ಜಾಲ
ಖ್ಯಾತ ತೆಲುಗು ಲೇಖಕ ಪೆದ್ದಿಂಟಿ ಅಶೋಕ್ ಕುಮಾರ್ ಅವರು ಬರೆದ ವಿಭಿನ್ನ ಶೈಲಿಯ ಕಥೆಗಳನ್ನು ಎಂ ಜಿ ಶುಭಮಂಗಳ ಇವರು “ಜಾಲ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿ ಡಾ. ಪಾರ್ವತಿ ಜಿ ಐತಾಳ್. ಇವರು ತಮ್ಮ ಮುನ್ನುಡಿಯಲ್ಲಿ ಈ ಕಥಾ ಸಂಕಲನದ ಬಗ್ಗೆ ಬಹಳ ಸೊಗಸಾದ ಮಾಹಿತಿ ನೀಡಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ…
“ಜಾಗತೀಕರಣಗೊಂಡ ಈ ಜಗತ್ತಿನಲ್ಲಿ ಸಾವಿರಾರು ಭಾಷೆಗಳ ನಡುವೆ ಸಂವಹನದ ಅಗತ್ಯವು ಎಂದಿಗಿಂತ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ ಪರಸ್ಪರ ಅನುವಾದದ ಕೆಲಸವೂ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಬಹುಭಾಷಾ ದೇಶವಾದ ಭಾರತದಲ್ಲಿ ಅಸ್ತಿತ್ವದಲ್ಲಿರುವ ನೂರಾರು ಭಾಷೆಗಳು ಮೂಲತಃ ಏಕಸಂಸ್ಕೃತಿಯನ್ನು ಹೊಂದಿದ್ದರೂ ಭಾಷಾ ಭಿನ್ನತೆಯ ಕಾರಣದಿಂದಾಗಿ ಅವುಗಳ ನಡುವೆಯೂ ಅನುವಾದ ನಡೆಯಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಭಾರತೀಯ ಪ್ರಾದೇಶಿಕ ಭಾಷಾ ಸಾಹಿತ್ಯಗಳ ನಡುವೆ ಈಗಾಗಲೇ ಆಗಿರುವ ಅನುವಾದವನ್ನು ಗಮನಿಸಿ ನೋಡಿದರೆ ಕನ್ನಡಕ್ಕೆ ಸಂಸ್ಕೃತ, ಹಿಂದಿ, ಬಂಗಾಳಿ, ಮರಾಠಿ, ತಮಿಳು, ಮಲೆಯಾಳಗಳಿಂದ ಬಂದಷ್ಟು ಗಂಭೀರ ಸಾಹಿತ್ಯ ಕೃತಿಗಳ ಅನುವಾದ ತೆಲುಗಿನಿಂದ ಆಗಿಲ್ಲ. ತೆಲುಗು ಕಾದಂಬರಿಯೆಂದರೆ ಯಂಡಮೂರಿ ವೀರೇಂದ್ರನಾಥರೇನೋ ಅನ್ನಿಸುವಷ್ಟು ಸಂಖ್ಯೆಯಲ್ಲಿ ಅವರ ಕಾದಂಬರಿಗಳು ಕನ್ನಡಕ್ಕೆ ಹೊನಲಾಗಿ ಹರಿದಿವೆ. ಆದರೆ ಅವರದ್ದು ಜನಸಾಮಾನ್ಯರಿಗೆ ಖುಷಿ ನೀಡಬಲ್ಲ ಸಾಹಿತ್ಯವಷ್ಟೆ. ಇತ್ತೀಚೆಗೆ ಚಲಂ, ಕಾಳಿಪಟ್ನಂ ರಾಮರಾವ್, ಓಲ್ಗಾ, ಸಲೀಂ, ಆಯಿನಂಪೂಡಿ ಶ್ರೀಲಕ್ಷ್ಮಿ ಮಧುರಾಂತಕ ನರೇಂದ್ರ ಮೊದಲಾದ ಮಹತ್ವದ ಕಥೆಗಾರರ ಕಥೆಗಳು ಕುಂ.ವೀ. ರೋಹಿಣ ಸತ್ಯ, ಚಿದಾನಂದ ಸಾಲಿ, ಅಜಯ ವರ್ಮಾ ಅಲ್ಲೂರಿ, ಕಾ.ಹು. ಚಾನ್ ಪಾಷಾ ಮೊದಲಾದವರ ಮೂಲಕ ಕನ್ನಡಕ್ಕೆ ಬಂದಿವೆ. ಈಗಾಗಲೇ ತಮ್ಮ ಉತ್ತಮ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಎಂ.ಜಿ. ಶುಭಮಂಗಳ ಅವರು ಈಗ ತೆಲುಗಿನ ಪ್ರಸಿದ್ಧ ಲೇಖಕರಾದ ಪೆದ್ದಿಂಟಿ ಅಶೋಕ್‌ಕುಮಾರ್ ಅವರ ಸಣ್ಣ ಕಥೆಗಳನ್ನು ತರುತ್ತಿರುವುದು ತುಂಬಾ ಸಂತೋಷ ಪಡಬೇಕಾದ ಸಂಗತಿ.
ಈ ಸಂಕಲನದಲ್ಲಿ ತಮ್ಮ ವಸ್ತು, ವಿನ್ಯಾಸ, ಕಥನ ಶೈಲಿಗಳಿಂದ ಓದುಗರ ಗಮನ ಸೆಳೆಯುವ ಹನ್ನೆರಡು ಸುಂದರ ಕಥೆಗಳಿವೆ. ಎಲ್ಲವೂ ತೆಲುಗು ಸಾಂಸ್ಕೃತಿಕ ಲೋಕವನ್ನು ತೆರೆದಿಟ್ಟು ಪರಿಚಯಿಸುವ ಸಾಮಾಜಿಕ ಮಹತ್ವವುಳ್ಳ ಕಥೆಗಳು. ಕೃಷಿ ಭೂಮಿಯನ್ನೇ ನೆಚ್ಚಿಕೊಂಡಿರುವ ಇಬ್ಬರು ಅಕ್ಕತಂಗಿಯರು ನಿಸರ್ಗದ ಅವಕೃಪೆಗೆ ತುತ್ತಾಗಿ ಹೇಗೆ ಹೆಜ್ಜೆ ಹೆಜ್ಜೆಗೂ ಸೋಲನ್ನನುಭವಿಸಿ ಹತಾಶರಾಗುತ್ತಾರೆ. ತಮ್ಮ ಸಂಕಟವನ್ನು ಹಂಚಿಕೊಳ್ಳಲು ಯಾರೂ ಸಿಗದೆ ಹೇಗೆ ತಬ್ಬಲಿಗಳಾಗುತ್ತಾರೆ ಎಂಬುದನ್ನು ಚಿತ್ರಿಸುವ ‘ತಬ್ಬಲಿಗಳು’ ಇಲ್ಲಿ ಮೊದಲ ಕಥೆ. ಮಕ್ಕಳಲ್ಲಿ ಜೀವನ ಮೌಲ್ಯಗಳ ಕುರಿತಾದ ಅರಿವನ್ನು ಮೂಡಿಸಬೇಕಾದ ಶಿಕ್ಷಣ ಕ್ಷೇತ್ರವು ಹೇಗೆ ವ್ಯಾಪಾರೀಕೃತವಾಗಿಬಿಟ್ಟಿದೆ ಮತ್ತು ಮಕ್ಕಳು ಪಡೆಯುವ ಅಂಕಗಳು ಹೇಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಬಿಟ್ಟಿವೆ ಅನ್ನುವುದನ್ನು ಚರ್ಚಿಸುವ ‘ಪ್ರೋಗ್ರೆಸ್’ ವ್ಯಂಗ್ಯ ಧ್ವನಿಯ ಶೀರ್ಷಿಕೆಯುಳ್ಳ ಕಥೆ. ಟಿ.ವಿ. ಚಾನೆಲ್ಲುಗಳು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಏನೇನೆಲ್ಲ ಸರ್ಕಸ್ ಮಾಡುತ್ತಾರೆಂಬುದರ ಕುರಿತಾದ ವಿಡಂಬನಾತ್ಮಕ ಚಿತ್ರಣ ‘ಇರುವೆ ನೀನೇಕಿಲ್ಲಿರುವೆ?’ ನಕ್ಸಲ್ ಹೋರಾಟದಲ್ಲಿ ತಂದೆ-ಗಂಡ-ಮಕ್ಕಳನ್ನು ಕಳೆದುಕೊಳ್ಳಬೇಕಾಗಿ ಬಂದಾಗ ತಾಯಂದಿರು ಗೋಳಾಡುವ ಮತ್ತು ಅವರು ಪರಸ್ಪರರ ದುಃಖದಲ್ಲಿ ಪಾಲ್ಗೊಳ್ಳುವ ಹೃದಯ ವಿದ್ರಾವಕ ಚಿತ್ರಣವಿರುವ ಕಥೆ ‘ಪ್ರಾಣದ ಬೆಲೆ ನೂರು ಒಂಟೆಗಳು’.
ಹಲವಾರು ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ ಸಾಯುತ್ತಿದ್ದವನನ್ನು ಬದುಕಿಸಿದ ಬೊಂದಯನಿಗೆ ಅದೇ ವ್ಯಕ್ತಿಯಿಂದ ಸಹಾಯ ಸಿಕ್ಕುವ ಆಕಸ್ಮಿಕ ಚಿತ್ರಣವಿರುವ ಕಥೆ ‘ಬೀಜ’. ಫೋಬಿಯಾದಿಂದ ರೋಗಿಯನ್ನು ಒಂದೊಮ್ಮೆ ಗುಣಪಡಿಸಿದ ಡಾಕ್ಟರೇ ಮುಂದೆ ಆಕೆಯ ಫೋಬಿಯಾಕ್ಕೆ ಕಾರಣರಾಗುವ ಕಥೆ ‘ಫೋಬಿಯಾ’. ಕಳ್ಳಭಟ್ಟಿ ಸಾರಾಯಿ ಧಂಧೆಯ ಅಪಾಯಕಾರಿ ಸುಳಿಯನ್ನು ಪರಿಚಯಿಸುವ ಕಥೆ ‘ಜಾಲ’. ಬಾಡಿಗೆ ತಾಯಿಯ ಸಂಕಷ್ಟಗಳನ್ನು ಚಿತ್ರಿಸುವ ಕಥೆ ‘ಯಾರ ನೋವು ಯಾರ ಮುಡಿಗೋ’. ಈ ಎಲ್ಲ ಕಥೆಗಳೂ ಒಂದಿಲ್ಲೊಂದು ಕಾರಣಗಳಿಗೆ ಇಷ್ಟವಾಗುತ್ತವೆ. ಈ ಕಥೆಗಳಲ್ಲಿ ರೈತರ ಬವಣೆಗಳಿವೆ (ತಬ್ಬಲಿಗಳು), ಶಿಕ್ಷಣ ಕ್ಷೇತ್ರದ ಹುಳುಕುಗಳ ಬಗ್ಗೆ ವಿಷಾದವಿದೆ (ಪ್ರೋಗ್ರೆಸ್), ಸಾಮಾಜಿಕ ನ್ಯಾಯಕ್ಕಾಗಿ ಯಾರು ಎಷ್ಟೇ ಹೋರಾಡಿ ಕಾನೂನಿನಿಂದ ಶಿಕ್ಷಿಸಲ್ಪಟ್ಟು ಮರಣದಂಡನೆಗೊಳಗಾದರೂ, ಅಲ್ಲಿ ಮಾನಸಿಕ ಯಾತನೆಗೊಳಗಾಗುವವರು ತಾಯಂದಿರು ಎಂಬ ಸತ್ಯದ ಪ್ರತಿಪಾದನೆ ಯಿದೆ (ಪ್ರಾಣದ ಬೆಲೆ ನೂರು ಒಂಟೆಗಳು), ಊಳಿಗಮಾನ್ಯ ಪದ್ಧತಿಯಡಿ ನಲುಗುವ ಬಡವರ ದುಸ್ಥಿತಿಯ ಚಿತ್ರಣವಿದೆ (ಬೀಜ ಮತ್ತು ಜಾಲ), ಬಾಡಿಗೆ ತಾಯಂದಿರು ಹಣಕ್ಕಾಗಿ ಕೆಲಸ ಮಾಡುತ್ತಾರೆಂಬ ಸಾಮಾನ್ಯ ನಂಬಿಕೆಯನ್ನು ಮುರಿಯುವ ಅವರ ಸಂವೇದನೆಗಳ ಸೂಕ್ಷ್ಮ ಅವಲೋಕನವಿದೆ(ಯಾರ ನೋವು ಯಾರ ಮುಡಿಗೋ), ಜಾಗತಿಕ ಮುಕ್ತ ಮಾರುಕಟ್ಟೆಯ ಕಬಂಧ ಬಾಹುಗಳು ದೇಶದ ಅಧಿಕಾರಶಾಹಿಗಳ ಸ್ವಾರ್ಥ ರಾಜಕಾರಣದ ಬೆಂಬಲದೊಂದಿಗೆ ಚಾಚಿಕೊಂಡದ್ದರಿಂದಾಗಿ ರೈತರ ಬದುಕು ಮೂರಾಬಟ್ಟೆಯಾದ ಕಥೆಯನ್ನು ಹೇಳುವ ‘ಕೈಗೊಂಬೆ’, ಬೆವರು ಸುರಿಸಿ ಪ್ರಾಮಾಣ ಕವಾಗಿ ದುಡಿಯುವ ಶ್ರಮ ಜೀವಿಗಳ ಕಷ್ಟದ ದುಡಿಮೆಯನ್ನು ಸೊಳ್ಳೆಗಳು ರಕ್ತ ಹೀರುವಂತೆ ದರೋಡೆಗೈದು ಅವರ ಬದುಕನ್ನು ನರಕಸದೃಶವಾಗಿಸುವ ಭ್ರಷ್ಟಾಚಾರಿ ಅಧಿಕಾರಿ ವರ್ಗದವರ ಅನ್ಯಾಯದ ಜಾಲವನ್ನೂ ಅಲ್ಲಿ ಸೃಷ್ಟಿಯಾಗುವ ಹೃದಯವಿದ್ರಾವಕ ಸನ್ನಿವೇಶಗಳನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥೆ ‘ನಿಗೂಢ ಹಸ್ತಗಳು’ - ಹೀಗೆ ಹಲವು ಸಾಮಾಜಿಕ ಸಮಸ್ಯೆಗಳ ಕುರಿತು ಕಥೆಗಳು ಓದುಗನನ್ನು ಚಿಂತನೆಗೊಳಪಡಿಸುತ್ತವೆ.
ಒಂದು ಅನುವಾದಿತ ಕೃತಿಯ ಯಶಸ್ಸು ನಿಂತಿರುವುದು 1. ಅನುವಾದಕ್ಕಾಗಿ ಆಯ್ಕೆ ಮಾಡುವಾಗ ತೆಗೆದುಕೊಳ್ಳುವ ಎಚ್ಚರಿಕೆಯ ಮೇಲೆ(ಇಲ್ಲಿ ಅನುವಾದಕರ ವಿಮರ್ಶಾ ಸಾಮರ್ಥ್ಯವು ಕೆಲಸ ಮಾಡುತ್ತದೆ). 2. ಅನುವಾದಕರು ತಮ್ಮ ಭಾಷೆಯನ್ನು ಪಳಗಿಸುವುದರಲ್ಲಿ ಎಷ್ಟು ನಿಸ್ಸೀಮರು ಎನ್ನುವುದರಲ್ಲಿ. ಅಂದರೆ ಮೂಲ ಕೃತಿಯಲ್ಲಿ ಬಳಕೆಯಾದ ಪದಗಳು, ಪದಪುಂಜಗಳು, ನುಡಿಗಟ್ಟುಗಳು, ಗಾದೆಮಾತುಗಳು ಮತ್ತು ಸಾಂಸ್ಕೃತಿಕ ವಿಶಿಷ್ಟ ಪದಗಳಿಗೆ ಸರಿಯಾದ ಪರ್ಯಾಯ ಗಳನ್ನು ಬಳಸುವುದರಲ್ಲಿ. 3. ಮೂಲ ಕೃತಿಯನ್ನು ಸರಿಯಾಗಿ ಅರ್ಥ ಮಾಡಿ ಕೊಂಡು ಮೂಲಕ್ಕೆ ನಿಷ್ಠವಾಗಿ ಅದರ ಸತ್ವವು ಸ್ವಲ್ಪವೂ ಸೋರಿ ಹೋಗದಂತೆ ಉದ್ದಿಷ್ಟ ಭಾಷೆಯಲ್ಲಿ ನಿರೂಪಿಸುವುದು. ಸಾಂಸ್ಕೃತಿಕ ವಿಶಿಷ್ಟ ಅಭಿವ್ಯಕ್ತಿಗಳಿಗೆ ಸರಿಹೊಂದುವ ಪರ್ಯಾಯ ಸಿಗದಿದ್ದಲ್ಲಿ ಅವುಗಳ ಬಗೆಗಿನ ವಿವರಣೆಯನ್ನು ಟಿಪ್ಪಣ ವಿಭಾಗದಲ್ಲಿ ಕೊಡಬೇಕಾಗುತ್ತದೆ. ಈ ಎಲ್ಲ ನೆಲೆಗಳಿಂದ ಅವಲೋಕಿಸಿದಾಗ ಎಂ.ಜಿ. ಶುಭಮಂಗಳ ಅವರು ತಮ್ಮ ಈ ಕೃತಿಯನ್ನು ಸಮರ್ಥವಾಗಿ ಅನುವಾದಿಸಿದ್ದಾರೆಂದು ಹೇಳಬಹುದು.”