ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ...
ಮೊನ್ನೆ ಸಂಜೆ ಏಳು ಗಂಟೆಯ ಸಮಯ ಮುಂಬೈಯ ಸ್ನೇಹಿತರೋರ್ವರಿಂದ ದೂರವಾಣಿ ಕರೆ ಬಂತು. ನಾನು ನನ್ನ ಕಚೇರಿಯಲ್ಲಿ ಕಂಪೂಟರ್ ಮುಂದೆ ಕುಳಿತು ಕೆಲಸದಲ್ಲಿ ಮಗ್ನನಾಗಿದ್ದೆ. ಪೋನ್ ರಿಸೀವ್ ಮಾಡಿದೆ.
“ಹಲೋ..ವಕೀಲ್ರೆ ಎಲ್ಲಿದ್ದೀರಿ?!”
“ನಾನು ಆಫೀಸಲ್ಲಿದ್ದೇನೆ. ನೀವು?”
“ನಾನು ಇವತ್ತು ಬೆಳಿಗೆ ಊರಿಗೆ ಬಂದೆ. ನಾಳೆ ಬೆಳಿಗ್ಗೆ ನಮ್ಮ ಮನೆಯಲ್ಲಿ ಸಣ್ಣದೊಂದು ಪೂಜೆ ಇಟ್ಟುಕೊಂಡಿದ್ದೇವೆ. ನೀವು ಬರ್ಬೇಕು! ಹಾಗೆ ನಿಮ್ಮನ್ನು ಇನ್ವೈಟ್ ಮಾಡುವಾಂತ ಫೋನ್ ಮಾಡಿದೆ”
“ಭಯಂಕರ ಮಾರ್ರೆ!! ಇವತ್ತು ಬೆಳಿಗ್ಗೆ ಬಂದು, ನಾಳೆ ಪೂಜೆ! ಎಂತ ಪೂಜೆ ಮಾರ್ರೆ?!! ಅಷ್ಟು ಗಡಿಬಿಡಿಯಲ್ಲಿ?! ಮತ್ತೆ ನಾಳೆ ಸಂಜೆಯೇ ಬೊಂಬಾಯಿಗೆ ವಾಪಾಸಾ?!” ಅಂತ ನಗುತ್ತಲೇ ಕೇಳಿದೆ.
“ಸುಮ್ನೆ ಹೀಗೆ ಒಂದು ಸತ್ಯನಾರಾಯಣ ದೇವರ ಪೂಜೆ ಮಾಡಿ ಎಲ್ಲರೂ ಒಟ್ಟಿಗೆ ಊಟ ಮಾಡ್ವಾಂತ. ನಿಮ್ಮನ್ನೊಂದು ಬಿಡ್ಲಿಕ್ಕಾಕ್ತದಾ ಮಾರ್ರೆ?!!”
“ಛೆ! ನಾಳೆ ಪೂಜೆ ಇಟ್ಕೊಂಡು ಇವತ್ತು ಈ ಹೊತ್ತಲ್ಲಿ ಹೇಳುದಾ? ನಾನು ನಾಳೆ ಕೋರ್ಟಿಗೆ ಹೋಗುದು ಬೇಡ್ವಾ? ಎಂತ ಕಥೆ ನಿಮ್ದು?!”
“ನೀವು ಬೆಳಿಗ್ಗೆ ಕೋರ್ಟ್ ಕೆಲ್ಸ ಮುಗ್ಸಿ ಡೈರೆಕ್ಟ್ ಊಟಕ್ಕೇ ಬಂದುಬಿಡಿ”.
“ನಾಳೆ ಕೋರ್ಟ್ ತುಂಬಾ ಬ್ಯೂಸೀ ಇದೆ ಮಾರಾಯ್ರೆ. ಸಾಧ್ಯವೇ ಇಲ್ಲ.”
“ನೀವು ಬಂದ ತಕ್ಷಣ ಊಟ ಹಾಕ್ಸಿ ಕಳ್ಸಿಬಿಡ್ತೇವೆ. ತಪ್ಪಿಸ್ಕೊಳ್ಬೇಡಿ. ಪ್ಲೀಸ್.”
“ಆಯ್ತು ನೋಡ್ವಾ ಏನೆಲ್ಲಾ ಆಗ್ತದೆ ಅಂತ. ಅಂತೂ ನೀವು ನಂಗೋಸ್ಕರ ಕಾಯುದು ಬೇಡ ಆಯ್ತಾ” ಅಂತ ಹೇಳಿ ಸಂಭಾಷಣೆ ಅಂತ್ಯ ಮಾಡಿದೆ.
ನಾನು ನಿನ್ನೆ ಬೆಳಗ್ಗಿನ ಕೋರ್ಟ್ ಕಲಾಪ ಮುಗಿಸಿ ಕೋರ್ಟಿನಿಂದ ಹೊರಗೆ ಬರುವಾಗ ಅಪರಾಹ್ನ ಗಂಟೆ 2.10. ಫೋನ್ ಸೈಲೆಂಟ್ ಇದ್ದುದರಿಂದ ಯಾರದ್ದಾದ್ರೂ ಮಿಸ್ಡ್ ಕಾಲ್ ಇದೆಯಾ ನೋಡಿದೆ. ಒಂದೆರಡು ಇತ್ತು. ಆದರೆ ಆ ಸ್ನೇಹಿತನ ಮಿಸ್ಡ್ ಕಾಲ್ ಇರಲಿಲ್ಲ.
ಆಮೇಲೆ ಮತ್ತೆ 2.45ಕ್ಕೆ ಪುನಃ ಕೋರ್ಟ್ ಕೇಸ್ ಇದ್ದುದರಿಂದ ಕೋರ್ಟ್ ಪಕ್ಕದ ಹೋಟೇಲಿನಲ್ಲೇ ಮಧ್ಯಾಹ್ನದ ಊಟ ಪೂರೈಸಿದೆ. ಮತ್ತೆ ಕೋರ್ಟಿಗೆ ಹೋಗಿ ನನ್ನ ಕೆಲಸ ಮುಗಿಸಿ ಮತ್ತೆ ಕೋರ್ಟಿನಿಂದ ಹೊರಗೆ ಬರುವಾಗ ಸಂಜೆ ಗಂಟೆ 5.15.
ಕೋರ್ಟಿನಿಂದ ಹೊರಗೆ ಬಂದವ ಒಂದು ಕ್ಷಣ ಫೋನ್ ನೋಡಿದೆ. ಮಿಸ್ಡ್ ಕಾಲ್ ಇರಲಿಲ್ಲ. ಯೋಚಿಸಿದೆ. ನೇರವಾಗಿ ಸ್ನೇಹಿತನ ಮನೆಗೆ ಹೋಗಿ ಪೂಜೆಯ ಪ್ರಸಾದವನ್ನಾದರು ಪಡೆದು ಬರುವ ಅಂತ ನಿರ್ಣಯಿಸಿ ಸ್ನೇಹಿತನಿಗೆ ಫೋನಾಯಿಸಿದೆ.
ರಿಂಗ್ ಆಯ್ತು. ರಿಂಗಾಯ್ತು,,….ರಿಂಗಾಯ್ತು….ರಿಸೀವ್ ಆಗಲಿಲ್ಲ. ಆಮೇಲೆ ಹಲವಾರು ಬಾರಿ ಫೋನ್ ಮಾಡಿದೆ ರಿಸೀವ್ ಆಗಲೇ ಇಲ್ಲ. ಇವತ್ತೂ ಕೂಡಾ ಪೋನ್ ಮಾಡಿದ್ದೇನೆ. ಅವರ ಫೋನು ವಿಕ್ರಮ್ ರೋವರ್ ತರಹ ಯಾವುದೇ ರೆಸ್ಪಾಂಡ್ ಇಲ್ಲ. ಬಹುಶಃ ಆಸಾಮಿ ಮುಂಬೈಗೆ ವಾಪಾಸಾಗಿರಬೇಕೇನೋ!!!
ಈಗ ನೀವೇ ಹೇಳಿ ಸ್ನೇಹಿತರೆ. ಏನೋ ಪ್ರೀತಿಯಿಂದ ಕರೆದಿದ್ದಾರೆ ಅಂತ ನಮ್ಮೆಲ್ಲಾ ಅಗತ್ಯ ಕೆಲಸಗಳನ್ನು ಬದಿಗೊತ್ತಿ ಇಂತಹ ಬೇಜವಾಬ್ದಾರಿಯ ಸ್ನೇಹಿತರ ಮನೆಗೆ ಹೋಗಬೇಕಾ?! ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!
-ಮೌನಮುಖಿ- (ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)
ಚಿತ್ರ ಕೃಪೆ: ಇಂಟರ್ನೆಟ್ ತಾಣ