ಜೀವನದಲ್ಲಿ ಏಕಾಗ್ರತೆಯ ಮಹತ್ವ

ಜೀವನದಲ್ಲಿ ಏಕಾಗ್ರತೆಯ ಮಹತ್ವ

ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಬಂದಳು. ‘ದರ್ಶನ ಚೆನ್ನಾಗಿ ಆಯಿತಾ ಮಗಳೇ’ ಎಂದು ತಂದೆ ಪ್ರಶ್ನಿಸಿದರು.

ಮಗಳು- ‘ಇನ್ನು ಮುಂದೆ ನನ್ನನ್ನು ದೇವಸ್ಥಾನಕ್ಕೆ ಹೋಗು ಎಂದು ಹೇಳಬೇಡಿ’ ಕೋಪದಿಂದ ನುಡಿದಳು.

ತಂದೆ- ಏನು ನಡೆಯಿತು ಮಗಳೇ..?

ಮಗಳು- ‘ದೇವಸ್ಥಾನದಲ್ಲಿ ಒಬ್ಬರಿಗೂ ಭಕ್ತಿ ಇಲ್ಲ, ದೇವರ ಮೇಲೆ ಧ್ಯಾನ ಇಲ್ಲ. ಎಲ್ಲರೂ ಅವರ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುವುದು, ಫೋಟೋಗಳನ್ನು ತೆಗೆಯುವುದು, ಭಕ್ತಿಗೆ ಸಂಬಂಧಿಸಿದ್ದು ಅಲ್ಲದೇ ಬೇರೆ ಸಂಗತಿಗಳನ್ನು ಚರ್ಚಿಸುವುದನ್ನು ಮಾಡುತ್ತಿದ್ದಾರೆ. ಕನಿಷ್ಠ ಭಜನೆ ನಡೆಯುವ ವೇಳೆಯಲ್ಲೂ ಸಹ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಯಾರಲ್ಲೂ ನನಗೆ ಭಕ್ತಿ ಕಾಣಿಸಲಿಲ್ಲ.’

ತಂದೆ- (ಸ್ವಲ್ಪ ಹೊತ್ತು ಮೌನವಾಗಿದ್ದು) ‘ಸರಿ.. ನೀನು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ನನ್ನದೊಂದು ಸಣ್ಣ ಕೋರಿಕೆ… ನೆರವೇರಿಸುತ್ತೀಯಾ..?’

ಮಗಳು- ‘ಖಂಡಿತಾ ಅಪ್ಪಾ… ನಿಮ್ಮ ಮಾತನ್ನು ನಾನು ಯಾವಾಗಲೂ ಇಲ್ಲ ಎಂದಿಲ್ಲ. ಹೇಳಿ ಏನು ಮಾಡಬೇಕು…?’

ತಂದೆ- ‘ಒಂದು ಗಾಜಿನ ಗ್ಲಾಸಿನ ತುಂಬ ನೀರು ತೆಗೆದುಕೊಂಡು ಹೋಗು ದೇವಸ್ಥಾನಕ್ಕೆ.. ಮೂರೇ ಮೂರು ಪ್ರದಕ್ಷಿಣೆ ಮಾಡಿ ಬರಬೇಕು.. ಆದರೆ ಒಂದು  ಸೂಚನೆ…ನಿನ್ನ ಲೋಟನಿಂದ ಒಂದೇ ಒಂದು ಹನಿ ನೀರು ಚೆಲ್ಲಬಾರದು. ಈ ಕೆಲಸ ಮಾಡುತ್ತೀಯಾ?’

ಮಗಳು- ‘ಹಾಗೆಯೇ ಆಗಲಿ. ಖಂಡಿತಾ ತರುತ್ತೇನೆ ನಿಮಗಾಗಿ ಎಂದು..’ ಒಂದು ಲೋಟ  ತುಂಬಾ ನೀರು ತೆಗೆದುಕೊಂಡು ಹೊರಟಳು.. ಮೂರು ಗಂಟೆಗಳ ಬಳಿಕ ಮನೆಗೆ ನೀರು ತುಂಬಿದ ಲೋಟದೊಂದಿಗೆ  ಹಿಂತಿರುಗಿದಳು..

ಮಗಳು- ‘ತಗೋ ಅಪ್ಪಾ…ನಾನು ದೇವಸ್ಥಾನಕ್ಕೆ ಹೋಗಿ ನೀವು ಹೇಳಿದ ರೀತಿ ಮೂರು ಪ್ರದಕ್ಷಿಣೆ ಪೂರ್ಣಗೊಳಿಸಿ ಬಂದೆ. ಒಂದೇ ಒಂದು ಹನಿ ನೀರು ಸಹ ಚೆಲ್ಲಲಿಲ್ಲ…’

ತಂದೆ ಮೂರು ಪ್ರಶ್ನೆಗಳನ್ನು ಕೇಳಿದರು.

‘1. ನೀನು ಪ್ರದಕ್ಷಿಣೆ ಮಾಡುತ್ತಿದ್ದಾಗ ಎಷ್ಟು ಮಂದಿ ತಮ್ಮ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು.?

2. ಎಷ್ಟು ಮಂದಿ ಅನಗತ್ಯ ವಿಚಾರಗಳನ್ನು ದೇವಸ್ಥಾನದಲ್ಲಿ ಚರ್ಚಿಸುತ್ತಿದ್ದರು?

3. ಎಷ್ಟು ಮಂದಿ ಸ್ವಲ್ಪವೂ ಭಕ್ತಿ ಇಲ್ಲದೆ ನಡೆದುಕೊಂಡರು?’

ಮಗಳು- ‘ನಾನು ಹೇಗೆ  ಹೇಳಲು ಸಾಧ್ಯ ಅಪ್ಪಾ.. ನನ್ನ ದೃಷ್ಟಿಯೆಲ್ಲಾ ಲೋಟದ ಕಡೆಗಿತ್ತು ಒಂದೇ ಒಂದು ಹನಿ ನೀರು ಚೆಲ್ಲದಂತೆ ಎಚ್ಚರ ವಹಿಸಿದ್ದೆ, ನನ್ನ ಗಮನ ಅದರ ಮೇಲೇ ಇತ್ತು…’

ತಂದೆ- ‘ಇದೇನಮ್ಮಾ ನಾನು ಹೇಳಬೇಕೆಂದುಕೊಂಡಿದ್ದು. ನೀನು ದೇವಸ್ಥಾನಕ್ಕೆ ಹೋದಾಗ ನಿನ್ನ ದೃಷ್ಟಿ ಭಗವಂತನ  ಮೇಲೆ, ನಿನ್ನ ಧ್ಯಾನ ಅವನ ಗುಣಗಳ ಚಿಂತನೆಯ ಮೇಲೆ ಇರಬೇಕು. ಆಗ ನೀನು ಅಂತರ್ಮುಖಿಯಾಗಿ ಭಗವಂತನನ್ನು ಹಾಗೂ ಅವನ ಪೂರ್ಣಾನುಗ್ರಹವನ್ನು ಪಡೆಯಬಲ್ಲೆ.. ಜೀವನ ವೃದ್ಧಿಗೊಳ್ಳಲು ಈ ವಿಧವಾದ ಏಕಾಗ್ರತೆ ಸಾಧಿಸಬೇಕು. ನಮ್ಮ ಗಮನ ಯಾವಾಗಲೂ ನಾವು ಮಾಡಬೇಕಾದ ಕೆಲಸದ ಮೇಲೆ ಕೇಂದ್ರೀಕೃತವಾಗಿರಬೇಕೇ ಹೊರತು ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಅಲ್ಲ’.

ಮಗಳು- ‘ತುಂಬಾ ಧನ್ಯವಾದ ಅಪ್ಪ. ತುಂಬಾ ಅರ್ಥಗರ್ಭಿತವಾದ ವಿಚಾರಗಳನ್ನು ತಿಳಿಸಿದಿರಿ.

(ಆಧಾರ)

ಚಿತ್ರ ಕೃಪೆ:  ಅಂತರ್ಜಾಲ ತಾಣ