ಜಿಲ್ಲೆಗಳಲ್ಲಿ ಸಚಿವ ಸಂಪುಟ ಸಭೆ ಹೆಚ್ಚು ಹೆಚ್ಚು ನಡೆಯಲಿ

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯನ್ನು ನಡೆಸಿ, ಆ ಜಿಲ್ಲೆಗೆ ಬಂಪರ್ ಕೊಡುಗೆಗಳನ್ನು ಪ್ರಕಟಿಸಿರುವುದು, ಒಟ್ಟಾರೆ ಮೈಸೂರು ವಿಭಾಗಕ್ಕೆ ೩೬೪೭ಕೋಟಿ ರೂ. ವೆಚ್ಚದ ೭೮ ಯೋಜನೆಗಳನ್ನು ಘೋಷಿಸಿರುವುದು ಉತ್ತಮವಾದ ಹೆಜ್ಜೆ. ರಾಜ್ಯದ ಉಳಿದೆಲ್ಲಾ ಭಾಗಗಳಿಗಿಂತ ಮೈಸೂರು ಪ್ರಾಂತ್ಯ ಅಭಿವೃದ್ಧಿಯಲ್ಲಿ ಮುಂದೆ ಇದೆ ಎಂಬ ವಾದ ಇದೆಯಾದರೂ, ಮೈಸೂರು ಪಕ್ಕದಲ್ಲೇ ಇರುವ ಚಾಮರಾಜನಗರ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಡಾ| ಡಿ.ಎಂ. ನಂಜುಂಡಪ್ಪ ವರದಿ ಕೂಡ ಈ ಜಿಲ್ಲೆಯ ಹಿಂದುಳಿದಿರುವಿಕೆಯನ್ನು ಎತ್ತಿ ತೋರಿಸಿದೆ. ಶ್ರೀಮಂತ ಪ್ರಾಕೃತಿಕ ಸಂಪತ್ತು, ರಾಜ್ಯದಲ್ಲೇ ಹೆಚ್ಚು ಅಭಯಾರಣ್ಯಗಳನ್ನು ಈ ಜಿಲ್ಲೆ ಹೊಂದಿದೆ. ಬುಡಕಟ್ಟು ಸಮುದಾಯದ ತೊಟ್ಟಿಲಿನಂತಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಉರುಳಿದರೂ, ಪ್ರತ್ಯೇಕ ಜಿಲ್ಲೆಯಾಗಿ ಮೂರು ದಶಕಗಳಾಗುತ್ತಾ ಬಂದಿದ್ದರೂ ಈ ಜಿಲ್ಲೆ ನಿರೀಕ್ಷಿತ ಪ್ರಗತಿಯನ್ನು ಕಂಡಿಲ್ಲ. ಇದೀಗ ರಾಜ್ಯ ಸರ್ಕಾರ ಆ ಜಿಲ್ಲೆಯಲ್ಲೇ ಸಚಿವ ಸಂಪುಟ ಸಭೆ ನಡೆಸಿ ಹತ್ತು ಹಲವು ಯೋಜನೆಗಳನ್ನು ಕೊಡುವ ಮೂಲಕ ಅಭಿವೃದ್ಧಿಯಲ್ಲಿ ಮೇಲೆತ್ತುವ ಪ್ರಯತ್ನವನ್ನು ಮಾಡಿದೆ.
೨೦೦೨ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಿದ್ದರು. ಅದಾದ ನಂತರ ೨ನೇ ಕ್ಯಾಬಿನೆಟ್ ಸಭೆ ಜಿಲ್ಲೆಯಲ್ಲಿ ನಡೆದಿದೆ. ಈ ಹಿಂದೆ ಕಲಬುರಗಿ, ಯಾದಗಿರಿ, ಹುಬ್ಬಳ್ಳಿಯಲ್ಲಿ ಸಚಿವ ಸಂಪುಟ ಸಭೆಗಳು ನಡೆದ ನಿದರ್ಶನಗಳು ಇವೆ. ರಾಜ್ಯದ ವಿವಿಧ ಭಾಗಗಳಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಆ ಪ್ರದೇಶಕ್ಕೆ ಸೀಮಿತವಾಗಿ ಯೋಜನೆಗಳನ್ನು ಪ್ರಕಟಿಸುವುದು ಉತ್ತಮ ಆಲೋಚನೆ. ಇದರಿಂದ ಸರ್ಕಾರ ತಮ್ಮ ಬಳಿಗೇ ಬಂದ ಭಾವ ಜನರಿಗೂ ಆಗುತ್ತದೆ. ಜತೆಗೆ ಆಯಾ ಭಾಗದ ದೀರ್ಘಕಾಲದ ಸಮಸ್ಯೆಗಳಿಗೆ ಉತ್ತರವೂ ಸಿಗುತ್ತದೆ. ಹೀಗಾಗಿ ಸರ್ಕಾರ ಈ ಸಂಪ್ರದಾಯವನ್ನು ಇಲ್ಲಿಗೇ ನಿಲ್ಲಿಸಬಾರದು. ಕಡೇ ಪಕ್ಷ ತಿಂಗಳಿಗೊಂದು ಸಂಪುಟ ಸಭೆಯನ್ನಾದರೂ ವಿವಿಧ ಜಿಲ್ಲೆ ಅಥವಾ ಪ್ರಾದೇಶಿಕ ಮಟ್ಟದಲ್ಲಿ ನಡೆಸಿ ಜನರ ಬಳಿಗೆ ಸರ್ಕಾರ ಒಯ್ಯಬೇಕು. ಆಯಾ ಭಾಗದ ಸಮಸ್ಯೆಯನ್ನು ಆಯಾ ಭಾಗಕ್ಕೇ ಹೋಗಿ ಬಗೆಹರಿಸಿದರೆ ಅಭಿವೃದ್ಧಿ ತಳಮಟ್ಟವನ್ನು ಮುಟ್ಟುವುದರಲ್ಲಿ ಎರಡನೇ ಮಾತೇ ಇರುವುದಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಸಂಪುಟ ಸಭೆ ನಡೆಸುವಷ್ಟು ಸ್ಥಳಾವಕಾಶವಂತೂ ಲಭ್ಯವಿದೆ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೬-೦೪-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ