ಜಾನುವಾರುಗಳ ಮೇಲೆ ಸವಾರಿ ಮಾಡುವ ಗೋವಕ್ಕಿ

ಇವತ್ತು ನಿಮ್ಮ ಜೊತೆ ನಾನು ಮಾತಾಡಬೇಕು ಅಂತ ಇರೋದು ಈ ಹಕ್ಕಿಯ ಬಗ್ಗೆ. ನಿಮ್ಮ ಮನೆಯ ಸುತ್ತಮುತ್ತ, ತೋಡು, ಗದ್ದೆ, ಮುಂತಾದ ಕಡೆ ನೀವು ಈ ಹಕ್ಕಿಯನ್ನು ನೋಡಿರಬಹುದು. ಎಲ್ಲಾದ್ರು ಹಸುವನ್ನು ಮೇಯಲಿಕ್ಕೆ ಕಟ್ಟಿದ್ರೆ ಅದರ ಆಸುಪಾಸಿನಲ್ಲಿ ಓಡಾಡುತ್ತ, ಅಥವಾ ಅದರ ಬೆನ್ನಮೇಲೆ ಕೂತುಕೊಂಡು ಸವಾರಿ ಮಾಡುತ್ತಾ ಇರುವ ಈ ಹಕ್ಕಿಯನ್ನು ಖಂಡಿತಾ ನೋಡಿರುತ್ತೀರಿ. ಇವು ದನಕರುಗಳ ಸುತ್ತಾನೇ ಯಾವಾಗ್ಲೂ ಯಾಕೆ ಸುತ್ತುತ್ತಿರುತ್ತವೆ ಅಂತ ಯಾವತ್ತಾದರೂ ಯೋಚನೆ ಮಾಡಿದ್ದೀರಾ? ಇದಕ್ಕೆ ಉತ್ತರ ಕೊನೆಗೆ ಹೇಳ್ತೇನೆ.
ಈ ಹಕ್ಕಿಯ ಚಿತ್ರವನ್ನೊಮ್ಮೆ ಸರಿಯಾಗಿ ಗಮನಿಸಿ. ಸುಣ್ಣ ಬಳಿದ ಹಾಗೆ ಕಾಣುವ ಅಚ್ಚ ಬಿಳಿ ದೇಹ, ಹಳದಿಬಣ್ಣದ ಕೊಕ್ಕು, ಕಪ್ಪು ಕಾಲುಗಳು, ಕಣ್ಣಿನ ಸುತ್ತಲೂ ಹಳದಿಬಣ್ಣ, ಮಧ್ಯೆ ಕಪ್ಪು ಚುಕ್ಕೆ ಇವಿಷ್ಟು ಹಕ್ಕಿಯ ಹೊರನೋಟ. ಈಗ ಅಂದ್ರೆ ಮಳೆಗಾಲದಲ್ಲಿ ಈ ಹಕ್ಕಿಗಳ ತಲೆ, ಎದೆ, ಕುತ್ತಿಗೆ ಮತ್ತು ಬೆನ್ನಿನ ಮೇಲೆ ಹಳದಿ ಬಣ್ಣದ ಗರಿಗಳು ಬರ್ತವೆ. ಎಪ್ರಿಲ್ ತಿಂಗಳಿನಿಂದ ಅಕ್ಟೋಬರ್ ನಡುವೆ ಇವುಗಳ ಸಂತಾನಾಭಿವೃದ್ಧಿ ಕಾಲ. ಈ ಕಾಲದಲ್ಲಿ ಹಳದಿ ಬಣ್ಣದ ಪುಕ್ಕ ಮೂಡುತ್ತವೆ. ಕೆರಗಳ ಹತ್ತಿರ ಮರಗಳಮೇಲೆ ಒಣಕಟ್ಟಿಗೆಗಳನ್ನು ಜೋಡಿಸಿ ಗೂಡುಮಾಡುತ್ತದೆ. ಹೆಚ್ಚಾಗಿ ಒಂದೇ ಮರದ ಮೇಲೆ ಹಲವಾರು ಹಕ್ಕಿಗಳು ಗೂಡು ಮಾಡುತ್ತವೆ, ಒಂದೇ ವಠಾರದಲ್ಲಿ ಹಲವಾರು ಮನೆಗಳು ಇದ್ದಂತೆ.
ಈ ಹಕ್ಕಿಗಳು ಜಾನುವಾರುಗಳ ಮೇಲೆ ಸವಾರಿ ಮಾಡ್ತಾ ಇರ್ತವೆ ಅಂತ ಹೇಳಿದ್ನಲ್ಲ. ಯಾಕೆ ಗೊತ್ತಾ? ಇವು ಜಾನುವಾರುಗಳ ಮೈಮೇಲೆ ಇರಬಹುದಾದ ಉಣುಗು, ತಿಗಣೆ ಮುಂತಾದ ಸಣ್ಣ ಜೀವಿಗಳನ್ನು ಹಿಡಿದು ತಿನ್ನುತ್ತದೆ. ಜೊತೆಗೆ ಜಾನುವಾರುಗಳು ಹುಲ್ಲು ಮೇಯುವಾಗ ಹುಲ್ಲಿನ ಎಡೆಯಿಂದ ಹಾರುವ ಕೀಟಗಳನ್ನು ಹಿಡಿದು ತಿನ್ತದೆ. ಹೀಗೆ ದನಗಳ ಜೊತೆ ಸಹಜೀವನ ನಡೆಸುತ್ತಾ ಬದುಕುವ ಈ ಬೆಳ್ಳಕ್ಕಿಗೆ ಗೋವಕ್ಕಿ ಅಂತ ಹೆಸರು. ಇಂಗ್ಲೀಷ್ ನಲ್ಲಿ CATTLE EGRET ಅಂತ ಕರೀತಾರೆ. ಈ ಹಕ್ಕಿಯ ವೈಜ್ಞಾನಿಕ ಹೆಸರು Bubulcus ibis . ನಿಮ್ಮ ಆಸುಪಾಸಿನಲ್ಲೂ ಈ ಹಕ್ಕಿ ಕಾಣ್ಲಿಕ್ಕೆ ಸಿಗಬಹುದು. ನೋಡ್ತೀರಲ್ಲ...
ಚಿತ್ರ - ಬರಹ : ಅರವಿಂದ ಕುಡ್ಲ, ಬಂಟ್ವಾಳ