ಜಾತ್ರೆಬೊಂಬೆ

ಜಾತ್ರೆಬೊಂಬೆ

ಆ ಮನೆಯಲ್ಲಿ ನಡೆಯುತ್ತಿರುವುದಾದರೂ ಏನು ಎಂಬುದನ್ನು ಊಹಿಸಲಾಗದಂತೆ ಸಂಭ್ರಮವೋ ಸಂತಾಪವೋ ತುಂಬಿಕೊಂಡಿತ್ತು. ಎರಡೂ ಒಂದಾಗಿರಬಹದು ಇಲ್ಲ ಎರಡೂ ಬೇರೆ ಬೇರೆ ದಡದಲ್ಲಿ ನಿಂತು ಒಂದೇ ಮನೆಯಲ್ಲಿ ವಾಸಿಸುತ್ತಿರಬಹುದು. ಅಷ್ಟು ಮಂದಿಯ ಗುಂಪಲ್ಲಿ ಒಬ್ಬಳು ಹೆಂಗಸು ತನ್ನ ಎಳೆ ಕಂದನನ್ನು ತೋರಿಸಿ ದೇಶಾವರಿ ಮಾತನಾಡುತ್ತಿದ್ದಾಳೆ. 

‘ಈ ಕಾಲದಲ್ಲಿಯೇ ಹೀಗಾದರೆ, ನನ್ನ ಮಗಳ ಗತಿಯೇನು, ಕಥೆಯೇನು?’

    ಮುಂದಿದ್ದ ವ್ಯಕ್ತಿ – “ಈಗೆಲ್ಲಾ ಮಕ್ಕಳು ಆಯ್ಕೆ ಮಾಡಿ ಕೊಂಡವರನ್ನೇ ಹೆತ್ತವರು ಮದುವೆ ಮಾಡಿಕೊಟ್ಟರೆ ಒಳಿತು, ಓಡಿಹೋಗಿ ಮದುವೆಯಾದರು ಎಂಬ ಕೆಟ್ಟ ಪಟ್ಟಕ್ಕಿಂತ ಹೆತ್ತವರೇ ನಿಂತು ಮದುವೆ ಮಾಡಿದರು ಎಂಬ ಮಾತಿನ ಮೂಲಕ ಎಷ್ಟೋ ಅತೃಪ್ತ ಆತ್ಮಗಳು ಸಮಾಧಾನಿಸಬಹುದು, ಇನ್ನೂ ನಿಮ್ಮ ಮಕ್ಕಳ ಕಾಲದಲ್ಲಿ ಎಲ್ಲವನ್ನೂ ಅವರೇ ಮುಗಿಸಿಕೊಳ್ಳುತ್ತಾರೆ, ನಿಮಗೆ ಯಾವುದೇ ತೊಂದರೆ ಕೊಡದೆ!’

‘ನಾನು ನನ್ನ ಮಗಳಿಗೆ ಬೇಗ ಒಂದು ಜೋಡಿ ಹುಡುಕಿ ಮನೆ ತುಂಬಿಸಿಬಿಡುವೆ, ಹೆಣ್ಣು ಹೆತ್ತವರ ಸಂಕಟ ಹೇಳತೀರದು’

‘ಇದು ಹೆಣ್ಣು ಹೆತ್ತವರ ಸಂಕಟದ ವಿಚಾರವಲ್ಲ, ಹೆಣ್ಣಿನ ಸುತ್ತ ಬೇಲಿ ಹಾಕಿದ ನಂತರ ಕೂಡಿಕೊಂಡ ಸಂಕಟ’ ಎಂದು ಹೇಳಿದ ಆ ವ್ಯಕ್ತಿ ಸ್ವಲ್ಪ ಗಂಭೀರವಾಗಿಯೇ ಮಾತು ಮುಂದುವರೆಸಿದರು – ‘ನೋಡಿ, ಹೆಣ್ಣು ಹುಟ್ಟಿದ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸುವಿರಿ, ಇದು ಗಂಡಿಗೆ ಸಹ್ಯವಲ್ಲ, ಬೆಳೆಯುತ್ತಿದ್ದಂತೆ ಕಿವಿ ಮೂಗು ಕತ್ತಿಗೆಲ್ಲ ಯಾವುದಾವುದೋ ಲೋಹ ನೇಯುವಿರಿ, ಹೂ ಮುಡಿಸುವಿರಿ – ಇದೂ ಗಂಡಿಗೆ ಸಹ್ಯವಲ್ಲ, ಋತಿಮತಿಯಾಗುವುದನ್ನೇ ಕಾಯುವ ನೀವು ಮೂಗು ಚುಚ್ಚಿಸುವಿರಿ, ಇಲ್ಲೂ ಗಂಡಿಗೆ ವಿನಾಯಿತಿ, ಆ ನೋವಿನಲ್ಲೇ ಆಕೆ ಏನೇನೋ ಶಾಸ್ತ್ರ ಹೆದರಿಸಿ ಮನೆಯ ವಸ್ತುವಾಗುತ್ತಾಳೆ ಆದರೆ ಅದೇ ವಯಸ್ಸಿನ ಗಂಡು ಮಾತ್ರ ಬೀಡಾಡಿ ದನ-ತಪ್ಪು ತಪ್ಪು-ಆತ ನಿಜಕ್ಕೂ ಲೋಕ ನೀಡಿದ ಸ್ವತಂತ್ರವನ್ನು ಉಪಯೋಗಿಸಿಕೊಂಡಿರುತ್ತಾನೆ. ನಂತರ ಮದುವೆ ಮಾಡುವಿರಿ, ಅಲ್ಲೂ ಹೆಣ್ಣೇ ತಾಳಿಗೆ ಕತ್ತನ್ನೊಡ್ಡಬೇಕು – ಗಂಡು ಮತ್ತೆ ಸ್ವತಂತ್ರ, ನಂತರ ಪ್ರಸವ ವೇದನೆ ಅನುಭವಿಸಿ ಹೆರಬೇಕು – ಈ ವಿಚಾರ ಬಂದಾಗ ನೀವೆಲ್ಲಾ ಪೂಜಿಸುವ ದೇವರೇ ಗಂಡಿನ ಕಡೆಗಿದ್ದಾನೆ. ಇಷ್ಟೆಲ್ಲಾ ಹೇರಿಕೊಂಡ ಆಕೆ ಅಡುಗೆ ಮನೆಯಲ್ಲೇ ಕೊಳೆಯುವಾಗ, ಮುಸುರೆ ಪಾತ್ರೆ ತೊಳೆಯುವಾಗ ನೀವೆಲ್ಲಾ ಅವಳಿಗೆ ಪಾವಿತ್ರ್ಯದ ಪಟ್ಟ ಕಟ್ಟಿ ದೇವರನ್ನಾಗಿ ಮಾಡುವಿರಿ’

‘ಮುಗಿತಾ? ಇನ್ನೂ ಇದೆಯಾ?’ – ಮುಖ ಸಿಂಡರಿಸಿಕೊಂಡು ಆ ಹೆಂಗಸು ಕೇಳಿದಳು.

‘ಸದ್ಯಕ್ಕೆ ಇದು ಮುಗಿಯದ ಕಥೆ, ಗಂಡು ಏನೇ ವ್ಯಭಿಚಾರ ಮಾಡಿದರೂ ಅದರ ಹೊಣೆ ಹೆಣ್ಣಿಗೆ ಹೋಗುತ್ತದೆ, ಹೂವಿನಿಂದ ಮಧು ಹೀರಿದ ದುಂಬಿ ಹಾರಿಹೋದ ನಂತರ ಸಾಕ್ಷಿಯಾಗಿ ಉಳಿದು ಬೆತ್ತಲಾಗುವುದು ಹೂವಲ್ಲವೇ?’

ಯಾಕೋ ಆ ವ್ಯಕ್ತಿ ಗಂಭೀರವಾದರು ಎನಿಸುತ್ತದೆ, ಮಾತು ಮುಂದುವರೆಸದ ಆ ಹೆಂಗಸು ನೇರವಾಗಿ ಮನೆಯೊಗಿನ ಕೋಣೆಗೆ ನುಗ್ಗಿದಳು. ಆ ಕೋಣೆಯಲ್ಲಿ ಅವಳ ತಂಗಿಗೆ ಸಿಂಗಾರವಾಗುತ್ತಿತ್ತು. ನಾವು ಗಮನಿಸಬೇಕಾದ ಒಂದು ಅಂಶವೆಂದರೆ ಕೇವಲ ಬದುಕಿರುವವರಿಗಷ್ಟೇ ಸಿಂಗಾರವಾಗುವುದಿಲ್ಲ. ಹೆಣಗಳಿಗೂ ಸಿಂಗಾರವಾಗುತ್ತದೆ, ಸಿಂಗಾರಗೊಳ್ಳುತ್ತಿರುವ ಪ್ರತಿ ಮನುಷ್ಯ ನಗದಿದ್ದರೆ ಆ ವ್ಯಕ್ತಿ ಹೆಣವಿದ್ದಂತೆ! ಒಳ ಹೋದ ಹೆಂಗಸು ಅಷ್ಟೇ ಖುಷಿಯಿಂದ ‘ರೆಡಿನಾ ಚಂದು, ಅವರು ಬಂದರು...’ ಎಂದು ಹೇಳಿದವಳು ಅಲ್ಪ ಸ್ವಲ್ಪ ಕೆದರಿಕೊಂಡಿದ್ದ ಕೂದಲನ್ನು ಸರಿಮಾಡಿ ಸೀರೆ ಬಿಗಿ ಮಾಡಿದಳು. 

ಅಷ್ಟಕ್ಕೆ ಒಂದಷ್ಟು ಜನ ಬಂದರು. ಬಾಗಿಲ ಬಳಿ ನಿಂತುಕೊಂಡ ಗಂಡಸೊಬ್ಬ ‘ವೆಲ್‍ಕಂ, ವೆಲ್‍ಕಂ’ ಎಂದು ಹಲ್ಲು ಕಿರಿಯುತ್ತಿದ್ದ. ದಂಡು ದಾಳಿಯೊಂದಿಗೆ ಒಳನುಗ್ಗಿದ ಜನ ಹೊಸದಾಗಿ ತಂದಿದ್ದ ಸೋಫಾ ಚೇರುಗಳ ಮೇಲೆ ಐಶಾರಾಮಿಯಾಗಿ ಕುಳಿತರು. ಇಲ್ಲಿ ಕೋಣೆಯಲ್ಲಿ ಸಿಂಗಾರಗೊಂಡ ಹುಡುಗಿ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಬಿಸಿದಳು. ಕಣ್ಣೀರು ಸುರಿಸಿದ ಅವಳ ಮಂಕುಮೊಗವನ್ನು ಕಂಡ ಅವರ ಅಕ್ಕ(ಕೋಣೆಗೆ ಬಂದ ಹೆಂಗಸು) “ಈ ಬಾರಿ ಖಂಡಿತಾ ಒಳ್ಳೆಯದೇ ಆಗುವುದು, ಹೆದರಬೇಡ, ಇದು ನಿನಗೆ ಹೊಸತಲ್ಲ, ಧೈರ್ಯವಾಗಿರು” ಎಂದಳು. ‘ಅಕ್ಕ’ ಎಂದು ಕೈ ಹಿಡಿದುಕೊಂಡ ಆಕೆ ‘ಅದೂ...’ ಎಂದವಳು ಏನೂ ಹೇಳಲಾಗದೆ ಮತ್ತೆ ಮತ್ತೆ ಬಿಕ್ಕಿದಳು. ಅಷ್ಟಕ್ಕೇ ಗಡಿಬಿಡಿಯಲ್ಲಿ ಒಳಬಂದ ಹುಡುಗಿಯ ಅಮ್ಮ – ‘ತಯಾರೇನೇ? ಅವರು ಬಂದು ಕುಳಿತು ನಿನಗೋಸ್ಕರ ಕಾಯುತ್ತಿದ್ದಾರೆ’ ಎಂದವರು ಹುಡುಗಿಯ ಅಳು ಮುಖ ನೋಡಿ ‘ಅಯ್ಯೋ! ನಿನ್ನ ಮನೆಯಾಳಾಗ, ಹಾಕಿದ್ದ ಸ್ನೋ ಪೌಡರೆಲ್ಲ ಅಳಿಸಿಹೋಗಿ ಗೆರೆ ಬಂತಲ್ಲೇ’ ಎಂದವರು ಮತ್ತಷ್ಟು ಸ್ನೋ ಪೌಡರನ್ನು ಬಳಿದರು. ಕೈ ಮೇಲೆ, ಜ್ಯೂಸಿನ ಲೋಟಗಳನ್ನು ಹೊತ್ತು ತೂಕಗೊಂಡ ತಟ್ಟೆಯಿಟ್ಟರು. ಒಮ್ಮೆ ಸುಧೀರ್ಗವಾಗಿ ಉಸಿರೆಳೆದುಕೊಂಡ ಆಕೆ ಕೃತಕ ನಗು ತುಂದುಕೊಂಡು ಹೊರಗೆ ಬಂದು ಒಕ್ಕಡೆಯಿಂದ ಜ್ಯೂಸನ್ನು ನೀಡಿ ಎಲ್ಲರ ಮುಂದೆ ನಿಂತುಕೊಂಡಳು. ಜ್ಯೂಸನ್ನು ಸವಿಯುತ್ತಿದ್ದ ಎಲ್ಲರೂ ಆಕೆಯನ್ನು ನಂಚಿಕೊಳ್ಳುವಂತೆ ಗುರಾಯಿಸಿದರು. ಅವರ ಕಣ್ಣುಗಳು ಆ ಹುಡುಗಿಯ ಅಂಗಾಂಗಗಳ ಮೇಲೆಲ್ಲಾ ಹರಿದಾಡಿದವು.

ಬಂದಿದ್ದ ಹೆಂಗಸರಲ್ಲಿ ಒಬ್ಬಳು ‘ತಲೆ ಎತ್ತವ್ವ’ ಎಂದಳು. ಮೂಗು ಮುಸುಡಿಯನ್ನೆಲ್ಲಾ ಅಳೆದಳು. ಮೆಳ್ಳಗಣ್ಣೋ, ಮೆಡ್ಡಗಣ್ಣೋ ಎಂಬುದನ್ನು ಪರೀಕ್ಷಿಸಿದಳು, ಎಡರೂ ಒಂದಾಗಿ ಕಾಣುತ್ತಿವೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಮುಖದ ಬಣ್ಣಕ್ಕೂ, ಕೈ ಬಣ್ಣಕ್ಕೂ ಮತ್ತು ಕಳುಹಿಸಿದ್ದ ಫೋಟೋದಲ್ಲಿದ್ದ ಬಣ್ಣಕ್ಕೂ ವ್ಯತ್ಯಾಸ ಇರುವುದನ್ನು ಗಮನಿಸಿದಳು. ಮತ್ತೊಬ್ಬಳು ಕಾಲಿನ ಬೆರಳುಗಳನ್ನು ಎರಡು ಮೂರು ಬಾರಿ ಎಣಿಸಿದಳು. ಯಾವುದೋ ವ್ಯಾಪಾರಕ್ಕೆ ಬಂದವರಂತೆ, ಮತ್ತೀಗ ವ್ಯಾಪಾರ ಮುಗಿಸಿದವರಂತೆ ಎದ್ದು ನಿಂತ ಜನ ‘ಯಾವುದನ್ನೂ ನಾಳೆಯೊಳಗೆ ತಿಳಿಸುತ್ತೇವೆ’ ಎಂದು ಗರ್ವದಿಂದ ಹೇಳಿ ಹೊರಟುಹೋದರು.

ಒಳಬಂದ ಈಕೆ ಕೂಡಲೇ ರೂಮಿನ ಬಾಗಿಲನ್ನು ಧಡಾರನೆ ಮುಚ್ಚಿ ಸೆಕೆಯ ಈ ಕಾಲದಲ್ಲೂ ಸುತ್ತಿಕೊಂಡಿದ್ದ ಮಣಭಾರದ ಸೀರೆಯನ್ನು ಕಿತ್ತು ಬಿಸಾಡಿದಳು. ಹಾಸಿಗೆ ಮೇಲೆ ಕುಳಿತವಳು ನಿಟ್ಟುಸಿರು ಬಿಡುತ್ತ ತನ್ನ ಸ್ಥಿತಿಗೆ ತಾನೇ ಮರುಗಿ ಕನಿಕರಪಟ್ಟಳು. ಇಂದು ಭಾನುವಾರವಾದ ಕಾರಣವೋ ಏನೋ ಒಬ್ಬರ ಹಿಂದೊಬ್ಬರಂತೆ ಯಾವುದೋ ಸ್ಪರ್ಧೆಯ ಹಿಂದೆ ಬಿದ್ದವರಂತೆ ಬರುತ್ತಲೇ ಇದ್ದಾರೆ, ಜೊತೆಗೆ ಬ್ರೋಕರ್ ಎಂಬ ಹೆಸರಿನಲ್ಲಿ ಬಸ್ಟ್ಯಾಂಡ್‍ನಲ್ಲಿ ನಿಂತವರ ಕೈಚಳಕ. ಇದು ಆಕೆಗೆ ಹೊಸತೇನಲ್ಲ. ಈ ರೀತಿಯಾದ ದಿನಗಳನ್ನು ಆಕೆ ಎಷ್ಟು ಬಾರಿ ಉಸಿರುಗಟ್ಟಿ ನೋಡಿಲ್ಲ? ಎಷ್ಟು ಬೆಳಗುಗಳು ಆಕೆಯ ಪಾಲಿಗೆ ಕತ್ತಲಾಗಿಲ್ಲ? ಎಷ್ಟು ನೋಟಗಳು ಆಕೆಯನ್ನು ಅಳೆದು ಸುರಿದು ಒಂದೇ ಗುಕ್ಕಿನಲ್ಲಿ ತಿರಸ್ಕರಿಸಿಲ್ಲ? ಇಂದು ಮುಂಜಾನೆ-ಮಲಗಿದ್ದವಳನ್ನು ಅಮ್ಮ ಎಬ್ಬಿಸಿ ‘ಬೇಗ ಸ್ನಾನ ಮಾಡಿ ತಲೆಬಾಚಿ ತಯಾರಾಗು, ಅವರು ಬರುತ್ತಿದ್ದಾರೆ’ ಎಂದಾಗ ‘ಅಮ್ಮ, ನಾನು ಸ್ವಲ್ಪ ಮಾತನಾಡುವುದಿದೆ’ ಎಂದೊಡನೆ ‘ಯೇ, ಅದಾಗಲೇ ಅವರು ನಮ್ಮ ಊರನ್ನು ಸಮೀಪಿಸಿದ್ದಾರೆ, ಮೊದಲು ತಯಾರಾಗು’ ಎಂದು ರೇಗಿಕೊಂಡಿದ್ದಳು. ಪೆಚ್ಚುಮೋರೆಯಲ್ಲಿ ಹೊರಬಂದಾಗ ಸಾರಾಯಿ ವಾಸನೆ ಬಡಿದ ಅಪ್ಪ ಇದಿರಾದನು. ‘ಥೂ! ಇಷ್ಟು ಹೊತ್ತಿಗೆ? ನಿನ್ನದು ಇದೇ ಆಯಿತು’ ಎಂದು ರೇಗಿದವಳು ಸ್ನಾನ ಮಾಡಿ ತಯಾರಾದಳು. ಆಗಷ್ಟೇ ಬಿಡಿಸಿಕೊಂಡುಬಂದು ಕಟ್ಟಿದ ಹೂವುಗಳು ಸುವಾಸನೆ ಬೀರುತ್ತಿದ್ದರೂ ಇವಳಿಗೆ ಬಾಡಿಹೋಗಿ ಮುದುಡಿ ಬಿದ್ದಂತೆ ಕಂಡಿತ್ತು. ಈ ಬಗೆಯಾಗಿ ಸುವಾಸನೆ ಬೀರುವ ಹೂವುಗಳು, ಈ ಹಿಂದಿನ ಅನೇಕ ದಿನಗಳಲ್ಲಿ ಎಲ್ಲರ ಪಾಲಿಗೂ ಬಾಡಿಹೋಗಿವೆ. 

ತಿಂಡಿಯ ಸಮಯಕ್ಕೆ ಅಮ್ಮ ಹೇಳಿದ ಅವರು ಬಂದರು. ಯಾವುದೋ ಹೋಟೆಲ್ಲಿಗೆ ಹೋಗಿ ತಿಂಡಿ ತಿಂದುಹೋಗಲು ಬಂದಂತೆ. ಬಂದವರಿಗೆ ಮೊದಲು ತಿಂಡಿಯ ಸೇವನೆಯೇ ಮುಖ್ಯವಾಯಿತು. ಗಡತ್ತಾಗಿಯೂ ಆಯಿತು! ನಂತರ ಈಗ ಮಾಡಿದಂತೆ ಜ್ಯೂಸಿನ ಬದಲು ಟೀ ತಟ್ಟೆಯನ್ನು ಹೊತ್ತು ಆಕೆ ಇವರ ಮುಂದೆ ನಿಂದಳು. ಮತ್ತದೇ ಪ್ರಲಾಪ, ಎಲ್ಲಾ ಕಣ್ಣುಗಳೂ ಅವಳ ಮೇಲೆ ಹಡಗಾಡಿದವು. ‘ಹುಡುಗಿ ಸ್ವಲ್ಪ ಸಣ್ಣ ಅಲ್ಲವೇ?’ ಎಂದು ಯಾರೋ ಪಿಸುಗುಟ್ಟಿಕೊಂಡರು. ಜೊತೆ ಬಂದಿದ್ದ ಗಂಡಸರೆಲ್ಲಾ ತನ್ನನ್ನು ಅಳೆಯುವುದು ಕಂಡು ಹೇಸಿಗೆಯಾದರೂ ಯಂತ್ರದಂತೆ ಆಕೆ ಮನಸ್ಸು ಗಟ್ಟಿ ಮಾಡಿಕೊಂಡು ನಿಂತುಕೊಂಡಳು. ಆ ಮನೆಯಲ್ಲಿ ಜಾತ್ರೆ ನಡೆಯುತ್ತಿರುವಂತೆ ಎಲ್ಲರಲ್ಲೂ ಸಡಗರ ತುಂಬಿದ್ದರೆ, ಆಕೆ ಜಾತ್ರೆಯಲ್ಲಿ ಮಾರಾಟಕ್ಕಿಟ್ಟ ಬೊಂಬೆಯಂತೆ ಸಿಂಗಾರಗೊಂಡಿದ್ದಳು, ಕೃತಕ ನಗೆ ಬೀರಿದ್ದಳು. ಒಂದಿಬ್ಬರು ಗಂಡಸರ ವಕ್ರದೃಷ್ಟಿ ತನ್ನ ಎದೆ ಮತ್ತು ನಿತಂಬಗಳ ಮೇಲೆ ಎಗ್ಗಿಲ್ಲದೇ ಹರಿದಾಡುತ್ತಿದ್ದನ್ನು ಆಕೆ ಎದುರಿಸಲಾಗಲಿಲ್ಲ, ನಿಂತ ಜಾಗದಿಂದ ಕದಲಲೂ ಸಾಧ್ಯವಾಗಲಿಲ್ಲ. ಆ ಜನಗಳದೂ ಮತ್ತದೇ ರಾಗ ‘ಮತ್ತೆ ಹೇಳುತ್ತೇವೆ’. ಈ ರೀತಿಯ ರಾಗಗಳನ್ನು ಅಥವಾ ಆಕೆಯ ಪಾಲಿನ ಕರ್ಕಶಗಳನ್ನು ಆಕೆ ಲೆಕ್ಕವಿಲ್ಲದಷ್ಟು ಬಾರಿ ಕೇಳಿ ರೋಸಿಹೋಗಿದ್ದಾಳೆ. ಹುಡುಗಿ ಇಷ್ಟವಾಗಲಿಲ್ಲವೆಂದು ನೇರವಾಗಿಯೇ ಹೇಳಿ ಕೆಲವರು ಮುಖಕ್ಕೆ ಹೊಡೆದಿದ್ದರೆ, ಮತ್ತೆ ಹಲವರು ದೇವರು ಕೂಡಲಿಲ್ಲ, ದೇವರ ಕೂಡಿಕೆಯಾಗಿದೆ ಜಾತಕ ಕೂಡಲಿಲ್ಲ, ಎಲ್ಲ ಸರಿಯಿದ್ದಾಗ ವರದಕ್ಷಿಣೆ ಕೂಡಲಿಲ್ಲ ಎಂಬ ರಾಗ-ರೋಗಗಳು. 

ಮುಂಜಾನೆಯ ಅಷ್ಟು ಕಣ್ಣಳತೆಗಳನ್ನು ತಪ್ಪಿಸಿಕೊಂಡ ಆಕೆ ನಿಟ್ಟುಸಿರು ಬಿಟ್ಟು ಕೋಣೆ ಸೇರಿಕೊಂಡು ಮೈಸುತ್ತಿಕೊಂಡು ಬೆವರಿಳಿಸಿದ ಸೀರೆಯ ಸುತ್ತನ್ನು ಬಿಚ್ಚುವಾಗ ಹೊರಗಡೆಯಿಂದ ತಮ್ಮ ಜೋರಾಗಿ ಕೂಗಿಕೊಂಡ – ‘ಅಮ್ಮಾ, ಅವರೂ ಬಂದಿದ್ದಾರೆ, ಇಲ್ಲೇ ಹೋಟೆಲ್‍ನಲ್ಲಿ ಕುಳಿತಿದ್ದಾರೆ, ನೀವು ಹೇಳಿದೊಡನೆ ಬರುತ್ತಾರಂತೆ’. 

ತಲೆಗೆ ಸಿಕ್ಕಿಸಿದ ಕ್ಲಿಬ್ಬೊಂದನ್ನು ಬಿಚ್ಚಿದ್ದ ಅಮ್ಮ ಎಡಗೈಯನ್ನು ಎತ್ತಿ ಕೇಶವಿನ್ಯಾಸವನ್ನು ಕೆಡಿಸದೆ ಮತ್ತೆ ಅಲ್ಲಿಗೇ ತುರುಕಿ ತುರುಬನ್ನು ಮತ್ತೆ ಬಿಚ್ಚಿ ಕಟ್ಟಿ, ಮಲ್ಲಿಗೆ ದಿಂಡನ್ನು ಸರಿಪಡಿಸಿದಳು. ಇವರೂ ಬಂದು ಕೆಲಸ ಮುಗಿಸಿಕೊಂಡಹೋಗಲಿ ಎಂದು ನಿಶ್ಚಯಿಸಿದವಳೇ ಮತ್ತೆ ತಟ್ಟೆ ಹಿಡಿದು ಎಲ್ಲರ ಮುಂದೆ ನಿಂತಳು. ಬಂದಿದ್ದ ಹೆಂಗಸರು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಆತ್ಮೀಯವಾಗಿ ಮಾತನಾಡಿಸಿದರೂ ಅಲ್ಲಿ ಅವರು ವ್ಯಾಪಾರ ದೃಷ್ಟಿಯಿಂದಲೇ ಬಂದಂತೆ ಕಾಣುತ್ತಿತ್ತು. ಇವರ ಈ ನೋಡುವ ಕಾರ್ಯ ಎಗ್ಗಿಲ್ಲದೆ ನಡೆಯುವಾಗ, ಒಬ್ಬರಿಗೊಬ್ಬರು ಚರ್ಚೆಯ, ಮಾತಿನ ತೆವಲಿಗೆ ಬಿದ್ದರುವಾಗ ಕೋಣೆಯೊಳಗೆ ಗುಸುಗುಸು ಶುರುವಾಗಿತ್ತು. ಆ ಗುಸುಗುಸುನೊಳಗಿನ ಮರ್ಮ ಆಕೆಗೆ ಅರ್ಥವಾಯಿತು. ಮತ್ತೆ ಯಾರೋ ಇದೇ ಕೆಲಸದ ನಿಮಿತ್ತ ಮನೆ ಬಿಟ್ಟಿದ್ದಾರೆಂಬುದು ಆಕೆಗೆ ಸುಸ್ಪಷ್ಟವಾಯಿತು. ಇವರು ಹೋದ ತಕ್ಷಣ ಕೋಣೆಗೆ ಬಂದಳು, ಮತ್ತೆ ಟೀ ಕುದಿಯುತ್ತಿತ್ತು!

ಎಲ್ಲರ ಮುಂದೆ ನಿಂತೂ ನಿಂತೂ ಸುಸ್ತಾದವಳು ಈಗ ಬಂದಿದ್ದವರ ಬಳಿ ನಿಂತದ್ದು ಈ ದಿನಕ್ಕೆ ಐದನೆ ಬಾರಿ. ಒಟ್ಟಾರೆಯಾಗಿ ಲೆಕ್ಕವಿಲ್ಲ. ಹೊರಗೆ ಮಕ್ಕಳು ಮಿಠಾಯಿ ಕೊಂಡು ಚಪ್ಪರಿಸಿ ತಿನ್ನುತ್ತಿದ್ದರು. ಈಕೆಗೂ ಕತ್ತರಿಸಿದ ಗಾತ್ರ, ಆಕಾರಕ್ಕೂ ಹೊಂದಿಕೊಂಡು ಬಾಟಲಿನೊಳಕ್ಕೆ ಸೇರಿಕೊಂಡು ಪ್ರದರ್ಶನಗೊಳ್ಳುವ ಮಿಠಾಯಿಗೂ ವ್ಯತ್ಯಾಸವಿಲ್ಲ ಅಲ್ಲವೇ? ಕೊಂಡವರಿಗೆ ನೆಕ್ಕುವುದಷ್ಟೇ ಮುಖ್ಯ.

ಅರೆನಿದ್ದೆಯಲ್ಲಿ ಅರ್ಧಸುಖದಲ್ಲಿದ್ದ ಆಕೆಗೆ ಎಚ್ಚರವಾದದ್ದು ಯಾರೋ ಕೋಣೆಯ ಬಾಗಿಲನ್ನು ಬಡಿದಾಗ. ಯಾವುದೋ ದನಿ ಅಸ್ಪಷ್ಟವಾಗಿ ಅವಳ ಕಿವಿಗೆ ಬಡಿಯುತ್ತಿತ್ತು. ‘ಚಂದೂ... ಚಂದೂ... ಬೇಗ ರೆಡಿಯಾಗು, ಮೈಸೂರಿನವರು ಬರುತ್ತಿದ್ದಾರೆ, ಬ್ರೋಕರ್ ಈಗಷ್ಟೇ ಫೋನ್ ಮಾಡಿದ್ದ, ಚಂದೂ... ಚಂದೂ...’. ಎಚ್ಚರಗೊಂಡ ಆಕೆ ತೀವ್ರ ಕೋಪಗೊಂಡು ನಿದ್ದೆಗಣ್ಣಿನಲ್ಲಯೇ ಬಾಗಿಲು ತೆರೆದಳು. ಆದರೆ ಮಾತನಾಡುವ ಧೈರ್ಯ ಕೂಡಲೇ ಕುಗ್ಗಿಹೋಯಿತು. 

‘ಅಮ್ಮಾ, ನನಗೆ...’

‘ಅಯ್ಯೋ, ನನ್ನ ಟೆನ್ಸನ್ ನನಗೆ, ಮೊದಲು ತಯಾರಾಗು, ಅವರು ಇಲ್ಲೇ ಎಲ್ಲೋ ಇದ್ದಾರಂತೆ, ಇನ್ನೇನೋ ಬಂದುಬಿಡುತ್ತಾರೆ, ಸೀರೆ ಅಸ್ತವ್ಯಸ್ತವಾಗಿದೆ, ಸರಿ ಮಾಡಿಕೋ, ಕೂದಲು ಕೆದರಿಕೊಂಡಿದೆ, ಕನ್ನಡಿ ನೋಡು - ಹಣೆ ಬೊಟ್ಟು ಜಾರಿದೆ’ ಎಂದು ಹೇಳಿದ ಅಮ್ಮ ಸರಸರನೆ ಅಡುಗೆ ಮನೆಗೆ ಹೊರಟುಹೋದಳು. ಆಕೆ ಅಷ್ಟೇ ಕೋಪದಿಂದ ಬಾಗಿಲನ್ನು ಮುಚ್ಚಿದಳು. ಅಡುಗೆ ಮನೆಯಲ್ಲಿ ಮತ್ತೆ ಟೀ ಕುದಿಯುವ ಶಬ್ದ ಕೇಳಿಸತೊಡಗಿತು.

    ಈ ಬಾರಿ ಬಂದ ಜನಸಂಖ್ಯೆ ತುಸು ಜಾಸ್ತಿಯೇ ಇತ್ತು. ಟೀಯನ್ನು ಹೆಚ್ಚು ಹೆಚ್ಚು ಕುದಿಸಿದರು. ಎಲ್ಲಾ ತಯಾರಾದ ನಂತರ ಚಂದುವಿನ ರೂಮಿಗೆ ಬಂದ ಅವಳಕ್ಕ ‘ಚಂದೂ... ಚಂದೂ...’ ಎಂದು ಮೆತ್ತಗೆ ಕೂಗಿದಳು. ಮಾತಿಲ್ಲ. ಮತ್ತೆ ‘ಚಂದೂ... ಚಂದೂ...’ ಎಂದು ಸ್ವಲ್ಪ ಜೋರಾಗೇ ಕೂಗಿದಳು. ಮತ್ತೆ ಮಾತಿಲ್ಲ. ಅಷ್ಟಕ್ಕೇ ಚಂದುವಿನ ಅಮ್ಮ ಬಂದು ‘ಚಂದೂ... ಚಂದೂ... ಬಾಗಿಲು ತೆಗೆಯೇ, ಅವರು ಕಾಯ್ತಾ ಇದ್ದಾರೆ, ಚಂದೂ’. ಹೌದು, ಮಾತಿಲ್ಲ. ಮತ್ತೆ ಮತ್ತೆ ಕೂಗಿದರೂ ಬಾಗಿಲು ತೆರೆದುಕೊಳ್ಳದಿದ್ದಾಗ ತುಸು ಜೋರಾಗಿಯೇ ಕೂಗುವ ಅನಿವಾರ್ಯತೆ ಬಿತ್ತು. ಈ ಮಾತಿನ ಜೋರನ್ನು ಕೇಳಿಸಿಕಂಡ ಒಂದಷ್ಟು ಜನಕ್ಕೆ ಕುತೂಹಲ ಹೆಚ್ಚಾಗಿ ಒಳಬಂದರು. ಸತ್ಯ ತಿಳಿದು ಗಾಬರಿಗೊಂಡು ‘ಬೇಗ ಬಾಗಿಲು ಹೊಡೆಯಿರಿ, ಏನೋ ಅನಾಹುತವಾಗಿದೆ’ ಎಂದೊಡನೆ ಎಲ್ಲರೂ ಕಾರ್ಯಪ್ರವೃತ್ತರಾದರು. ಗುದ್ದಲಿ ಪಿಕಾಸಿ ಉಪಯೋಗಿಸಿ ಕಷ್ಟಪಟ್ಟು ಬಾಗಿಲಿನ ಅಗುಳಿ ಮೀಟಿ ಒಳಬಂದವರಿಗೆ ಆಶ್ಚರ್ಯ ಕಾದಿತ್ತು. ಅಲ್ಲಿ ಚಂದು ಇರಲಿಲ್ಲ, ಕೊಣೆಯ ಮತ್ತೊಂದು ಬಾಗಿಲು ತೆರೆದುಕೊಂಡು ಸ್ವತಂತ್ರವಾಗಿ ವಾಲಾಡುತ್ತಿತ್ತು. ‘ಚಂದು ಎಲ್ಲಿ? ಚಂದು ಎಲ್ಲಿ?’ ಎಂದು ದಡಬಡಾಯಿಸಿ ಕೂಗಿಕೊಂಡ ಕೆಲವರು ಆ ಬಾಗಿಲಿನ ದಾರಿ ಒಯ್ಯುವ ಬಾವಿ ಕಡೆಗೆ ಓಡಿದರೆ, ಒಂದಷ್ಟು ಜನ ಕೆರೆಯ ಹಾದಿ ಹಿಡಿದರು, ಒಂದಿಬ್ಬರು ಬಸ್ಟ್ಯಾಂಡ್ ಕಡೆ ಓಡಿದರು. ಇಲ್ಲಿ ಮನೆಯಲ್ಲಿ, ಟೀ ಕಪ್‍ಗಳನ್ನು ಹೊತ್ತುಕೊಂಡ ತಟ್ಟೆ ಅನಾಥವಾಯಿತು.