ಜಾತಿ ಗಣತಿ ಕುರಿತು ಸಾಧಕ, ಬಾಧಕಗಳ ಚರ್ಚೆಯಾಗಲಿ

ಜಾತಿ ಗಣತಿ ಕುರಿತು ಸಾಧಕ, ಬಾಧಕಗಳ ಚರ್ಚೆಯಾಗಲಿ

ಅರ್ಥಪೂರ್ಣವಾಗಿ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ದೇಶದಲ್ಲಿ ಜಾತಿಗಣತಿಯನ್ನು ನಡೆಸಬೇಕು ಎಂದು ಬಿಜೆಪಿಯೇತರ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿವೆ. ಈ ಸಂಬಂಧ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗ ಒತ್ತಾಯ ಮಾಡುತ್ತಿದ್ದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಎನ್ ಸಿ ಪಿ ನಾಯಕ ಶರದ್ ಪವಾರ್ ಕೂಡ ದನಿಗೂಡಿಸಿದ್ದಾರೆ. 

ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿನ ಬಿಜೆಪಿಯೇತರ ಪಕ್ಷಗಳು ಮೊದಲಿನಿಂದಲೂ ಈ ಬಗ್ಗೆ ಕೂಗು ಹಾಕುತ್ತಲೇ ಇವೆ. ಹಿಂದುತ್ವದ ಹೆಸರಿನಲ್ಲಿ ಎಲ್ಲ ಜಾತಿಗಳನ್ನು ಒಗ್ಗೂಡಿಸುವ ಬಿಜೆಪಿಯ ರಣತಂತ್ರವನ್ನು ನಿಷ್ಫಲಗೊಳಿಸುವ ತಂತ್ರಗಾರಿಕೆ ರಾಜಕೀಯ ಪಕ್ಷಗಳ ಈ ಬೇಡಿಕೆ ಹಿಂದೆ ಗೋಚರವಾಗುತ್ತದೆಯಾದರೂ, ಜಾತಿ ಗಣತಿಯ ಅಗತ್ಯವೂ ಅಷ್ಟೇ ಮಹತ್ವದಿಂದ ಕೂಡಿದೆ. ಏಕೆಂದರೆ, ದೇಶ ಅಥವಾ ರಾಜ್ಯಗಳಲ್ಲಿ ಆ ಜಾತಿಯವರು ಇಷ್ಟಿದ್ದಾರೆ, ಈ ಜಾತಿಯವರ ಸಂಖ್ಯೆ ದೊಡ್ದದಿದೆ ಎಂಬೆಲ್ಲಾ ವಾದಗಳಿಗೆ ವೈಜ್ಞಾನಿಕ ಆಧಾರಗಳು ಇಲ್ಲ. ಕಾರಣ ಇಷ್ಟೇ- ದೇಶದಲ್ಲಿ ಕಟ್ಟಕಡೆಯದಾಗಿ ಜಾತಿ ಗಣತಿ ನಡೆದದ್ದು ೧೯೩೧ರಲ್ಲಿ. ಅಂದರೆ ೯೦ ವರ್ಷಗಳ ಹಿಂದೆ. ಬ್ರಿಟಿಷರು ನಡೆಸಿದ್ದ ಗಣತಿಯನ್ನೇ ಆಧಾರವಾಗಿಟ್ಟುಕೊಂಡು ೨೧ನೇ ಶತಮಾನದಲ್ಲಿ ಜಾತಿಯ ಲೆಕ್ಕವನ್ನು ಮುಂದಿಡಲಾಗುತ್ತಿದೆ. ಜಾತಿಗಳ ನಿಖರ ಸಂಖ್ಯೆ ಅರಿಯಲು ಗಣತಿ ಅವಶ್ಯ ಎಂದು ತಜ್ಞರು ಹೇಳುತ್ತಲೇ ಇದ್ದಾರೆ.

ದೇಶದಲ್ಲಿ ಪ್ರತಿ ೧೦ ವರ್ಷಕ್ಕೊಮ್ಮೆ ಜನಗಣತಿ ನಡೆಯುತ್ತದೆ. ಆ ಗಣತಿ ವೇಳೆ ದೇಶದ ನಾಗರಿಕರ ಸಂಖ್ಯೆ ಜತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಸಂಖ್ಯೆಯನ್ನೂ ಲೆಕ್ಕ ಹಾಕಲಾಗುತ್ತದೆ. ಅದೊಂದು ಬೃಹತ್ ಕಸರತ್ತು. ಕೋವಿಡ್ ಕಾರಣ ೨೦೨೧ರಲ್ಲಿ ನಡೆಯಬೇಕಿದ್ದ ಗಣತಿ ಪ್ರಕ್ರಿಯೆ ಆಗಿಲ್ಲ. ಎಸ್ಸಿ, ಎಸ್ಟಿ ಜನರ ರೀತಿಯಲ್ಲೇ ದೇಶದ ಎಲ್ಲ ಸಮುದಾಯಗಳ ಜಾತಿಗಳ ಕುರಿತು ಗಣತಿ ನಡೆದರೆ ಸರ್ಕಾರಕ್ಕೆ ಎಲ್ಲ ಸಮುದಾಯಗಳ ನಿಖರ ಲೆಕ್ಕ ಸಿಗಲಿದೆ. ಯೋಜನೆಗಳನ್ನು ತಲುಪಿಸಲು, ಮೀಸಲಾತಿಯನ್ನು ಒದಗಿಸಲು ಇದರಿಂದ ಅನುಕೂಲವಾಗಲಿದ್ದು, ಅರ್ಹರಿಗೆ ಸೌಲಭ್ಯಗಳು ದಕ್ಕುತ್ತವೆ ಎಂಬ ವಿಶ್ಲೇಷಣೆಗಳೂ ಇವೆ. ಹೀಗಾಗಿ ಜಾತಿ ಗಣತಿಯನ್ನು ನಡೆಸುವ ಕುರಿತು ಸಾಧಕ-ಬಾಧಕಗಳ ಬಗ್ಗೆ ವಿಸ್ತ್ರತವಾಗಿ ಚರ್ಚೆ ನಡೆದು, ಒಂದು ಸೂಕ್ತ ನಿರ್ಧಾರಕ್ಕೆ ಆಡಳಿತ-ಪ್ರತಿ ಪಕ್ಷಗಳು ಬರಬೇಕು. ಸ್ವಂತ ಹಿತದ ಬದಲು ದೇಶದ ಹಿತಾಸಕ್ತಿಯಿಂದ ಕುಳಿತು ಚರ್ಚೆ ನಡೆಸಿದರೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ. ಆದರೆ ಅಂತಹ ತೀರ್ಮಾನಕ್ಕೆ ರಾಜಕೀಯ ವ್ಯವಸ್ಥೆ ಬರುವುದು ಯಾವಾಗ ಎಂಬುದೇ ಯಕ್ಷಪ್ರಶ್ನೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ. ದಿ: ೧೯-೦೪-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ