ಜೀವಕೋಶಗಳ ಸಂಭ್ರಮಾಚರಣೆ
ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ಹೊರತಂದ ರೂಸಿ ಎಂ ಲಾಲಾ ಅವರ ಕೃತಿಯೇ ‘ಜೀವಕೋಶಗಳ ಸಂಭ್ರಮಾಚರಣೆ' ಈ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಪಿ.ಎಸ್.ಶಂಕರ್ ಇವರು. ಈ ಕೃತಿಯು ಕ್ಯಾನ್ಸರ್ ಮೇಲೆ ವಿಜಯ ಸಾಧಿಸಿದ ಲೇಖಕರ ಅನುಭವದ ಸಾರ. ಕೃತಿಕಾರ ರೂಸಿ ಎಮ್ ಲಾಲಾ ಅವರ ಬಗ್ಗೆ ಬರೆದು ಅವರ ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ ಟಾಟಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ಗಂತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಎಸ್ ಎಚ್ ಅದ್ವಾನಿಯವರು. ಅವರು ತಮ್ಮ ಶುಭಾಶಯದಲ್ಲಿ ವ್ಯಕ್ತಪಡಿಸಿದ ಭಾವ ಹೀಗಿದೆ-”’ಜೀವಕೋಶಗಳ ಸಂಭ್ರಮಾಚರಣೆ' ಕ್ಯಾನ್ಸರಿನ ಸ್ವರೂಪ, ಅದರ ಕಾರಣಗಳು, ಚಿಕಿತ್ಸೆ ಮತ್ತು ಪರಿಹಾರದ ವಿಸ್ತ್ರತ ವಿವರಣೆ. ಎಲ್ಲಕ್ಕಿಂತ ಮುಖ್ಯವಾಗಿ, ಪ್ರಾಯಶಃ ಅದು ಕ್ಯಾನ್ಸರ್ ರೋಗಿಗಳಿಗೆ ಕ್ಯಾನ್ಸರ್ ಮತ್ತು ಅದರ ಚಿಕಿತ್ಸೆಯಿಂದ ಉದ್ಭವಿಸುವ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಶ್ನೆಗಳನ್ನು ತಿಳಿದುಕೊಳ್ಳಲು, ಒಪ್ಪಿಕೊಳ್ಳಲು ಮತ್ತು ತಾಳಿಕೊಳ್ಳಲು ಸಹಾಯ ಮಾಡುತ್ತದೆ.ಶ್ರೀ ಲಾಲಾ (ಕೃತಿಯ ಲೇಖಕರು) ಅವರು ನಮ್ಮೆಲ್ಲರನ್ನು - ಆರೋಗ್ಯವಂತರು ಮತ್ತು ರೋಗಿಷ್ಟರನ್ನು -ಒಂದೇ ರೀತಿಯಾಗಿ ಉದ್ಡೇಶಿಸಿ ನಾವು ಭಯ ಮುಕ್ತರಾಗಿ ಜೀವನದ ಸಂಭ್ರಮಾಚರಣೆಯನ್ನು ಮಾಡಲು ಪ್ರೇರೇಪಿಸುತ್ತಾರೆ.”
ಕ್ಯಾನ್ಸರ್ ಪೀಡಿತರಾಗಿ ಗುಣಮುಖರಾದ ಲೇಖಕರ ಆರ್ ಎಮ್ ಲಾಲಾ ಅವರು ತಮ್ಮ ಮುನ್ನುಡಿ ಬರಹದಲ್ಲಿ “ಸುಮಾರು ಹತ್ತು ವರುಷಗಳ ಹಿಂದೆ, ೧೯೮೯ರಲ್ಲಿ ಲಿಫ್ಟಿನೊಳಗೆ ಕಾಲಿರಿಸಿದಾಗ ನಾನು ಸಧೃಢನಾಗಿರುವ ಅನುಭವ ಹೊಂದಿದ್ದೆ. ಆದರೂ ನನ್ನ ಕತ್ತಿನ ಒಂದು ಭಾಗ ಮತ್ತೊಂದಕ್ಕಿಂತ ಹೆಚ್ಚು ಉಬ್ಬಿದಂತೆ ನನಗೆ ಕಾಣಿಸಿತು. ಯಾವುದೋ ಅಪಾಯವನ್ನು ನಾನು ಸಂದೇಹಿಸಿದೆ. ಅದೇ ವಾರ ನಾನು ಬಯಾಪ್ಸಿ (ವೃಣದ ತುಣುಕನ್ನು ಕತ್ತರಿಸಿ ತೆಗೆದು ಗಾಜಿನ ಮೇಲೆ ಲೇಪಿಸಿ, ಬಣ್ಣ ಕೊಟ್ಟು ಸೂಕ್ಷ್ಮ ದರ್ಶಕದ ಮೂಲಕ ಮಾಡುವ ಪರೀಕ್ಷೆ) ಸಿಟಿ ಸ್ಕ್ಯಾನ್ (ಕಂಪ್ಯೂಟರ್ ನ ಪದರು ಚಿತ್ರಣ) ಮತ್ತು ನಂತರದ ವಾರ ಮೂಳೆ ತಿರುಳ ಪರೀಕ್ಷೆಗೊಳಪಡಲು ಸೂಚಿಸಲಾಯಿತು. ಅದರ ನಿರ್ಣಯ ಶಂಕಾಸ್ಪದವಿಲ್ಲದಂತೆ ಮಾರಕ ಲಿಂಫೊಮ (ಕ್ಯಾನ್ಸರ್).
ಹಾಲ್ರಸ ಗಂಟುಗಳು ಸೋಂಕಿನ ವಿರುದ್ಧ ನಿಸರ್ಗದ ರಕ್ಷಕನಿದ್ದಂತೆ. ಕತ್ತಿನ ಪ್ರದೇಶದಲ್ಲಿ ಈ ಗ್ರಂಥಿಗಳು ಮುನ್ನೂರು ಸಂಖ್ಯೆಯಲ್ಲಿದ್ದು ಮತ್ತೆ ಐದು ನೂರು ಕೆಳಗೆ ಪುಪ್ಪುಸ ದಾಟಿ, ಜಠರ ಪ್ರದೇಶದಲ್ಲಿ ವಜ್ರಾಕಾರ ರೂಪದಲ್ಲಿ ಹರಡಿದೆ. ಅವು ಗಂತಿ ರೂಪಧಾರಣ ಮಾಡಿದಾಗ ಅವುಗಳಲ್ಲಿ ಕೆಲವು ಇಲ್ಲವೆ ಹೆಚ್ಚಿನವು ದೊಡ್ಡದಾಗುತ್ತವೆ. ಅವು ಮೂತ್ರಪಿಂಡ ಇಲ್ಲವೆ ಅಂತಹ ಜೀವಾಳ ಅಂಗವನ್ನು ಒತ್ತಿದಾಗ ಉಂಟಾಗುವ ಫಲಶೃತಿ ತುಂಬಾ ಭಯಾನಕ. ಕಡಿಮೆ ತೀವ್ರತೆಯ ಲಿಂಫೋಮ, ನಿಧಾನವಾಗಿ ಬೆಳೆಯುತ್ತದಾದರೂ, ಅದು ತನ್ನ ತೀವ್ರತೆಯ ಸ್ವರೂಪವನ್ನು ಬದಲಾಯಿಸಬಹುದು. ಚಿಕಿತ್ಸೆಗೊಳಪಡದಿದ್ದರೆ ಮೇಲ್ಮಟ್ಟದ ನಮೂನೆ ಕೆಲವೇ ತಿಂಗಳಲ್ಲಿ ದೇಹಾದ್ಯಂತ ಪಸರಿಸಬಹುದು.
ನನ್ನ ಕಡೆಯಿಂದಲಾದರೋ, ನನ್ನ ರೋಗವನ್ನು ನೋಡಿಕೊಳ್ಳುತ್ತಿರುವ ವೈದ್ಯರ ಪ್ರಯತ್ನಗಳಿಗೆ ಸಾಧ್ಯವಾದಷ್ಟು ಸಹಕಾರವನ್ನು ನಾನು ನೀಡಿದ್ದು, ನನ್ನಷ್ಟಕ್ಕೇ ನಾನೇ ಎಂದೂ ಔಷಧಗಳ ಅನುಪಾನ ಮಾಡಿಕೊಂಡಿಲ್ಲ. ಆ ದಿಶೆಯಲ್ಲಿ ನಾನು ಸಾಹಸದ ಮಾರ್ಗಗಳನ್ನು ಕಂಡುಕೊಂಡಿದ್ದು ಅದೇ ನಾನು ಹೇಳಬೇಕಾದ ಕತೆ.” ಎಂದು ತಮ್ಮ ಕ್ಯಾನ್ಸರ್ ಕಾಯಿಲೆಯ ಪಯಣವನ್ನು ವಿವರಿಸಿದ್ದಾರೆ.
ಪರಿವಿಡಿಯಲ್ಲಿ ಅಧ್ಯಾಯಗಳಂತೆ ಈ ಕಥನವನ್ನು ವಿಂಗಡಿಸಿರುವುದರಿಂದ ಸರಾಗವಾಗಿ ಓದಲು ಸಹಕಾರಿ. ಆದರೂ ಅನುವಾದ ಸಾಹಿತ್ಯವಾದುದರಿಂದ ಮತ್ತು ವೈದ್ಯಕೀಯ ಸಂಬಂಧಿ ಬರಹವಾದುದರಿಂದ ಕೆಲವೆಡೆ ಕೆಲವೊಂದು ಪದಗಳಿಗೆ ಅರ್ಥ ಹುಡುಕಾಡುವುದರಲ್ಲಿ ನಾವು ಸೋತು ಬಿಡುತ್ತೇವೆ ಅನಿಸುತ್ತದೆ. ಆದರೂ ಕ್ಯಾನ್ಸರ್ ರೋಗಿಯೊಬ್ಬ ತನ್ನ ಆತ್ಮಸ್ಥೈರ್ಯ ಮತ್ತು ನೂತನ ವೈದ್ಯಕೀಯ ಸೌಲಭ್ಯಗಳನ್ನು ಬಳಸಿ ಗುಣಮುಖರಾದದ್ದು ಉಳಿದ ರೋಗಿಗಳಿಗೆ ಪ್ರೇರಣಾದಾಯಕವೇ ಸರಿ. ಈ ನಿಟ್ಟಿನಲ್ಲಿ ೧೫೦ ಪುಟಗಳ ಈ ಪುಸ್ತಕ ಬಹಳಷ್ಟು ಉಪಕಾರಿಯಾಗಿದೆ.