ಜೀವನಕ್ಕೊಂದು ಪಾಠ…

ಜೀವನಕ್ಕೊಂದು ಪಾಠ…

ನಾನು ಯಾವುದೋ ಕೆಲಸದ ನಿಮಿತ್ತ ವಿಮಾನದಲ್ಲಿ ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದೆ. ಈ ವಿಮಾನ ಇಕೊನೊಮಿ ಕ್ಲಾಸಿನದಾಗಿತ್ತು. ನಾನು ವಿಮಾನ ಹತ್ತಿದೆ, ನನ್ನ ಹ್ಯಾಂಡ್ ಬ್ಯಾಗ್ ಓವರ್ ಹೆಡ್ಡ್ ಕ್ಯಾಬಿನ್ ಒಳಗೆ ಇಟ್ಟು ನನ್ನ ಸೀಟಿನಲ್ಲಿ ಕುಳಿತುಕೊಂಡೆ. ನನ್ನ ಸೀಟ್ ಬೆಲ್ಟ್ ಧರಿಸುತ್ತಿರುವಾಗ ಓರ್ವ ಸಜ್ಜನರನ್ನು ನೋಡಿದೆ. ಅವರ ವಯಸ್ಸು ಸುಮಾರು 60-70 ಆಸುಪಾಸಿನಲ್ಲಿ ಇರಬಹುದು. ಅವರು ನನ್ನ ಪಕ್ಕದ ಕಿಟಕಿಯ ಸೀಟಿನಲ್ಲಿ ನನ್ನ ಪಕ್ಕದಲ್ಲೇ ಇದ್ದರು.

ಮಾರನೆಯ ದಿನ ಮುಂಬೈನಲ್ಲಿ ನನ್ನ ಪ್ರೆಜೆಂಟೇಷನ್ ಇತ್ತು. ಹೀಗಾಗಿ ನಾನು ಪೇಪರ್ ತೆಗೆದುಕೊಂಡು ಅಂತಿಮ ತಯಾರಿ ನಡೆಸಿದೆ. ಹೆಚ್ಚು ಕಡಿಮೆ 15-20 ನಿಮಿಷದ ನಂತರ ನನ್ನ ಕೆಲಸವನ್ನು ಮುಗಿಸಿ, ಆ ಪೇಪರ್ ಗಳನ್ನು ವಾಪಸ್ ನನ್ನ ಬ್ಯಾಗಿನಲ್ಲಿ ಸುರಕ್ಷಿತವಾಗಿ ಇಟ್ಟು ಕಿಟಕಿಯಿಂದ ಹೊರಗೆ ನೋಡತೊಡಗಿದೆ.

ನಂತರ ನನ್ನ ಗಮನ ಮತ್ತೆ ನನ್ನ ಪಕ್ಕದ ವ್ಯಕ್ತಿಯತ್ತ ಹೋಯಿತು. ಅನಿರೀಕ್ಷಿತವಾಗಿ ನನ್ನ ತಲೆಯಲ್ಲಿ ಈ ವ್ಯಕ್ತಿಯನ್ನು ಎಲ್ಲೋ ನೋಡಿರುವೆ ಎಂದು ಅನಿಸಿತು. ನೆನಪು ಮಾಡಿಕೊಳ್ಳಲು ಮೇಲಿಂದ ಮೇಲೆ ಅವರತ್ತ ನೋಡುತ್ತಿದ್ದೆ. ಅವರು ವೃದ್ಧರಾಗಿದ್ದರು. ಅವರ ಕಣ್ಣಿನ ಕೆಳಗೆ ಸುಕ್ಕುಗಳಿದ್ದವು. ಅವರ ಕನ್ನಡದ ಫ್ರೇಮ್ ಅಷ್ಟೊಂದು ದುಬಾರಿಯದ್ದಾಗಿರಲಿಲ್ಲ. ಅವರು ಸಾಧಾರಣ ದರ್ಜೆಯ ಗಾಢವಾದ ಕಂದು ಬಣ್ಣದ ಸೂಟ್ ಧರಿಸಿದ್ದರು. ಅವರಿಗೆ ಅದು ಅಷ್ಟೇನು ಒಗ್ಗುತ್ತಿರಲಿಲ್ಲ.

ನನ್ನ ಗಮನ ಅವರು ಧರಿಸಿದ ಬೂಟಿನ ಮೇಲೆ ಹೋಯಿತು. ಅವು ಸಾಧಾರಣವಾಗಿದ್ದ ಫಾರ್ಮಲ್ ಬೂಟ್ ಗಳಾಗಿದ್ದವು. ಅವರು ತಮ್ಮ ಈ-ಮೇಲ್ ಗಳಿಗೆ ಉತ್ತರಿಸುತ್ತಾ ನೀಡುತ್ತಾ, ಕೆಲವು ಕಾಗದ ಪತ್ರಗಳನ್ನು ನೋಡುವುದರಲ್ಲಿ ಮಗ್ನರಾಗಿದ್ದರು.

ನನಗೆ ತಕ್ಷಣ ಅವರ ಪರಿಚಯ ಸಿಕ್ಕಿತು. ನಾನವರನ್ನು ನಿಧಾನವಾಗಿ "ಸರ್, ತಾವು ನಾರಾಯಣ ಮೂರ್ತಿ ಅಲ್ಲವೇ?” ಎಂದು ಕರೆದು ಮಾತನಾಡಿಸಿದೆ. ಅವರು ನಿಧಾನವಾಗಿ ತಲೆಯಿತ್ತಿ ನನ್ನೆಡೆಗೆ ನೋಡಿ, ಮುಗುಳು ನಗುತ್ತಾ ಹೌದೆಂದರು. ನಾನು ಆಶ್ಚರ್ಯ ಚಕಿತನಾಗಿದ್ದೆ ಹಾಗೂ ಅವರೊಡನೆ ಹೇಗೆ ಮಾತು ಪ್ರಾರಂಭಿಸುವುದೆಂದು ತಿಳಿಯಲಾರದೆ ತೊಳಲಾಡುತ್ತಿದ್ದೆ.

ಮತ್ತೊಮ್ಮೆ ಧೈರ್ಯ ಮಾಡಿ ನಾನು ಅವರತ್ತ ನೋಡಿದೆ. ಆದರೆ ಈ ಬಾರಿ ನನ್ನ ಮನಸ್ಸಿನಲ್ಲಿ ನಾನು ಭಾರತದ ಓರ್ವ ಕೊಟ್ಯಾಧಿಪತಿಯಾದ ನಾರಾಯಣಮೂರ್ತಿಯವರ ಜೊತೆ ಪ್ರಯಾಣ ಮಾಡುತ್ತಿದ್ದೇನೆ ಎಂಬ ಅಮೋಘ ಕಲ್ಪನೆ ಮೂಡಿ ಬಂತು. ಆದರೆ ಅವರ ಬೂಟು, ಸೂಟು, ಟೈ, ಕನ್ನಡಕ ಎಲ್ಲವೂ ತೀರ ಸಾಧಾರಣವಾಗಿದ್ದವು ಇದು ನನಗೆ ಬಹಳ ಅಚ್ಚರಿ ಮೂಡಿಸಿತು. ಏಕೆಂದರೆ ಆ ವ್ಯಕ್ತಿಯ ಸಂಪತ್ತು,2.3 ಬಿಲಿಯನ್ ಡಾಲರ್ ಮತ್ತು ಅವರು ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು.

ನನಗೆ ಯಾವಾಗಲೂ ತುಂಬಾ ಶ್ರೀಮಂತನಾಗುವ ಇಚ್ಛೆ ಇತ್ತು. ಈ ಜಗತ್ತಿನ ಎಲ್ಲಾ ವಿಲಾಸೀ ಜೀವನವನ್ನು ಅನುಭವಿಸಬೇಕು ಮತ್ತು ಬಿಜಿನೆಸ್ ಕ್ಲಾಸ್ ನಲ್ಲಿ ಪ್ರವಾಸ ಮಾಡಬೇಕೆಂದು. ಆದರೆ ನನ್ನ ಹತ್ತಿರ ಕುಳಿತ ವ್ಯಕ್ತಿಗೆ ಇಡೀ ಒಂದು ವಿಮಾನವನ್ನೇ ಖರೀದಿ ಮಾಡುವ ಸಾಮರ್ಥ್ಯವಿದ್ದರೂ ಆತ ಸಾಮಾನ್ಯ ಮಧ್ಯಮ ವರ್ಗದ ಜನರ ಜೊತೆ ಇಕಾನಮಿ ಕ್ಲಾಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ನಾನು ತಡೆದುಕೊಳ್ಳಲಾರದೇ ತಾವು ಬಿಜಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸದೆ, ಇಕೊನೊಮಿ ಕ್ಲಾಸ್ ನಲ್ಲಿ ಏಕೆ ಪ್ರಯಾಣ ಮಾಡಿತ್ತಿರುವಿರಿ ಸರ್? ಎಂದು ಕೇಳಿದೆ.

‘ಬಿಜಿನೆಸ್ ಕ್ಲಾಸ್ ನಲ್ಲಿ ಜನ ಬೇಗ ತಲುಪುವರೇನು?’ ಎಂದು ನಗುತ್ತಾ ಕೇಳಿದರು. ಅವರದು ನೇರ ಆದರೆ ವಿಚಿತ್ರ ಪ್ರತಿಕ್ರಿಯೆ ಆಗಿತ್ತು. ನನಗೆ ಅದನ್ನು ಅರ್ಥೈಸಲು ಬಹಳ ಸಮಯ ತಗುಲಿತು. ನಾನು ನನ್ನ ಪರಿಚಯ ಮಾಡಿಕೊಂಡೆ, ನಮಸ್ಕಾರ ಸರ್, ನಾನೊಬ್ಬ ಕಾರ್ಪೋರೇಟ್ ಟ್ರೇನರ್ ಆಗಿರುವೆ. ಭಾರತದಲ್ಲಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಜೊತೆಗೆ ಕೆಲಸ ಮಾಡುತ್ತಿರುವೆ ಎಂದು ಹೇಳಿಕೊಂಡೆ.

ಅವರು ತಮ್ಮ ಫೋನ್ ಪಕ್ಕಕ್ಕಿಟ್ಟು ನನ್ನ ಮಾತನ್ನು ಗಮನವಿಟ್ಟು ಆಲಿಸತೊಡಗಿದರು. ಆ ಎರಡು ಘಂಟೆಯ ಪ್ರಯಾಣದಲ್ಲಿ ನಮ್ಮ ನಡುವೆ ಅನೇಕ ಮಾತುಕತೆ ನಡೆದವು. ನಮ್ಮ ಸಂಭಾಷಣೆಗಳು ವಿಷಯದ ತುಂಬಾ ಆಳದವರೆಗೆ ಸಾಗಿತ್ತು. ಆಗ ಅವರ ಒಂದು ಮಾತು ನಮ್ಮ ಪ್ರವಾಸದ ನೆನಪಿನಲ್ಲುಳಿಯುವಂತಹ ಮಹತ್ವದ ಕ್ಷಣವಾಗಿತ್ತು.

ನಾನು ಅವರನ್ನು ಕೇಳಿದೆ,"ತಾವು ಈ ಜೀವನದ ಅನೇಕರಿಗೆ ಆದರ್ಶವಾಗಿರುವಿರಿ. ನೀವು ನಿಮ್ಮ ಜೀವನದ ಮಹಾನ್ ನಿರ್ಣಯವನ್ನು ತೆಗೆದುಕೊಳ್ಳುವಲ್ಲಿ ಹೆಸರು ಮಾಡಿರುವಿರಿ, ಆದರೆ ಯಾವುದಾದರೂ ಘಟನೆಯಿಂದ ನಿಮಗೆ ಪಶ್ಚಾತ್ತಾಪ ಪಡುವಂತಾಗಿದೆಯೇ? ಅದನ್ನು ಕೇಳಿದ ಅವರ ಮುಖದಲ್ಲಿದ್ದ ಭಾವನೆ ಬದಲಾಯಿತು. ನನಗೆ ನಾನು ಈ ಪ್ರಶ್ನೆ ಕೇಳಿ ತಪ್ಪು ಮಾಡಿದೆನೋ ಎಂದು ಬೇಸರವಾಯಿತು. ಆದರೆ ಮೂರ್ತಿಯವರು ಸ್ವಲ್ಪ ಯೋಚಿಸಿ, ಉತ್ತರ ನೀಡಿದರು.

"ಒಮ್ಮೊಮ್ಮೆ ನನ್ನ ಮೊಣಕಾಲಿನಲ್ಲಿ ನೋವು ಉಂಟಾದಾಗ ಅನಿಸುತ್ತದೆ, ನನಗೆ ನನ್ನ ಶರೀರದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿತ್ತು. ನಾನು ಯುವಕನಾಗಿದ್ದ ಸಮಯದಲ್ಲಿ ಕೆಲಸದಲ್ಲಿ ಎಷ್ಟೊಂದು ವ್ಯಸ್ತನಾಗಿರುತ್ತಿದ್ದೆ ಎಂದರೆ ನನಗೆ ನನ್ನ ಆರೋಗ್ಯ, ಶರೀರದ ಬಗ್ಗೆ ಗಮನ ಹರಿಸಲು ಸಮಯವೇ ದೊರೆಯಲಿಲ್ಲ. ಆದರೆ ಈ ಕೆಲಸ ಮಾಡಬೇಕೆಂದರೆ ಶರೀರ ಅನುಮತಿ ನೀಡುತ್ತಿಲ್ಲ.

ಒಂದು ನಿಮಿಷ ಮಾತನ್ನು ನಿಲ್ಲಿಸಿ ನನ್ನತ್ತ ನೋಡಿ “ನೀವು ಇನ್ನೂ ಯುವಕರಾಗಿದ್ದೀರಿ, ಸ್ಮಾರ್ಟ ಮತ್ತು ಮಹತ್ವಾಕಾಂಕ್ಷಿ ಆಗಿದ್ದಿರಿ. ನಾನು ಮಾಡಿದ ತಪ್ಪನ್ನು ಮಾಡಬೇಡಿ. ನಿಮ್ಮ ಶರೀರದ ಯೋಗಕ್ಷೇಮ ಮಾಡಿ ಮತ್ತು ಆರಾಮದಿಂದ ಇರಿ. ಇದು ಭಗವಂತನ ಕೃಪೆಯಿಂದ ನಮಗೆ ಕರುಣಿಸಿದ ಶರೀರವಿದಾಗಿದೆ. 

ಆ ದಿನ ನಾನು ಎರಡು ಸಂಗತಿಯನ್ನು ಅರಿತೆನು. ಒಂದು ಅವರು ಹೇಳಿದ್ದು, ಮತ್ತೊಂದು ಅವರು ನನಗೆ ತೋರಿಸಿದ್ದು. ನಮ್ಮ ಶರೀರದ ಉಪೇಕ್ಷೆ ಮಾಡುವುದೆಂದರೆ, ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಹಾನಿಯಾಗುತ್ತದೆ. ಯಾವಾಗ ನಮ್ಮ ಶರೀರ ಪೀಡಿತವಾದಾಗ, ಜೀವನದಲ್ಲಿ ಈ ಆಧುನಿಕ ವಸ್ತುಗಳು ನಮಗೆ ಸಹಾಯ ಮಾಡಲಾರದು. ವಾಸ್ತವದಲ್ಲಿ ಶರೀರ ನಿಮಗೆ ಸಹಯೋಗ ನೀಡುವುದನ್ನು ನಿಲ್ಲಿಸುತ್ತದೆ, ಆಗ ಎಲ್ಲವೂ ತನ್ನಿಂತಾನೇ ಸ್ಥಗಿತ ವಾಗುತ್ತದೆ.

ಇದೊಂದೇ ಶರೀರ ನಮ್ಮ ಜೀವನದ ಯಾತ್ರೆಯಲ್ಲಿ ವಾಹನದ ರೂಪದಲ್ಲಿ ದೊರಕಿದೆ. ಅದನ್ನು ಅಲಕ್ಷಿಸಬಾರದು. "ನಮ್ಮ ಶರೀರ ಬೆಲೆಬಾಳುವುದು." ಎಂದು ಭಗವಾನ್ ಬುದ್ಧ ಹೇಳಿದ್ದನು. ಈ ಸಂಗತಿ ನನಗೆ ಈ ಪ್ರಯಾಣದಲ್ಲಿ ಸಿಕ್ಕ ಅತ್ಯಂತ ದೊಡ್ಡ ಪಾಠ ಹಾಗೂ ಉಡುಗೊರೆ ಎಂದುಕೊಂಡಿರುವೆ. 

ಮೂಲ: ಅಲೋಕ್ ಕೇಜ್ರೀವಾಲ್, ಕನ್ನಡ ಅನುವಾದ: ಚಿದಂಬರ ಸವಾಯಿ.

ಚಿತ್ರ ಕೃಪೆ: ಇಂಟರ್ನೆಟ್ ತಾಣ