ಜೀವನವನ್ನು ರಸಮಯಗೊಳಿಸುವುದು !

ಜೀವನವನ್ನು ರಸಮಯಗೊಳಿಸುವುದು !

ನಾವು ಈ ದಿನ ಹೇಗೆ ಬದುಕಿದರೆ ಜೀವನ ರಸಮಯವಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಇದರ ಬಗ್ಗೆ ಸುಂದರವಾಗಿ ಹೇಳಿದ್ದಾನೆ. ಯೋಗದ ಅಷ್ಟಾಂಗಗಳಲ್ಲಿ ಎರಡು ಅಂಗಗಳನ್ನು ನೋಡಿದ್ದೇವೆ. ಅವು ಯಮ ಮತ್ತು ನಿಯಮ. ಇವೆರಡೂ ಬಹಳ ಮಹತ್ವದ ಅಂಗಗಳು. ಇವೆರಡನ್ನು ಅನುಸರಿಸಿದರೆ, ಈ ವಿಶಾಲ ಜಗತ್ತಿನಲ್ಲಿ ಕಷ್ಟ ನಷ್ಟಗಳು ಇದ್ದರೂ ಕೂಡ ಸಮಾಧಾನದಿಂದ ಬದುಕಬಲ್ಲೆವು. ಯಮದಲ್ಲಿ ಹೊರಗಿನ ಸ್ವಚ್ಚಮಾಡಿಕೊಂಡರೆ, ನಿಯಮದಲ್ಲಿ ವೈಯಕ್ತಿಕ ಸ್ವಚ್ಚತೆಯನ್ನು ಮಾಡಿಕೊಳ್ಳುತ್ತೇವೆ. ಜ್ಞಾನವನ್ನು ಇದ್ದಕ್ಕಿದ್ದ ಹಾಗೆ ಯಥಾವತ್ತಾಗಿ ತಿಳಿದುಕೊಳ್ಳುತ್ತೇವೆ. ಅದು ಮಹತ್ವದ್ದು. ನಮ್ಮ ಬದುಕಿನ ಕ್ಷಣಗಳು ಸವಿ ಇರುವುದಿಲ್ಲ. ನಾವು ಅದನ್ನು ಸವಿ ಮಾಡಬೇಕಾಗುತ್ತದೆ. ಆ ಕ್ಷಣವನ್ನು ಕೆಲವರು ಸವಿ ಮಾಡುತ್ತಾರೆ. ಕೆಲವರು ಕಹಿ ಮಾಡುತ್ತಾರೆ. ಆ ಕ್ಷಣ ಸವಿ ಮಾಡೋದಕ್ಕೆ ಬಂದರೆ, ಬದುಕು ಸವಿಯಾಗುತ್ತದೆ. ಇಲ್ಲ ಅಂದ್ರೆ ಕಹಿಯಾಗುತ್ತದೆ. 

ಕ್ಷಣಗಳು ತಪ್ಪಲ್ಲ. ನಮ್ಮ ಸಾಧನೆ ಬಹಳ ಮಹತ್ವದ್ದು. ಒಂದು ಗಿಡ ಚಂದವು ಅಲ್ಲ, ಕುರೂಪವು ಅಲ್ಲ. ಅದು ಸುಖದ ಸಾಧನವು ಅಲ್ಲ. ನಾವು ನೋಡುವ ಕ್ಷಣದಲ್ಲಿ ಸುಖ ದುಃಖ ಮಾಡಿಕೊಳ್ಳಬಲ್ಲೆವು. ಅದು ನಮ್ಮ ಕೈಯೊಳಗಿರುವ ಸ್ವಾತಂತ್ರ್ಯ. ನಾವು ಪ್ರಾಣಿಗಳಂತೆ ಆಸ್ವಾತಂತ್ರ್ಯರಲ್ಲ. ಪ್ರಾಣಿಗಳ ವಿಚಾರದಲ್ಲಿ ನಿಸರ್ಗ ಎಲ್ಲವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ. ನಮಗಿರುವ ಈ ಸ್ವಾತಂತ್ರ್ಯವನ್ನು ಹೇಗೆ ಬಳಸಬೇಕೆಂದರೆ, ನಮಗೆ ಸಿಗುವ ಕ್ಷಣಗಳು ಮಧುರ ಮಧುರ ಆಗುವಂತೆ ಬಳಸಬೇಕು. ಅಂದರೆ ಜಗತ್ತಿನಲ್ಲಿ ಕಷ್ಟ ಸುಖ ಇಲ್ಲ ಅಂತಲ್ಲ. ಜಗತ್ತಿನಲ್ಲಿ ಸಾಕಷ್ಟು ಕಷ್ಟ ಸುಖ, ಸಿಹಿ ಕಹಿ ಇದೆ. ಜಗತ್ತಿನಲ್ಲಿ ನಮಗೆ ಹಿಡಿಸಲಾರದು ಬಹಳಷ್ಟು ಇದೆ. ನಮ್ಮ ದೇಹದಲ್ಲಿ ಹಿಡಿಸಲಾರದ್ದು ಅನೇಕ ಇವೆ. ಜಗತ್ತಿನಲ್ಲಿ ಸಿಹಿಕಹಿ ಇರೋದೆ, ಷಡ್ರಸ ಎಂದು ಕರೆದಿಲ್ಲವೇ. ಜೀವನ ಅಂದ್ರೆ ರಸಪೂರ್ಣವಾಗಿರಬೇಕು. 

ರಸ ಅಂದರೆ ಒಂದೇ ಅಲ್ಲ. ಅಡುಗೆ ಮಾಡುವಾಗ ಬೇರೆ ಬೇರೆ ರಸ ಕೂಡಿಸಿದರೆ ರುಚಿ ಬರುತ್ತದೆ. ಸಿಹಿ, ಉಪ್ಪು, ಖಾರ, ಹುಳಿ, ಒಗರು ಮತ್ತು ಕಹಿ ಎಲ್ಲಾ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿದರೆ ರುಚಿ ಬರುತ್ತದೆ. ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧು ಇಲ್ಲ ಅಂತೀವಿ. ಹಾಗಂತ ಬರಿ ಉಪ್ಪು ಹಾಕಿದರೆ ರುಚಿ ಬರುವುದಿಲ್ಲ. ನಮಗೆ ಯಾವುದು ಬೇಕು?. ಎಷ್ಟು ಬೇಕೋ?. ಸರಿಯಾಗಿ ಮಿಶ್ರ ಮಾಡಿದರೆ ಕಹಿ ಕೂಡ ಸವಿಯಾಗುತ್ತದೆ. ಪ್ರಮಾಣ ಹದವಾಗಿದ್ದರೆ ಹಾಗಲಕಾಯಿ ಕೂಡ ಸವಿಯಾಗುತ್ತದೆ. ರುಚಿ ಮಾಡಿಕೊಳ್ಳುವುದು ಒಂದು ಕಲೆ, ಆ ಕಲೆ ಇಲ್ಲದಿದ್ದರೆ ಸಕ್ಕರೆ ಕೂಡ ಕಹಿಯಾಗಬಹುದು. ವಯಸ್ಸಾದವರಿಗೆ ಸಕ್ಕರೆ ಕಹಿ ಅಲ್ಲವೇನು. ಏಕೆಂದರೆ ನಾವು ಕಹಿ ಮಾಡಿಕೊಂಡಿದ್ದೇವೆ. ಸವಿಯನ್ನು ಕಹಿ ಮಾಡಲು ಬರುತ್ತದೆ. ಅದೇ ರೀತಿ ಕಹಿಯನ್ನು ಸವಿ ಮಾಡಲು ಬರುತ್ತದೆ. ಅದಕ್ಕೆ ನಿಸರ್ಗ ಹೇಳುತ್ತದೆ. ಕಣ್ಣು ತೆರೆದು ಬದುಕು. ಕಿವಿ ತೆರೆದು ಬದುಕು, ಮನಸ್ಸು ತೆರೆದು ಬದುಕು. ಬುದ್ಧಿ ಹದಗೊಳಿಸಿ ಬದುಕು. ಆಗ ಎಲ್ಲಾ ರಸ ಪೂರ್ಣವಾಗುತ್ತದೆ. ಆಗ ಎಲ್ಲ ಹಿತವಾಗುತ್ತದೆ. 

ಒಂದೇ ಸಾಮಾನು ಬಳಸಿ ಇಬ್ಬರು ಅಡಿಗೆ ಮಾಡಿದರೆ, ರುಚಿಯಲ್ಲಿ ಭಿನ್ನವಿರುತ್ತದೆ. ಕಾರಣ ಮಿಶ್ರ ಮಾಡುವಲ್ಲಿ, ಕ್ರಮದಲ್ಲಿ ವ್ಯತ್ಯಾಸ. ದೇವರು ಎಲ್ಲರಿಗೂ ಕೈಕೊಟ್ಟಿದ್ದಾನೆ. ಅಂದರೆ 10 ಬೆರಳುಗಳು. ಅದನ್ನು ತಪಸ್ಸು ಮಾಡು ಎಂದನು. ತಪಸ್ಸು ಎಂದರೆ ಕೆಲಸ ಚೆನ್ನಾಗಿ ಮಾಡು. ಚೆನ್ನಾಗಿ ಬಳಸು ಅಂತ. ಅದನ್ನು ಜ್ಞಾನ ಪೂರ್ಣವಾಗಿ ಬಳಸು. ಈ 10 ಬೆರಳಿನಲ್ಲಿ ಸ್ವರ್ಗ ನಿರ್ಮಾಣವಾಗುತ್ತದೆ. ಜಗತ್ತಿನಲ್ಲಿ ಏನಾದರೂ ಕೆಲಸ ಅದ್ಭುತವಾಗಿದ್ದರೆ ಈ 10 ಬೆರಳುಗಳೇ ಕಾರಣ. ನಿರ್ಮಾಣ ಮಾಡಿದ್ದು ಇವೆ. ಹಾಳು ಮಾಡಿದ್ದು ಇವೆ. ಅಜಂತಾ, ಎಲ್ಲೋರ, ಬೇಲೂರು ಹಳೇಬೀಡು ಅಲ್ಲಿಯ ಶಿಲ್ಪವನ್ನು ಕೆತ್ತಿರುವುದು ಈ ಬೆರಳುಗಳೆ. ಅವರ ಬೆರಳುಗಳು ಬೇರೆ ಇಲ್ಲ. ನಮ್ಮಷ್ಟೇ ಇರುವುದು. ಯಾವಾಗ ನಿರ್ಮಾಣ ಮಾಡಿದ್ದು?. ಈಗ ನೋಡಿದರೂ ಕಣ್ಣುಮುಚ್ಚಬೇಕು ಅನಿಸುವುದಿಲ್ಲ. ಆ ಬೆರಳುಗಳನ್ನು ಬಳೆಸಿಕೊಂಡು ಸೌಂದರ್ಯ ತುಂಬಿದ್ದಾರೆ. ಈ ಬೆರಳುಗಳು ನಮ್ಮ ಬದುಕಿನಲ್ಲಿ ಸೌಂದರ್ಯ ತುಂಬಲು ಬರುವುದಿಲ್ಲವೇ?. ಬರುತ್ತವೆ. ಆದರೆ ಅವರ ಕೈಗೆ ಆದ ತರಬೇತಿ ನಮ್ಮ ಕೈಗೆ ಆಗಿಲ್ಲ ಅಷ್ಟೇ. ಅವರಿಗೆ ಕೆತ್ತೋದಿಕ್ಕೆ ಬರುತ್ತದೆ. ನಮಗೆ ಹಾಳು ಮಾಡಲು ಬರುತ್ತದೆ. ಹಾಳು ಮಾಡಲು ತರಬೇತಿ ಬೇಕಿಲ್ಲ. ಕಲ್ಲು ಹಾಕಿದರೆ ಸಾಕು. ಚೆನ್ನಾಗಿ ಬಳಸಲು ಬಂದ್ರೆ ಟೇಬಲ್ ಸುಖ ಕೊಡುತ್ತದೆ. ಬಳಸೋದಕ್ಕೆ ಬರದೇ ಹೋದರೆ ಹೂ ಕೂಡ ಮಾರಕವಾಗುತ್ತದೆ.ಪಾತಂಜಲ ಮಹರ್ಷಿ ಹೇಳೋದು "ಏನದೆ ಅದನ್ನು ಚೆನ್ನಾಗಿ ಬಳಸು, ಸುಂದರವಾಗಿ ಬಳಸು, ಮಧುರವಾಗಿ ಸ್ವಚ್ಛವಾಗಿ ಬಳಸು ಎಂದು".

ಕ್ಷಣಗಳನ್ನು ಸುಂದರ ಮಾಡಿಕೊಳ್ಳುತ್ತಾ ಹೋಗುವುದೇ ಜೀವನದ ಸಾಧನೆ. ಹಾಗಾಗಿ ಪ್ರತಿಕ್ಷಣ ಸುಂದರ ಮಾಡಬೇಕು. ಈ ಕ್ಷಣ ಸುಂದರ ಮಾಡಿದರೆ ಮುಂದಿನ ಕ್ಷಣ ಸುಂದರ ಆಗ್ತದೆ. ಯಾವ ಕ್ಷಣ ದುಃಖ ಆಗುತ್ತದೆ ಅದು ದುಃಖ. ಯಾವ ಕ್ಷಣ ನಗುತ್ತದೆ ಅದು ನಗು. ಏನು ನಿಸರ್ಗ ನಮಗೆ ಕ್ಷಣಗಳನ್ನು ಕೊಡುತ್ತದೆ? ಆ ಕ್ಷಣಗಳನ್ನು ಚಂದ ಮಾಡೋದು. ದಾರ ಚಂದ ಮಾಡಿದರೆ ಬಟ್ಟೆ ಚಂದವಾಗುತ್ತದೆ. ದಾರ ಕೆಂಪು ಇದ್ದರೆ ಬಟ್ಟೆ ಕೆಂಪು. ದಾರ ಕಪ್ಪುಇದ್ದರೆ ಬಟ್ಟೆ ಕಪ್ಪು. ನಮ್ಮ ಬದುಕು ಎಂತಹ ಕ್ಷಣಗಳನ್ನು ಅನುಭವಿಸುತ್ತೇವೆ ಆ ರೀತಿ ಆಗುತ್ತದೆ. ನನಗೆ 80 ವರ್ಷ ಆಯ್ತು ಆನಂದವಾಗಿದ್ದೇನೆ ಅಂತ ಹೇಳಿದ್ರೆ, ಆತನಿಗೆ ಸಿಕ್ಕ ಕ್ಷಣಗಳನ್ನು ಚೆನ್ನಾಗಿ ಬಳಸಿದ್ದಾನೆ ಎಂದು ಅರ್ಥ. ನಾವು ನಾಳೆ ಕ್ಷಣಕ್ಕಾಗಿ ಇಂದಿನ ಕ್ಷಣ ಹಾಳು ಮಾಡುತ್ತೇವೆ. ನಮಗೆ ನಾಳೆ ಕ್ಷಣ ಮಹತ್ವ. ಯೋಚಿಸಿ, ನಾಳೆ ಕ್ಷಣ ನಮಗೆ ಎಂದಾದರು ಸಿಗುತ್ತದೆ ಏನು?. ಎಲ್ಲಿಯಾದರೂ ಯಾರಿಗಾದರೂ ಕೈಗೆ ಸಿಕ್ಕಿದೆ ಏನು?. ನಮ್ಮ ಕೈಗೆ ಸಿಗುವುದು ಇಂದಿನ ಕ್ಷಣ ಅಷ್ಟೇ. ನಾಳೆ ಕ್ಷಣಕ್ಕೆ ಲಕ್ಷ್ಯ ಇಟ್ಟರೆ ಇಂದಿನ ಕ್ಷಣ ಹೋಗಿಬಿಡ್ತದೆ. ಕೈಯೊಳಗಿರುವ ಹಣ್ಣು ಮಹತ್ವದ್ದು ವಿನಃ ಗಿಡದಾಗೆ ಇದ್ದದ್ದಲ್ಲ. ಒಬ್ಬ ಮಾಲೀಕ ಮರದ ಕೆಳಗೆ ಕುಳ್ಳಿರಿಸಿ ತಿನ್ನೋದಕ್ಕೆ ಹಣ್ಣು ನೀಡಿದ್ದಾನೆ. ಈತ ತಿನ್ನುವುದನ್ನು ಬಿಟ್ಟು, ಕೈಯಲ್ಲಿ ಹಣ್ಣು ಹಿಡಿದುಕೊಂಡು ಮರದ ಮೇಲೆ ಹಣ್ಣು ಎಷ್ಟಿದ್ದಾವೆ ಅಂತ ಲೆಕ್ಕ ಮಾಡುತ್ತಿದ್ದಾನೆ. ಅಷ್ಟರಲ್ಲಿ ಕೈಯಲ್ಲಿದ್ದ ಹಣ್ಣು ಕೊಳೆತು ಹೋಗಿದೆ. ಹಾಗೆ ಮೊದಲು ಕೈಯಲ್ಲಿ ಇರುವುದನ್ನು ಅನುಭವಿಸು, ಆಮೇಲೆ ಲೆಕ್ಕ. ಬದುಕನ್ನು ಹಾಗೆ ಸ್ವಚ್ಛ ಮಾಡಿಕೊಳ್ಳಲು ನಿಯಮ. ತೃಪ್ತಿ ಯಿಂದ ಇರೋದು ನಿಯಮ. ದುಡಿಯೋದು ತಡೆದುಕೊಳ್ಳುವುದು ನಿಯಮ. ಈಶ್ವರ ಪ್ರಣಿದಾನ ನಿಯಮ. ಈ ಹೂವು ಮಾನವನ ರಚನೆಯಲ್ಲ. ಈ ಹೂವು ನೋಡುವಾಗ ಆ ಹೂ ರಚಿಸಿದ ನಿಸರ್ಗಕ್ಕೆ ಪ್ರೇಮ ಸಲ್ಲಿಸುವುದೇ ಈಶ್ವರ ಪ್ರಣಿದಾನ. ತಾರಾಮಂಡಲ ಇಲ್ಲ ಅಂದರೆ ಸೂರ್ಯ ಇಲ್ಲ. ಸೂರ್ಯ ಇಲ್ಲ ಅಂದ್ರೆ ಭೂಮಿ ಇಲ್ಲ. ಭೂಮಿ ಇಲ್ಲ ಅಂದ್ರೆ ನಾವಿಲ್ಲ, ಗಿಡವಿಲ್ಲ, ಹೂವಿಲ್ಲ. ನಾವೇನು ಅನುಭವಿಸುತ್ತೇವೆ ಅವೆಲ್ಲ ನಿಸರ್ಗದ ಕಾಣಿಕೆ. ನಾವಿಲ್ಲದಿದ್ದರೆ ಗಿಡಕ್ಕೆ ತೊಂದರೆ ಇಲ್ಲ. ಭೂಮಿ ಏನಾದರೂ ಒಂದು ದಿನ ವಿಶ್ರಾಂತಿ ಮಾಡಿದರೆ ಯಾವುದು ಇರುವುದಿಲ್ಲ. ನಾವಿಲ್ಲದಿದ್ದರೆ ನಡೆಯುತ್ತದೆ. ಹಾಗಾಗಿ ನಾವು ಬದುಕಲು ನಿಸರ್ಗವನ್ನು ಅವಲಂಬಿಸಿದ್ದೇವೆ ಅನ್ನುವ ಭಾವ ಈಶ್ವರಪ್ರಣಿದಾನ. ಈಶ್ವರ ಅಂದರೆ ಇವೆಲ್ಲ ರಚನೆ ಮಾಡಿದವ ಎಂದರ್ಥ. ನಾವೆಲ್ಲ ಸತ್ಯ ದೇವತೆ ಅವಲಂಬಿಸಿದ್ದೇವೆ. ಇವೆಲ್ಲ ಸತ್ಯ ದೇವತೆಯ ರಚನೆ. ಸತ್ಯದೇವತೆಯ ರೂಪ ಅನ್ನುವ ಭಾವ ಇರಬೇಕು. ಆದ್ದರಿಂದ ನಾನು ಅನ್ನುವ ಭಾವ ಇರುವುದಿಲ್ಲ. ಇದು ನಿಸರ್ಗದ ಕಾಣಿಕೆ ಅಂತ ನಾವು ಅನುಭವಿಸಿದರೆ ಅದು ಈಶ್ವರ ಪ್ರಣಿದಾನ. ಇಲ್ಲಿ ಭಾವಿಸುವುದು ಬಹಳ ಮುಖ್ಯ. ಇದರಿಂದ ವಸ್ತುಗಳನ್ನು ನೋಡುವಾಗ ಆ ವಸ್ತುವಿನ ಹಿಂದಿರುವ ಶಕ್ತಿಯ ಜ್ಞಾನ ಇರುತ್ತದೆ. ಒಂದು ಹೂ ಹೇಳುತ್ತದೆ ನೀನು ನನ್ನ ಹಾಗೆ ಆಗು, ದೇವರಮುಡಿಗೆ ಏರುತ್ತೀ. ನನ್ನ ಹಾಗೆ ಆಗಲಿಲ್ಲ ದೇವರಮುಡಿಗೆ ಏರುವುದಿಲ್ಲ. ಈ ಭಾವದಲ್ಲಿ ಚೆನ್ನಾಗಿ ಬದುಕುವುದು. ನಾವು ನದಿಯಲ್ಲಿ ಈಜುವಾಗ ಈ ನದಿ ನಮ್ಮದೇ ಅನ್ನಬೇಕು. ಅಲ್ಲಿಂದ ಬಂದ ಮೇಲೆ ಅದು ತಲೆಯಲ್ಲಿ ಇರಬಾರದು. ಯಾವುದನ್ನೇ ಆಗಲಿ, ಯಾರದನ್ನೇ ಆಗಲಿ ಬಳಸುವಾಗ ನಮ್ಮದು ಅನ್ನುವ ಭಾವದಿಂದಲೇ ಅನುಭವಿಸಬೇಕು. ಅದು ಮನಸ್ಸಿನಲ್ಲಿ ಬಂಧಿಯಾಗಬಾರದು. ಹಾಗೆ ಜೀವನ ಮಾಡಿದರೆ ಜೀವನ ರಸಮಯವಾಗುತ್ತದೆ ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ