ಜಾರ್ಖಂಡದ ಹಳ್ಳಿಯಲ್ಲಿ ಜೊತೆಯಾಗಿ ಅಕ್ಷರ ಕಲಿತ ಅತ್ತೆ-ಸೊಸೆಯರು

ಜಾರ್ಖಂಡದ ಹಳ್ಳಿಯಲ್ಲಿ ಜೊತೆಯಾಗಿ ಅಕ್ಷರ ಕಲಿತ ಅತ್ತೆ-ಸೊಸೆಯರು

ಅರುವತ್ತು ವರುಷಗಳ ವಯೋವೃದ್ಧೆ ಸುಂದರಿ ದೇವಿ ಈಗ ತನ್ನ ಹೆಸರನ್ನು ಸುಂದರ ಅಕ್ಷರಗಳಲ್ಲಿ ಬರೆಯಬಲ್ಲಳು. ಇದರಲ್ಲೇನು ವಿಶೇಷ ಅಂತೀರಾ? ಇದು ಅವಳ ಬದುಕಿನ ಬಹು ದೊಡ್ಡ ಸಾಧನೆ. ಯಾಕೆಂದರೆ ಅವಳಾಗಲೀ, ಅವಳ ಮೂವರು ಸೊಸೆಯರಾಗಲೀ ಶಾಲೆಗೆ ಹೋದದ್ದೇ ಇಲ್ಲ.

ತನ್ನ ಮೂವರು ಸೊಸೆಯರೂ ನಿರಕ್ಷರಿಗಳು ಎಂದು ತಿಳಿದಾಗ ಸುಂದರಿ ದೇವಿಗಾದ ವೇದನೆ ಬಹಳ. ಆದರೆ ಈಗ ಅದೆಲ್ಲ ಬದಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಈ ಅತ್ತೆ-ಸೊಸೆಯರು ಜೊತೆಜೊತೆಯಾಗಿಯೇ ಬರೆಯಲು ಹಾಗೂ ಓದಲು ಕಲಿತಿದ್ದಾರೆ.
 
ಪಾರ್ವತಿ ದೇವಿ ಬ್ಯಾಂಕಿಗೆ ಮತ್ತು ಪಡಿತರ ಅಂಗಡಿಗೆ ಹೋದಾಗೆಲ್ಲ ಸಂಕಟಪಡುತ್ತಿದ್ದಳು. ಅಲ್ಲಿ ಸಹಿ ಮಾಡುವ ಬದಲಾಗಿ ಹೆಬ್ಬೆಟ್ಟು ಒತ್ತುವಾಗೆಲ್ಲ ಅವಳಿಗೆ ತಾಳಲಾಗದ ಅವಮಾನ. ಇತರರು ದಸ್ಕತ್ ಹಾಕುವಾಗೆಲ್ಲ ತಾನೂ ಎಂದಾದರೂ ದಸ್ಕತ್ ಹಾಕಬಲ್ಲೆನೇ ಎಂಬ ಚಿಂತೆ ಅವಳನ್ನು ಕಾಡುತ್ತಿತ್ತು. ಈಗ ಅದೆಲ್ಲ ಬದಲಾಗಿದೆ. ಬ್ಯಾಂಕಿಗೆ ಹೋದಾಗ ಅವಳೀಗ ಹೆಬ್ಬೆಟ್ಟು ಒತ್ತುವುದಿಲ್ಲ; ಬದಲಾಗಿ, ಅಭಿಮಾನದಿಂದ ಸಹಿ ಮಾಡುತ್ತಾಳೆ.

ಸುಂದರಿ ದೇವಿ ಮತ್ತು ಪಾರ್ವತಿ ದೇವಿಯಂತಹ ಹಲವಾರು ಮಹಿಳೆಯರಿಗೆ ಬಹುಕಾಲದ ಬಳಿಕ, ಅರುವತ್ತನೇ ವಯಸ್ಸಿನಲ್ಲಿ, ಇದು ನನಸಾದ ಕನಸು. ಅವರು ಬರಹ ಕಲಿತದ್ದು ಅವರ ಕುಟುಂಬಗಳಿಗೆ ಮಾತ್ರವಲ್ಲ, ಇಡೀ ಗ್ರಾಮ ಸಮುದಾಯಕ್ಕೇ ಹೆಮ್ಮೆಯ ಸಂಗತಿ.

ಇದೆಲ್ಲ ಜರಗಿದ್ದು ಜಾರ್ಖಂಡ ರಾಜ್ಯದ ಗಿರಿಧ್ ಜಿಲ್ಲೆಯ ಬರತೊಲಾ ಗ್ರಾಮದಲ್ಲಿ. ಆ ಗ್ರಾಮದಲ್ಲಿ ಬಹಳ ಬಡತನ. ಅನಕ್ಷರತೆಯೂ ಜಾಸ್ತಿ. ಮಹಿಳೆಯರಲ್ಲಂತೂ ಅತೀವ ಅನಕ್ಷರತೆ. ಆದರೆ ಅಕ್ಷರ ಕಲಿಯಬೇಕೆಂಬ ಹಂಬಲ ಮಹಿಳೆಯರಲ್ಲಿ ತೀವ್ರವಾಗಿತ್ತು. ಆದ್ದರಿಂದಲೇ, "ವಿಕಾಸ ಕೇಂದ್ರ" ಎಂಬ ಎನ್‍ಜಿಓ (ಸರಕಾರೇತರ ಸಂಸ್ಠೆ) ಅನಕ್ಷರಸ್ಥ ಮಹಿಳಿಯರಿಗಾಗಿ ಕಲಿಕಾ ಕೇಂದ್ರ ಆರಂಭಿಸುವುದನ್ನು ಘೋಷಿಸಿದಾಗ, ಬರತೊಲಾ ಗ್ರಾಮದ ಮಹಿಳೆಯರೆಲ್ಲರ ಮೊಗದಲ್ಲಿ ಗೆಲವಿನ ಕಳೆ.

ದಾರಿ ತೋರಿದ ಮಹಿಳೆಯರು
ಕಲಿಕಾ ಕೇಂದ್ರ ಆರಂಭವಾದಾಗ ಬಂದವರು ಹಲವಾರು ಮಹಿಳೆಯರು. ಮನೆಯಲ್ಲೇ ಉಳಿಯಲು ಯಾವ ಅನಕ್ಷರಸ್ಥ ಮಹಿಳೆಯೂ ತಯಾರಿರಲಿಲ್ಲ. ಹದಿನೇಳು ಮೊಮ್ಮಕ್ಕಳ ಅಜ್ಜಿ ಪ್ಯಾಸಿ ದೇವಿಯಿಂದ ತೊಡಗಿ, ಇತ್ತೀಚೆಗೆ ಮದುಮಗಳಾಗಿ ಹಳ್ಳಿಗೆ ಬಂದ ಮುನಿಯಾ ದೇವಿ ತನಕ ಎಲ್ಲರಲ್ಲೂ ಉತ್ಸಾಹ -  ಅನಕ್ಷತೆಯ ಕಳಂಕ ತೊಡೆದು ಹಾಕುವ ತವಕ.

ಕೆಲವೇ ದಿನಗಳಲ್ಲಿ "ತರಸ್ಕರ್" ಎಂಬ ಹೆಸರಿನ  ಕೇಂದ್ರದಲ್ಲಿ ಅಕ್ಷರ ಕಲಿಯುವ ೨೪ ಮಹಿಳೆಯರ ಕಲರವ. ಅವರೆಲ್ಲ ತಮ್ಮ ಬದುಕಿನಲ್ಲಿ ಯಾವತ್ತೂ ಶಾಲೆಗೆ ಕಾಲಿಟ್ಟವರಲ್ಲ. ಇವರಿಗೆ ಅಕ್ಷರ ಕಲಿಸಿದ ರಂಜೀತ್ ಕುಮಾರ್ ಹೇಳುತ್ತಾರೆ, "ಮೊದಲನೇ ದಿನ ಈ ಮಹಿಳೆಯರಿಗೆ ಬೆರಳುಗಳಿಂದ ಪೆನ್ನು ಹಿಡಿಯಲು ಆಗುತ್ತಿರಲಿಲ್ಲ. ನಿಮಗೆ ಬೇಕಾದ್ದನ್ನು ಸ್ಲೇಟಿನಲ್ಲಿ ಬರೆಯಿರಿ ಎಂದು ಅವರನ್ನು ಮತ್ತೆಮತ್ತೆ ಒತ್ತಾಯಿಸಬೇಕಾಯಿತು."
 
ಅದೇನಿದ್ದರೂ ಬರತೊಲಾ ಗ್ರಾಮದ ಎಲ್ಲ ಮಹಿಳೆಯರಲ್ಲೂ ಅಕ್ಷರ ಕಲಿಯುವ ಕಾರ್ಯಕ್ರಮದ ಬಗ್ಗೆ ಸಂಭ್ರಮ. "ಕಲಿಕಾ ಕೇಂದ್ರ" ಎಲ್ಲಿ ಆರಂಭಿಸುವುದು? ಎಂಬ ಪ್ರಶ್ನೆಗೆ ಮಹಿಳೆಯರಿಂದಲೇ ಪರಹಾರ. ಪ್ಯಾಸಿ ದೇವಿ ತನ್ನ ಮನೆಯ ಕೋಣೆಯೊಂದನ್ನು ಕಲಿಕಾ ಕೇಂದ್ರ ನಡೆಸಲಿಕ್ಕಾಗಿ ಬಿಟ್ಟುಕೊಟ್ಟಳು. ತರಗತಿಯ ಸಮಯವನ್ನೂ ಮಹಿಳೆಯರೇ ನಿರ್ಧರಿಸಿದರು. ಮನೆಮಂದಿಗೆಲ್ಲ ಅಡುಗೆ ಮಾಡಿಟ್ಟು, ಮನೆಯ ಕೆಲಸಗಳನ್ನೆಲ್ಲ ಮುಗಿಸಿ, ಅಪರಾಹ್ನ ೨ರಿಂದ ೪ ಗಂಟೆ ವರೆಗೆ ಕಲಿಕೆಗೆ ಹಾಜರಾಗತೊಡಗಿದರು. ಪ್ರತಿದಿನವೂ ಸಮಯಕ್ಕೆ ಸರಿಯಾಗಿ ಕಲಿಕಾ ಕೇಂದ್ರಕ್ಕೆ ಬರುತ್ತಿದ್ದರು. ಜೀರ್ವಾ ದೇವಿ ತನ್ನ ಸಣ್ಣ ಮಗುವನ್ನು ಹೊತ್ತುಕೊಂಡೇ ಕಲಿಕಾ ಕೇಂದ್ರಕ್ಕೆ ಬಂದು ಕೂರುತ್ತಿದ್ದಳು. ಭವಿಷ್ಯದಲ್ಲಿ ತನ್ನ ಮಗುವಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತೇನೆ ಎನ್ನುವಾಗ ಅವಳ ಕಣ್ಣುಗಳಲ್ಲೊಂದು ಮಿನುಗು.

ಮುನಿಯಾ ದೇವಿ, ಕಾಂತಿ ದೇವಿ, ಸರಿತಾ ದೇವಿ ಮತ್ತು ಪುತ್ಲಿ ದೇವಿ - ಇವರಿಗೆಲ್ಲ ಅಕ್ಷರ ಕಲಿಕಾ ಕಾರ್ಯಕ್ರಮ ಒಂದು ವರವಾಯಿತು. ಯಾಕೆಂದರೆ ಹಳ್ಳಿಗೆ ಹೊಸದಾಗಿ ಮದುವೆಯಾಗಿ ಬಂದ ಅವರು ಬದುಕಿನಲ್ಲಿ ಒಮ್ಮೆಯೂ ಶಾಲೆಗೆ ಹೋದವರಲ್ಲ. ಕೆಲವರಿಗೆ ಕಲಿಕೆಗೆ ಅಡ್ಡಿಯಾದದ್ದು ಬಡತನ. ಇನ್ನು ಕೆಲವರಿಗೆ ಸಾಮಾಜಿಕ ಕಟ್ಟುಪಾಡುಗಳ ಅಡ್ಡಿ. ಮತ್ತೆ ಕೆಲವರಿಗೆ ಶಾಲೆ ಬಹಳ ದೂರವಿದ್ದದ್ದೇ ತೊಂದರೆ. ನಿರಕ್ಷರಿ ಮಹಿಳೆಯರಿಗೆ ಮದುವೆಯ ವಯಸ್ಸಾದಾಗ, ಮದುವೆಗೆ ಅಡ್ಡಿಯಾದದ್ದೇ ಅವರ ನಿರಕ್ಷರತೆ. ಈಗ, ಅತ್ತೆಯ ಮನೆಯಲ್ಲಿದ್ದಾಗ ಅಕ್ಷರ ಕಲಿತು, ಅವರ ಆತ್ಮವಿಶ್ವಾಸ ಹೆಚ್ಚಿದೆ.

ರೇಖಾ ದೇವಿ ತನ್ನ ಅತ್ತೆಯ ಉಪಕಾರವನ್ನು ಮತ್ತೆಮತ್ತೆ ಸ್ಮರಿಸುತ್ತಾಳೆ. ಯಾಕೆಂದರೆ ಕಲಿಕಾ ಕೇಂದ್ರಕ್ಕೆ ಹೋಗಲು ಅವಳನ್ನು ಪ್ರೋತ್ಸಾಹಿಸಿದ್ದು ಅವಳ ಅತ್ತೆ. ಈಗ ಅವಳಿಗೆ ಓದಲಿಕ್ಕೂ ಬರೆಯಲಿಕ್ಕೂ ಗೊತ್ತು. ಇತ್ತೀಚೆಗೆ ಅಕ್ಷರ ಕಲಿತ ಪ್ಯಾಸಿ ದೇವಿ ಕೆಲವೊಮ್ಮೆ ತನ್ನ ಮಗಳ ಶಾಲಾ ಪುಸ್ತಕಗಳ ಪುಟಗಳನ್ನು ಓದುತ್ತಾಳೆ. ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಅವಳ ಮಗಳಿಗೆ ಇದುವೇ ಹೆಮ್ಮೆಯ ವಿಷಯ.  

ಕಲಿಕಾ ಕಾರ್ಯಕ್ರಮ ಮುಕ್ತಾಯವಾದಾಗ, ಎಲ್ಲ ಮಹಿಳೆಯರಿಗೂ "ಅಕ್ಷರ ಕಲಿತವರು" ಎಂಬ ಸರ್ಟಿಫಿಕೇಟ್ ನೀಡಲಾಯಿತು. ಆದರೆ ಅಗ್ನಿ ದೇವಿ ಹೇಳುತ್ತಾಳೆ, "ನಾನೀಗ ಓದಲು, ಬರೆಯಲು ಸಮರ್ಥಳು. ಇದುವೇ ನಿಜವಾದ ಸರ್ಟಿಫಿಕೇಟ್." ಬರತೊಲಾದ ಸುರೇಂದ್ರ ರವಿದಾಸರ ಅಭಿಪ್ರಾಯ, "ಅತ್ತೆ-ಸೊಸೆಯರು ಅಕ್ಷರ ಕಲಿತರೆ ಎಲ್ಲದಕ್ಕೂ ಒಳ್ಳೆಯದು." ಬಡತನದಿಂದಾಗಿ ಆತ ತನ್ನ ಶಿಕ್ಷಣ ಮುಂದುವರಿಸಲು ಆಗಲಿಲ್ಲ. ಈಗ, ತನ್ನ ಪತ್ನಿ ಗೀತಾ ದೇವಿ ಓದಲು, ಬರೆಯಲು ಕಲಿತಳೆಂಬುದೇ ಅವನಿಗೆ ಸಮಾಧಾನ.

ಬರತೊಲಾ ಗ್ರಾಮ ಜಾರ್ಖಂಡದ ಗಿರಿಧ್ ಜಿಲ್ಲೆಯ ಬಗೊದಾರ್ ತಾಲೂಕಿನಲ್ಲಿದೆ. ಆ ತಾಲೂಕಿನ ಸಾಕ್ಷರತೆಯ ಅಂಕೆಸಂಖ್ಯೆಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಜನಗಣತಿ ೨೦೦೧ರ ಪ್ರಕಾರ, ಅಲ್ಲಿನ ಶೇಕಡಾ ೨೦ ಮಹಿಳೆಯರು ನಿರಕ್ಷರಿಗಳು. ಅದರೆ ಅಲ್ಲಿ ಗಂಡಸರ ಸಾಕ್ಷರತಾ ಪ್ರಮಾಣ ಶೇ.೫೦. ಇಂತಹ ಸನ್ನಿವೇಶದಲ್ಲಿ ಮಹಿಳೆಯರಿಗೆ ಅಕ್ಷರ ಕಲಿಸುವ ಪುಟ್ಟಪುಟ್ಟ ಪ್ರಯತ್ನಗಳೂ ಮುಖ್ಯ. ದೂರದ ಪ್ರಯಾಣ ಆರಂಭವಾಗುವುದೇ ಮೊದಲ ಹೆಜ್ಜೆಯಿಂದ, ಅಲ್ಲವೇ?

ಪ್ರಾತಿನಿಧಿಕ ಫೋಟೋ: ಹಿರಿಯ ಮತ್ತು ಕಿರಿಯ ಮಹಿಳೆಯರಿಬ್ಬರಿಂದ ಜೊತೆಯಾಗಿ ಕಲಿಕೆ …. ಕೃಪೆ: ಗೆಟ್ಟಿ ಇಮೇಜಸ್