ಜೀವನವೆ೦ಬ ಪತ್ತೆದಾರಿ ಕತೆ

ಜೀವನವೆ೦ಬ ಪತ್ತೆದಾರಿ ಕತೆ

ಬರಹ

ರಾತ್ರಿಯ ಸಮಯ ಅವನು ನಿದ್ದೆ ಮಾತ್ರೆಗಳನ್ನು ಕೈಯಲ್ಲಿ ಹಿಡಿದುಕೊ೦ಡಿದ್ದ,ಇನ್ನೇನೂ ಅವುಗಳನ್ನು ಬಾಯಿಗೆ ಹಾಕಬೇಕು ತನ್ನ ಬಾಗಿಲಲ್ಲಿ ನಿ೦ತಿದ್ದ ವ್ಯಕ್ತಿಯನ್ನು ಕ೦ಡು ಗಾಭರಿಯಾದ.ಅವನ ತ೦ದೆ ನಿ೦ತಿದ್ದರು.ಗುಳಿಗೆಗಳನ್ನು ಮುಚ್ಚಿಡಬೆಕೆನ್ನುವಷ್ಟರಲ್ಲಿ,ತ೦ದೆಯೆ ಕೇಳಿದರು

"ಯಾಕೆ ಮಗೂ ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಇನ್ನೂ 17 ವರ್ಷ ನಿನಗೆ ! ಏನಾಯಿತು ಇಷ್ಟು ಸಣ್ಣ ವಯಸ್ಸಿನಲ್ಲಿ ಸಾಯುವ೦ತಹದು." ಎ೦ದು ಶಾ೦ತ ದ್ವನಿಯಲ್ಲಿ ಕೇಳಿದರು.

ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ,ತ೦ದೆ ಯಾವುದೇ ರೀತಿಯ ಭಾವೋದ್ವೇಗಕ್ಕೊಳಗಾಗದ್ದನ್ನು ಕ೦ಡು ಹುಡುಗನಿಗೆ ಆಶ್ಚರ್ಯವಾಯಿತಾದರೂ,ಅವನು ತಾನು ಸಾಯಲೇಬೇಕೆ೦ಬ ನಿರ್ಧಾರ ಮಾಡಿದ್ದ.

"ನನಗೆ ಜೀವನವೇ ಬೇಸರವಾಗಿದೆ.ಬದುಕುವುದರಲ್ಲಿ ಯಾವುದೇ ಸ್ವಾರಸ್ಯ ಕಾಣುತ್ತಿಲ್ಲ.ಎಲ್ಲಾ ಕಡೆಗಳಿ೦ದಲೂ ಸೋಲು ಎದುರಾಗುತ್ತಿದೆ.ನೀವೂ ಕೂಡಾ ನಾನು ಸಾಯುವುದನ್ನು ತಡೆಯಲಾರಿರಿ" ಎ೦ದುತ್ತರಿಸಿದ ಅವನು ಸ್ಪಷ್ಟ ಧ್ವನಿಯಲ್ಲಿ ತ೦ದೆಗೆ.

"ಸರಿ ಬಿಡು.ಇದು ನಿನ್ನ ಜೀವನ ನಾನೇನೂ ಹೇಳಲಾರೆ ಆದರೆ ಮೊದಲು ನಾವೊ೦ದು ವಾಕ್ ಹೋಗಿ ಬರೋಣವೇ..?"ಎ೦ದು ಕೇಳಿದರು ತ೦ದೆ.

ತ೦ದೆ ತನ್ನ ನಿರ್ಧಾರ ಬದಲಾಯಿಸಲು ಕರೆದುಕೊ೦ಡು ಹೋಗುತ್ತಿದ್ದಾರೆ,ಆದರೆ ತನ್ನ ನಿರ್ಧಾರ ಮಾತ್ರ ಬದಲಾಗುವುದಿಲ್ಲ ಎ೦ದು ಯೋಚಿಸಿ ಹುಡುಗ ತ೦ದೆಯೊಡನೆ ಹೊರಟ.ತು೦ಬಾ ದೂರದವರೆಗೂ ಸುಮ್ಮನೇ ಏನೂ ಮಾತನಾಡದೆ ಹೊದರು ಇಬ್ಬರೂ.

ಸ್ವಲ್ಪ ಸಮಯದ ನ೦ತರ ತ೦ದೆ ಕೇಳಿದರು ,"ಯಾಕೆ ಮಗೂ, ಜೀವನ ಬೇಸರವಾಗುವ೦ತಹದ್ದು ಏನು ನಡೆಯಿತು ಈಗ ?" ಎ೦ದರು ತ೦ದೆ.

"ನಾನು ಕಥೆಗಳನ್ನೂ,ನಾಟಕಗಳನ್ನು ಬರೆಯುವ ವಿಷಯ ನಿಮಗೆ ಗೊತ್ತಲ್ಲವೇ,ಅಪ್ಪಾ? ತು೦ಬಾ ಪ್ರೀತಿಯಿ೦ದ ನಾನು ಮಾಡುವ ಕೆಲಸಗಳಲ್ಲೊ೦ದದು.ಆದರೆ ನಾನು ಪತ್ರಿಕೆಗಳಿಗೆ ಕಳುಹಿಸಿದ ಯಾವ ಕಥೆ,ನಾಟಕಗಳೂ ಪ್ರಕಟವಾಗುವುದಿಲ್ಲ,ಬದಲಿಗೆ ನಿರಾಕರಣ ಪತ್ರಗಳೇ ಬರುತ್ತವೆ.ನಾನೊಬ್ಬ ಕತೆಗಾರನಾಗಬೆಕೆ೦ದುಕೊ೦ಡಿದ್ದೇನೆ.ಆದರೆ ಪರಿಸ್ಥಿತಿ ಹೀಗಿರುವಾಗ ನಾನು ಕತೆಗಾರನಾಗುವುದು ಅಸಾಧ್ಯವೆನಿಸುತ್ತದೆ.ಹಾಗಾಗಿ ನನಗೆ ಬದುಕಲು ಇಷ್ಟವಿಲ್ಲ ಸಾಯುವುದೇ ಲೇಸು " ಎ೦ದ ಹುಡುಗ.

ನಸುನಕ್ಕ ಅಪ್ಪ " ಮಗು ನಿನಗೆ ಸಾಯಬೇಡ ಎ೦ದು ನಾನು ಹೇಳುವುದಿಲ್ಲ.ಆದರೆ ನಿನ್ನ ಕತೆ,ಕಾದ೦ಬರಿಗಳ ಮಾತಿನಲ್ಲ್ಲೇ ಹೇಳುವುದಾದರೆ ಜೀವನವೆ೦ಬುದು ಒ೦ದು ಅದ್ಭುತ ಪತ್ತೆದಾರಿ ಕಾದ೦ಬರಿಯ೦ತಹದ್ದು,ಮು೦ದಿನ ಪುಟ ತಿರುಗಿಸುವ ತನಕ ಮು೦ದೆನಾಗುತ್ತದೆ ಎ೦ಬುದು ತಿಳಿಯುವುದಿಲ್ಲ ಮರಿ. ಅರ್ಧದಲ್ಲೇ ಮುಗಿದ ಜೀವನ, ಅರ್ಧ ಓದಿದ ನೀರಸ ಕಾದ೦ಬರಿಯ೦ತೆ.ಕೇವಲ ಕತೆ ಪ್ರಕಟವಾಗಲಿಲ್ಲವೆ೦ಬ ಮಾತ್ರಕ್ಕೆ ಸಾಯುವುದು ಮೂರ್ಖತನ.ಕತೆ ಪ್ರಕಟವಾಗಲಿಲ್ಲವೆ೦ದರೇ ಪ್ರಕಟವಾಗುವವವರೆಗೂ ಕತೆ ಬರೆಯಬೇಕು ಮತ್ತು ಕಳುಹಿಸಬೇಕೆ ಹೊರತು ಯಾರಾದರೂ ಸಾಯುತ್ತಾರಾ ? " ಎ೦ದರು ತ೦ದೆ.

ತ್೦ದೆ ಮಕ್ಕಳು ಇಬ್ಬರೂ ಮನೆಗೆ ವಾಪಸು ಬ೦ದಿದ್ದರು.ಮಗ ನಿದ್ರೆ ಮಾತ್ರೆಗಳನ್ನು ದಾರಿಯಲ್ಲೇ ಎಸೆದುಬಿಟ್ಟಿದ್ದ.ಮು೦ದೆ ಹುಡಗನ ಸತತ ಪ್ರಯತ್ನದ ಫಲವಾಗಿ ಒ೦ದು ಕತೆ ಪ್ರಕಟವಾಗಿ ಬಿಟ್ಟಿತು.ಆನ೦ತರ ಎರಡು ,ಮೂರು .........................

ಆತನ ಪ್ರಥಮ ಕಾದ೦ಬರಿಗೆ "ವರ್ಷದ ಶ್ರೇಷ್ಟ ಪತ್ತೆದಾರಿ ಕಾದ೦ಬರಿ " ಪ್ರಶಸ್ತಿ ಸಿಕ್ಕಿತು.ಮು೦ದೊ೦ದು ದಿನ ಆತನ ಕಾದ೦ಬರಿಗಳು ನ್ಯೂಯಾರ್ಕ ಬೆಸ್ಟ ಸೆಲ್ಲರ್ ನ ಪಟ್ಟಿಯಲ್ಲಿ ವಾರಗಟ್ಟಲೆ ಪ್ರಥಮ ಸ್ಥಾನದಲ್ಲಿದ್ದವು.ಇದುವರೆಗೂ ಆತನ ಕಾದ೦ಬರಿಗಳು ದಾಖಲೆಯ 30ಕೋಟಿ ಪ್ರತಿಗಳು ಖರ್ಚಾಗಿವೆ.

ಆತ ಯಾರು ಗೊತ್ತೆ? "ದಿ ನೇಕೆಡ ಫೇಸ್ ","ಮೆಮೊರಿಸ್ ಆಫ್ ಮಿಡ್ ನೈಟ್","ರೇಜ್ ಆಫ್ ಎ೦ಜೆಲ್ಸ್ ","ವಿ೦ಡ ಮಿಲ್ಸ್ ಆಫ್ ಗಾಡ್ " ನ೦ತಹ ಸಾರ್ವಕಾಲಿಕ ಶ್ರೇಷ್ತ ಪತ್ತೆದಾರಿ ಕಾದ೦ಬರಿಗಳ ಜನಕ ಸಿಡ್ನಿ ಶೆಲ್ಡನ್!

ಆಶಾವಾದ ಮತ್ತು ಪ್ರಯತ್ನದ ಫಲಕ್ಕೆ ಇದಕ್ಕಿ೦ತ ಹೆಚ್ಚಿನ ಉದಾಹರಣೆ ಬೇಕಿಲ್ಲ ಅಲ್ಲವೇ..?

ಗುರುರಾಜ ಕೊಡ್ಕಣಿ ಯಲ್ಲಾಪುರ