ಜಾತಿ ವ್ಯವಸ್ಥೆಯೂ ಸಂಸ್ಕಾರ - ಸಂಸ್ಕೃತಿ - ಸಂಪ್ರದಾಯಗಳೂ...!!

ಜಾತಿ ವ್ಯವಸ್ಥೆಯೂ ಸಂಸ್ಕಾರ - ಸಂಸ್ಕೃತಿ - ಸಂಪ್ರದಾಯಗಳೂ...!!

ಭಾರತೀಯರಾದ ನಮಗೆ ಜಾತಿ ಬೇರೆಯಲ್ಲ! ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಬೇರೆಯಲ್ಲ! ಅವುಗಳು ಬೇರೆ ಬೇರೆ ಆಗುವುದಕ್ಕೆ ಸಾಧ್ಯವೂ ಇಲ್ಲ! ಕಾರಣ ಪ್ರತಿಯೊಂದು ಜಾತಿಗೂ ಅದರದ್ದೇ ಆದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಿವೆ! ಈ ಸಂಗತಿಯನ್ನು  ಪ್ರಾಂಜಲ‌ ಮನಸ್ಸಿನಿಂದ ಯಾವುದೇ ಪೂರ್ವಾಗ್ರಹಗಳಿಲ್ಲದೇ, ಯಾವುದೇ ಕೀಳರಿಮೆ ಅಥವ ಸಂಕುಚಿತ ಮನೋಭಾವಗಳಿಲ್ಲದೇ ಸಂಶೋಧಕ ದೃಷ್ಟಿಯಿಂದ‌ ನೋಡಿದಾಗ ಅರ್ಥವಾಗಿಯೇ ಆಗುತ್ತದೆ!

ಯಾರ ತಂದೆ ತಾಯಿಯೂ ತಮ್ಮ ಮಕ್ಕಳಿಗೆ ಅನ್ಯ ಜಾತಿಯ ನೆಂಟಸ್ತಿಕೆಯನ್ನು ಹುಡುಕುವುದೇ ಇಲ್ಲ! ಅವರು ತಾವೆಷ್ಟೇ ಜಾತ್ಯಾತೀತರೆಂದು ಪುಂಗಿ ಊದುವವರಾಗಿದ್ದರೂ ಕೂಡ ತಮ್ಮ ಮಕ್ಕಳ ಮದುವೆಯ ವಿಚಾರ ಬಂದಾಗ ಗುಟ್ಟಿನಲ್ಲಿ ತಮ್ಮದೇ ಜಾತಿಯ ನೆಂಟಸ್ತಿಕೆಯನ್ನರಸಲು ಶುರುವಿಡುತ್ತಾರೆ. ತಮ್ಮ ಮಕ್ಕಳು ಅನ್ಯ ಜಾತಿಯವರೊಂದಿಗೆ ಪ್ರೇಮ ವಿವಾಹಕ್ಕೆ ಮುಂದಾದಾಗ ಒಪ್ಪಿಗೆ ಸೂಚಿಸಿದ ನಿದರ್ಶನಗಳು ಸಿಗುತ್ತವೆಯಾದರೂ ತಂದೆ ತಾಯಿಯರೇ ತಮ್ಮ‌ ಮಕ್ಕಳಿಗೆ  ಪರಜಾತಿಯ ನೆಂಟಸ್ತಿಕೆಯನ್ನು ಹುಡುಕಿ ಮದುವೆ ಮಾಡಿಸಿದ ನಿದರ್ಶನಗಳು ಸಿಗಲು ಸಾಧ್ಯವೇ ಇಲ್ಲ! ಕೆಲವೊಮ್ಮೆ ಎರಡು ವಿಭಿನ್ನ  ಜಾತಿಗಳಲ್ಲಿ ಒಂದೇ ರೀತಿಯ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಿರುವ ಕಾರಣಕ್ಕೆ ಅಂತರ್ಜಾತಿಯ ಪ್ರೇಮ ವಿವಾಹಕ್ಕೆ ತಂದೆ ತಾಯಂದಿರು ಕೊನೆಯ ಕ್ಷಣದಲ್ಲಿ ಒಪ್ಪಿಗೆ ಸೂಚಿಸಿದ್ದೂ ಇದೆ. ಅದಕ್ಕೆ ಆಯಾಯ ಜಾತಿಗೆ ಅಂಟಿಕೊಂಡಿರುವ, ಆಯಾಯ ಜಾತಿಯದ್ದೇ ಆದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಕಾರಣ! ಮತ್ತು ಕೆಲವೊಂದು ಜಾತಿಗಳ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಲ್ಲಿರುವ ಸಾಮ್ಯತೆಯೇ ಕಾರಣ!

ಈ ಬೇರೆ ಬೇರೆ ಜಾತಿಗಳೊಂದಿಗೆ ತಳಕು ಹಾಕಿಕೊಂಡಿರುವ ಅವುಗಳದ್ದೇ ಆದ‌ ಮತ್ತು ವಿಶಿಷ್ಟವಾದ ಹಾಗೂ ವಿಭಿನ್ನವಾದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಲ್ಲಿ ಏಕಮತ್ತೆ ಹಾಗೂ ಐಕ್ಯತೆಯನ್ನು ಸಾಧಿಸುವವರೆಗೆ ಮತ್ತು ಅನ್ಯ ಜಾತಿಯ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳ ಬಗ್ಗೆ ಸಹಿಷ್ಣುತೆ ಮನಸ್ಸಿನಲ್ಲಿ ಬೇರೂರಿ ಮರವಾಗುವವರೆಗೆ ಜಾತಿ ವ್ಯವಸ್ಥೆಯ ಮೇಲಿನ ವ್ಯಾಮೋಹವನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಅದನ್ನು ಜಾತಿಯ ಮೇಲಿನ ವ್ಯಾಮೋಹ ಅಂತ ನಾವು ತಪ್ಪು ತಿಳಿದಿದ್ದೇವೆ. ಅದು ವಾಸ್ತವದಲ್ಲಿ ನಮ್ಮ ನಮ್ಮ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳ ಮೇಲಿನ ವ್ಯಾಮೋಹವೇ ಆಗಿದೆ ಎಂಬುದು ಸಂಶೋಧಕನಿಗೆ ಅರ್ಥವಾಗುತ್ತದೆ! ಆ ವ್ಯಾಮೋಹವು ಧರ್ಮದ ಮೇಲಿನ ವ್ಯಾಮೋಹದಷ್ಟೇ ಪ್ರಬಲವಾದದ್ದಾಗಿದೆ. ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯ ಎಂಬುದು ಪ್ರತಿಯೊಬ್ಬ ಭಾರತೀಯನ ಡಿಎನ್ಎಯಲ್ಲಿ ಹಾಸುಹೊಕ್ಕಾಗಿ ಕುಳಿತುಬಿಟ್ಟಿದೆ. ಆದುದರಿಂದ ಅದಕ್ಕೆ ಅಂಟಿಕೊಂಡಿರುವ ಜಾತಿ ವ್ಯವಸ್ಥೆ ನಶಿಸದೆ ಇನ್ನೂ ಉಸಿರಾಡುತ್ತಿದೆ! ಇನ್ನು ಮುಂದೆಯೂ ಶತಶತಮಾನಗಳವರೆಗೂ ಪೂರ್ಣ ಅಳಿಯದೆ ಉಸಿರಾಡುತ್ತಾ ಉಳಿದಿರುತ್ತದೆ ಕೂಡಾ!

ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಮುಂದಿನ ದಿನಗಳಲ್ಲಿ ಮೂಲೆಗುಂಪಾದರೆ ಜಾತಿ ವ್ಯವಸ್ಥೆಯೂ ನಿಧಾನಕ್ಕೆ ಹಳ್ಳ‌ ಹಿಡಿಯುತ್ತದೆ! ಆ ಕಾಲಘಟ್ಟದಲ್ಲಿ ಕೃಷ್ಣಪಕ್ಷದ ಚಂದ್ರನಂತೆ ಈ ಜಾತಿ ವ್ಯವಸ್ಥೆಯೂ ಬಲ ಕಳೆದುಕೊಂಡು ಕ್ಷೀಣವಾಗುವುದರಲ್ಲಿ ಸಂಶಯವಿಲ್ಲ!

-ಮೌನಮುಖಿ-

(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)

ಚಿತ್ರ ಕೃಪೆ: ಇಂಟರ್ನೆಟ್ ತಾಣ