ಜಿಬಿಎಸ್ ಎಂಬ ಅಪರೂಪದ ಕಾಯಿಲೆ

ಜಿಬಿಎಸ್ ಎಂಬ ಅಪರೂಪದ ಕಾಯಿಲೆ

ಹಲವು ದಶಕಗಳ ಹಿಂದೆ ಸಿಡುಬು, ಕಾಲರಾ, ಮಲೇರಿಯಾ, ಪೋಲಿಯೋ, ಕ್ಷಯ ಹೀಗೆಲ್ಲಾ ಭೀಕರವಾದ ಕಾಯಿಲೆಗಳನ್ನು ಮಾನವನನ್ನು ಕಾಡುತ್ತಿದ್ದವು. ನಂತರ ಹೆಚ್ ಐ ವಿ, ಡೆಂಗ್ಯೂ, ಹಕ್ಕಿ ಜ್ವರ, ಹಂದಿ ಜ್ವರ, ಮಂಗನ ಕಾಯಿಲೆ, ಚಿಕುನ್ ಗುನ್ಯಾದಂತಹ ಕಾಯಿಲೆಗಳು ಕಾಡತೊಡಗಿದವು. ನಂತರ ಬಂತು ಪ್ರಪಂಚವನ್ನೇ ಸ್ಥಬ್ಧಗೊಳಿಸಿದ ಕೊರೋನಾ ಎಂಬ ಮಹಾಮಾರಿ. ಅದರಲ್ಲೂ ಅನೇಕ ಬಗೆಯ ವಿಧಗಳು ಕಾಣಿಸತೊಡಗಿದವು. ಆದರೆ ಇತ್ತೀಚೆಗೆ ಕಂಡು ಬಂದಿರುವ ಗುಯಿಲಿನ್ ಬಾರ್ ಸಿಂಡ್ರೋಮ್ ಅಥವಾ ಜಿಬಿಎಸ್ ಎನ್ನುವ ಅಪರೂಪದ ಕಾಯಿಲೆಯು ನಿಧಾನವಾಗಿ ತನ್ನ ಕಬಂಧ ಬಾಹುಗಳನ್ನು ದೇಶದಾದ್ಯಂತ ಚಾಚುತ್ತಿದೆ. ಕಾಯಿಲೆ ಅಪರೂಪದ್ದೇ ಆದರೂ ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ ಮಾರಣಾಂತಿಕವಾಗಿ ಬದಲಾಗುತ್ತದೆ. ಈಗಾಗಲೇ ಜನವರಿ ತಿಂಗಳಿನಿಂದೀಚೆಗೆ ದೇಶದಾದ್ಯಂತ ಸುಮಾರು ೧೮ ಮಂದಿ ಮೃತ ಪಟ್ಟಿದ್ದಾರೆ. 

ಇದೊಂದು ಅಪರೂಪದ ಕಾಯಿಲೆ ಏಕೆಂದರೆ ನಮ್ಮ ದೇಹದಲ್ಲಿರುವ ರೋಗ ನಿರೋಧಕ ವ್ಯವಸ್ಥೆಯು ನಮ್ಮದೇ ದೇಹದ ನರವ್ಯವಸ್ಥೆಯ ವಿರುದ್ಧ ಪ್ರಮಾದವಶಾತ್ ವೈರಿ ಎಂದು ತಿಳಿದುಕೊಂಡು ಹೋರಾಡಿ ಅದನ್ನು ಆಕ್ರಮಿಸುತ್ತದೆ. ಇದೊಂದು ಸ್ವಯಂ ನಿರೋಧಕ ಅಥವಾ ಆಟೋ ಇಮ್ಯುನ್ ಕಾಯಿಲೆ. ಈ ಕಾಯಿಲೆ ಬಂತೆಂದಾದರೆ ರೋಗ ನಿರೋಧಕ ವ್ಯವಸ್ಥೆಯು ಪ್ರಚೋದನೆಗೊಂಡು ದೇಹದ ನರಮಂಡಲದ ಮೇಲೆ ದಾಳಿ ಆರಂಭಿಸಿದ ಬಳಿಕ ಕೆಲವು ತಾಸುಗಳಿಂದ ತೊಡಗಿ ಕೆಲವು ದಿನಗಳ ಅವಧಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡು ಪರಿಸ್ಥಿತಿ ಉಲ್ಬಣಿಸಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾರಣದಿಂದ ಈ ಕಾಯಿಲೆ ಬಂದಾಗ ಜಾಗೃತೆ ಅತ್ಯಂತ ಅವಶ್ಯಕ.

ನಮ್ಮ ದೇಹದಲ್ಲಿ ನೈಸರ್ಗಿಕವಾದ ರೀತಿಯಲ್ಲಿ ಪ್ರತಿರೋಧಕ ಶಕ್ತಿ ಇರುತ್ತದೆ. ಇದು ಹೊರಗಿನಿಂದ ಬರುವ ರೋಗಾಣುಗಳ ವಿರುದ್ಧ ಹೋರಾಡುತ್ತದೆ.ಇದೊಂದು ಬಹಳ ಸಹಜವಾದ ಪ್ರಕ್ರಿಯೆ. ಅಂದರೆ ವೈರಾಣು, ಬ್ಯಾಕ್ಟೀರಿಯಾ, ಶಿಲೀಂದ್ರ ಇತ್ಯಾದಿಗಳು ನಮ್ಮ ದೇಹವನ್ನು ಪ್ರವೇಶಿಸಿದಾಗ ನಮ್ಮ ದೇಹದಲ್ಲಿರುವ ಪ್ರತಿರೋಧಕ ವ್ಯವಸ್ಥೆ ಅದನ್ನು ಹೊರಗಟ್ಟಲು ಪ್ರಯತ್ನ ಪಡುತ್ತದೆ. ಈ ಹೋರಾಟದ ಲಕ್ಷಣಗಳಾಗಿ, ಯಾವ ಸೋಂಕು ನಮಗೆ ತಗುಲಿದೆ ಎಂಬುದನ್ನು ಆಧರಿಸಿ ಶೀತ, ತಲೆನೋವು, ಜ್ವರ, ಕೆಮ್ಮು ಮೊದಲಾದ ವಿವಿಧ ರೋಗಗಳು ಉಂಟಾಗುತ್ತವೆ. ಹೀಗಾದಾಗ ನಾವು ಕೂಡಲೇ ವೈದ್ಯರ ಬಳಿಗೆ ಹೋಗುತ್ತೇವೆ. ಅವರು ನೀಡುವ ಮದ್ದಿನಿಂದ ನಾವು ಕೆಲವೇ ಕೆಲವು ದಿನಗಳಲ್ಲಿ ಗುಣಮುಖರಾಗುತ್ತೇವೆ. 

ಆದರೆ ಗುಯಿಲಿನ್ ಬಾರ್ ಸಿಂಡ್ರೋಮ್ ಸೇರಿದಂತೆ ಇದೇ ವಿಧದ ಆಟೋ ಇಮ್ಯೂನ್ ಕಾಯಿಲೆಗಳು ತಗುಲಿದ ಸಂದರ್ಭದಲ್ಲಿ ದೇಹದ ರೋಗ ನಿರೋಧಕ ವ್ಯವಸ್ಥೆ ತದ್ವಿರುದ್ಧವಾಗಿ ವರ್ತಿಸುತ್ತದೆ. ಅದು ಯಾವುದೋ ಒಂದು ಕಾರಣದಿಂದ ಪ್ರಚೋದನೆಗೊಂಡು ಸ್ವಂತ ಆರೋಗ್ಯವಂತ ಅಂಗಾಂಗ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಿಬಿಡುತ್ತದೆ. ಇಲ್ಲಿ ರೋಗ ನಿರೋಧಕ ಶಕ್ತಿ ಯಾವ ಅಂಗ ವ್ಯವಸ್ಥೆಯ ಮೇಲೆ ಆಕ್ರಮಣ ಮಾಡಿದೆ ಎಂಬುದನ್ನು ಆಧರಿಸಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಮಾತ್ರವಲ್ಲದೆ, ಇಂತಹ ಸ್ವಯಂ ನಿರೋಧಕ ಕಾಯಿಲೆಗಳು ವೇಗವಾಗಿ ವರ್ತಿಸುವುದರಿಂದ ಅದು ಆಕ್ರಮಿಸಿರುವ ಅಂಗವ್ಯವಸ್ಥೆ ಅಷ್ಟೇ ವೇಗವಾಗು ಹಾನಿಗೀಡಾಗುತ್ತದೆ. ಈ ಕಾರಣದಿಂದಲೇ ಈ ಕಾಯಿಲೆಯನ್ನು ಅಪಾಯಕಾರಿ ಎಂದು ಕರೆಯಲಾಗುತ್ತದೆ. ಈ ಕಾರಣದಿಂದ ಆ ಸಿಂಡ್ರೋಮ್ ಅನ್ನು ಆದಷ್ಟು ಬೇಗ ಗುರುತಿಸಿ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿದಾಗ ಮಾತ್ರ ರೋಗಿ ಬದುಕಿ ಉಳಿಯುತ್ತಾನೆ.

ಜಿಬಿಎಸ್ ಕಾಯಿಲೆಯ ಸಂದರ್ಭದಲ್ಲಿ ನಮ್ಮ ದೇಹದ ನರಮಂಡಲದ ವ್ಯವಸ್ಥೆಯ ಮೇಲೆ ರೋಗ ನಿರೋಧಕ ಶಕ್ತಿಯು ಆಕ್ರಮಣ ಮಾಡುತ್ತದೆ. ಇದರಿಂದಾಗಿ ನರ ಮಂಡಲವು ದುರ್ಬಲವಾಗುತ್ತದೆ. ಈ ಕಾರಣದಿಂದ ಜಿಬಿಎಸ್ ಬಾಧಿಸಿದ ರೋಗಿಯ ಕೈಕಾಲುಗಳು ನಡುಗುವುದು, ಜೋಮು ಹಿಡಿಯುವುದು, ಸಂವೇದನೆ ಕಳೆದುಕೊಳ್ಳುವುದು, ನರಗಳು ಎಳೆದಂತೆ ಆಗುವುದು, ಜುಮ್ಮೆನಿಸಿದಂತೆ ಆಗುವುದು. ಇದು ಕ್ರಮೇಣ ದೇಹದ ಇತರೆ ಭಾಗಗಳಿಗೆ ವಿಸ್ತರಣೆಯಾಗಿ ನರವ್ಯವಸ್ಥೆಯ ವೈಫಲ್ಯವು ಶ್ವಾಸಕೋಶದ ಹಂತವನ್ನು ದಾಟಿದರೆ ರೋಗಿಯ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು. ಈ ರೋಗ ಬಂದಿದೆ ಎಂದು ಗೊತ್ತಾದ ಕೂಡಲೇ (ಬಹಳಷ್ಟು ಬಾರಿ ಇಂತಹ ಲಕ್ಷಣಗಳು ಇದ್ದರೂ ಜಿಬಿಎಸ್ ಎಂದು ಗೊತ್ತಾಗುವುದೇ ಇಲ್ಲ) ನಿಖರವಾದ ವೈದ್ಯಕೀಯ ಚಿಕಿತ್ಸೆ ಒದಗಿಸಿದರೆ ಆ ರೋಗಿ ಬದುಕುಳಿಯಬಲ್ಲ. ರೋಗಿಯ ನಿರೋಧಕ ಶಕ್ತಿಯ ಪ್ರಮಾಣವನ್ನು ಗಮನಿಸಿ ಸಂಪೂರ್ಣ ಚೇತರಿಕೆ ಕಾಣಲು ಎಷ್ಟು ಕಾಲ ಹಿಡಿಯಬಹುದು ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಲಭ್ಯವಿರುವ ಚಿಕಿತ್ಸೆಯು ದುಬಾರಿಯಾಗಿದ್ದು, ಈ ಕಾಯಿಲೆ ಹೇಗೆ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಗಳಿಂದಾಗಿ ಈ ರೋಗದ ಬಗ್ಗೆ ಆರೋಗ್ಯ ಇಲಾಖೆ ಮತ್ತು ಸರಕಾರಗಳು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಚಿಕಿತ್ಸೆಯ ವೆಚ್ಚವನ್ನೂ ಕಡಿಮೆ ಮಾಡಬೇಕು. ಜನರು ಸಹ ಈ ರೀತಿಯಾದ ರೋಗದ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷ್ಯ ಮಾಡದೇ ತಜ್ಞ ವೈದ್ಯರನ್ನು ಭೇಟಿಯಾಗಿ ಪರೀಕ್ಸೆ ಮಾಡಿಸಿಕೊಕೊಳ್ಳಬೇಕು. ಸಾರ್ವಜನಿಕರು ಆದಷ್ಟೂ ಜಾಗರೂಕರಾಗಿರುವುದು ಉತ್ತಮ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ