ಜಾಲ್‌ಜೀರ್‌ ಜ್ಞಾನಕ್ಕೆ ಸುನಾಮಿ ಸವಾಲು

ಜಾಲ್‌ಜೀರ್‌ ಜ್ಞಾನಕ್ಕೆ ಸುನಾಮಿ ಸವಾಲು

ಕಡು ಬೇಸಿಗೆ. ಅಚ್ಚರಿಯೆಂದರೆ ಜೂನ್‌ 28ಕ್ಕೆ ಎಲ್ಲಿಂದ ಬಂತೋ ಗೊತ್ತಿಲ್ಲ ಮಳೆಯೋ ಮಳೆ! ಜಾಲ್‌ಜೀರ್‌ ಜ್ಞಾನ ಗೆದ್ದಿತು. ಸಮುದ್ರದ ಒಡನಾಟದ ಅನುಭವ ಕೇಳುತ್ತ ಕುಮಟಾದ ಗುಡ್ಡ್‌ ಕಾಗಾಲ್‌ ಹಳ್ಳಿಯ ಮುಸ್ಲಿಮರ ಕೇರಿಗೆ ಪಯಣ. ಅಬ್ದುಲ್‌ಕರೀಂ, ಉಸ್ಮಾನ್‌ ಗುರ್ಜಿ, ಇಬ್ರಾಹಿಂ ಉಪ್ಪಾರಕರ ಹೀಗೆ ಹಲವರ ಜತೆ ಸಮುದ್ರ ಜ್ಞಾನ ಮಥನ.
ದಕ್ಷಿಣಕ್ಕೆ ಜುಲ್ಮಾನ್‌ ನಕ್ಷತ್ರವಿದೆ. ದಕ್ಷಿಣಕ್ಕೆ ಹೋದರೆ ದಿಕ್ಕೂ ಸಿಗುವುದಿಲ್ಲ, ಇದನ್ನು ನಂಬಿ ಆ ದಿಕ್ಕಿಗೆ ಪಯಣಿಸಿದ ಸಮುದ್ರಯಾನಿಗಳು ವಾಪಸ್ಸಾಗುವುದೂ ಖಾತ್ರಿಯಿಲ್ಲ. ದಕ್ಷಿಣದ ಗಾಳಿ ಬಿರುಗಾಳಿಗೆ ಸಮುದ್ರ ಏರುತ್ತದೆ. ಕರೆಗಾಳಿ ಎಂಬ ಗಾಳಿ ಉತ್ತರ ದಿಕ್ಕಿನಿಂದ ಬರುತ್ತದೆ. ತೆಂಕಣ ಗಾಳಿ ಕೇರಳದ ಕಡೆಯಿಂದ ಬೀಸುತ್ತದೆ. ಆಗ ಸಮುದ್ರದ ನೀರು ಕೊಂಚ ಬಿಸಿಯಾಗುತ್ತದೆ. ಪರಿಣಾಮ ಮೀನುಗಳು ಆಳಕ್ಕೆ ಹೋಗುತ್ತವೆ. ಬಲೆ ಬೀಸಿದಾಗ ಮೀನು ದೊರೆಯುವುದಿಲ್ಲ. ಮುಂಬೈ ದಿಕ್ಕಿನಿಂದ ಬೀಸುವ ಗಾಳಿ ಇವರ ಪ್ರಕಾರ ಬಡಗಣಿ ಗಾಳಿ. ಇದು ಬೀಸಿದರೆ ಮೀನು ಜಾಸ್ತಿ. ಇದಲ್ಲದೇ ಪೂರ್ವದಿಂದ ಪಶ್ಚಿಮಕ್ಕೆ ಬೀಸುವುದು ವಾಯಗಿನ್‌ ಗಾಳಿ. ನಿಧಾನಕ್ಕೆ ಬೀಸುವುದು ಇದರ ಗುಣ. ಆಗ ಮೀನುಗಾರಿಕೆಗೆ ಹೋದರೆ ಮುದ್ದಾಂ ಮೀನು ದೊರೆಯುತ್ತದೆ. ಅಡ್ಡಗಾಳಿ ಬೀಸುವ ಪ್ರಹಾರ ಎಷ್ಟಿರುತ್ತದೆಂದರೆ ಸಮುದ್ರದ ಆಳದ ಕೆಸರು ಮೇಲೆದ್ದು ಬರುತ್ತದೆ! ನೀರು ದಪ್ಪವಾಗುತ್ತದೆ. ಇದನ್ನು ಗಮನಿಸಿದವರು ಇನ್ನು ಗಡಿಕಾಲ(ಮಳೆಗಾಲ) ಆರಂಭವಾಯಿತು ಎಂದು ಲೆಕ್ಕ ಹಾಕುತ್ತಾರೆ.
ನಮ್ಮ ಹಳೆಯ ಲೆಕ್ಕದ ಪ್ರಕಾರ ಬಳಂಜಿ ಮೀನು ಬಲೆಗೆ ಬಂದಾಗ ಸಮುದ್ರದಲ್ಲಿ ತುಫಾನ್‌ ಏಳುತ್ತಿತ್ತು,ಆಗ ಮಳೆಗಾಲ ಬಂತೆಂದು ಅರ್ಥ! ಮುಸ್ಲಿಂ ಸಮುದಾಯದವರು ಕೃಷಿ ಕೆಲಸ ನಿರ್ವಹಿಸಲು ಪಂಚಾಂಗ ನೋಡುತ್ತಿದ್ದರು. ಮುಂಬೈದಲ್ಲಿ ಪ್ರಕಟವಾಗುತ್ತಿದ್ದ ಅದರಲ್ಲಿ ಐದು ವರ್ಷದ ಹವಾಮಾನದ ತಕಲಿಮ್‌ (ಜಾತಕ) ದಾಖಲಾಗಿರುತ್ತಿತ್ತು. ಮಳೆ, ಗಾಳಿ, ತುಫಾನ್‌ ವಿವರಗಳಿಗೆ ಈ ಗ್ರಂಥದ ಬಳಕೆ. ಮಗುವಿಗೆ ನಾಮಕರಣ ಸಂದರ್ಭದಲ್ಲಿ ಇದನ್ನು ಪರಿಶೀಲಿಸಲಾಗುತ್ತಿತ್ತು. ಸಮುದ್ರಯಾನಿಗಳ ಜ್ಞಾನವೇ ಹೆಚ್ಚಿರುತ್ತಿದ್ದ ಗ್ರಂಥ ಮಳೆ ಭವಿಷ್ಯ ಹೇಳಲು ನೆರವಾಗುತ್ತಿತ್ತು. ಗ್ರಂಥ ಜ್ಞಾನದ ಜತೆಗೆ ನೆಲಮೂಲ ಜ್ಙಾನವೂ ಮುಖ್ಯ. ನಕ್ಷತ್ರಗಳು ತುಫಾನ್‌ನ ಮುನ್ಸೂಚನೆ ನೀಡಿದಂತೆ ಸಮುದ್ರ ಹಾಗೂ ಅಲ್ಲಿನ ಗಾಳಿ ಲಕ್ಷಣಗಳು ಇವರಿಗೆ ಫಕ್ಕನೆ ಮಳೆಯ ಸೂಚನೆ ಅರಿಯಲು ಅನುಕೂಲವಾಗಿತ್ತು.
ಕುತೂಹಲಕರ ಸಂಗತಿಯೆಂದರೆ ಜಾಲ್‌ಜೀರ್‌ ಮಳೆ ಲಕ್ಷಣ ಹೇಳಲು ವಿಶೇಷವಾಗಿ ಕರ(ರಿ)ನೀರಿನ ಆಧಾರ ಎದುರಿಡುತ್ತಾರೆ. ಮಾರ್ಚ್ , ಎಪ್ರಿಲ್‌ ಹಾಗೂ ಮೇ ಸುಮಾರಿಗೆ ಹೀಗೆ ವರ್ಷದಲ್ಲಿ ಮೂರು ಸಾರಿ ಕರಿನೀರು ಸಮುದ್ರದಲ್ಲಿ ಕಾಣಿಸಿಕೊಳ್ಳುತ್ತದೆ. 
ಸಾಮಿಲ್‌ಗಳ ಕಟ್ಟಿಗೆ ಹುಡಿಯಂತಹ ಕಪ್ಪು ವಸ್ತುಗಳು ಸಮುದ್ರ ನಡುವಿನಲ್ಲಿ ಹೇಗೋ ಉತ್ಪಾದನೆಯಾಗಿ ದಡದತ್ತ ಉದ್ದನೆಯ ಪಟ್ಟಿಯಂತೆ ಚಲಿಸಿ ಬರುತ್ತವೆ. ಇವಕ್ಕೆ ಕೆಟ್ಟವಾಸನೆ. ೩ನೇ ಬಾರಿಗೆ ಕರಿನೀರು ಬಂದರೆ ಮಳೆ ಇನ್ನೇನು ಆರಂಭವಾಗುತ್ತದೆಂದು ಖಾತ್ರಿಯಾಗಿ ನಂಬಬಹುದಂತೆ! ಇದಕ್ಕೆ ಪೂರಕವಾಗಿ ಗಾಳಿ ಲಕ್ಷಣಗಳ ಆಧಾರ ಗಣನೆಗೆ ತೆಗೆದುಕೊಳ್ಳುತ್ತಾರೆ. ಉತ್ತರದ ಗಾಳಿ ಆರೇಳು ದಿನ ಬೀಸುತ್ತದೆ.ಆಗ ಗುಡುಗು, ಮಿಂಚು ಶುರುವಾಗುತ್ತದೆ. ನಂತರ ದಕ್ಷಣದ ಗಾಳಿ ಎಂಟು ದಿನ. ಬಳಿಕವಷ್ಟೇ ಮಳೆಗಾಲ. ಇದು ಜಾಲ್‌ಜೀರ್‌ ನಂಬಿದ ಅಲಿಖಿತ ಪರಿಸರ ಲಕ್ಷಣಶಾಸ್ತ್ರ.
ಈಗ ಮಳೆ ಯಾವತ್ತೂ ಸುರಿಯಬಹುದು, ಹವಾಮಾನ ವೈಪರಿತ್ಯ ನಮ್ಮನ್ನು ಕಂಗೆಡೆಸಿದೆ. ಮುಂಜಾನೆ ಚಳಿ, ಸಂಜೆ ಮಳೆ ಸುರಿಯುವುದಿದೆ. ಕಡಲ ಜ್ಞಾನಿಗಳು ಇದಕ್ಕೆ ಏನು ಹೇಳುತ್ತಾರೆ? ಪ್ರಶ್ನೆಗೆ ೩೦-೪೦ ವರ್ಷಗಳಿಂದ ಕಡಲು ಅಲೆದವರೆಲ್ಲ ಒಕ್ಕೊರಲಿನಲ್ಲಿ ಹೇಳಿದ ಮಾತು ಅಧ್ಯಯನ ಯೋಗ್ಯ. ‘ಹವಾಮಾನದ ಕಾಲ ಗಣನೆಗೆ ಆಧಾರವಾಗಿದ್ದ ಕಡಲ ಲಕ್ಷಣಗಳು ಸುನಾಮಿ ಘಟನೆ ಬಳಿಕ ಲೆಕ್ಕ ತಪ್ಪಿದೆಯಂತೆ!’ ಈಗ ಅಡ್ಡಗಾಳಿ ಸರಿಯಾಗಿ 
ಬೀಸುತ್ತಿಲ್ಲ, ದಿನಕ್ಕೆ ಆರು ತಾಸು ಉಬ್ಬರ, ಆರು ತಾಸು ಇಳಿತವಾಗುತ್ತಿದ್ದ ಕರಾರುವಕ್ಕಾದ ಲೆಕ್ಕಾಚಾರವೂ ತಲೆ ಕೆಳಗಾಗಿದೆ! ಜಲ್‌ ಚಂಡಮಾರುತ ನವೆಂಬರದ ಚಳಿಯಲ್ಲಿ ಮಳೆಯ ಭಾರ ಬಿತ್ತಿದ ಪ್ರಸ್ತುತ ಸ್ಥಿತಿ ನಮಗೆಲ್ಲ ತಿಳಿದಿದೆ. ಈಗ ಜಾಲ್‌ಜೀರ್‌ರ ಅನನ್ಯ ಕಡಲ ಜ್ಞಾನಕ್ಕೂ ಸುನಾಮಿ ಸವಾಲು ಒಡ್ಡಿದೆ.
ನಿಸರ್ಗ ಭವಿಷ್ಯ ಒಗಟಾಗುತ್ತಿದೆ. ಜಡಾಕಾಗುತ್ತಿದೆ. ಈಗ ನಮ್ಮ ಪರಿಸರ ವಿಜ್ಞಾನ ಇಂತಹ ಜನಪದ ಜ್ಞಾನ ಬುನಾದಿಗೆ ಕೊಂಚ ಕಿವಿ ಆಲಿಸಬೇಕು.
 
 
(ಚಿತ್ರ ಕೃಪೆ : ಗೂಗಲ್ )

Comments