ಜಾತಿವ್ಯಾಧಿ ಚಿಕಿತ್ಸಕ ಡಾ। ಪದ್ಮನಾಭನ್ ಪಲ್ಪು
ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರೂ ಆಗಿರುವ ಪತ್ರಕರ್ತ ಅಶ್ವಿನ್ ಲಾರೆನ್ಸ್ ಇವರು ಬರೆದ ಪುಟ್ಟ, ಆದರೆ ಅಪರೂಪದ ಅದ್ಭುತ ವ್ಯಕ್ತಿಯ ಚಿತ್ರಣವನ್ನು ಕಟ್ಟಿಕೊಡುವ ಪುಸ್ತಕ ‘ಜಾತಿವ್ಯಾಧಿ ಚಿಕಿತ್ಸಕ ಡಾ. ಪದ್ಮನಾಭನ್ ಪಲ್ಪು’. ಈ ಕೃತಿಗೆ ಮಾಹಿತಿಪೂರ್ಣವಾದ ಮುನ್ನುಡಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಶ್ರೀರಾಮ ದಿವಾಣರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಅಭಿಪ್ರಾಯಗಳ ಕೆಲವು ಸಾಲುಗಳು ನಿಮ್ಮ ಓದಿಗಾಗಿ…
“ಕ್ರಾಂತಿ ಎಂದರೆ ಹಿಂಸೆ, ಹಿಂಸಾತ್ಮಕ ಹೋರಾಟ ಎಂಬ ಅಭಿಪ್ರಾಯ ಹಲವರಲ್ಲಿದೆ. ಈ ಅಭಿಪ್ರಾಯ ಪೂರ್ಣ ಸರಿಯಲ್ಲ. ಯಥಾಸ್ಥಿತಿವಾದದ ವಿರುದ್ಧ ಕೇವಲ ಸುಧಾರಣೆಗಳ ಬದಲು, ಜಾರಿಯಲ್ಲಿರುವ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆಗಾಗಿ ನಡೆಸುವ ರಾಜಿ ರಹಿತ ನೇರ ದಿಟ್ಟ- ನಿರಂತರ ಹೋರಾಟವೇ ನಿಜವಾದ ಕ್ರಾಂತಿಕಾರಿ ಹೋರಾಟ. ಇಂಥ ಚಾರಿತ್ರಿಕ, ಐತಿಹಾಸಿಕ ಬದಲಾವಣೆಗೆ ಹಿಂಸಾತ್ಮಕ ಹೋರಾಟವೇ ನಡೆಸಬೇಕೆಂದೇನೂ ಇಲ್ಲ. ಕೇರಳದ ತಿರುವಾಂಕೂರಿನಲ್ಲಿ ಸವರ್ಣರ (ಶೋಷಕ ವರ್ಗದವರ) ಆಡಳಿತದಲ್ಲಿದ್ದ ರಾಜ್ಯವನ್ನು ಪ್ರಧಾನ ಕೇಂದ್ರವಾಗಿರಿಸಿಕೊಂಡು ಸಿಲೋನ್ (ಈಗಿನ ಶ್ರೀಲಂಕಾ) ಸಹಿತ ದಕ್ಷಿಣ ಭಾರತದಾದ್ಯಂತ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ನಡೆದ ಹೋರಾಟ ಪ್ರತಿಯೊಬ್ಬರೂ ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಯಶಸ್ವಿ ಕ್ರಾಂತಿ ಎನ್ನುವುದರಲ್ಲಿ ಯಾವ ಅನುಮಾನವೂ ಬೇಡ.
ನಾರಾಯಣ ಗುರುಗಳ ಕಾಲದವರೆಗಿನ ಜನಜೀವನ ಕ್ರೌರ್ಯ ಹೇಗಿತ್ತೆಂದರೆ... ಬ್ರಾಹ್ಮಣೇತರರ ನೆರಳೂ ಬ್ರಾಹ್ಮಣರಿಗೆ ಸೋಕಬಾರದು. ಎಲ್ಲಾದರೂ ಅಪ್ಪಿತಪ್ಪಿ ಇತರರ ಸ್ಪರ್ಶವಾದರೆ ಬ್ರಾಹ್ಮಣರಿಗೆ ಮೈಲಿಗೆ. ಇತರರು ತಮ್ಮ ಪಾಡಿಗೆ ತಾವು ಪಾದಚಾರಿಗಳಾಗಿ ಹೋಗುತ್ತಿರುವಾಗ ಎಲ್ಲಿಯಾದರೂ ಬ್ರಾಹ್ಮಣರು ನಡೆದುಕೊಂಡು ಬರುತ್ತಿರುವುದನ್ನು ಕಂಡಲ್ಲಿ ಕುಕ್ಕುರುಗಾಲಿನಲ್ಲಿ ಕುಳಿತುಕೊಳ್ಳಬೇಕು. ಬ್ರಾಹ್ಮಣರು ಇರುವಲ್ಲಿ ಬ್ರಾಹ್ಮಣೇತರರು ಗಂಡಸಾಗಲೀ, ಹೆಂಗಸಾಗಲೀ ತಮ್ಮ ದೇಹದ ಸೊಂಟದ ಮೇಲಿನ ಬಟ್ಟೆಗಳನ್ನು ತೆಗೆದಿಟ್ಟು ಅರೆಬೆತ್ತಲಾಗಬೇಕು. ಮೊಣಕಾಲಿನ ಕೆಳಗೂ ಬಟ್ಟೆ ಇರಬಾರದು. ಪಾದರಕ್ಷೆ ಹಾಕಬಾರದು. ಒಳ್ಳೆಯ ಬಟ್ಟೆ, ಚಿನ್ನಾಭರಣ ಧರಿಸಬಾರದು. ಕೊಡೆ ಹಿಡಿದುಕೊಂಡಿರಬಾರದು. ಸ್ತನ ತೆರಿಗೆ, ತಲೆ ತೆರಿಗೆ, ಹೆಣ ತೆರಿಗೆಗಳನ್ನೂ ಪಾವತಿಸಬೇಕಾಗಿತ್ತು. ದೇವಸ್ಥಾನಕ್ಕೆ ಕಾಣಿಕೆ, ಉತ್ಸವ ಕರ, ಭೂ ಕಾಣಿಕೆ ಇತ್ಯಾದಿಗಳನ್ನು ಸಲ್ಲಿಸಲೇ ಬೇಕಾಗಿತ್ತು. ನಿಯಮ ತಪ್ಪಿದವರನ್ನು ಯಾವುದೇ ರೀತಿಯ ಕನಿಷ್ಟ ವಿಚಾರಣೆಯೂ ಇಲ್ಲದೆ ಅಮಾನುಷವಾಗಿ ಶಿಕ್ಷಿಸಲಾಗುತ್ತಿತ್ತು.
ಇಂಥ ಜನಜೀವನ ಮತ್ತು ಆಡಳಿತ ವ್ಯವಸ್ಥೆಯನ್ನು ಕಂಡು ನೊಂದು ಬೆಂದ ನಾರಾಯಣ ಗುರುಗಳು ಅರವಿಪ್ಪುರಂನಲ್ಲಿ ಶಿವಲಿಂಗ ಪ್ರತಿಷ್ಟೆ ಮಾಡುವ ಮೂಲಕ ಧಾರ್ಮಿಕ ತಳಹದಿಯಲ್ಲಿ ಆರಂಭಿಸಿದ ಚಳುವಳಿ ನಿಜಕ್ಕೂ ಕ್ರಾಂತಿಕಾರಿಯಾಗಿತ್ತು. ಈ ಕ್ರಾಂತಿಕಾರೀ ಜನಾಂದೋಲನಕ್ಕೆ ಮಾರ್ಗದರ್ಶನ ಮಾಡಿದ ನಾರಾಯಣ ಗುರುಗಳ ಜೊತೆಗೆ ನೇತೃತ್ವ ನೀಡಿದವರು ಡಾ। ಪದ್ಮನಾಭನ್ ಪಲ್ಪು ಮತ್ತು ಕುಮಾರನ್ ಆಶಾನ್. ಬ್ರಾಹ್ಮಣ ಪುರುಷ ವರ್ಗದವರಿಂದ ಶೋಷಣೆ ಅನುಭವಿಸುತ್ತಿದ್ದ ಬ್ರಾಹ್ಮಣ ಮಹಿಳೆಯರ ಸಹಿತ ಪ್ರತಿಯೊಬ್ಬ ಬ್ರಾಹ್ಮಣೇತರರಿಗೂ ಪ್ರಾತಃಸ್ಮರಣೀಯರಾಗಬೇಕು.
ಶೋಷಿತ ಸಮುದಾಯದಿಂದ ಮೂಡಿಬಂದ ಡಾ।ಪಲ್ಪು ಅವರು ಸಮುದಾಯದ ವಿಮೋಚನೆಗಾಗಿ ಮೊದಲಿಗೆ ಏಕಾಂಗಿಯಾಗಿ ಸವರ್ಣರ ಸರಕಾರದ ಜೊತೆಗೆ ಮತ್ತು ಬ್ರಿಟೀಷ್ ಸರಕಾರದೊಂದಿಗೆ ನಿರಂತರವಾಗಿ ಧೈರ್ಯದಿಂದ ಕಾನೂನು ಹೋರಾಟ ನಡೆಸಿಕೊಂಡು ಬರುತ್ತಿದ್ದವರು. ಹೀಗಿರುವಾಗಲೇ ಮೈಸೂರಿಗೆ ಬಂದ ಸ್ವಾಮೀ ವಿವೇಕಾನಂದರ ಸಂಪರ್ಕಕ್ಕೆ ಬಂದು, ಹಲವು ಬಾರಿ ವಿವೇಕಾನಂದರ ಜೊತೆಗೆ ಸುದೀರ್ಘ ಸಮಯ ಶೋಷಿತರ ವಿಮೋಚನೆಯ ವಿಷಯದಲ್ಲಿ ಪರಸ್ಪರ ಚರ್ಚೆ ನಡೆಸುತ್ತಿದ್ದವರು. ಕೊನೆಗೆ ವಿವೇಕಾನಂದರ ಮಾರ್ಗದರ್ಶನದಂತೆ ಪಲ್ಪು ಅವರು ಆಶಾನ್ ಅವರ ಜೊತೆಗೂಡಿ ನಾರಾಯಣ ಗುರುಗಳನ್ನು ಭೇಟಿಯಾಗುತ್ತಾರೆ. ಈ ಭೇಟಿಯೇ ಆನಂತರದ ಚಾರಿತ್ರಿಕ ಕ್ರಾಂತಿಕಾರಿ ಜನಾಂದೋಲನಕ್ಕೆ ನಾಂದಿಯಾದುದು ಎಂಬುದು ಬಹಳ ಮಹತ್ವದ ವಿಷಯವಾಗಿದೆ. ಐತಿಹಾಸಿಕ ದಾಖಲೆಯಾಗಿದೆ.
ಈ ಮೂರು ಮಂದಿ ತ್ರಿವಳಿ ಯುಗಪುರುಷರ, ಕ್ರಾಂತಿಕಾರಿಗಳ ಅವಿಸ್ಮರಣೀಯ, ಐತಿಹಾಸಿಕ ಸಮಾಗಮದ ಬಗ್ಗೆ ಬಹುಶ್ರುತ ವಿದ್ವಾಂಸರಾದ ಬಾಬು ಶಿವ ಪೂಜಾರಿಯವರು ತಮ್ಮ ‘ಶ್ರೀ ನಾರಾಯಣ ಗುರು ವಿಜಯ ದರ್ಶನ' ಗ್ರಂಥದಲ್ಲಿ ಈ ಕೆಳಗಿನಂತೆ ಬರೆದಿದ್ದು, ಇದು ಇಲ್ಲಿ ಉಲ್ಲೇಖಾರ್ಹವಾಗಿದೆ.
‘ತಿರುವಾಂಕೂರಿನಲ್ಲಿ ನಡೇದ ಈ ಮಹಾ ವಿಪ್ಲವಗಳ ಹಿಂದಿರುವ ಕರ್ತು ಡಾ। ಪಲ್ಪು ಎನ್ನುವುದನ್ನು ತಿಳಿದುಕೊಂಡ ತಿರುವಾಂಕೂರ ಸರಕಾರವು ಮೈಸೂರಿನ ದಿವಾನರನ್ನು ಕಂಡು, ತಿರುವಾಂಕೂರಿನಲ್ಲಿ ಡಾ।ಪಲ್ಪು ಸರಕಾರ ಮತ್ತು ಸವರ್ಣರ ವಿರುದ್ಧ ಕೆಲಸ ಮಾಡಿದ್ದಾರೆಂದು ಪಿತೂರಿಯನ್ನು ನಡೆಸಿತು. ಅವರ್ಣರಾದ ಈಳವರು ಮತ್ತಿತರರ ಬಗೆಗೆ ಹೋರಾಡುತ್ತಿರುವ ಪಲ್ಪು ಮೇಲ್ವರ್ಗದ ಹಿಂದೂಗಳ ವಿರೋಧಿಯಾಗಿದ್ದಾರೆ ಎನ್ನುವುದಾಗಿ ಮೈಸೂರು ಸರಕಾರಕ್ಕೆ ತಿಳಿಸಿ ಅವರನ್ನು ಕೆಲಸದಿಂದ ತೆಗೆದು ಹಾಕುವಂತೆ ಪ್ರಯತ್ನಿಸಿತು. ಇಲ್ಲಿಯೂ ಹಿಂದೂ ಜಾತೀಯತೆಯ ವರ್ಣ ವ್ಯವಸ್ಥೆಯು ಅನೇಕ ಪ್ರತಿಕೂಲ ವಾತಾವರಣವನ್ನು ನಿರ್ಮಿಸಿ ಪಲ್ಪುಗೆ ತೊಂದರೆಯನ್ನು ಕೊಟ್ಟಿತು. ಇದಾವುದಕ್ಕೂ ಅವರು ಜಗ್ಗಲಿಲ್ಲ. ಮೈಸೂರು ಸರಕಾರ ಡಾ। ಪಲ್ಪು ಅವರನ್ನು ವಿನಾಕಾರಣ ಸರಕಾರಿ ಉದ್ಯೋಗದಿಂದ ವಜಾ ಗೊಳಿಸಿತು. ಆದರೆ ಡಾ। ಪಲ್ಪು ಸಮರ್ಥವಾಗಿ ಅದನ್ನು ಎದುರಿಸಿದರು, ಜಯಿಸಿದರು.’
ಕೇರಳದಲ್ಲಿ ಡಾ। ಪದ್ಮನಾಭನ್ ಪಲ್ಪು ಚಿರಪರಿಚಿತರು. ಆದರೆ ಕರ್ನಾಟಕದಲ್ಲಿ ಅಷ್ಟೇನೂ ಪರಿಚಿತರಲ್ಲ. ಕನಿಷ್ಟ ತುಳುನಾಡಿನಲ್ಲಾದರೂ ಜನರು, ಸಂಘಟನೆಗಳು ನಾರಾಯಣ ಗುರುಗಳ ಜೊತೆಜೊತೆಗೆ ಡಾ। ಪಲ್ಪು ಹಾಗೂ ಕುಮಾರನ್ ಆಶಾನ್ ರನ್ನು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರಬೇಕಾಗಿತ್ತು. ಆದರೆ ಅದ್ಯಾಕೊ ಇಲ್ಲಿ ಲೋಪವಾಗಿದೆ ಎನ್ನದೆ ನಿರ್ವಾಹವಿಲ್ಲ" ಎಂದು ಮುನ್ನುಡಿಕಾರರು ಬೇಸರ ವ್ಯಕ್ತಪಡಿಸುತ್ತಾರೆ.
ಕೃತಿಯ ಲೇಖಕರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರು ತಾವು ಈ ಪುಸ್ತಕವನ್ನು ಬರೆಯಲು ಹೊರಟ ಬಗ್ಗೆ, ಡಾ। ಪಲ್ಪು ಅವರ ಬಗ್ಗೆ ಮಾಹಿತಿ ಸಂಗ್ರಹದ ಬಗ್ಗೆ ಎಲ್ಲವನ್ನೂ ಸವಿವರವಾಗಿ ತಮ್ಮ ಮಾತಿನಲ್ಲಿ ವರ್ಣಿಸಿದ್ದಾರೆ. ಸುಮಾರು ೨೮ ಪುಟಗಳ ಈ ಪುಟ್ಟ ಕೃತಿಯನ್ನು ‘ಶೂದ್ರ ಹೆಣ್ಣುಮಕ್ಕಳು ಸ್ತನಗಳನ್ನು ಮುಚ್ಚಿಕೊಳ್ಳುವುದಕ್ಕೂ ತೆರಿಗೆ ಕಟ್ಟಬೇಕೆಂಬ ಅಮಾನುಷ ಕಾನೂನಿನ ವಿರುದ್ಧ ಏಕಾಂಗಿಯಾಗಿ ಸೆಟೆದು ನಿಂತು, ಬಲವಂತದಿಂದ ಕರ ವಸೂಲಿಗೆ ಬಂದಾಗ ತನ್ನ ಸ್ತನವನ್ನೇ ಕೊಯ್ದು ಪ್ರತಿಭಟಿಸಿ ಅಮರಳಾದ ವೀರಮಾತೆ ‘ನಂಗೇಲಿ' ಅವರ ಏಕಾಂಗಿ ಹೋರಾಟ -ಬಲಿದಾನಕ್ಕೆ.. ಗೌರವ ಸಮರ್ಪಣೆ” ಮಾಡಿದ್ದಾರೆ.
ಅಸ್ಪ್ರಶ್ಯರೆನಿಸಿಕೊಂಡಿದ್ದ ಈಳವ (ಈಡಿಗ/ತೀಯ/ಬಿಲ್ಲವ) ಜಾತಿಯಲ್ಲಿ ಜನಿಸಿದರು ಎಂಬ ಒಂದೇ ಕಾರಣಕ್ಕೆ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಲ್ಲಿ ೨ನೇ ರಾಂಕು ಗಳಿಸಿದರೂ, ಅವಕಾಶ ನೀಡದ ತಿರುವಾಂಕೂರು ಸಂಸ್ಥಾನದ ವ್ಯತಿರಿಕ್ತ ನಡೆಯನ್ನು ಸಾಧನೆಯ ಸವಾಲಾಗಿ ಸ್ವೀಕರಿಸಿ, ಆರ್ಥಿಕ ಹಾಗೂ ಸಾಮಾಜಿಕ ಸಂಕಷ್ಟಗಳನ್ನು ಎದುರಿಸಿ, ಮದ್ರಾಸಿಗೆ (ಚೆನ್ನೈ) ತೆರಳಿ, ಪ್ರಖ್ಯಾತ ಮದ್ರಾಸು ಮೆಡಿಕಲ್ ಕಾಲೇಜಿಗೆ ಸೇರಿ ವೈದ್ಯರಾದವರು ಡಾ। ಪದ್ಮನಾಭನ್ ಪಲ್ಪು ಅವರು. ಅವರ ಸಾಧನೆಯ ಹಾದಿ ಬಹಳಷ್ಟು ಮಂದಿಗೆ ಪ್ರೇರಣೆಯಾದೀತು ಎನ್ನುವ ಆಶಾಭಾವ ಲೇಖಕರದ್ದು. ಈ ಪುಟ್ಟ ಕೃತಿಯ ರಕ್ಷಾ ಪುಟಗಳಲ್ಲಿ ಸ್ವಾಮೀ ವಿವೇಕಾನಂದ, ಕುಮಾರನ್ ಆಶಾನ್, ನಾರಾಯಣ ಗುರು ಅವರ ಭಾವಚಿತ್ರಗಳನ್ನು ಪ್ರೇರಣಾ ಸ್ವರೂಪವಾಗಿ ಮುದ್ರಿಸಲಾಗಿದೆ.