ಜೀವನಾವಶ್ಯಕತೆ ಮತ್ತು ದೈಹಿಕ ವಾಂಛೆಗಳು...
ಊಟ, ಬಟ್ಟೆ, ವಸತಿ ಸಾಮಾನ್ಯ ಅವಶ್ಯಕತೆಗಳು. ಶಿಕ್ಷಣ, ಉದ್ಯೋಗ, ಕುಟುಂಬ ಮತ್ತಷ್ಟು ಪೂರಕ ನಿರೀಕ್ಷೆಗಳು, ಪ್ರೀತಿ, ಪ್ರಣಯ, ರುಚಿ ಸಾಮಾನ್ಯ ದೈಹಿಕ ಬೇಡಿಕೆಗಳು. ಹಣ ಅಧಿಕಾರ ಪ್ರಚಾರ ಮತ್ತಷ್ಟು ಪೂರಕ ನಿರೀಕ್ಷೆಗಳು. ಈ ಅಂಶಗಳ ಮೇಲೆ ಮನುಷ್ಯ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದರ ಮೇಲೆ ಆತನ ವೈಯಕ್ತಿಕ ಮತ್ತು ಸಾಮಾಜಿಕ ವ್ಯಕ್ತಿತ್ವವನ್ನು ಅಳೆಯಬಹುದು.
ಇದೊಂದು ಅತ್ಯಂತ ಸಂಕೀರ್ಣ ಮತ್ತು ಸಂಘರ್ಷಮಯ ವಿಷಯ. ಆಧುನಿಕ ಸಮಾಜದಲ್ಲಿ ಇವುಗಳ ನಿಯಂತ್ರಣವೇ ಬಹುದೊಡ್ಡ ಸಮಸ್ಯೆಯಾಗಿದೆ. ಕೆಲವರಿಗೆ ಇವುಗಳ ಕೊರತೆ ತುಂಬಾ ಇರುತ್ತದೆ ಮತ್ತೆ ಹಲವರಿಗೆ ಇದು ಅತಿ ಎನಿಸುವಷ್ಟು ಪೂರೈಕೆಯಾಗುತ್ತದೆ.
ವಿಚಿತ್ರವೆಂದರೆ, ಜೀವನಾವಶ್ಯಕ ವಸ್ತುಗಳ ಕೊರತೆ ಇರುವಾಗ ಮನುಷ್ಯ ಸಾಮಾನ್ಯವಾಗಿ ಹೆಚ್ಚು ಮಾನವೀಯವಾಗಿ ದೈಹಿಕ ವಾಂಛೆಗಳ ಮೇಲೆ ನಿಯಂತ್ರಣ ಸಾಧಿಸಿರುತ್ತಾನೆ. ಅದರ ಪೂರೈಕೆ ಜಾಸ್ತಿಯಾದಾಗ ದೈಹಿಕ ವಾಂಛೆಗಳು ನಿಯಂತ್ರಣ ಮೀರಿ ಹೆಚ್ಚು ದುರಾಸೆ ಮತ್ತು ಅನಾಗರಿಕವಾಗಿ ವರ್ತಿಸುತ್ತಾನೆ.
ಜೀವನಾವಶ್ಯಕ ವಸ್ತುಗಳ ಕೊರತೆಯಿಂದ ನರಳುವ ವ್ಯಕ್ತಿಯೊಬ್ಬ ಸರ್ಕಾರಿ ನೌಕರನಾಗಿ ಸೇರಿದ ಮೇಲೆ ಅಥವಾ ಸಾಮಾನ್ಯ ವ್ಯಕ್ತಿಗೆ ಅನಿರೀಕ್ಷಿತವಾಗಿ ಯಾವುದೋ ಮೂಲದಿಂದ ಹಣ ಬರಲು ಪ್ರಾರಂಭವಾದ ಮೇಲೆ ಆತ ಅದರಲ್ಲಿ ತೃಪ್ತಿ ಹೊಂದದೆ ಅಲ್ಲಿಂದ ಆತನ ದೇಹ ಮತ್ತು ಮನಸ್ಸು ಭ್ರಷ್ಟವಾಗುತ್ತಾ ಸಾಗುವುದು ಸೋಜಿಗದ ಸಂಗತಿ.
ಜೀವನಾವಶ್ಯಕ ವಸ್ತುಗಳ ಅತಿಯಾದ ಪೂರೈಕೆ ದೈಹಿಕ ವಾಂಛೆಗಳು ಗರಿಗೆದರಿ ಮನುಷ್ಯ ಅನಾಗರಿಕವಾಗಿ ವರ್ತಿಸಲು ಕಾರಣವಾಗುತ್ತಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಜೀವನಾವಶ್ಯಕ ವಸ್ತುಗಳು ಮತ್ತು ದೈಹಿಕ ವಾಂಛೆಗಳ ನಡುವೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ನಾಗರಿಕ ಮನುಷ್ಯ ಪ್ರಯತ್ನಗಳನ್ನು ನಡೆಸಬೇಕಿದೆ. ಅತಿಯಾದ ಮೋಹಕ್ಕೂ ಬಲಿಯಾಗದೆ ಮತ್ತು ಎಲ್ಲವನ್ನೂ ತ್ಯಜಿಸುವ ಸನ್ಯಾಸತ್ವಕ್ಕೂ ಜಾರದೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಾನವೀಯ ಮೌಲ್ಯಗಳನ್ನು ನಾಶ ಮಾಡದೆ ಸುಖ ಸಂತೋಷ ನೆಮ್ಮದಿ ಪಡೆದುಕೊಳ್ಳುವ ಮಾರ್ಗ ಹುಡುಕಬೇಕಿದೆ.
ಒಂದು ವೇಳೆ ಇವುಗಳ ಮೇಲೆ ನಿಯಂತ್ರಣ ಸಾಧಿಸದಿದ್ದರೆ ವೈಯಕ್ತಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳಾಗುವುದು ನಿಶ್ಚಿತ. ಅದರ ಫಲವನ್ನು ನಾವು ಈಗ ಅನುಭವಿಸುತ್ತಿದ್ದೇವೆ. ಮೂಲಭೂತವಾಗಿ ಅರಿವಿನ ಕೊರತೆ, ನಂತರದಲ್ಲಿ ಸಂಕುಚಿತ ಮನೋಭಾವ, ತದನಂತರ ಆಕರ್ಷಣೆಯಿಂದ ಸೃಷ್ಟಿಯಾಗುವ ದುರಾಸೆ, ಬೇಜವಾಬ್ದಾರಿ ಮನುಷ್ಯ ಇವುಗಳ ಮೇಲೆ ನಿಯಂತ್ರಣ ಸಾಧಿಸದಿರಲು ಬಹುಮುಖ್ಯ ಕಾರಣವಾಗಿದೆ.
ಜೀವನಾವಶ್ಯಕ ವಸ್ತುಗಳು ಒಂದು ಮಿತಿಗೆ ಒಳಪಡಬೇಕು ಮತ್ತು ದೈಹಿಕ ವಾಂಛೆಗಳು ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಪೂರೈಸಿಕೊಳ್ಳಬೇಕು. ಆಗ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚು ನಾಗರಿಕವಾಗಿ ಜೀವಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಾವು ಮಾಡಬೇಕಾಗಿರುವುದು ಪ್ರಕೃತಿಯೊಂದಿಗಿನ ಒಡನಾಟ ಹೆಚ್ಚಿಸಿಕೊಳ್ಳುವುದು, ಎಲ್ಲವನ್ನೂ ಒಳಗೊಳ್ಳುವ ಸಮಗ್ರ ಚಿಂತನೆ ಮತ್ತು ದೃಷ್ಟಿಕೋನ ಬೆಳೆಸಿಕೊಳ್ಳುವುದು, ದೇಹ ಮತ್ತು ಮನಸ್ಸನ್ನು ಘರ್ಷಣೆಗೆ ಒಳಪಡಿಸುವುದು, ಸಾವು ಮತ್ತು ಸೋಲಿನ ಭೀತಿ ಕಡಿಮೆ ಮಾಡಿಕೊಳ್ಳುವುದು.
ಇದರಿಂದ ಬದುಕು ಹೆಚ್ಚು ಸಹನೀಯವಾಗುತ್ತದೆ. ನಿರಾಸೆ, ದ್ವೇಷ ಅಸೂಯೆಗಳು ನಮ್ಮಿಂದ ದೂರವಾಗುತ್ತದೆ. ನೆಮ್ಮದಿಯ ಮಟ್ಟ ಹೆಚ್ಚುತ್ತದೆ. ತಾಳ್ಮೆ ಸಾಧ್ಯವಾಗಿ ನಮ್ಮ ಪ್ರತಿಕ್ರಿಯೆಗಳು ಹೆಚ್ಚು ಪ್ರಬುದ್ದವಾಗುತ್ತದೆ. ದೀರ್ಘ ಮತ್ತು ನಿರಂತರ ನಡಿಗೆ, ಓದು, ಆಧ್ಯಯನ, ಚಿಂತನೆ ಜೀವನಾವಶ್ಯಕ ವಸ್ತುಗಳು ಮತ್ತು ದೈಹಿಕ ವಾಂಛೆಗಳು ನಮ್ಮ ನಿಯಂತ್ರಣಕ್ಕೆ ಬಂದು ಜೀವನದ ಕ್ಷಣಗಳು ಹೆಚ್ಚು ಸುಖಮಯವಾಗಲು ಕಾರಣವಾಗುತ್ತದೆ.
ಆಸೆಗಳು ನಿರಂತರ, ಆಕರ್ಷಣೆ ಅನಂತ, ಆಯಸ್ಸು ಮಾತ್ರ ಕೆಲವು ವರ್ಷಗಳು. ಹುಟ್ಟಿನಿಂದ ಬರುವ ಅನೇಕ ಸಂಕೋಲೆಗಳ ಬಂಧನದಿಂದ ಬಿಡಿಸಿಕೊಂಡು ಮಾನಸಿಕವಾಗಿ ಸ್ವತಂತ್ರವಾಗಿ ಬದುಕಲು ಪ್ರಯತ್ನಿಸೋಣ. ಎಲ್ಲವೂ ಬೇಕು ಮತ್ತು ಎಲ್ಲವೂ ಕ್ಷಣಿಕ.
ನಿಯಂತ್ರಣಕ್ಕೆ ಒಳಪಟ್ಟ ಜೀವನಾವಶ್ಯಕ ವಸ್ತುಗಳು ಮತ್ತು ದೈಹಿಕ ವಾಂಛೆಗಳು ನಿಜಕ್ಕೂ ಅದ್ಭುತ ಜೀವನಾನುಭವ ನೀಡುತ್ತದೆ. ವ್ಯಾವಹಾರಿಕ ಜಗತ್ತಿನಲ್ಲಿ ಕಳೆದು ಹೋಗುವ ಮುನ್ನ ಮತ್ತೊಮ್ಮೆ ಯೋಚಿಸಿ. ಪ್ರತಿ ಕ್ಷಣ ಬದುಕಿಗಾಗಿ ಹೋರಾಡುವ ಅನೇಕ ಬಡವರು, ಬದುಕು ಶ್ರೀಮಂತವಾದ ಮೇಲೆ ನೆಮ್ಮದಿಗಾಗಿ ಅಲೆದಾಡುವ ಕೆಲವರು, ಹೀಗೆ ಅನೇಕ ಆಯ್ಕೆಗಳ ನಡುವೆ ನಾವು ನೀವು....
- ಜ್ಞಾನ ಭಿಕ್ಷಾ ಪಾದಯಾತ್ರೆಯ 235 ನೆಯ ದಿನ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಿಂದ ಸುಮಾರು 15 ಕಿಲೋಮೀಟರ್ ದೂರದ ಸಾಣೇಕೆರೆ ಗ್ರಾಮದ ವೇದ ಅಂತರರಾಷ್ಟ್ರೀಯ ವಸತಿ ಶಾಲೆ ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಿತು.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರದಲ್ಲಿ ಸಾಣೇಕೆರೆ ಗ್ರಾಮದ ವೇದ ಅಂತರಾಷ್ಟ್ರೀಯ ವಸತಿ ಶಾಲೆಯ ಎದುರು ಲೇಖಕರು