ಜಾಬ್‍ವರ್ಕಿನಲ್ಲಿ ಅಡಿಕೆ ಸುಲಿ

5

ಕೃಷಿಕರ ಹೆಮ್ಮೆಯ ‘ಕ್ಯಾಂಪ್ಕೋ’ ಸಂಸ್ಥೆಯು ಕೃಷಿ ಯಂತ್ರಮೇಳಕ್ಕೆ 2009ರಲ್ಲಿ ಶ್ರೀಕಾರ ಬರೆದಿತ್ತು. ನಂತರ ಜರುಗಿದ ಎರಡು ಕೃಷಿಮೇಳಗಳು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯತ್ತ ಬೆಳಕು ಚೆಲ್ಲಿತ್ತು. ಪರಿಣಾಮ ಕಣ್ಣ ಮುಂದಿದೆ. ಇಂದು ಕೃಷಿಕರ ಅಂಗಳದಲ್ಲಿ ಯಂತ್ರಗಳು ಸದ್ದು ಮಾಡುತ್ತಿವೆ.

ಅಡಿಕೆ ಕೃಷಿಯಲ್ಲಿ ಬೋರ್ಡೋ ದ್ರಾವಣ ಸಿಂಪಡಿಸುವ, ಅಡಿಕೆ ಕೊಯ್ಯುವ ಕೆಲಸಗಳಷ್ಟೇ ಅಡಿಕೆಯನ್ನು (ಚಾಲಿ) ಸುಲಿಯುವ ಕೆಲಸವೂ ಶ್ರಮದಾಯಕ. ಈ ಕೆಲಸಕ್ಕೀಗ ಯಂತ್ರಗಳ ಅವಲಂಬನೆ. ಆರೇಳು ವರುಷಗಳಲ್ಲಿ ನೂರಾರು ಯಂತ್ರಗಳು ಆವಿಷ್ಕಾರವಾಗಿವೆ, ಅಭಿವೃದ್ಧಿಯಾಗಿವೆ. ಹೀಗೆ ಅಭಿವೃದ್ಧಿಯಾದ ಯಂತ್ರಗಳಲ್ಲಿ ಉಡುಪಿಯ ‘ಯೋಜನ್ ಇಂಜಿನಿಯರಿಂಗ್ ಕೇರ್’ ಯಂತ್ರವು ಅಡಿಕೆ ಸುಲಿತದ ಜಾಬ್‍ವರ್ಕ್‍ನಲ್ಲಿ ಜನಸ್ವೀಕೃತಿ ಪಡೆದಿದೆ. ಈ ಯಂತ್ರದಲ್ಲಿ ಜಾಬ್‍ವರ್ಕ್ ಮಾಡುವ ಸುಬ್ರಾಯ ಭಟ್ ನೆಕ್ಲಾಜೆ ಹೇಳುತ್ತಾರೆ, “ವರುಷದಲ್ಲಿ ಹತ್ತು ತಿಂಗಳು ಈ ಯಂತ್ರ ಅನ್ನ ಕೊಡುತ್ತದೆ. ಕೈಯಲ್ಲಿ ಅಡಿಕೆ ಸುಲಿಯುವ ವಿಶೇಷಜ್ಞರ ಸಂಖ್ಯೆ ವಿರಳವಾಗುತಿದೆ. ಹಾಗಾಗಿ ಬಹುತೇಕ ಕೃಷಿಕರು ಯಂತ್ರವನ್ನು ಅಪೇಕ್ಷಿಸುತ್ತಿದ್ದಾರೆ.” ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸನಿಹದ ಕುದ್ದುಪದವಿನವರು. ಮನೆಗೆ ಯಂತ್ರದೊಂದಿಗೆ ಬಂದು ಅಡಿಕೆ ಸುಲಿದು ಕೊಡುವ ಜಾಬ್‍ವರ್ಕ್ ಕಾಯಕಕ್ಕೆ ಈಗ ಐದು ವರುಷ. ಸುಬ್ರಾಯ ಭಟ್ಟರು ತೊಡಗಿದ್ದು ಐವತ್ತು ಸಾವಿರ ರೂಪಾಯಿ ಮೂಲ ಬಂಡವಾಳದಿಂದ. ಆರಂಭಕ್ಕೆ ಒಂದೇ ಯಂತ್ರ. ಮೊದಲ ಹೆಜ್ಜೆಯಿಡುವಾಗ ಹೇಗಾಗುತ್ತೋ ಏನೋ ಎನ್ನುವ ಭಯ. ನಮ್ಮಲ್ಲಿಗೆ ಬನ್ನಿ ಎಂದು ಮುಂದಾಗಿ ಆದೇಶ ಕೊಟ್ಟವರೂ ಇದ್ದಾರೆ. ಹೀಗೆ ಶುರುವಾದ ಸುಬ್ರಾಯ ಭಟ್ಟರ ಅಡಿಕೆ ಸುಲಿ ಯಂತ್ರದ ಸದ್ದು ನಿಲ್ಲಲೇ ಇಲ್ಲ! ಕಾಸರಗೋಡು, ಕರಾವಳಿ ಪ್ರದೇಶದುದ್ದಕ್ಕೂ ಕೃಷಿಕರ ಮನ ಗೆದ್ದಿದ್ದಾರೆ. ಅವರಿಗಿದ್ದ ಸಾಮಾಜಿಕ ಸಂಪರ್ಕವು ಜಾಬ್‍ವರ್ಕಿಗೆ ಅನುಕೂಲವಾಯಿತು. ಮೊದಲ ಒಂದು ವರುಷ ಪಂಜದ ಶ್ರೀದೇವಿ ಇಂಜಿನಿಯರಿಂಗ್ ವಕ್ರ್ಸ್ ಅವರ ಯಂತ್ರ, ನಂತರದ ನಾಲ್ಕು ವರುಷ ಸುಳ್ಯದ ಅಪರ್ಣಾ ಸ್ಟೀಲ್ ಇಂಡಸ್ಟ್ರೀಸ್ ಅವರ ಯಂತ್ರ. ಈಗ ಉಡುಪಿಯ ‘ಯೋಜನ್ ಇಂಜಿನಿಯರಿಂಗ್ ಕೇರ್’ ಯಂತ್ರ. ಹೊಸ ಯಂತ್ರವು ಗಂಟೆಗೆ ನೂರ ಐವತ್ತರಿಂದ ಇನ್ನೂರು ಕಿಲೋ ಸುಲಿಯುವ ಸಾಮಥ್ರ್ಯ. ಮಗ ರಾಘವೇಂದ್ರ ಬೆಂಗಳೂರಿನ ತಮ್ಮ ಉದ್ಯಮವನ್ನು ತೊರದು ತಂದೆಯ ಜಾಬ್‍ವರ್ಕ್ ಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಹೀಗೆ ತಂದೆ, ಮಗ ಕೃಷಿಕರ ಅಡಿಕೆ ಸುಲಿ ಅಗತ್ಯಗಳನ್ನು ಈಡೇರಿಸುತ್ತಿದ್ದಾರೆ. ಇಬ್ಬರೂ ಒಂದೊಂದು ಯಂತ್ರವನ್ನು ನಿರ್ವಹಿಸುತ್ತಾರೆ. ಸುಬ್ರಾಯ ಭಟ್ಟರ ಒಂದು ತಂಡದೊಂದಿಗೆ - ಯಂತ್ರ, ಜನರೇಟರ್, ನಾಲ್ಕು ಮಂದಿ ಸಹಾಯಕರಿದ್ದಾರೆ.   ಒಂದು ಕಿಲೋ ಚಾಲಿ ಅಡಿಕೆ ಸುಲಿತಕ್ಕೆ ಎಂಟರಿಂದ ಎಂಟೂವರೆ ರೂಪಾಯಿ ದರ. ಇದರಲ್ಲಿ ಲೇಬರ್, ಸಾರಿಗೆ, ಜನರೇಟರ್ ವೆಚ್ಚಗಳು ಸೇರಿತು. ಕೃಷಿಕರಲ್ಲಿ ವಿದ್ಯುತ್ ಲಭ್ಯವಿದ್ದರೆ ಅಥವಾ ಜನರೇಟರ್ ಇದ್ದರೆ ದರದಲ್ಲಿ ಒಂದು ರೂಪಾಯಿ ಕಡಿತ. ಅಡಿಕೆ ಸುಲಿದು ಯಂತ್ರಗಳ ಪ್ಯಾಕಪ್ ಆಗುವಾಗ ಲೆಕ್ಕಾ ಚುಕ್ತಾ.  

ಹಿಂದಿನ ವರುಷಗಳಲ್ಲಿ ಕೃಷಿಕರೇ ಯಂತ್ರಗಳನ್ನು ಚಾಲೂ ಮಾಡುವಾಗ ಕರೆಂಟು ಕಣ್ಣುಮುಚ್ಚಾಲೆಯಿಂದಾಗಿ ಮೋಟರು ಜಾಮ್ ಆಗಿ ಕೆಟ್ಟುಹೋದ ಘಟನೆಗಳಿವೆ. “ಹೀಗೆ ಆದಾಗ ಅದನ್ನು ರಿಪೇರಿ ಮಾಡಲು ಒಂದು ವಾರ ಬೇಕು. ಅಷ್ಟು ದಿನ ಯಂತ್ರ ಸುಮ್ಮನೆ ನಿಲ್ಲುವುದು ನಷ್ಟ. ಜತೆಗೆ ರಿಪೇರಿ ಖರ್ಚು ಕೂಡಾ” - ಸುಬ್ರಾಯ ಭಟ್ಟರ ಲೆಕ್ಕಾಚಾರ. ಹೊಸ ಯಂತ್ರದ ಕ್ಷಮತೆ ಇನ್ನಷ್ಟೇ ಅನುಭವಕ್ಕೆ ಬರಬೇಕಿದೆ. ಜಾಬ್‍ವರ್ಕಿನಲ್ಲಿ ಎದುರಾಗುವ ಸಮಸ್ಯೆಗಳೇನು? “ನಾವು ಅಡಿಕೆ ತೋಟವನ್ನು ಮಗುವಿನಂತೆ ಸಾಕುತ್ತೇವೆ. ಆದರೆ ಕೊಯಿದ ಅಡಿಕೆಯನ್ನು ಸಾಕುವುದಿಲ್ಲ! ಸರಿಯಾದ ಬಿಸಿಲಿನಲ್ಲಿ ಒಣಗಿಸಿ, ವಾರಕ್ಕೊಮ್ಮೆ ಮಗುಚುತ್ತಾ ಇರಬೇಕು. ಅಡಿಕೆಯು ಸರಿಯಾದ ಬಿಸಿಲಿನಲ್ಲಿ ಒಣಗಿದರೆ ಪಟೋರ, ಉಳ್ಳಿಗಡ್ಡೆ ಪ್ರಮಾಣ ಕಡಿಮೆಯಿರುತ್ತದೆ. ಮುಖ್ಯ ಸಮಸ್ಯೆ ಸುಲಿತದ ದರದಲ್ಲಿರುವ ಪೈಪೋಟಿ. ಜಾಬ್‍ವರ್ಕ್ ಮಾಡುವವರು ತುಂಬಾ ಮಂದಿ ಇದ್ದಾರೆ. ಇವರ ಮಧ್ಯೆ ಈಜುವುದು ಜಾಣ್ಮೆಯ ಕೆಲಸ”. ಭಟ್ಟರೊಂದಿಗೆ ಸಹಾಯಕರಾಗಿದ್ದವರು ಸ್ವತಂತ್ರವಾಗಿ ಜಾಬ್‍ವರ್ಕ್ ಮಾಡುತ್ತಾರಂತೆ. ವರುಷದಿಂದ ವರುಷಕ್ಕೆ ಅಡಿಕೆ ತೋಟವು ವಿಸ್ತರಣೆಯಾಗುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಕಾರ್ಮಿಕರ ಸಂಖ್ಯೆ ಏರುವುದಿಲ್ಲ. ಹಾಗಾಗಿ ಯಂತ್ರದ ಮೂಲಕ ಅಡಿಕೆ ಸುಲಿಯಲು ಡಿಮಾಂಡ್ ಖಚಿತ! ಮುಂದೆ ‘ವರುಷಪೂರ್ತಿ ದುಡಿಯಬೇಕಾಗಬಹುದು’ ಎನ್ನುವ ದೂರದೃಷ್ಟಿಯಲ್ಲಿ ಖುಷಿ. “ಸರಕಾರವು ಕೃಷಿಕರ ಪಂಪ್‍ಸೆಟ್ಟಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಜನರೇಟರ್ ಹೊಂದಿದರೆ ದುಬಾರಿ ದರ. ಹಾಗಾಗಿ ಅಡಿಕೆ ಸುಲಿ ಯಂತ್ರವನ್ನು ಚಾಲೂ ಮಾಡಲು ಪಂಪ್‍ಸೆಟ್ಟಿನಿಂದಲೇ ಸಂಪರ್ಕ ಪಡೆದುಕೊಳ್ಳಲು ಸರಕಾರವು ಅನುಮತಿ ನೀಡಬೇಕು.” ಎನ್ನುವುದು ಭಟ್ಟರ ಆಗ್ರಹ. ಸುಬ್ರಾಯ ಭಟ್ಟರು ಹಿಂದೆ ಪವರ್ ಟಿಲ್ಲರಿಗೆ ಹಲ್ಲರ್ ಜೋಡಿಸಿ ಭತ್ತವನ್ನು ಮಿಲ್ ಮಾಡುವ ಜಾಬ್‍ವರ್ಕ್ ಮಾಡಿದ್ದರು.  ಈ ಅನುಭವ ಮುಂದೆ ಅಡಿಕೆ ಸುಲಿ ಯಂತ್ರದ ಜಾಬ್‍ವರ್ಕಿಗೂ ಅನುಕೂಲವಾಯಿತು.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.