ಜಾಲಹಳ್ಳಿಯ ಕುರ್ಕ (ಕಾಡಿನ ಕಥೆಗಳು ಭಾಗ 3)

ಜಾಲಹಳ್ಳಿಯ ಕುರ್ಕ (ಕಾಡಿನ ಕಥೆಗಳು ಭಾಗ 3)

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಕಾಶಕರು
ಪುಸ್ತಕ ಪ್ರಕಾಶನ, ಸರಸ್ವತಿಪುರಂ, ಮೈಸೂರು
ಪುಸ್ತಕದ ಬೆಲೆ
ರೂ. 84/-

ಭಾರತದ ದಟ್ಟ ಕಾಡುಗಳ ಜನರ ಮತ್ತು ನರಭಕ್ಷಕ ಪ್ರಾಣಿಗಳ ಬದುಕನ್ನು ಆಪ್ತವಾಗಿ, ಮನಸೂರೆಗೊಳ್ಳುವ ಸಾಹಿತ್ಯವಾಗಿ ದಾಖಲಿಸಿದ ಕೆನೆತ್ ಆಂಡರ್ಸನ್ ಅವರ ಅನುಭವಗಳ ಸಂಗ್ರಹ ರೂಪಾಂತರ ಇದು.

ಇದರಲ್ಲಿವೆ ನಾಲ್ಕು ಕಥನಗಳು. “ದಿಗುವಮೆಟ್ಟದ ಕೊಲೆಗಡುಕ” ಮೊದಲನೆಯ ಕಥನ. ಆಂಧ್ರಪ್ರದೇಶದ ಗುಂತಕಲ್ ರೈಲ್ವೆ ಜಂಕ್ಷನಿನಿಂದ ಪೂರ್ವಕ್ಕೆ ರೈಲಿನಲ್ಲಿ ಸಾಗಿದರೆ ಸಿಗುವ ಪಟ್ಟಣ ನಂದ್ಯಾಲ್. ಮುಂದುವರಿದರೆ, ಬಸವಪುರ ಸ್ಟೇಷನಿನ ನಂತರ ಒಂದು ಚಿಕ್ಕ ಮತ್ತೊಂದು ಬಹಳ ಉದ್ದದ ಸುರಂಗಗಳು ಸಿಗುತ್ತವೆ. ತದನಂತರ ಸಿಗುವ ಸ್ಟೇಷನ್ ದಿಗುವಮೆಟ್ಟ. ಅದೊಮ್ಮೆ ಆಂಡರ್ಸನ್ ಅಲ್ಲಿಗೆ ಹೋಗಿ, ರೈಲ್ವೆ ಸ್ಟೇಷನಿನಿಂದ ಒಂದು ಮೈಲು ದೂರದ ಅರಣ್ಯ ಇಲಾಖೆಯ ಟಿಬಿಯಲ್ಲಿ ಉಳಿಯುತ್ತಾರೆ. ಅಲ್ಲಿನ ಟಿಬಿ ಮೇಟಿ ಅಲೀಂ ಖಾನ್. ಅವನಿಗೆ ಇಬ್ಬರು ಹೆಂಡತಿಯರು. ಈಗ ಅವನ ವಿಧವೆ ತಂಗಿಯೂ ಇಲ್ಲೇ ವಾಸ. ಆಂಡರ್ಸನ್ ವಿರಮಿಸಿದ ನಂತರ ಅಲೀಂಖಾನ್ ನೆಲದಲ್ಲಿ ಕುಳಿತು ತನ್ನ ಸಂಸಾರ ತಾಪತ್ರಯಗಳನ್ನು ಕೊರೆಯತೊಡಗಿದ. ಅನಂತರ ಅಲ್ಲಿ ಎಲ್ಲರಿಗೂ ಪೀಡೆ ಕೊಡುತ್ತಿದ್ದ ಒಂದು ಚಿರತೆಯ ಬಗ್ಗೆಯೂ ಹೇಳಿದ.

ಮರುದಿನ ರಾತ್ರಿ ಆ ಚಿರತೆ ಅಲೀಂಖಾನನ ತಂಗಿಯ ನಾಯಿಯನ್ನು ಹೊತ್ತೊಯ್ದಿತು. ಆಂಡರ್ಸನ್ ತಕ್ಷಣವೇ ಅದನ್ನು ಹಿಂಬಾಲಿಸಿ ಹೋದರೂ ಅದು ಕಾಡಿನೊಳಗೆ ಓಡಿ ಹೋಯಿತು. ಅನಂತರ ಟಾರ್ಚ್ ಬೆಳಕಿನಲ್ಲಿ ಎರಡು ಗಂಟೆ ಅವರು ಸುತ್ತಮುತ್ತಲೆಲ್ಲ ಹುಡುಕಾಡಿದರೂ ಅದು ಪತ್ತೆಯಾಗಲಿಲ್ಲ. ಮರುದಿನ ರಾತ್ರಿ ಟಿಬಿ ಹತ್ತಿರ ಇನ್ನೊಂದು ನಾಯಿಯನ್ನು ಕಟ್ಟಿ ಚಿರತೆಯ ಬರವಿಗಾಗಿ ಕಾದರೆ ಅದು ಬರಲೇ ಇಲ್ಲ. ಮರುದಿನ ಆಂಡರ್ಸನ್ ಬೆಂಗಳೂರಿಗೆ ಹಿಂತಿರುಗಿದರು.

ಅದಾಗಿ ನಾಲ್ಕು ತಿಂಗಳ ನಂತರ, ಅಲೀಂನಿಂದ ಪತ್ರ ಬಂತು: ಅದರಲ್ಲಿದ್ದ ಸುದ್ದಿ ಒಬ್ಬ ರೈಲ್ವೆ ಗ್ಯಾಂಗ್‌ಮನ್‌ನ ಬಲಿ. ಒಂದು ತಿಂಗಳ ನಂತರ ರೈಲ್ವೆ ಸ್ಟೇಷನಿನ ನೀರಿನ ಟ್ಯಾಂಕಿನ ಕೆಲಸಗಾರ ಬಲಿಯಾದ ಸುದ್ದಿ ತಂದಿತು ಇನ್ನೊಂದು ಪತ್ರ. ಮರುದಿನ ಅಲೀಂನಿಂದ ಟೆಲಿಗ್ರಾಂ ಬಂತು: “ತಂಗಿಯ ಮಗುವನ್ನು ಚಿರತೆ ಹಿಡಿದಿದೆ. ದಯವಿಟ್ಟು ಕೂಡಲೇ ಬನ್ನಿ." ಮರುದಿನವೇ ದಿಗುವಮೆಟ್ಟ ತಲಪಿದರು ಆಂಡರ್ಸನ್. ಆ ಬಾಲಕಿ ಬಲಿಯಾದ ಜಾಗದಲ್ಲೇ ಆ ರಾತ್ರಿ ಕಾದು ಕುಳಿತರು. ಆಗ, ರಾತ್ರಿಯ ರೈಲು ಸ್ಟೇಷನಿಗೆ ಬಂತು. ಅನಂತರ ಕೆಲವರು ಲಾಟೀನು ಹಿಡಿದುಕೊಂಡು ಟಿಬಿಗೆ ಬಂದರು. ಸುರಂಗದ ಆರಂಭದಲ್ಲೇ ಚಿರತೆಗೆ ಬಲಿಯಾದ ಚಂಚೂ ಬುಡಕಟ್ಟಿನ ಒಬ್ಬನ ಶವದ ಅಳಿದುಳಿದ ಭಾಗಗಳು ಬಿದ್ದಿವೆ ಎಂದು ತಿಳಿಸಿದರು!

ಮರುದಿನ ಮುಂಜಾನೆ 4 ಗಂಟೆಗೆದ್ದು ಆಂಡರ್ಸನ್ ಅಲ್ಲಿಗೆ ಹೋದಾಗ, ಅಲ್ಲಿಗೆ ಚಿರತೆ ರಾತ್ರಿ ಬಂದು ಹೋದ ಕುರುಹುಗಳು ಕಾಣಿಸಿದವು. ಹಾಗಾಗಿ ಅಲ್ಲೇ ಚಿರತೆಯ ಹಾದಿ ಕಾಯಲು ನಿರ್ಧರಿಸಿದರು ಆಂಡರ್ಸನ್. ಅಲೀಂ ಜೊತೆಗೂಡಿ ಕಲ್ಲುಗಳಿಂದ ಸಣ್ಣ ಕೋಟೆ ಕಟ್ಟಿದರು - ಅಡಗಿ ಕೂರಲಿಕ್ಕಾಗಿ. ಅವತ್ತು ಸಂಜೆ ನಾಲ್ಕು ಗಂಟೆಗೆ ಅಲ್ಲಿಗೆ ಹೋಗಿ ಕಾದು ಕುಳಿತರು. ನಂತರ ಕತ್ತಲು ಕವಿಯಿತು. ಗಂಟೆಗಳು ಉರುಳಿದವು. ಒಂದು ರೈಲು ಸುರಂಗದಿಂದ ಹಾದು ಹೋಯಿತು. ಆಗಲೇ ಚಿರತೆ ಇವರ ಮೇಲೆ ಆಕ್ರಮಣ ಮಾಡಿತು. ಅದು ಕೇವಲ ಒಂದು ಗಜ ಹತ್ತಿರಕ್ಕೆ ಬಂದು ಗರ್ಜಿಸಿದಾಗಲೇ ಇವರಿಗೆ ಗೊತ್ತಾದದ್ದು. ಅದರ ತೆರೆದ ಬಾಯೊಳಗೆ ಆಂಡರ್ಸನ್ ಗುಂಡು ಹಾರಿಸಿದರು. ಅದು ಗರ್ಜಿಸುತ್ತಾ ನುಗ್ಗಿ, ಮುಂದಕ್ಕೆ ಉರುಳಿ, ಸುರಂಗದ ಮೇಲಿನಿಂದ ರೈಲು ಕಂಬಿಯತ್ತ ದೊಪ್ಪನೆ ಸತ್ತು ಬಿತ್ತು!

“ಮಂಚಿಹಳ್ಳಿಯ ಮುಗ್ಧರು" ಎರಡನೆಯ ಕಥನ. ಇದು ತಮಿಳ್ನಾಡಿನ ಸೇಲಂ ಜಿಲ್ಲೆಯ ಅಯ್ಯೂರಿನಿಂದ ಹತ್ತು ಮೈಲು ದೂರದಲ್ಲಿ ಕಾಡಿನೊಳಗಿದ್ದ ಮಂಚಿ ಎಂಬ ಹಳ್ಳಿಯಲ್ಲಿ ಆಂಡರ್ಸನ್ ನರಭಕ್ಷಕ ಹುಲಿಯನ್ನು ಕೊಂದು ಹಾಕಿದ ಕಥೆ. ಆ ಹಳ್ಳಿಯಲ್ಲಿ ಆದಿವಾಸಿಗಳಾದ ಪೂಜಾರಿಗಳ ವಾಸ. ಅಲ್ಲಿ ಒಬ್ಬ ಗಂಡಸು, ಆರು ವರ್ಷದ ಹುಡುಗಿ, ಮತ್ತೊಬ್ಬಳು ಹದಿನಾರು ವರ್ಷದ ಗರ್ಭಿಣಿ ಹುಲಿಗೆ ಬಲಿಯಾದರು. ಅಷ್ಟರಲ್ಲಿ, ಆಂಡರ್ಸನರ ಹಳೇ ಗೆಳೆಯ ಬೈರ ಪೂಜಾರಿ ಕಾರ್ಯಶೀಲನಾದ. ಮಂಚಿಯಿಂದ ಹತ್ತು ಮೈಲು ಅಯ್ಯೂರಿಗೆ, ಅಲ್ಲಿಂದ ಒಂಬತ್ತು ಮೈಲು ದೂರದ ದೆನುಕನುಕೋಟಕ್ಕೆ ನಡೆದು, ಅನಂತರ ಬಸ್ಸಿನಲ್ಲಿ ಬೆಂಗಳೂರಿಗೆ ಬಂದು ಆಂಡರ್ಸನರಿಗೆ ವಿಷಯ ತಿಳಿಸಿದ. ತಕ್ಷಣವೇ ಸ್ಟುಡಿಬೆಕರ್ ಕಾರಿನಲ್ಲಿ ಎಲ್ಲ ಸರಂಜಾಮು ಹೇರಿ ಹೊರಟರು ಆಂಡರ್ಸನ್. ಆಯ್ಯೂರು ತಲಪಿ, ಅಲ್ಲಿಂದ ಹತ್ತು ಮೈಲು ಇಬ್ಬರೂ ನಡೆದು ಮಂಚಿ ಸೇರಿದರು.

ಆ ದಿನ ರಾತ್ರಿ ಮಂಚಿಯ ಹತ್ತಿರದ ನೀರಿನ ಗುಂಡಿಯ ಬಳಿ ಹುಲಿಗಾಗಿ ಕಾದು ಕುಳಿತರು ಆಂಡರ್ಸನ್. ಆ ನರಭಕ್ಷದ ಇವರಿದ್ದಲ್ಲಿಗೆ ಬಾರದೆ ಮಂಚಿಯ ಗುಡಿಸಲುಗಳ ಹತ್ತಿರ ಹೋದದ್ದು, ಅಲ್ಲಿ ನಾಯಿಗಳು ಕಾಡೆಲ್ಲಾ ಕಿವುಡಾಗುವಂತೆ ಬೊಗಳಿದ್ದರಿಂದ ತಿಳಿಯಿತು. ಇವರು ಅತ್ತ ನಡೆದು ಹೋಗಿ ಟಾರ್ಚ್ ಹಾಕಿದಾಗ ಹುಲಿ ಪರಾರಿ. ಆಗ ರಾತ್ರಿ ಎಂಟು ಗಂಟೆಯ ಸಮಯ. ಅನಂತರ ಆಂಡರ್ಸನ್ ಟೆಂಟಿನಲ್ಲಿ ಮಲಗಿಕೊಂಡರು. ನಡುರಾತ್ರಿಯಲ್ಲಿ ಅವರಿಗೆ ಅಚಾನಕ್ ಎಚ್ಚರ. ಆ ಹುಲಿ ಇವರ ಟೆಂಟಿನ ಬಟ್ಟೆಯ ಕೆಳಗಡೆಯಿಂದ ಒಳಕ್ಕೆ ಕೈಚಾಚಿ ಇವರ ಹಾಸಿಗೆಯನ್ನೇ ಪರಚಿತ್ತು. ಧಿಗ್ಗನೆ ಎದ್ದ ಆಂಡರ್ಸನ್ ಗುಂಡು ಹಾರಿಸಿದರೂ ಹುಲಿಗೆ ತಗಲಲಿಲ್ಲ. ಅದು ಇನ್ನೊಮ್ಮೆ ಪರಾರಿಯಾಯಿತು.

ಮರುದಿನ “ನರಭಕ್ಷಕ ಹುಲಿ ತಪ್ಪಿಸಿಕೊಳ್ಳಬಾರದೆಂದು” ಮಂಚಿಯ ಜನರು ಮಂತ್ರವಾದಿಯಿಂದ ಪೂಜೆ ಮಾಡಿಸಿ ಕೋಳಿ ಬಲಿ ಕೊಟ್ಟರು! ಅದೆಲ್ಲ ಆಚರಣೆ ಮುಗಿದಾಗ ಬಿಸಿಲೇರಿತ್ತು. ಮಂತ್ರವಾದಿಯ ಒತ್ತಾಯದಿಂದ ಆಂಡರ್ಸನ್, ಬೈರ ಮತ್ತು ಮಂತ್ರವಾದಿಯ ಮೊಮ್ಮಗ ಮುತ್ತು ಹುಲಿ ಹುಡುಕಲು ಆಗಲೇ ಹೊರಟರು. ಪಕ್ಕದ ಗುಡ್ಡದ ಇಳಿಜಾರಿನಲ್ಲಿ ನಡೆದು ಕಣಿವೆಯ ಹಳ್ಳಕ್ಕೆ ಬಂದರು. ನೀರಿನ ಗುಂಡಿಯ ಹತ್ತಿರ ಹುಲಿಯ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಮೂಡಿದ್ದವು. ಅವು ಗುಡ್ಡದ ಶಿಖರದತ್ತ ಸಾಗಿದ್ದವು. ಆದ್ದರಿಂದ ಆ ಗುಡ್ಡ ಹತ್ತಿ ಆ ಬದಿಯ ಇಳಿಜಾರಿನಲ್ಲಿ ಇಳಿಯ ತೊಡಗಿದರು. ಅಲ್ಲಿ ದಟ್ಟ ಅರಣ್ಯ. ಆಗಲೇ ಮುತ್ತು ಮೇಲೆ ದಾಳಿ ಮಾಡಿತು ಹುಲಿ. ಬೈರ ಜೋರಾಗಿ ಕೂಗಿದ. ಮುತ್ತು ಚೀತ್ಕರಿಸಿದಲ್ಲಿಗೆ ಹೋದಾಗ, ಅವನು ಮುಖ ಅಡಿಯಾಗಿ ಬಿದ್ದಿದ್ದ. ಅವನ ತಲೆಗೆ ಹುಲಿ ಪಂಜದಿಂದ ಅಪ್ಪಳಿಸಿದ ಕಾರಣ ಕಣ್ಣುಗುಡ್ದೆಗಳು ಹೊರಬಂದಿದ್ದವು! ಹುಲಿ ಓಡಿ ಹೋಗಿತ್ತು.

ಆಗ ಮಧ್ಯಾಹ್ನ ಹನ್ನೊಂದು ಗಂಟೆ. ಮಂಚಿ ಹಳ್ಳಿಗೆ ಸುದ್ದಿ ತಿಳಿಸಿದರೆ ಹಳ್ಳಿಗರು ಮುತ್ತುವಿನ ಶವಸಂಸ್ಕಾರ ಮಾಡಿಯೇ ಮಾಡುತ್ತಾರೆ. ಆದ್ದರಿಂದ ಆಗಿನಿಂದಲೇ ಅಲ್ಲೇ ಹುಲಿಗಾಗಿ ಕಾಯಲು ನಿರ್ಧರಿಸಿದರು ಆಂಡರ್ಸನ್. ಬೈರ ಒಂದು ಫರ್ಲಾಂಗ್ ದೂರದ ಎತ್ತರದ ಮರ ಹತ್ತಿ ಕುಳಿತ. ಆಗ ಅಪರಾಹ್ನ ಎರಡು ಗಂಟೆಯ ಹೊತ್ತು. ಅಲ್ಲಿ ರಣ ಬಿಸಿಲು. ಸಂಜೆ ಐದು ಗಂಟೆಯ ಹೊತ್ತಿಗೆ ತುಸು ತಂಪಾಯಿತು. ಅನಂತರ ಕತ್ತಲಾಯಿತು. ಅಲ್ಲೆಲ್ಲ ಮೌನ ಕವಿಯಿತು. ಆಗ, ಕಾಡಿನ ಮೌನವೆಲ್ಲಾ ಕದಡಿದ್ದು ಕಡವೆಯ ಆಕ್ರಂದನ - ಅದು ಕೆಳಗಿನ ಹಳ್ಳದ ಕಡೆಯಿಂದ. ಹಸಿದಿದ್ದ ಹುಲಿ ಕಡವೆಯನ್ನು ಹಿಡಿದು, ತಿನ್ನತೊಡಗಿತ್ತು. ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅಲ್ಲಿಗೆ ಬಂತೊಂದು ಆನೆಗಳ ಹಿಂಡು. ಅವು ಘೀಳಿಟ್ಟು ಹುಲಿಯನ್ನು ಅಲ್ಲಿಂದ ಓಡಿಸಿದವು. ಅನಂತರ ಆಂಡರ್ಸನ್‌ಗೆ ಕೇಳಿಸಿದ್ದು ಹುಲಿ ಗುರುಗುಟ್ಟುವ ಸದ್ದು. ಅದು ಮುತ್ತುವಿನ ಹೆಣ ತಿನ್ನಲು ಹತ್ತಿರ ಬಂದಿತ್ತು. ಗಾಢ ಕತ್ತಲಿನಲ್ಲಿ ಆಂಡರ್ಸನ್‌ಗೆ ಕಾಣಿಸುತ್ತಿದ್ದದ್ದು ಹುಲಿಯ ಛಾಯೆ ಮಾತ್ರ. ಆದರೂ ಎದ್ದು ನಿಂತು, ಹುಲಿಗೆ ಗುರಿಯಿಟ್ಟು ಗುಂಡು ಸಿಡಿಸಿದರು. ಅದಕ್ಕೆ ಗಾಯವಾಗಿ, ಹುಚ್ಚು ಹಿಡಿಯುವಂತಹ ಕೋಪ ಬಂತು. ಅದು ಎದುರಿನ ಪೊದೆಯನ್ನೇ ವೈರಿ ಎಂದು ಭಾವಿಸಿ ಛಿದ್ರಛಿದ್ರ ಮಾಡಿತು. ಆಂಡರ್ಸನ್ ಎರಡನೇ ಗುಂಡು ಹಾರಿಸಿದಾಗ, ಹುಲಿ ಅಷ್ಟೆತ್ತರ ಚಿಮ್ಮಿ ಕೆಳಕ್ಕೆ ಬಿತ್ತು. ಇವರು ಹುಲಿಯ ತಲೆಗೆ ಹೊಡೆದ ಮೂರನೇ ಗುಂಡಿನೇಟಿಗೆ ಅದು ಸತ್ತು ಬಿತ್ತು.   

ಮೂರನೆಯದು "ಮಮ್ಮಟಿವಾಯನ್" ಎಂಬ ಢಕಾಯಿತನ ಕಥೆ. ತನ್ನ ತಂದೆಯನ್ನು ಕೊಂದು ಅವರ ಶವವನ್ನು ರಸ್ತೆ ಬದಿಯ ಮರಕ್ಕೆ ನೇತು ಹಾಕಿದ ಕುಟುಂಬದ ಒಂಬತ್ತು ಜನರನ್ನು ಕೊಂದು, ಅನಂತರ ಢಕಾಯಿತನಾದವನು ಆತ. ಅವನು ಮಾಡಿದ ಢಕಾಯಿತಿ, ಸುಲಿಗೆಗಳಿಗೆ ಲೆಕ್ಕವಿಲ್ಲ. ಆದರೆ ಸುಲಿಗೆಯ ಹಣದ ಒಂದು ಪಾಲನ್ನು ಬಡಬಗ್ಗರಿಗೆ ಹಂಚುತ್ತಿದ್ದ! ಅದರಿಂದಾಗಿ ಅವನಿಗೆ ಕೆಳವರ್ಗದ ಜನರ ಸಹಕಾರವೂ ಇತ್ತು. ಹಾಗಾಗಿ ಪೊಲೀಸರು ಹರಸಾಹಸ ಮಾಡಿದರೂ ಅವನು ಅವರ ಕೈಗೆ ಸಿಗಲೇ ಇಲ್ಲ. ಅವನ ಜೊತೆ ಮಾತನಾಡಬೇಕೆಂಬ ಆಂಡರ್ಸನರ ಇಚ್ಛೆಯ ಮಾತು ಅವನಿಗೆ ತಲಪುತ್ತದೆ. ತಮಿಳ್ನಾಡಿನ ಹೊಗೇನಕಲ್ ಜಲಾಶಯದ ಮೇಲೆ ಅಣೆಕಟ್ಟು ನಿರ್ಮಿಸಲು ಸರ್ವೆ ಕೆಲಸ ನಡೆಯುತ್ತಿದ್ದ ಕಾಲದಲ್ಲಿ ಆಂಡರ್ಸನ್ ಅಲ್ಲಿಗೆ ಹೋಗಿ ಟೆಂಟಿನಲ್ಲಿದ್ದರು. ರಾತ್ರಿ ಅಲ್ಲಿಗೆ ಬಂದ ಮಮ್ಮಟಿವಾಯನ್ ಇವರತ್ತ ಕೋವಿ ಗುರಿ ಹಿಡಿದಿದ್ದ! ಆಂಡರ್ಸನ್ ಹೆದರಲೇ ಇಲ್ಲ. ಅನಂತರ ಅವನೊಂದಿಗೆ ದೀರ್ಘ ಮಾತುಕತೆ. ಇವರ ಸಲಹೆಯಂತೆ, ತನ್ನ ಬಂದೂಕು ತೊರೆದ ಢಕಾಯಿತ ಇವರ ಬೆಂಗಳೂರಿನ ಮನೆಗೆ ಬಂದ - ಸಾಧುವಿನ ವೇಷದಲ್ಲಿ. ತದನಂತರ ಆತ ಕಣ್ಮರೆಯಾದ!

ಕೊನೆಯ ಕಥನ “ಜಾಲಹಳ್ಳಿಯ ಕುರ್ಕ”. ಬೆಂಗಳೂರಿನ ಹತ್ತಿರದ ಜಾಲಹಳ್ಳಿಯ ಕಾಡಿನಲ್ಲಿ ಅದೊಂದು ಕಾಲದಲ್ಲಿ, ಜನರ ಮೂರ್ಖತನದಿಂದಾಗಿ ನಾಲ್ವರನ್ನು ಬಲಿ ತೆಗೆದುಕೊಂಡ ಕುರ್ಕದ ಕಥೆ. ಜಾಗರೂಕರಾಗಿದ್ದರೆ ಅವರೆಲ್ಲ ಬದುಕಿರುತ್ತಿದ್ದರು.
ಇದರ ಪ್ರತಿಯೊಂದು ಕಥನವೂ ಓದುಗರಿಗೆ ಹಲವು ಜೀವನ ಪಾಠಗಳನ್ನು ಕಲಿಸುತ್ತದೆ.