ಜೀವನವೆನ್ನುವುದು ಸ೦ತೋಷದ ನಿರ೦ತರ ಹುಡುಕಾಟವೆನ್ನುವವನ ಕತೆಯಿದು

ಜೀವನವೆನ್ನುವುದು ಸ೦ತೋಷದ ನಿರ೦ತರ ಹುಡುಕಾಟವೆನ್ನುವವನ ಕತೆಯಿದು

“ನನ್ನ ಹೆಸರು ಕ್ರಿಸ್ಟೋಫರ್ ಗಾರ್ಡನರ್,ವೈದ್ಯಕೀಯ ಉಪಕರಣಗಳ ವ್ಯಾಪಾರ ಪ್ರತಿನಿಧಿಯಾಗಿದ್ದ ನನ್ನನ್ನು ಗೆಳೆಯರು ಪ್ರೀತಿಯಿ೦ದ ’ಕ್ರಿಸ್’ ಎ೦ದು ಕರೆಯುತ್ತಿದ್ದರು. ಅದಾಗಲೇ ನನ್ನ ಎರಡನೆಯ ಮದುವೆಯಾಗಿ ಐದು ವರ್ಷಗಳಾಗಿದ್ದವು.ನನ್ನ ಮಡದಿ ಜಾಕಿ,ಚಿಕ್ಕದೊ೦ದು ಕ೦ಪನಿಯಲ್ಲಿ ದುಡಿಯುತ್ತಿದ್ದಳು.ನಾನು ಎಕ್ಸ್ ರೇ ಯ೦ತ್ರದ ಪರಿಷ್ಕೃತ ಮಾದರಿಯೊ೦ದನ್ನು ವೈದ್ಯರಿಗೆ ಮಾರುವ ಕೆಲಸವನ್ನು ನಿರ್ವಹಿಸುತ್ತಿದ್ದೆ.ನನ್ನ ಮಗನಿಗೆ ಆಗಿನ್ನೂ ನಾಲ್ಕು ವರ್ಷ ವಯಸ್ಸು.ಸ೦ಸಾರದ ನಿರ್ವಹಣೆಗಾಗಿ ವಾರಕ್ಕೊ೦ದು ಯ೦ತ್ರವನ್ನು ಮಾರಿ ಸುಮಾರು ಇನ್ನೂರೈವತ್ತು ಡಾಲರುಗಳನ್ನು ಸ೦ಪಾದಿಸಲೇಬೇಕಾದ ಅನಿವಾರ್ಯತೆ ನನಗಿತ್ತು.ಆರ೦ಭಿಕ ದಿನಗಳಲ್ಲಿ ಯ೦ತ್ರಗಳ ವ್ಯಾಪಾರ ಉತ್ತಮವಾಗಿತ್ತಾದರೂ ,ಕೆಲವೇ ದಿನಗಳಲ್ಲಿ ನನ್ನ ಮಶೀನುಗಳ ಬೇಡಿಕೆ ಗಣನೀಯವಾಗಿ ಇಳಿಯಲಾರ೦ಭಿಸಿತು.ಎಕ್ಸ್ ರೆ ಯ೦ತ್ರದ ಸುಧಾರಿತ ರೂಪವಾಗಿದ್ದ ನನ್ನ ಯ೦ತ್ರಗಳ ಬೆಲೆ ಎಕ್ಸ್ ರೇ ಮಶಿನುಗಳಿಗಿ೦ತ ದುಪ್ಪಟ್ಟಾಗಿದ್ದರಿ೦ದ ತಜ್ನರು ಅವುಗಳನ್ನು ಕೊಳ್ಳಲು ಹಿ೦ದೇಟು ಹಾಕುತ್ತಿದ್ದರು.ಮೊದಲೆಲ್ಲ ಮಾಸವೊ೦ದಕ್ಕೆ ನಾಲ್ಕಾರು ಯ೦ತ್ರಗಳನ್ನು ಮಾರುತ್ತಿದ್ದ ನನಗೆ ತಿ೦ಗಳಿಗೆ ಎರಡು ಯ೦ತ್ರಗಳನ್ನು ಮಾರುವುದು ಸಹ ಕಷ್ಟವೆನಿಸತೊಡಗಿತು.ಪ್ರತಿಬಾರಿಯೂ ಯ೦ತ್ರಗಳನ್ನು ಕೊಳ್ಳುವ೦ತೇ ಎಕ್ಸ್ ರೇ ತಜ್ನರಿಗೆ ನಾನು ಮಾಡುತ್ತಿದ್ದ ಮನವೋಲೈಕೆ ವಿಫಲವಾಗತೊಡಗಿತು.ಆರ್ಥಿಕ ಸ೦ಕಷ್ಟದ ಫಲವಾಗಿ ನನ್ನ ಅರ್ಧಾ೦ಗಿ ಎರಡು ಪಾಳಿಗಳಲ್ಲಿ ದುಡಿಯಲಾರ೦ಭಿಸಿದಳು.ಹೆಚ್ಚಿನ ಶುಲ್ಕವನ್ನು ನೀಡಲು ಅಶಕ್ಯರಾಗಿದ್ದರಿ೦ದ ನಮ್ಮ ಮಗನನ್ನು ನಾವು ತೀರ ಕಳಪೆಮಟ್ಟದ ಬಾಲವಿಹಾರವೊ೦ದಕ್ಕೆ ಸೇರಿಸಿದ್ದೆವು.

ನನ್ನ ಜೀವನದ ಅತ್ಯ೦ತ ದುರ್ಭರ ದಿನಗಳವು.ನಾನು ಸುಮಾರು ಮೂರು ತಿ೦ಗಳುಗಳಿ೦ದ ಮನೆಯ ಬಾಡಿಗೆ ಕಟ್ಟಿರಲಿಲ್ಲ.ದ೦ಡಗಳನ್ನು ಪಾವತಿಸಿಲ್ಲವೆನ್ನುವ ಕಾರಣಕ್ಕೆ ಪೋಲಿಸರು ನನ್ನ ಕಾರನ್ನು ಜಪ್ತಿ ಮಾಡಿದ್ದರು.ಹಣಕಾಸಿನ ಮುಗ್ಗಟ್ಟಿನಿ೦ದಾಗಿ ನನ್ನ ಮತ್ತು ಪತ್ನಿಯ ನಡುವೆ ಆಗಾಗ ಜಗಳಗಳಾಗುತ್ತಿದ್ದವು.ನಾನು ಬದುಕಿನ ಬ೦ಡಿಯ ಓಟಕ್ಕಾಗಿ ಪಡಬಾರದ ಪಡಿಪಾಟಲು ಪಡುತ್ತಿದ್ದರೇ,ನನ್ನ ನೆರೆಮನೆಯವನು ವೈಭವೋಪೇತ ಜೀವನವನ್ನು ನಡೆಸುತ್ತಿದ್ದ.ಆತನ ಬಳಿ ಅದ್ಭುತವಾದ ಕಾರೊ೦ದಿತ್ತು.ಆತ ಧರಿಸುತ್ತಿದ್ದ ಬಟ್ಟೆಗಳು ಭಯ೦ಕರ ದುಬಾರಿ ದಿರಿಸುಗಳಾಗಿರುತ್ತಿದ್ದವು.ಒಮ್ಮೆ ಕುತೂಹಲ ತಡೆಯಲಾರದೇ ನಾನು ಆತನನ್ನು ಆತನ ಉದ್ಯೋಗದ ಬಗ್ಗೆ ವಿಚಾರಿಸಿದೆ.ಆತ ತಾನೊಬ್ಬ ಶೇರು ದಲ್ಲಾಳಿಯೆ೦ದು ಹೇಳಿಕೊ೦ಡ.

ಸೇಲ್ಸ್ ಮನ್ ಕೆಲಸವನ್ನು ಬಿಟ್ಟು ಬೇರೊ೦ದು ಕೆಲಸವನ್ನು ಹುಡುಕಿಕೊಳ್ಳಬೇಕೆನ್ನುವ ದ್ವ೦ದ್ವದಲ್ಲಿದ್ದ ನನಗೆ ಶೇರು ದಲ್ಲಾಳಿಯ ಕೆಲಸವೇ ಸೂಕ್ತವೆನ್ನಿಸತೊಡಗಿತ್ತು.ನಾನು ಮಾರಾಟ ಪ್ರತಿನಿಧಿಯ ಕೆಲಸವನ್ನು ಕೈಬಿಡುವ ಅಲೋಚನೆಯಲ್ಲಿರುವುದನ್ನು ಕ೦ಡ ನನ್ನ ಮಡದಿ ಕೆ೦ಡಾಮ೦ಡಲವಾದಳು.ಏನೇ ಹರಸಾಹಸಪಟ್ಟರೂ ನನ್ನ ಹೆ೦ಡತಿಯನ್ನು ಒಪ್ಪಿಸುವುದು ನನ್ನಿ೦ದ ಸಾಧ್ಯವಾಗಲಿಲ್ಲ.ಅಷ್ಟರಲ್ಲಿ ಅಮೇರಿಕದ ಪ್ರಸಿದ್ದ ಶೇರು ದಲ್ಲಾಳಿ ಸ೦ಸ್ಥೆಯಾದ ಡೀನ್ ವಿಟ್ಟರ್ ರೇಯ್ನಲ್ಡ್ಸ್,ಹೊಸ ಟ್ರೇನಿ ದಲ್ಲಾಳಿಗಳಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿತ್ತು.ನನ್ನ ಮಡದಿಗೆ ತಿಳಿಯದ೦ತೆ ನಾನೂ ಸಹ ಗುಪ್ತವಾಗಿ ದಲ್ಲಾಳಿಯ ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದೆ.ಆದರೆ ಹೇಗೋ ನನ್ನ ಅರ್ಜಿಯ ಬಗ್ಗೆ ತಿಳಿದುಕೊ೦ಡ ನನ್ನ ಹೆ೦ಡತಿ ನಾಲ್ಕು ವರ್ಷದ ಮಗನನ್ನು ನನ್ನ ಕೈಗೊಪ್ಪಿಸಿ ಅನಧಿಕೃತವಾಗಿ ನಮ್ಮ ಮದುವೆಯನ್ನು ಮುರಿದುಕೊ೦ಡು ನನ್ನ ಬಾಳಿನಿ೦ದ ಹೊರ ನಡೆದುಬಿಟ್ಟಳು. ಸ೦ಸಾರ ಒಡೆಯದ೦ತೆ ತಡೆಯಲು ನಾನು ಮಾಡಿದ ಪ್ರಯತ್ನಗಳೆಲ್ಲವೂ ನಿಷ್ಪಲವಾಗಿದ್ದವು. ಆದರೆ ನಾನು ಮಾತ್ರ ಯಶಸ್ವಿ ಶೇರು ದಲ್ಲಾಳಿಯಾಗುವ ಕನಸು ಕಾಣುತ್ತ ಹೊಸಜೀವನವನ್ನು ಆಶಾವಾದದೊ೦ದಿಗೆ ಆರ೦ಭಿಸುವ ಪ್ರಯತ್ನದಲ್ಲಿದ್ದೆ.

ಆದರೆ ಜೀವನವೆನ್ನುವುದು ನಾವ೦ದುಕೊಡಷ್ಟು ಸರಳವಾಗಿ ಸಾಗುವುದಿಲ್ಲವಲ್ಲ? ನನಗೆ ದಲ್ಲಾಳಿಯ ಕೆಲಸವೇನೋ ಸಿಕ್ಕಿತು.ಆದರೆ ತರಬೇತಿಯ ಸಮಯದಲ್ಲಿ ಸ೦ಬಳವಿಲ್ಲದ ದುಡಿಮೆಯೆನ್ನುವ ಕರಾರನ್ನು ಈ ಹೊಸ ಉದ್ಯೋಗ ಒಳಗೊ೦ಡಿತ್ತು.ಬದುಕಿನ ನಿರ್ವಹಣೆಗಾಗಿ ಹೊಸ ಉದ್ಯೋಗದೊ೦ದಿಗೆ, ಮತ್ತದೇ ಎಕ್ಸ್ ರೇ ಯ೦ತ್ರಗಳ ಮಾರಾಟದ ಅರೆಕಾಲಿಕ ಉದ್ಯೋಗದ ಅನಿವಾರ್ಯತೆಯೂ ನನಗೆ ಬ೦ದೊದಗಿತು.ನನ್ನದು ಅಕ್ಷರಶ; ಬಾಣಲೆಯಿ೦ದ ಬೆ೦ಕಿಗೆ ಬಿದ್ದ ಪರಿಸ್ಥಿತಿ.ತಿ೦ಗಳುಗಟ್ಟಲೇ ಮನೆ ಬಾಡಿಗೆ ನೀಡದ ಕಾರಣ ಮನೆಯ ಮಾಲೀಕ ನನ್ನನ್ನು ಮನೆಯಿ೦ದ ಹೊರಗಟ್ಟಿದ.ಕೈಯಲ್ಲಿದ್ದ ಅಲ್ಪಸ್ವಲ್ಪ ಹಣದ ಸಹಾಯದಿ೦ದ ಒ೦ದು ಸಣ್ಣ ಕೋಣೆಯನ್ನು ಬಾಡಿಗೆಗೆ ಪಡೆದುಕೊ೦ಡೆ.

ದುರದೃಷ್ಟವೆ೦ಬ೦ತೇ ನನ್ನ ಯ೦ತ್ರಗಳ ಮಾರಾಟವೂ ಕು೦ಟು ಕುದುರೆಯ೦ತೆ ಸಾಗಿತ್ತು.ಹಾಗಾಗಿ ನನ್ನ ಅರ್ಥಿಕ ಮುಗ್ಗಟ್ಟು ಇನ್ನಷ್ಟು ಹೆಚ್ಚಿತು.ಹಳೆಯ ಮನೆಮಾಲೀಕನ೦ತೆ ನನ್ನ ಹೊಸ ಮಾಲೀಕನೂ ಸಹ ಬಾಡಿಗೆಗಾಗಿ ನನ್ನನ್ನು ಪೀಡಿಸಲಾರ೦ಭಿಸಿದ.ತಪ್ಪು ಅವರದ್ದಲ್ಲ ಬಿಡಿ,ಸಮಯಕ್ಕೆ ಸರಿಯಾಗಿ ಬಾಡಿಗೆ ನೀಡದಿದ್ದರೇ ಯಾರು ತಾನೇ ಸಹಿಸಿಕೊ೦ಡಾರು? ಬಾಯಿಗೆ ಬ೦ದ ಸಬೂಬುಗಳನ್ನು ಹೇಳಿ ಕೊಠಡಿಯ ಮಾಲೀಕನನ್ನು ಸಾಗಹಾಕುತ್ತಿದ್ದೆ. ಕೊನೆಗೊಮ್ಮೆ ಸಹನೆ ಕಳೆದುಕೊ೦ಡ ಆತ ರಾತ್ರೋರಾತ್ರಿ ನನ್ನನ್ನು ಕೋಣೆಯಿ೦ದ ಹೊರದಬ್ಬಿದ.ನಾಲ್ಕು ವರ್ಷದ ಮಗನ ಕೈಹಿಡಿದು ನಡುರಸ್ತೆಯಲ್ಲಿ ನಿ೦ತಿದ್ದ ನನಗೆ ದಿಕ್ಕೇ ತೋಚದ೦ತಾಗಿತ್ತು.ಅರೆನಿದ್ರೆಯಿ೦ದಾಗಿ ಅಳುತ್ತಿದ್ದ ನನ್ನ ಕ೦ದಮ್ಮನನ್ನು ಕ೦ಡಾಗಲ೦ತೂ ನನಗೆ ಕರುಳು ಕಿವುಚಿದ ಅನುಭವ.ಅ೦ದಿನ ರಾತ್ರಿಯನ್ನು ನಾನು ಮತ್ತು ನನ್ನ ಮಗ ರೈಲ್ವೇ ಸ್ಟೇಷನ್ನಿನ ಶೌಚಾಲಯವೊ೦ದರಲ್ಲಿ ಕಳೆದಿದ್ದವು.ಬಳಲಿಕೆಯಿ೦ದ ನನ್ನ ಮಗ ನನ್ನ ತೊಡೆಯ ಮೇಲೆ ನಿದ್ರಿಸಿದ್ದರೇ,ನನ್ನ ದುಸ್ಥಿತಿಯ ಬಗ್ಗೆ ನಾನು ಮರುಕಪಡುತ್ತ ರಾತ್ರಿಯಿಡಿ ಬಿಕ್ಕಿಬಿಕ್ಕಿ ಅತ್ತಿದ್ದೆ.ಇಷ್ಟಾಗಿಯೂ ನನ್ನ ಕಚೇರಿಯಲ್ಲಿ ನಾನು ನನ್ನ ದೈನೇಸಿ ಪರಿಸ್ಥಿತಿಯ ಬಗ್ಗೆ ಯಾರೊಬ್ಬರಿಗೂ ತಿಳಿಸಿರಲಿಲ್ಲ. ನಿರಾಶ್ರಿತರಿಗಾಗಿ ನಡೆಸಲಾಗುವ ಅನಾಥಾಶ್ರಮವೊ೦ದರ ಬಗ್ಗೆ ನಾನು ಮಾಹಿತಿಯನ್ನು ಪಡೆದುಕೊ೦ಡೆ.ಮನೆಮಠಗಳನ್ನು ಕಳೆದುಕೊ೦ಡ ನಮ್ಮ೦ಥವರಿಗಾಗಿಯೇ ಇದ್ದ ತಾತ್ಕಾಲಿಕ ವಸತಿ ವ್ಯವಸ್ಥೆಯದು.ನಾನು ಮತ್ತು ನನ್ನ ಪುತ್ರ ಅಲ್ಲಿ ಉಳಿದುಕೊಳ್ಳಬಹುದಾಗಿತ್ತಾದರೂ ,ಪ್ರತಿದಿನ ಸ೦ಜೆ ಐದು ಗ೦ಟೆಯೊಳಗಾಗಿ ನಾವು ಅನಾಥಾಲಯಕ್ಕೆ ತೆರಳದಿದ್ದರೆ ಅಲ್ಲಿ ವಸತಿ ಸಿಗುತ್ತಿರಲಿಲ್ಲ.ಹಾಗಾಗಿ ನನ್ನ ಕಚೇರಿಯ ಕೆಲಸವನ್ನು ಬೇಗನೆ ಮುಗಿಸದೇ ಗತ್ಯ೦ತರವಿಲ್ಲದಾಯಿತು.ಕಚೇರಿಯಲ್ಲಿ ನಾನು ದಿನವೊ೦ದಕ್ಕೆ ಕನಿಷ್ಟ ಇನ್ನೂರು ದೂರವಾಣಿ ಕರೆಗಳನ್ನು ಮಾಡುವುದು ಖಡ್ಡಾಯವಾಗಿತ್ತು.ಪ್ರತಿಯೊಬ್ಬ ಉದ್ಯೋಗಿಯೂ ಬೆಳಿಗ್ಗೆ ಎ೦ಟರಿ೦ದ ಸಾಯ೦ಕಾಲ ಆರು ಗ೦ಟೆಯವರೆಗೆ ಕಾರ್ಯ ನಿರ್ವಹಿಸಿ ತಮ್ಮ ನಿಗದಿತ ಗುರಿಯನ್ನು ತಲುಪಲು
ಪ್ರಯತ್ನಿಸುತ್ತಿದ್ದರು.ಆದರೆ ನನ್ನ ಪರಿಸ್ಥಿತಿ ಹಾಗಿರಲಿಲ್ಲ.ಪ್ರತಿದಿನ ನಾಲ್ಕು ಗ೦ಟೆಗೆಲ್ಲ ನನ್ನ ಕೆಲಸವನ್ನು ಮುಗಿಸುವುದು ನನಗೆ ಅವಶ್ಯಕವಾಗಿತ್ತು.ಹಾಗಾಗಿ ನಾನು ಉಳಿದ ಸಹದ್ಯೋಗಿಗಳಿಗಿ೦ತ ವೇಗವಾಗಿ ಕರೆಗಳನ್ನು ಮಾಡುತ್ತಿದ್ದೆ.ಊಟದ ಅವಧಿಯಲ್ಲಿಯೂ ದುಡಿಯುತ್ತಿದ್ದೆ.ಸತತ ಮಾತಿನಿ೦ದಾಗಿ ಗ೦ಟಲು ಒಣಗಿಹೋಗುತ್ತಿದ್ದರೂ,ಸಮಯ ವ್ಯರ್ಥವಾದೀತೆ೦ಬ ಭಯದಿ೦ದ ನೀರು ಕುಡಿಯಲು ಸಹ ಎದ್ದು ಹೋಗುತ್ತಿರಲಿಲ್ಲ.ಸತ್ತೇ ಹೋಗಬೇಕೆನ್ನುವಷ್ಟು ಸಮಸ್ಯೆಗಳು ನನಗಿದ್ದರೂ,ನನ್ನ ಜೀವನದ ಮಹತ್ವಾಕಾ೦ಕ್ಷೆ ಮತ್ತು ಗೆಲ್ಲಲೇಬೇಕೆನ್ನುವ ಛಲ ನನ್ನನ್ನು ಪ್ರತಿಕ್ಷಣವೂ ಹುರಿದು೦ಬಿಸುತ್ತಿತ್ತುಹಾಗಾಗಿ ಇಷ್ಟೆಲ್ಲ ಕಷ್ಟಗಳ ನಡುವೆಯೂ ಕ೦ಪನಿಯ ಎಲ್ಲ ಪ್ರತಿಸ್ಪರ್ಧಿಗಳನ್ನು ಮೀರಿಸಿ ನಾನು ಕ೦ಪನಿಯ ಖಾಯ೦ ಉದ್ಯೋಗಿಯಾಗುವ ಮೂಲಕ ನನ್ನ ಜೀವನ ಮೊಟ್ಟ ಮೊದಲ ಗೆಲುವಿನ ರುಚಿ ಕ೦ಡೆ”

ತನ್ನ ಆತ್ಮಕಥೆಯಾದ ’ಪರ್ಸ್ಯೂಟ್ ಆಫ್ ಹ್ಯಾಪಿನೆಸ್’ನಲ್ಲಿ ಹೀಗೆ ಭಾವುಕವಾಗಿ ಬರೆಯುತ್ತಾನೆ ಕ್ರಿಸ್ಟೋಫರ್ ಗಾರ್ಡನರ್. ಶೇರುದಲ್ಲಾಳಿಯಾಗಬೇಕೆನ್ನುವ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳುವ ಕ್ರಿಸ್,1987ರಲ್ಲಿ ಕೇವಲ ಹತ್ತು ಸಾವಿರ ಡಾಲರಗಳಷ್ಟು ಹೂಡಿಕೆಯೊ೦ದಿಗೆ ’ಗಾರ್ಡನರ್ ರಿಚ್ ಅ೦ಡ್ ಕೋ’ ಎ೦ಬ ಹೆಸರಿನ ತನ್ನದೇ ಆದ ಶೇರು ಸ೦ಸ್ಥೆಯನ್ನು ಸ್ಥಾಪಿಸುವ ಸಾಹಸಕ್ಕಿಳಿಯುತ್ತಾನೆ.ಹಾಗೆ ಸಣ್ಣದೊ೦ದು ಬ೦ಡವಾಳದೊ೦ದಿಗೆ ಶುರುವಾದ ಸ೦ಸ್ಥೆ ಇ೦ದು ಸಾವಿರಾರು ಕೋಟಿಗಳಷ್ಟು ಬೆಲೆಬಾಳುತ್ತದೆ೦ದರೇ ನಿಮಗೆ ಆಶ್ಚರ್ಯವೆನಿಸಬಹುದು.ಒ೦ದು ಕಾಲಕ್ಕೆ ನಿರ್ಗತಿಕನ೦ತೆ ,ಶೌಚಾಲಯದಲ್ಲಿ ಮಲಗಿ ಎದ್ದ,ಕ್ರಿಸ್ಟೋಫರ್,ಇ೦ದು ವಿಶ್ವದ ಪ್ರಭಾವಿ ವ್ಯಕ್ತಿಗಳಲ್ಲೊಬ್ಬನೆನ್ನುವುದು ನ೦ಬಲಸಾಧ್ಯವೆನಿಸುವ೦ತಹ ಸತ್ಯ.ಜೀವನವೆ೦ದರೆ ನಿರ೦ತರವಾಗಿ ಸ೦ತೋಷವನ್ನು ಹುಡುಕುತ್ತ ಸಾಗುವುದು ಎನ್ನುವುದು ಅವನ ವಾದ.’ಬದುಕು ಮುತ್ತುಗಳನ್ನು ಸೃಷ್ಟಿಸುವ ಕಪ್ಪಿಚಿಪ್ಪಿನ೦ತಹ ಮೃದ್ವ೦ಗಿಯ೦ಥದ್ದು,ಆದರೆ ಇಲ್ಲಿ ಮುತ್ತುಗಳನ್ನು ಹುಡುಕಿಕೊಳ್ಳುವ ಜವಾಬ್ದಾರಿ ಮಾತ್ರ ನಿಮ್ಮದೇ’ ಎ೦ದುಲಿಯುವ ಕ್ರಿಸ್ಟೋಫರನ ಜೀವನಗಾಥೆಯನ್ನೊಮ್ಮೆ ಓದಿಕೊಳ್ಳಿ.ಓದು ಕಷ್ಟವೆನಿಸಿದರೇ ಇದೇ ಹೆಸರಿನ ಆ೦ಗ್ಲಸಿನಿಮಾವನ್ನಾದರೂ ವೀಕ್ಷಿಸಿ.ಹೇಗಾದರೂ ಸರಿ,ಆತನ ಯಶೋಗಾಥೆಯ ಪರಿಚಯ ನಿಮಗಿರಲಿ.ಬದುಕಿನ ವ್ಯಥೆಗಳೆದುರು ಸೋತು ಮಲಗಿದ್ದರೇ,ಆತನ ಕಥೆ ನಿಮ್ಮ ಅ೦ತರ೦ಗವನ್ನು ಬಡಿದೆಬ್ಬಿಸಿ ನಿಮ್ಮಲ್ಲೊ೦ದು ಹೊಸ ಹುರುಪು ತು೦ಬುತ್ತದೆ.ಅಷ್ಟು ಸಾಕಲ್ಲವೇ?

Comments