂ ಇಲ್ಲದೇ ಇರುವುದರಿಂದ ಸಾವನ್ನು ಸ್ವೀಕರಿಸುವ ವಿಧಾನಗಳತ್ತಲೇ ಎಲ್ಲರ ಚಿತ್ತ. ಜನ್ಮಾಂತರ ಅಥವಾ ಪುನರ್ಜನ್ಮದ ಸೃಷ್ಟಿ ಸಹ ಇದರ ಭಾಗವೇ ಆಗಿದೆ.

ಏನೇ ಹೇಳಿದರು ಸಾವಿನ ನೋವುಗಳು ಸದಾ ನಮ್ಮ ಬದುಕಿನ ಭಾಗವಾಗಿ ನಮ್ಮನ್ನು ಕಾಡುತ್ತಲೇ ಇರುತ್ತದೆ. ನಮ್ಮ ಸಾವು ಬರುವವರೆಗೂ… ಇದರ ಬಗ್ಗೆ ತುಂಬಾ ಆಳಕ್ಕೆ ಇಳಿದು ಯೋಚಿಸಬಹುದು. ಆದರೆ ಅದೊಂದು ಅಧ್ಯಯನ ಮಾತ್ರವಾಗಿರುತ್ತದೆ. ಸಾಮಾನ್ಯರಿಗೆ ಅದೊಂದು ವ್ಯರ್ಥ ಪ್ರಯತ್ನ ಎನಿಸುತ್ತದೆ. ಅರ್ಥಗಳ ಹುಡುಕಾಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ವಾಸ್ತವ ತುಂಬಾ ಭಿನ್ನವಾಗಿರುತ್ತವೆ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ