ಜಾನುವಾರುಗಳ ಚರ್ಮಗಂಟು ರೋಗ ಸಂಕಟ

ಜಾನುವಾರುಗಳ ಚರ್ಮಗಂಟು ರೋಗ ಸಂಕಟ

ಕೋವಿಡ್ ಸಾಂಕ್ರಾಮಿಕದಿಂದ ಬಿಡುಗಡೆಗೊಂಡು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಸಂದರ್ಭದಲ್ಲಿ ಮುಂಗಾರಿನ ಆರ್ಭಟ ರಾಜ್ಯವನ್ನು ತತ್ತರಿಸುವಂತೆ ಮಾಡಿದೆ. ಇದರಿಂದ ರೈತರಿಗೆ ಸಾಕಷ್ಟು ಹಾನಿಯಾಗಿದೆ. ಆಹಾರ ಧಾನ್ಯಗಳು, ಹಣ್ಣು ತರಕಾರಿ ಪೂರೈಕೆ ನಿಗದಿತ ಪ್ರಮಾಣದಲ್ಲಿಲ್ಲ. ಇದರಿಂದ ಹಣದುಬ್ಬರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಇದಲ್ಲದೆ ಮುಂಗಾರಿನ ಹವಾಮಾನ ವೈಪರೀತ್ಯ ಮನುಷ್ಯನ ಆರೋಗ್ಯದ ಮೇಲಷ್ಟೇ ಅಲ್ಲ, ಜಾನುವಾರುಗಳ ಸ್ವಾಸ್ಥ್ಯವನ್ನೂ ಹದಗೆಡಿಸಿದೆ. ಬೆಳಗಾವಿ, ಹಾವೇರಿ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕರು, ಹಸು ಎತ್ತುಗಳಿಗೆ ಚರ್ಮಗಂಟು ರೋಗ ವ್ಯಾಪಿಸಿದೆ. ಈಗ ೧೦ ರಾಜ್ಯಗಳು ಹಾಗೂ ಕೇಂದ್ರಾಳಿತ ಪ್ರದೇಶಗಳಲ್ಲೂ ಗಂಟು ರೋಗ ಭಯಾನಕವಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ೮೦ ಸಾವಿರ ಜಾನುವಾರುಗಳು ಲಿಂಪಿಸ್ಕಿನ್ ಡಿಸೀಸ್ ನಿಂದ ಮೃತಪಟ್ಟಿವೆ. ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಪಂಜಾಬ್ ನ ಜಾನುವಾರುಗಳಲ್ಲೂ ವ್ಯಾಪಕವಾಗಿ ಚರ್ಮಗಂಟು ರೋಗ ಆವರಿಸಿಕೊಂಡಿದೆ. ಕೋವಿಡ್ ಚೀನಾದಿಂದ ಆವರಿಸಿಕೊಂಡಿತ್ತು. ಚರ್ಮಗಂಟು ರೋಗದ ಮೂಲ ಹುಡುಕಿದರೆ ಆಫ್ರಿಕ ಖಂಡದಲ್ಲಿ ಕಂಡುಬಂದಿತ್ತು. ನಂತರ ಎಲ್ಲೆಡೆ ವ್ಯಾಪಿಸಿದೆ.

ಎರಡು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ಕಲಬುರುಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಾವಿರಾರು ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿದ್ದವು. ಈಗ ಮತ್ತೆ ಅದರ ಪ್ರಸರಣ ಹೆಚ್ಚುತ್ತಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ೧೫ ಜಾನುವಾರುಗಳು ಮೃತ ಪಟ್ಟಿವೆ. ನಿರಂತರ ಜ್ವರ, ಕಣ್ಣು, ಮೂಗಿನಿಂದ ಜೊಲ್ಲು ಸೋರಿಕೆ, ಚರ್ಮದ ಮೇಲೆ ಗಂಟು ಈ ರೋಗದ ಲಕ್ಷಣ. ಮೇವಿನಿಂದ ದೂರವಾಗಿ ನಿಶ್ಯಕ್ತಿ ಆವರಿಸಿಕೊಂಡು ಅಂತಿಮವಾಗಿ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ತೀರಾ ಎಳೆ ಕರುಗಳಿದ್ದಲ್ಲಿ ಹಾಲಿನ ಕೊರತೆಯಿಂದ ಅವು ಕೂಡ ಸಾಯುತ್ತವೆ. ಆ ಜಾನುವಾರು ಗರ್ಭ ಧರಿಸಿದ್ದಲ್ಲಿ ಗರ್ಭದೊಳಗಿನ ಕರು ಕಣ್ಣು ಮುಚ್ಚುತ್ತದೆ. ಈ ರೋಗವನ್ನು ನಿಯಂತ್ರಿಸುವುದಕ್ಕಾಗಿ ಎರಡು ತಿಂಗಳ ಹಿಂದೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ‘ಲಿಂಪಿ ಪ್ರೊವ್ಯಾಕ್' ಎಂಬ ಔಷಧವನ್ನು ಬಿಡುಗಡೆ ಮಾಡಿದ್ದರು. ಇದರಿಂದ ರೋಗವಿನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿರೋಧಕ ಚುಚ್ಚುಮದ್ದುಗಳ ವ್ಯಾಪಕ ಸಂಶೋಧನೆಯಾಗಬೇಕಾಗಿದೆ. ನಮ್ಮಲ್ಲಿ ಕೃಷಿ ವಿವಿಗಳಾಗಿರಬಹುದು. ಕೃಷಿ ತಜ್ಞರೇ ಆಗಿರಬಹುದು. ಇಲ್ಲಿರುವ ವ್ಯಾಪಕ ಸಮಸ್ಯೆಯೆಂದರೆ ಕ್ಷೇತ್ರಕಾರ್ಯದ ಕೊರತೆ. ಅನ್ವಯಿಕ ಜ್ಞಾನದ ಅಭಾವ. ಕೃಷಿಕರು ಎಂಥದ್ದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಅವರಲ್ಲಿಗೆ ಧಾವಿಸಿ ಸಮಸ್ಯೆಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಮಾಡಿ, ಪರಿಹಾರಗಳನ್ನು ರೂಪಿಸುವಲ್ಲಿ-ಸಮನ್ವಯದ ದೊಡ್ಡ ಕೊರತೆಗಳು ಕಾಣಿಸುತ್ತಿವೆ. ಇದನ್ನು ನೀಗಿಸಲು ಸರಕಾರ ಸೂಕ್ತ ಕಾರ್ಯನೀತಿಯನ್ನು ರೂಪಿಸುವ ತುರ್ತು ಇದ್ದೇ ಇದೆ. ಕೋವಿಡ್ ಸಂದರ್ಭದಲ್ಲಿ ಇಂಥ ಸಮನ್ವಯವಿತ್ತು. ಇಂಥ ಮನೋಭಾವ ಸೀಮಿತವಾಗಬಾರದು. ಈಗ ರಾಜ್ಯ ಸರಕಾರ ಚರ್ಮಗಂಟು ರೋಗದ ತೀವ್ರತೆಯನ್ನು ಅರಿತಿದೆ. ಮೃತ ಪಟ್ಟ ಜಾನುವಾರಗಳಿಗೆ ಪರಿಹಾರ ನೀಡಲು ೨ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಮೃತಪಟ್ಟ ಕರು, ಹಸು, ಎತ್ತುವಿಗೆ ಕ್ರಮವಾಗಿ ೫೦೦೦, ೨೦,೦೦೦, ೩೦,೦೦೦ ರೂ. ಪರಿಹಾರ ಘೋಷಿಸಿದೆ. “ಜಾನುವಾರುಗಳ ಚರ್ಮಗಂಟು ರೋಗದ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ. ರೋಗ ತೀವ್ರಗೊಂಡ ಜಿಲ್ಲೆಗಳಿಗೆ ಪಶು ವೈದ್ಯರ ತಂಡ ಕಳುಹಿಸಿ, ಔಷಧೋಪಚಾರ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಪರಿಹಾರದ ಮೊತ್ತವನ್ನು ಹೆಚ್ಚಿಸಿದ್ದೇವೆ" ಎಂದು ಸಿ ಎಂ ಬಸವರಾಜ ಬೊಮ್ಮಾಯಿ ಸಮಾರಂಭವೊಂದರಲ್ಲಿ ಘೋಷಿಸಿದ್ದರು. ಈಗ ತಳಮಟ್ಟದ ವ್ಯವಸ್ಥೆ ಕ್ರಿಯಾಶೀಲವಾಗಬೇಕಾಗಿದೆ. ರೋಗವನ್ನು ಹದ್ದು ಬಸ್ತಿಗೆ ತರಲು ಸಂಬಂಧಿಸಿದವರು ಶಕ್ತಿಮೀರಿ ಯತ್ನಿಸಬೇಕಾಗಿದೆ. 

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೩-೧೦-೨೦೨೨

ಚಿತ್ರ ಕೃಪೆ: ಅಂತರ್ಜಾಲ ತಾಣ