ಜೀವನದ ಮರ್ಮ
ಬರಹ
ಅಲ್ಪ ಎನಗೆ ಮುಂದಿನ ದಾರಿ ಕಾಣದಾಗಿದೆ
ಯಾವ ಹಾದಿಯಲಿ ಹೋಪುದೋ ತಿಳಿಯದಾಗಿದೆ
ಸಮಾಜದಿ ನನ್ನ ಮೇಲಿಹ ಮಹಲಿನವನ ಹಾದಿಯೋ
ಕೆಳಗಿಹ ರಸ್ತೆ ಬದಿಯವನ ಹಾದಿಯೋ
ಮೇಲಿನವನಿಗಿಹುದು ಸಕಲ ಸಂಪತ್ತು
ಕೆಳಗಿನವನ ಹೊಟ್ಟೆಗೆ ದಿನವೂ ಒಪ್ಪತ್ತು
ಹೊಟ್ಟೆ ತುಂಬಿದವ ಕಷ್ಟ ಕಾರ್ಪಣ್ಯವನರಿಯ
ಹಸಿದವ ತಿಳಿಯ ಸುಖದ ಲೋಲುಪತೆಯ
ಅವನ ಹಾದಿ ತುಳಿಯಲು ದೊರಕುವುದು
ದಿನವೂ ಪಂಚ ಭಕ್ಷ್ಯ ಪರಮಾನ್ನ
ಜೊತೆಗೆ ಅಂಟುವುದು ರೋಗಗಳ ಗಂಟು
ಇವನ ಹಾದಿಯಲಿ ದಿನವೂ ಕಡಲೇಪುರಿಯ ನಂಟು
ಮೆತ್ತನೆಯ ಹಾಸುಗೆಯಲಿ ಬಾರದು ಸುಖದ ನಿದ್ರೆ
ಕಲ್ಲಿನ ಮೇಲೆ ಗೋಣಿ ತಾಟಿನಲಿ ಕಾಣುವೆ ನಿಶ್ಚಿಂತೆ
ಮೇಲಿನವ ಹಾತೊರೆಯುವ, ಬೇಕಿಹುದು ನಿಶ್ಚಿಂತೆ
ಕೆಳಗಿನವಗೆ ಬೇಕಿಹುದು, ಅರಿಯದಾ ಚಿಂತೆ
ಮೇಲಿನವನ ನೋಡಿ ಕರುಬುವುದು ತರವಲ್ಲ
ಕೆಳಗಿನವನ ಕಂಡರೆ ತೃಪ್ತಿ ಸಿಗುವುದಲ್ಲ
ಮೇಲಿನವ ಕೆಳಗಿನವಗಿಂತ ಎಂತು ಉತ್ತಮ
ಕೆಳಗಿನವ ತೋರಿಸುತಿಹ ಜೀವನದ ಮರ್ಮ