ಜಾತಿ ನಿರ್ಮೂಲನೆಯ ಹಾದಿಯಲ್ಲಿ…

ಜಾತಿ ನಿರ್ಮೂಲನೆಯ ಹಾದಿಯಲ್ಲಿ…

ಆತ್ಮೀಯ ಗೆಳೆಯರು ಮತ್ತು ಉಪನ್ಯಾಸಕರಾದ ಅರಿವು ಶಿವಪ್ಪ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ಮಾಡಿದ ಸತತ ಪ್ರಯತ್ನದ ಫಲವಾಗಿ ಒಂದು ಸಣ್ಣ ಜಾಗೃತಿಯ ಬದಲಾವಣೆ ಕೋಲಾರ ಜಿಲ್ಲೆಯಲ್ಲಿ ಆಗಿರುವ ಸುದ್ದಿ ಬಂದಿದೆ. ಜಾತಿ ವ್ಯವಸ್ಥೆ ಸಂಪೂರ್ಣ ನಿರ್ಮೂಲನೆ ಆಗಿದೆ ಎಂದು ಭ್ರಮೆಯಲ್ಲಿರುವ ಜನರಿಗೆ ವಾಸ್ತವ ತೆರೆದಿಡುವ ಜೀವಂತ ಸಾಕ್ಷಿಯಿದು.

ಕೋಲಾರ ಜಿಲ್ಲೆಯ ಸುಮಾರು1300 ಮುಜರಾಯಿ ದೇವಾಲಯಗಳ ಮುಂದೆ ಎಲ್ಲರಿಗೂ ಪ್ರವೇಶ ಹಕ್ಕನ್ನು ಖಾತ್ರಿಗೊಳಿಸಲು ಬೋರ್ಡ್ ಹಾಕಲು ವಿನಂತಿಸಲಾಗಿತ್ತು. ಅದರಂತೆ ಎಲ್ಲಾ ಕಡೆ ಬೋರ್ಡ್ ಬರೆಸಲಾಗುತ್ತಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ 50ಕ್ಕೂ ಹೆಚ್ಚು ಗ್ರಾಮೀಣ ದೇವಾಲಯಗಳ ಮುಂದೆ ಬೋರ್ಡ್ ಬರೆದಿರುವುದಕ್ಕೆ ಈ ಪೋಟೋಗಳು ಸಾಕ್ಷಿ. ( ಫೋಟೋಗಳು ಅವರ ಫೇಸ್ ಬುಕ್ ವಾಲ್ ನಲ್ಲಿದೆ.) ಒಳಗೆ ಹೋಗಲು ಇಚ್ಚಿಸುವ ಎಲ್ಲರಿಗೂ ಈಗ ಪ್ರವೇಶ ಸಲೀಸಾಗಲಿದೆ. ಕೋಲಾರ ಮುಜರಾಯಿ ತಹಶಿಲ್ದಾರ್ ಮೇಡಮ್ ಅವರಿಗೆ ಮತ್ತು ಅವರ ಸಿಬ್ಬಂದಿಗೆ ಜಿಲ್ಲೆಯ ಜನರ ಪರವಾಗಿ ಹೃದಯ ಪೂರಕ ಅಭಿನಂದನೆಗಳು.

ನಿಮ್ಮ ಹಳ್ಳಿಯ ದೇವಾಲಯ ಪ್ರವೇಶಕ್ಕೆ ಅಡ್ಡಿ ಆತಂಕಗಳು ಇದ್ದರೆ ಮುಜರಾಯಿ ತಹಶಿಲ್ದಾರರ ಗಮನಕ್ಕೆ ತರಲು ವಿನಂತಿ. ಪತ್ರದ ಮೂಲಕವೂ ತಿಳಿಸಬಹುದು. ವಿಳಾಸ: ಮುಜರಾಯಿ ತಹಶಿಲ್ದಾರರು, ಜಿಲ್ಲಾಧಿಕಾರಿ ಕಚೇರಿ, ಕೋಲಾರ. ಇಲ್ಲೂ ಕಾಮೆಂಟ್ ಮಾಡಿ ತಿಳಿಸಬಹುದು.

ಅಂದರೆ ದೇವಾಲಯಗಳೆಂಬ ಪವಿತ್ರ ಸ್ಥಳಗಳ ಪ್ರವೇಶಕ್ಕೋ ಅಸ್ಪೃಶ್ಯರಿಗೆ ಪ್ರವೇಶವಿದೆ ಎಂದು ಬೋರ್ಡ್ ಹಾಕಬೇಕಾದ ಪರಿಸ್ಥಿತಿ ಈಗಲೂ ಇದೆ ಎಂಬುದಕ್ಕೆ ನಮ್ಮ ಸಮಾಜ ನಾಚಿಕೆ ಪಡಬೇಕು. ಒಂದು ಸಣ್ಣ ಕಲ್ಪನೆ.. ಒಂದು ವೇಳೆ ಭಾರತದಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೆ ಹೇಗಿರುತ್ತಿತ್ತು ಊಹಿಸಿಕೊಳ್ಳೋಣ.............

ಮೊದಲಿಗೆ, ಅತಿಹೆಚ್ಚು ಲಾಭವಾಗುತ್ತಿದ್ದುದು ಪ್ರೀತಿಸುವ - ಮದುವೆಯಾಗುವ ಪ್ರೇಮಿಗಳಿಗೆ ಅಂದರೆ ಅವರಿಗೆ ಅಪರಿಮಿತ ಆಯ್ಕೆಗಳಿರುತ್ತಿದ್ದವು. ಸುಮಾರು 100 ಕೋಟಿ ಜನರಲ್ಲಿ ಮದುವೆಯ ಆಸಕ್ತಿ ಇರುವ ಯುವಕ ಯುವತಿಯರು ಮತ್ತು ಪೋಷಕರಿಗೂ ಸಹ ಜಾತಿಯ ಗೊಂದಲವಿಲ್ಲದೆ ತಮಗೆ ಒಪ್ಪಿತವಾದವರನ್ನು ಆರಿಸಿಕೊಳ್ಳಲು ಬಹಳಷ್ಟು ಆವಕಾಶಗಳಿರುತ್ತಿದ್ದವು. ಈಗ ಜಾತಿ ಉಪಜಾತಿ ಕುಲಗೋತ್ರಗಳಿಂದ ಕೆಲವು ಜಾತಿಗಳಲ್ಲಿ ಇರುವವನೇ ಮನ್ಮಥ ಅಥವಾ ಇರುವವಳೇ ಅಪ್ಸರೆಯಂತಾಗಿದೆ.

ಎರಡನೆಯದಾಗಿ, ದಲಿತರು ಬ್ರಾಹ್ಮಣರು ಗೌಡರು ಲಿಂಗಾಯತರು ಕುರುಬರು ಹೀಗೆ ಯಾವ ಬೇದವೂ ಇಲ್ಲದೆ ಸಾಮಾಜಿಕ ವರ್ಗ ಸಂಘರ್ಷಗಳಿಲ್ಲದೆ ಬೌದ್ಧ ಧರ್ಮ - ಜೈನ ಧರ್ಮ - ಸಿಖ್ ಧರ್ಮ ಈಗ ಕೇಳಿಬರುತ್ತಿರುವ ಬಸವ ಧರ್ಮಗಳ ವಿಭಜನೆಯೇ ಇಲ್ಲದೆ ಇಡೀ ಭರತ ಖಂಡವೇ ಒಂದು ಐಕ್ಯತೆಯ ಗೂಡಾಗಿರುತ್ತಿತ್ತು.

ಮೂರನೆಯದಾಗಿ, ಮೇಲು ಕೀಳು ಇರುತ್ತಲೇ ಇರಲಿಲ್ಲವಾದ್ದರಿಂದ ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಪ್ರಶ್ನೆಯೇ ಬರುತ್ತಿರಲಿಲ್ಲ. ಈಗ ಜೋರಾಗುತ್ತಿರುವ ಎಲ್ಲಾ ಜಾತಿಗಳ ಮೀಸಲಾತಿ ಬೇಡಿಕೆಗಳು ಇರುತ್ತಲೇ ಇರಲಿಲ್ಲ. ಕೇವಲ ಪ್ರತಿಭೆ ಒಂದೇ ಮಾನದಂಡವಾಗಿರುತ್ತಿತ್ತು. ಆದರೆ ಜಾತಿ ವ್ಯವಸ್ಥೆಯಿಂದ ಮೀಸಲಾತಿ ಅನಿವಾರ್ಯವಾಗಿದೆ ಮತ್ತು ಅದು ಶೋಷಿತರ ಮೂಲಭೂತ ಹಕ್ಕು ಮತ್ತು ಅದನ್ನು ನೀಡುವುದು ಶೋಷಕರ ಕರ್ತವ್ಯ ಕೂಡ. ಸಾಮಾಜಿಕ ನ್ಯಾಯ ಒದಗಿಸಲೇ ಬೇಕು.

ನಾಲ್ಕನೆಯದಾಗಿ, ಜಾತಿಯ ಕಾರಣಕ್ಕಾಗಿ ಗಬ್ಬೆದ್ದು ಹೋಗಿರುವ ಚುನಾವಣಾ ವ್ಯವಸ್ಥೆ ಒಂದಷ್ಟು ಪಾವಿತ್ರ್ಯವನ್ನು ಉಳಿಸಿಕೊಂಡು ಉತ್ತಮ ಆಡಳಿತಗಾರರು ಆಯ್ಕೆಯಾಗಿ ಪ್ರಜಾಪ್ರಭುತ್ವ ಸ್ವಲ್ಪ ಯಶಸ್ವಿಯಾಗಿ ಜನರ ಜೀವನಮಟ್ಟ ಸುಧಾರಿಸುತ್ತಿತ್ತು.( ಹಣದ ಪ್ರಭಾವ ಇದ್ದೇ ಇದೆ. ಕನಿಷ್ಠ ಜಾತಿ ಭ್ರಷ್ಟತೆ ಎಂಬ ವಿಷ ಇರುತ್ತಿರಲಿಲ್ಲ.)

ಐದನೆಯದಾಗಿ, ಜಾತಿ Certificate ಗಳು, ಜಾತಿ ಗಣತೀಕರಣ, ಜಾತಿ ಸಂಘಟನೆಗಳು, ಜಾತಿಗಾಗಿ ಆಗುತ್ತಿರುವ ಅಮಾನವೀಯ ಕೊಲೆಗಳು, ಜಾತಿಗಳಿಂದಾಗುತ್ತಿರುವ ಮಾನಸಿಕ ಹಿಂಸೆ ಯಾವುದೂ ಇಲ್ಲದೇ ಎಷ್ಟೊಂದು ಆರಾಮವಾಗಿ ಇರಬಹುದಿತ್ತು. ಇದು ನನಗೆ ಗೋಚರಿಸಿದ ಕೆಲವು ಅಂಶಗಳಷ್ಟೆ. ಇನ್ನೂ ಅನೇಕ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ಬಹಳಷ್ಟು ಇದೆ. ನಿಮಗೂ ಇತರೆ ಅಂಶಗಳು ಹೊಳೆದಲ್ಲಿ ದಯವಿಟ್ಟು ಹಂಚಿಕೊಳ್ಳಿ. ಜಾತಿ ಮುಕ್ತ ಭಾರತ ಆದಷ್ಟು ಶೀಘ್ರ ನಿಜವಾಗಲಿ. ಭಾರತವೆಂಬುದು ಸಮಾನತೆ ಮತ್ತು ಮಾನವೀಯತೆಯ ನಾಡಾಗಲಿ ಎಂದು ಆಶಿಸುತ್ತಾ...

-ವಿವೇಕಾನಂದ ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ