ಜಾತಿ ಜನಗಣತಿ ವರದಿ ಬಗ್ಗೆ ಚರ್ಚೆ - ಸಂವಾದ ಅಗತ್ಯ

ಶೀಘ್ರ, ಸದ್ಯ, ಬೇಗ ಎಂದು ದಿನದೂಡುತ್ತಲೇ ಬಂದಿದ್ದ ‘ಜಾತಿ ಜನಗಣತಿ’ ಎಂದೇ ಕರೆಯಲಾಗುವ ‘ಸಾಮಾಜಿಕ -ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಕೊನೆಗೂ ರಾಜ್ಯ ಸಚಿವ ಸಂಪುಟದಲ್ಲಿ ಮಂಡನೆಯಾಗಿರುವುದು ಒಂದು ರೀತಿ ಗಜ ಪ್ರಸವದಂತಹ ಬೆಳವಣಿಗೆ. ಸಮೀಕ್ಷೆ ನಡೆದಿರುವುದು ೨೦೧೫ರಲ್ಲಿ. ಅಂದರೆ ಹತ್ತು ವರ್ಷಗಳ ಹಿಂದೆ. ಅದು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಕಳೆದ ಮಾರ್ಚ್ ನಲ್ಲಿ. ಅಂದರೆ ವರ್ಷದ ಹಿಂದೆ. ಪ್ರಬಲ ಸಮುದಾಯಗಳಾದ ವೀರಶೈವ-ಲಿಂಗಾಯತ ಹಾಗೂ ಒಕ್ಕಲಿಗರ ಆಕ್ರೋಶದ ಹಿನ್ನಲೆಯಲ್ಲಿ ವರದಿ ಮಂಡನೆ ವಿಳಂಬವಾಗಿತ್ತು. ಕಾಂಗ್ರೆಸ್ ಹೈಕಮಾಂಡ್ ಒತ್ತಡದ ಫಲವಾಗಿ ಸಚಿವ ಸಂಪುಟದ ಮುಂದೆ ಮಂಡನೆಯಾಗಿ, ಅದು ಅಂಗೀಕಾರವಾಗಿದೆ. ಯಾವ ಸಮುದಾಯ ಎಷ್ಟು ಜನಸಂಖ್ಯೆ ಹೊಂದಿದೆ ಎಂಬ ಮಾಹಿತಿ ಅಧಿಕೃತವಾಗಿ ಬಿಡುಗಡೆಯಾಗದೇ ಇದ್ದರೂ, ಈಗಾಗಲೇ ಹಲವು ಬಾರಿ ಮಾಹಿತಿ ಸೋರಿಕೆಯಾಗಿ ಸಂಚಲನವನ್ನೂ ಸೃಷ್ಟಿಸಿದೆ. ವರದಿಯನ್ನು ಸಚಿವರ ಕೈಗಿಡಲಾಗಿದ್ದು, ಅವರ ಅಧ್ಯಯನಕ್ಕೆ ಒಂದು ವಾರ ಸಮಯ ನೀಡಲಾಗಿದೆ. ಏ ೧೭ರಂದು ವಿಶೇಷ ಸಂಪುಟ ಸಭೆ ನಡೆಸಿ ವರದಿಯ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ವರದಿ ಮಂಡನೆಗಿಂತಲೂ ಕುತೂಹಲವಿರುವುದು ಈ ವರದಿ ಮುಂದೇನಾಗಲಿದೆ ಎಂಬುದೇ.
ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ವರದಿ ಸಿದ್ಧಪಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಲೇ ಬಂದಿದೆ. ಇದಕ್ಕಾಗಿ ೧೯೨ ಕೋಟಿ. ರೂ. ಕೂಡ ವೆಚ್ಚವಾಗಿದೆ. ಅಷ್ಟು ಹಣವನ್ನು ವ್ಯಯಿಸಿ ಒಂದು ವರದಿಯನ್ನು ಶೈತ್ಯಾಗಾರಕ್ಕೆ ತಳ್ಳುವುದು ಆ ವರದಿ ತಯಾರಿಕೆ ಹಿಂದಿನ ಶ್ರಮಕ್ಕೆ ಅವಮಾನ ಮಾಡಿದಂತೆ. ಕರ್ನಾಟಕದಲ್ಲಿ ಬಹಳ ಹಿಂದಿನಿಂದಲೂ ಪ್ರಬಲ ಸಮುದಾಯಗಳು ಎಂದು ಬಿಂಬಿತವಾಗಿದ್ದ ಜಾತಿಗಳ ಜನಸಂಖ್ಯೆ ಈ ವರದಿಯಲ್ಲಿ ಕಡಿಮೆ ಇದೆ. ಉಪಜಾತಿಗಳನ್ನು ಸರಿಯಾಗಿ ಜನಗಣತಿ ಮಾಡಿಲ್ಲ ಎಂಬುದು ಆ ಸಮುದಾಯಗಳ ಆತಂಕ. ಈಗ ವರದಿ ಮಂಡನೆಯಾಗಿದೆ. ಅದರಲ್ಲಿನ ಅಂಶಗಳ ಕುರಿತು ವಿಸ್ತ್ರತ ಚರ್ಚೆಗೆ ಅವಕಾಶವಿದೆ. ಒಂದು ವೇಳೆ ವರದಿಯಲ್ಲಿ ದೋಷ ಇದ್ದರೂ ಅದನ್ನು ಎತ್ತಿ ತೋರಿಸಲು ಸರಕರವೂ ಅವಕಾಶ ಮಾಡಿಕೊಡಬೇಕು. ಏನೇ ಕಳವಳವಿದ್ದರೂ ಸಮುದಾಯದ ನಾಯಕರು ಆಲಿಸಿ ಸಮುದಾಯದ ನಾಯಕರು ಸರ್ಕಾರದ ಬಳಿ ಹೇಳಿಕೊಳ್ಳಬೇಕು. ಸರಕಾರ ಕೂಡ ಸಾವಧಾನದಿಂದ ಆಲಿಸಿ ಸಮುದಾಯದ ಕಳವಳಗಳನ್ನು ಹೋಗಲಾಡಿಸಿ ನೈಜ ಅಂಕಿ, ಅಂಶಗಳನ್ನು ಜನರ ಮುಂದಿಡಬೇಕಿದೆ. ಆ ಬಳಿಕವಷ್ಟೇ ಅಂಗೀಕರಿಸಿ ಜಾರಿ ಮಾಡುವ ಕೆಲಸವನ್ನು ಮಾಡಬೇಕಿದೆ. ಈ ವಿಷಯದಲ್ಲಿ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟರೆ ಈ ವರದಿ ಕಪಾಟು ಸೇರಿ ಧೂಳುಹಿಡಿಯಲಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೨-೦೪-೨೦೨೫
ಚಿತ್ರ ಕೃಪೆ: ಇಂಟರ್ನೆಟ್ ತಾಣ