ಜೀವನದಲ್ಲಿ ಉಚ್ಚಾಟನೆಯ ನಾಲ್ಕು ಹಂತಗಳು
ನಿಮ್ಮ ವೃತ್ತಿ ಜೀವನದಲ್ಲಿ ನೀವು ಅದೆಷ್ಟೇ ಯಶಸ್ವೀ ವ್ಯಕ್ತಿಯಾಗಿದ್ದಿರಬಹುದು ಇಲ್ಲವೇ ಉನ್ನತ ಅಧಿಕಾರಿಯಾಗಿದ್ದಿರಬಹುದು, ಆದರೆ ನಿಮಗೆ ವಯಸ್ಸು ಅರವತ್ತು ಆದಾಗ, ನಿಮ್ಮ ಕಾರ್ಯಕ್ಷೇತ್ರವು ನಿಮ್ಮನ್ನು ಹೊರಹಾಕುತ್ತದೆ. ಹಾಗೂ ನೀವೋರ್ವ ಸಾಧಾರಣ ವ್ಯಕ್ತಿಯಾಗಿಯೇ ಈ ಸಮಾಜಕ್ಕೆ ಹಿಂತಿರುಗುವಿರಿ. ಹಾಗಾಗಿ ನಿಮ್ಮ ಹಿಂದಿನ ಉದ್ಯೋಗದ ಕಾರಣದಿಂದಾಗಿನ ಜ್ಯೇಷ್ಠತೆಯ, ಶ್ರೇಷ್ಠತೆಯ ಗುಂಗಿನಿಂದ ಹೊರಬನ್ನಿ. ಇಲ್ಲವಾದಲ್ಲಿ ಅದು ನಿಮ್ಮ ನೆಮ್ಮದಿಯ ನಾಶಕ್ಕೆ ಕಾರಣವಾಗಬಲ್ಲದು!
ವಯಸ್ಸು ಎಪ್ಪತ್ತು ಆದಾಗ ಕ್ರಮೇಣವಾಗಿ ಸಮಾಜವು ನಿಮ್ಮನ್ನು ಹೊರಹಾಕಲಾರಂಭಿಸುತ್ತದೆ. ಈ ಹಿಂದೆ ನೀವು ಬೆರೆಯುತ್ತಿದ್ದ ಗೆಳೆಯರ ಮತ್ತು ಸಹೋದ್ಯೋಗಿಗಳ ಸಂಖ್ಯೆಯು ಕ್ರಮೇಣ ಕಡಿಮೆಯಾಗಲಾರಂಭಿಸುತ್ತದೆ. ಹಾಗೂ ನಿಮ್ಮ ಹಿಂದಿನ ಕಾರ್ಯಕ್ಷೇತ್ರದಲ್ಲಿ ಈಗ ಪ್ರಾಯಶ: ನಿಮ್ಮನ್ನು ಗುರುತಿಸುವವರೂ ಕೂಡ ಇಲ್ಲದಿರಬಹುದು. ಹಾಗಾಗಿ ನಿಮ್ಮ ಕಾರ್ಯಕ್ಷೇತ್ರದ ಈಗಿನ ಸಿಬ್ಬಂದಿಯ ಬಳಿ "ನಾನು ಇಲ್ಲಿ ಹೀಗಿದ್ದೆ ಅಥವಾ "ಒಂದು ಕಾಲದಲ್ಲಿ ನಾನು ಇಲ್ಲಿ ಇಂತಹವನಾಗಿದ್ದೆ" ಎಂದೆಲ್ಲ ಹೇಳಿಕೊಳ್ಳಲು ಹೋಗಬೇಡಿ. ಏಕೆಂದರೆ ಯುವ ಪೀಳಿಗೆಗೆ ನಿಮ್ಮ ಬಗ್ಗೆ ತಿಳಿದಿರುವುದಿಲ್ಲ. ಮತ್ತು ಈ ಕುರಿತಂತೆ ನಿಮಗೆ ಕಿರಿಕಿರಿಯಾಗಲೂ ಕೂಡದು!
ವಯಸ್ಸು ಎಂಬತ್ತು ಆದಾಗ ನಿಧಾನವಾಗಿ ಕುಟುಂಬವು ನಿಮ್ಮನ್ನು ಹೊರಹಾಕಲಾರಂಭಿಸುತ್ತದೆ. ನಿಮಗೆ ಅನೇಕ ಮಕ್ಕಳು ಹಾಗೂ ಮೊಮ್ಮಕ್ಕಳು ಇರಬಹುದು. ಆದರೆ ದಿನದ ಬಹುತೇಕ ಸಮಯವನ್ನು ನೀವು ಒಬ್ಬಂಟಿಯಾಗಿ ಇಲ್ಲವೇ ನಿಮ್ಮ ಬಾಳಸಂಗಾತಿಯೊಂದಿಗೆ ಕಳೆಯುತ್ತಿರುತ್ತೀರಿ. ನಿಮ್ಮ ಮಕ್ಕಳು ನಿಮ್ಮನ್ನು ಸಾಂದರ್ಭಿಕವಾಗಿ ಭೇಟಿಯಾಗುತ್ತಿದ್ದಲ್ಲಿ ಅದು ಅವರ ಪ್ರೀತಿಯ ಕಾಳಜಿಯ ಒಂದು ಅಭಿವ್ಯಕ್ತಿಯಾಗಿರುತ್ತದೆ. ಹಾಗಾಗಿ ಅವರು ನಿಮ್ಮನ್ನು ಆಗೊಮ್ಮೆ ಈಗೊಮ್ಮೆ ಎಂಬಂತೆ ಭೇಟಿ ಮಾಡುತ್ತಿರುವುದಕ್ಕಾಗಿ ಅವರನ್ನು ದೂಷಿಸಬೇಡಿರಿ. ಏಕೆಂದರೆ ಅವರಿಗೆ ಅವರದ್ದೇ ಆದ ಜೀವನ, ಹೊಣೆಗಾರಿಕೆ ಇರುತ್ತದೆ!
ವಯಸ್ಸು ತೊಂಬತ್ತು ಆದಾಗ ಈ ಭೂಮಿಯೇ ನಿಮ್ಮನ್ನು ಹೊರಹಾಕಬಯಸುತ್ತದೆ. ನಿಮಗೆ ಪರಿಚಯವಿದ್ದ ವ್ಯಕ್ತಿಗಳ ಪೈಕಿ ಕೆಲವರು ಅದಾಗಲೇ ಶಾಶ್ವತವಾಗಿ ನಿಮ್ಮನ್ನು ಅಗಲಿರುತ್ತಾರೆ. ಈ ಹಂತದಲ್ಲಿ ಬೇಸರಗೊಳ್ಳಬೇಡಿ ಅಥವಾ ದು:ಖಿತರಾಗಬೇಡಿ. ಏಕೆಂದರೆ ಜೀವನವಿರುವುದೇ ಹಾಗೆ. ಅಂತಿಮವಾಗಿ ಪ್ರತಿಯೊಬ್ಬರೂ ಈ ಹಾದಿಯನ್ನೇ ಅನುಸರಿಸುತ್ತಾರೆ!
ಆದ್ದರಿಂದ ನಿಮ್ಮ ಆರೋಗ್ಯವು ಇನ್ನೂ ಚೆನ್ನಾಗಿರುವಾಗಲೇಜೀವನವನ್ನು ಸಂಪೂರ್ಣವಾಗಿ ಗರಿಷ್ಠಮಟ್ಟದಲ್ಲಿ ಉತ್ಕೃಷ್ಟವಾಗಿ ಬಾಳಿರಿ! ನೀವು ಬಯಸಿದ್ದನ್ನು ತಿನ್ನಿರಿ.ನೀವು ಬಯಸಿದ್ದನ್ನು ಕುಡಿಯಿರಿ. ಬಯಸಿದ ಕ್ರೀಡೆಯನ್ನು ಆಡಿರಿ ಮತ್ತು ನೀವು ಪ್ರೀತಿಸುವ ಎಲ್ಲವನ್ನೂ ಮಾಡಿರಿ. ಚೆನ್ನಾಗಿ ಬಾಳಿರಿ. ಯಾವುದಕ್ಕೂ ವಿಷಾದಿಸದಿರಿ.
(ಫೇಸ್ ಬುಕ್ ಕೃಪೆ - ಮೂಲ ಅನಾಮಿಕ ಲೇಖಕರಿಗೆ ಕೃತಜ್ಞತೆ ಸಲ್ಲಿಸುತ್ತಾ... )
-ಹಾ ಮ ಸತೀಶ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ