ಜೀನ್ ಜೆನೆ

ಜೀನ್ ಜೆನೆ

ಬರಹ

ಪ್ರಜಾವಾಣಿಯ ಪ್ರತಿಭಾನುವಾರದ ವಿದ್ಯಮಾನ ಪುಟದಲ್ಲಿ ಲಿಂಗದೇವರು ಹಳೆಮನೆ ಅವರು ಸಾರಸ್ವತ ಎಂಬ ಅಂಕಣ ಬರೆಯುತ್ತಾರೆ. ಇಂದಿನ (೧೦/೦೫/೨೦೦೯) ಅಂಕಣದಲ್ಲಿ ಅವರು ಕೈದಿಗಳ ಸಾಹಿತ್ಯದ ಬಗ್ಗೆ ಬರೆಯುತ್ತಾ ಜೀನ್ ಜೆನೆ (೧೯೧೦-೧೯೮೬) ಯ ಬಗ್ಗೆ ಪ್ರಸ್ತಾಪಿಸುತ್ತಾರೆ.ಜೀನ್ ಒಬ್ಬ ಜಾರಪುತ್ರ. ತಾಯಿಗೆ ಬೇಡವಾದ, ತಂದೆ ಯಾರೆಂದು ತಿಳಿಯದ, ಅನ್ನವಿತ್ತು ವಿದ್ಯೆಯಿತ್ತು ಸಲಹಿದ ಆಶ್ರಯದಾತರಿಗೆ ದ್ರೋಹವೆಸಗಿ ಎಲ್ಲ ಭೂಗತ ಪಾತಕಗಳನ್ನು ಮೈಗೂಡಿಸಿಕೊಂಡ ಕ್ರಿಮಿನಲ್. ಬ್ಯಾಂಕ್ ದರೋಡೆಗಾಗಿ ಶಿಕ್ಷೆ ಅನುಭವಿಸುತ್ತಾ ಕಾರಾಗೃಹದಲ್ಲಿದ್ದಾಗ ಇವನಲ್ಲಿನ ಬರಹಗಾರ ಹೊರಹೊಮ್ಮುತ್ತಾನೆ.

ತೇಜಸ್ವಿ ಮತ್ತು ಪ್ರದೀಪ್ ಕೆಂಜಿಗೆಯವರು ಅನುವಾದಿಸಿರುವ ಹೆನ್ರಿ ಶರಿಯೆ ಅವರ ಪ್ಯಾಪಿಲಾನ್ ಕಾದಂಬರಿ ಗೊತ್ತೇ? ಕೈದಿಯೊಬ್ಬ ತನ್ನ ಪಲಾಯನ ಸಾಹಸಗಳನ್ನು ನಿರೂಪಕನ ಮುಂದೆ ತೆರೆದಿಡುತ್ತಾನೆ. ಇಲ್ಲಿ ಜೀನ್ ಜೆನೆ ಎಂಬ ಕೈದಿ ತಾನೇ ಸ್ವತಃ ಒಬ್ಬ ಬರಹಗಾರನಾಗಿ ತನ್ನ ಮನದ ತುಮುಲಗಳನ್ನು ಬರಹದ ರೂಪದಲ್ಲಿ ತೆರೆದಿಡುತ್ತಾನೆ.

ಜೀನ್ ಜೆನೆ ಜೈಲಿನಲ್ಲಿದ್ದುಕೊಂಡೇ ಬರೆದ ಮೊದಲ ಕಾದಂಬರಿ ’ನೋತ್ರ ದೇಮ್ ದೇ ಫ್ಲರ‍್’ (ನಮ್ಮವ್ವ ಹೂವಮ್ಮ). ಟಿಶ್ಯೂ ಪೇಪರ‍್ ಮೇಲೆ ಬರೆದ ಆ ಕಾದಂಬರಿಯ ಹಸ್ತಪ್ರತಿಯನ್ನು ನೋಡಿ ಖ್ಯಾತ ಲೇಖಕ ಜೀನ್ ಕೊಚೆಟೊ ದಂಗಾಗಿಬಿಟ್ಟ. ವಿಳಾಸ ನೋಡಿದರೆ ಸೆಂಟ್ರಲ್ ಜೈಲ್, ಪ್ಯಾರಿಸ್ ಎಂದು ಬರೆದಿತ್ತು. ಆತ ತನ್ನ ಗೆಳೆಯ ಮತ್ತೊಬ್ಬ ಖ್ಯಾತ ಲೇಖಕ ಜೀನ್ ಪಾಲ್ ಸಾರ್ತ್ರೆಗೆ ಅದನ್ನು ತೋರಿಸಿದ.ಅವನಂತೂ "ಫ್ರಾನ್ಸಿನ ಅಪ್ರತಿಮ ಪ್ರತಿಭೆಯೊಂದು ಜೈಲಿನಲ್ಲಿ ಕೊಳೆಯುತ್ತಿದೆ" ಎಂದು ಉದ್ಗರಿಸಿದ. ಅವರ ಪ್ರಯತ್ನದಿಂದ ಫ್ರಾನ್ಸಿನ ಹದಿನೆಂಟು ಮಂದಿ ಪ್ರಖ್ಯಾತ ಲೇಖಕರು ಜೀನ್ ಜೆನೆಗೆ ತಾವು ಜಾಮೀನು ನಿಲ್ಲುವುದಾಗಿಯೂ ಅವನನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆಯೂ ರಾಷ್ಟ್ರಾಧ್ಯಕ್ಷರಿಗೆ ಒಂದು ಮನವಿಪತ್ರ ಬರೆದರು.

ಬಿಡುಗಡೆಯ ನಂತರ ಜೀನ್ ಜೆನೆ ಕವಿಯಾಗಿ, ಕಾದಂಬರಿಕಾರನಾಗಿ,ನಾಟಕಕಾರನಾಗಿ ತನ್ನ ದಟ್ಟ ಅನುಭವಗಳನ್ನು ಬರೆದು ಪ್ರಸಿದ್ಧನಾಗುತ್ತಾನೆ. ಅಲ್ಲಿಂದ ಮುಂದೆ ಆತ ರಾಜಕೀಯ ವಿಶ್ಲೇಷಕನಾಗಿ, ಭಾಷಣಕಾರನಾಗಿ ಕೊನೆಗೆ ಅನುಪಮ ಮಾನವತಾವಾದಿಯಾಗಿ ವಿಕಾಸ ಹೊಂದುತ್ತಾನೆ. ಆಲ್ಜೀರಿಯಾ ಕ್ರಾಂತಿಯ ಬಗೆಗಿನ ಆತನ ಲೇಖನಗಳು ಪ್ರಸಿದ್ಧ ಎನ್ನುತ್ತಾರೆ.

ಅವನು ಸಾಯುವುದಕ್ಕೆ ಎರಡು ವರ್ಷದ ಹಿಂದೆ ನಡೆದ ಘಟನೆಯಿದು. ಆತ ದಿನಪತ್ರಿಕೆ ಓದುತ್ತಿರುವಾಗ ಆಗತಾನೇ ಹುಟ್ಟಿದ ಹೆಣ್ಣುಮಗುವನ್ನು ಯಾರೋ ಕಸದ ತೊಟ್ಟಿಯಲ್ಲಿ ಬಿಸಾಡಿ ಹೋಗಿದ್ದಾರೆ ಎಂಬ ಸುದ್ದಿ ಅವನ ಮನ ಕಲಕಿತು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಆ ಮಗುವನ್ನು ದತ್ತು ತೆಗೆದುಕೊಂಡು ತನ್ನ ಅಪಾರ ಆಸ್ತಿಯನ್ನು ಆ ಮಗುವಿನ ಹೆಸರಿಗೆ ಬರೆಯುತ್ತಾನೆ.

ಅನಾಥನೊಬ್ಬ ದೊಡ್ಡದಾಗಿ ಬದುಕಿ ಇನ್ನೊಂದುಅನಾಥ ಮಗುವಿಗೆ ಬೆಳಕಾಗುವ ಪ್ರಕ್ರಿಯೆ ಇದೆಯಲ್ಲ ಅದು ಅವರ್ಣನೀಯ.

ಹೆಚ್ಚಿನ ಓದಿಗೆ ಇಲ್ಲಿ ನೋಡಿ. http://www.kirjasto.sci.fi/jgenet.htm

 

ಪ್ರೀತಿಯಿಂದ

ಸಿ ಮರಿಜೋಸೆಫ್