ಜಾರ್ಖಂಡ ಶೋಧಯಾತ್ರೆಯ ಶೋಧಗಳು
ಭತ್ತದ ಥ್ರೆಷರ್, ಕೇವಲ 500 ರೂಪಾಯಿಗಳಿಗೆ! ಬಲಕ್‌ಥಿ ಹಳ್ಳಿಯ ಧರಣಿದರ್ ಮಹತೋ ಅವರ ಆವಿಷ್ಕಾರ ಇದು. ಇದರ ದಕ್ಷತೆ ಹೇಗಿದೆ? ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಥ್ರೆಷರುಗಳ ದಕ್ಷತೆಯ ಇಮ್ಮಡಿ! ಅಂದರೆ, ಇದನ್ನು ಚಲಾಯಿಸಿ ಕೆಲಸಗಾರನೊಬ್ಬ ಒಂದು ದಿನದ (ಆರೇಳು ತಾಸುಗಳ) ಕೆಲಸದಲ್ಲಿ 1,000ದಿಂದ 1,200 ಕಿಗ್ರಾ ಭತ್ತ ಕೊಯ್ಲು ಮಾಡಬಲ್ಲ.
ಗುಜರಾತಿನ ಅಹ್ಮದಾಬಾದಿನ "ಸೃಷ್ಟಿ" ಸಂಸ್ಥೆ ಸಂಘಟಿಸಿದ 20ನೇ ಶೋಧಯಾತ್ರೆಯ ಅಮೂಲ್ಯ ಶೋಧಗಳಲ್ಲಿ ಇದೊಂದು. ಇಂತಹ ಶೋಧಯಾತ್ರೆಗಳನ್ನು 1998ರಿಂದ ವರುಷಕ್ಕೆ ಎರಡು ಸಲ, ಬೇಸಗೆ ಮತ್ತು ಚಳಿಗಾಲಗಳಲ್ಲಿ ಸಂಘಟಿಸಲಾಗುತ್ತಿದೆ. ಇದು ಸುಮಾರು 250 ಕಿಮೀ ಕಾಲ್ನಡಿಗೆಯ ಪಯಣ - ಗುಡ್ಡಬೆಟ್ಟಬಯಲು ಹಾದು ಮೂಲೆಮೂಲೆಯ ಹಳ್ಳಿಗಳಿಗೆ ಸಾಗುವ ಪಯಣ. ಇದರ ಉದ್ದೇಶ: ಗ್ರಾಮೀಣ ಸಮುದಾಯಗಳ ಮತ್ತು ವ್ಯಕ್ತಿಗಳ ರಚನಾತ್ಮಕ ಆವಿಷ್ಕಾರಗಳ ದಾಖಲಾತಿ. ಇವೆಲ್ಲ ಎಲ್ಲಿಯೂ ದಾಖಲಾಗೋದಿಲ್ಲ; ಅದರಿಂದಾಗಿ ಸುದ್ದಿಯಾಗೋದೂ ಇಲ್ಲ. ಆ ಕೊರತೆ ನೀಗಿಸುವುದೇ ಶೋಧಯಾತ್ರೆಗಳ ಗುರಿ.
ಆ ಶೋಧಯಾತ್ರೆಯ ಇನ್ನೊಂದು ಮಹತ್ವದ ಶೋಧ, “ಅಸಿತ್ ಕಲ್ಮ" ಹೆಸರಿನ ಹೊಸ ಭತ್ತದ ತಳಿ. ಅದೊಂದು ದಿನ ಅಸಿತ್ ಡೇ ಎಂಬ ಕೃಷಿಕ ತನ್ನ ಹಳ್ಳಿಗೆ ಹಿಂತಿರುಗುತ್ತಿದಾಗ ಹಾದಿ ಬದಿಯಲ್ಲಿ ಕೆಲವು ಭತ್ತದ ಸಸಿಗಳನ್ನು ಕಂಡರು. ಅವು ವಿಶೇಷ ಸಸಿಗಳಂತೆ ಕಾಣಿಸಿದವು. ಅವುಗಳ ಬೀಜ ತಂದು ಬೆಳೆಸಿದರು. ಹಾಗೆ ನಾಲ್ಕು ವರುಷ ಉತ್ತಮ ಬೀಜಗಳನ್ನು ಆಯ್ದು ಬೆಳೆಸಿ, ಅನಂತರ ತನ್ನ ಮಿತ್ರರಿಗೂ ನೆರೆಹೊರೆಯವರಿಗೂ ಹಂಚಿದರು. ಈ ಹೊಸ ತಳಿ ಅಲ್ಲಿನ ಕೃಷಿಕರ ಗಮನ ಸೆಳೆಯಿತು; ಹಳ್ಳಿಯ ಹೊಲಗಳನ್ನೆಲ್ಲ ವ್ಯಾಪಿಸಿತು. ಹಲವು ರೈತರು ಇದನ್ನು ಸಾವಯವ ವಿಧಾನದಲ್ಲಿ ಬೆಳೆದು ಹೆಕ್ಟೇರಿಗೆ 18 ಕ್ವಿಂಟಾಲ್ ಇಳುವರಿ ಪಡೆದಿದ್ದಾರೆ. ಇದು ಅತ್ಯುತ್ತಮ ಸ್ಥಳೀಯ ತಳಿಯ ಇಳುವರಿಗೆ ಸಮಾನ.
ಬೇಯಿಸಿದ ಭತ್ತ ಹರಡುವ ಕೈಗಾಡಿ - ಇದು ಆ ಶೋಧಯಾತ್ರೆಯ ಮತ್ತೊಂದು ಮಹತ್ವದ ಶೋಧ. ಇದರ ಅನುಶೋಧಕ, ಜಗದಲ್ಲಾ ಹಳ್ಳಿಯ ರಂಜಿತ್ ಘೋರಾಯಿ. ಅಕ್ಕಿ ಮಾಡಲಿಕ್ಕಾಗಿ ಬೇಯಿಸಿದ ಭತ್ತವನ್ನು ಹಬೆಯಾಡುತ್ತಿರುವಾಗ ಅಂಗಳದಲ್ಲಿ ಹರಡುವುದು ಅಪಾಯದ ಕೆಲಸ. ಟ್ರೇ ಹಿಡಿದು ಹರಡುವಾಗ ಕೆಲವೊಮ್ಮೆ ಕೆಲಸಗಾರರ ಕೈಗೆ ಬಿಸಿ ತಗಲಿ, ಬೊಬ್ಬೆ ಏಳುತ್ತವೆ.
ಈ ಕೈಗಾಡಿ ಆ ಸಮಸ್ಯೆ ಪರಿಹರಿಸಿದೆ. ತಲೆಕೆಳಗಾದ ಪಿರಮಿಡ್ ಆಕಾರದ ತಗಡಿನ ತೊಟ್ಟಿಗೆ ಗಾಲಿ ಹಾಗೂ ಹ್ಯಾಂಡಲ್ ಜೋಡಿಸಿ ತಯಾರಿಸಿದ ಕೈಗಾಡಿ ಇದು. ಇದರ ತಳದಲ್ಲಿ ಮುಚ್ಚಳವಿರುವ ಕಿಂಡಿಯಿದೆ. ಆ ಮುಚ್ಚಳ ಚಲಿಸಿ, ಕಿಂಡಿಯ ಅಳತೆ ಬದಲಾಯಿಸ ಬಹುದು ಅಥವಾ ಕಿಂಡಿ ಮುಚ್ಚಬಹುದು. ಅಂದರೆ ಇದು ನೀರಿನ ಕಾಲುವೆಗಳ ತೂಬಿನಂತೆ ಕೆಲಸ ಮಾಡುತ್ತದೆ. ರಂಜಿತ್ ಇದನ್ನು ಹೊಲದಲ್ಲಿ ಕಂಪೋಸ್ಟ್ ಹರಡಲಿಕ್ಕೂ ಬಳಸುತ್ತಾರೆ. ಇದರಿಂದಾಗಿ ಕಂಪೋಸ್ಟ್ ಹರಡಲು ಎರಡನೇ ಕೆಲಸಗಾರನ ಅಗತ್ಯವಿಲ್ಲ.
ಈ ಶೋಧಯಾತ್ರೆ ಪಶ್ಚಿಮ ಬಂಗಾಳದ ಪುರುಲಿಯಾ ಮತ್ತು ಬಂಕುರ ಜಿಲ್ಲೆಗಳಿಂದ ಹೊರಟು ಜಾರ್ಖಂಡದ ಪತಂದ ವರೆಗೆ ಸಾಗಿತು (26 ಡಿಸೆಂಬರ್ 2007ರಿಂದ 2 ಜನವರಿ 2008 ತನಕ). ಕಾಲ್ನಡಿಗೆಯಲ್ಲಿ ಸಾಗಿದ ಶೋಧಯಾತ್ರಿಗಳಿಗೆ ದಿನದಿನವೂ ರೋಚಕ ಅನುಭವ. ಅನುಶೋಧಕರೂ ಆವಿಷ್ಕಾರಗಳೂ ಪತ್ತೆಯಾದಾಗ ರೋಮಾಂಚನ. ಹಳ್ಳಿಗಳಲ್ಲಿ ಸಭೆಗಳನ್ನು ನಡೆಸುತ್ತಾ, ಅನುಶೋಧಕರನ್ನು ಸನ್ಮಾನಿಸುತ್ತಾ, ಮಕ್ಕಳನ್ನು ಹುರಿದುಂಬಿಸುತ್ತಾ, ಹಿರಿಯರನ್ನು ಗೌರವಿಸುತ್ತಾ ಸಾಗಿತ್ತು ಶೋಧಯಾತ್ರೆ. ಹಾದಿಯಲ್ಲಿ ದಾಖಲಿಸಿದ ಪಾರಂಪರಿಕ ಜ್ನಾನ ಅಮೂಲ್ಯ; ಆವಿಷ್ಕಾರಗಳು ಹತ್ತುಹಲವು. ನಿಮ್ಮ ಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೋಧಯಾತ್ರೆ ಜರಗಬೇಕು ಎಂದನಿಸಿದರೆ “ಸೃಷ್ಟಿ”ಯನ್ನು ಸಂಪರ್ಕಿಸಬಹುದು.
ವೆಬ್-ಸೈಟ್: www.sristi.org
ಫೋಟೋ: ಹಿಮಾಚಲ ಪ್ರದೇಶದ ಚಂಪಾದಲ್ಲಿ ಜನವರಿ 2020ರಲ್ಲಿ ಸಂಘಟಿಸಿದ್ದ 45ನೇ ಶೋಧ ಯಾತ್ರೆಯ ನೋಟಗಳು
ಕೃಪೆ: ಸೃಷ್ಟಿ ಇನ್ನೋವೇಷನ್ಸ್ ಪ್ರಕಟಿಸುವ ತ್ರೈಮಾಸಿಕ "ಹನಿ ಬೀ”, ಜುಲಾಯಿ-ಡಿಸೆಂಬರ್ 2020 ಸಂಚಿಕೆ