ಜೀವನ ಛಲ
ಕವನ
ಕಡಲೊಡಲು ಒದರಿದರೆ ಬೆದರದೇ ಜನಜೀವ
ಕಡಲದಡ ತಡಬಡಿಸಿ ಕಡಲತಡಿ ಗಡಿಗೆಟ್ಟು
ಕಡಲಲೆಯೆ ಸಿಡಿದೆದ್ದು ನಗರಗಳೆ ನೀರೊಳಗೆ
ಧರೆಯೊಡಲ ಭುಗಿಲೆದ್ದು ಧಡಧಡನೆ ಕಂಪಿಸಲು
ಗಿರಿಗಳೇ ನಡುಗಿರಲು ಮನೆಮಾರು ಕುಸಿದಿರಲು
ಅರೆಘಳಿಗೆ ಭೂಕಂಪ ತಲೆಮಾರಿನಾತಂಕ
ಗರಬಡಿದು ಎದೆಯೊಡೆದು ಜನರೆಲ್ಲ ನಡುಗಿರಲು
ದಿನಕರನು ಬೇಸತ್ತು ಕಡಲೊಳಗೆ ಜಾರಿರಲು
ಬವಣೆಗಳ ನಿಶೆಯಡರಿ ನಿಟ್ಟುಸಿರೆ ಕವಿದಿರಲು
ಬಸವಳಿದ ಬಾಳಿನಲಿ ಅಳಿದುಳಿದ ಕಸುವಿನಲಿ
ಮಡಿದವರ ನೋವಿನಲಿ ನವಬಾಳ ಮುನ್ನುಡಿಯ
ಉಳಿದವರೆ ಬರೆಯುವರು ಜೀವನವ ಅರಳಿಸಲು
ಭರವಸೆಯ ಬೆಳಕಿನಲಿ ಅರಳುವಾ ಛಲವಿರಲಿ
ಅಗ್ನಿಹಂಸದ ತೆರದಿ ಬಿಡದೆ ಮೇಲೇಳುತಲಿ.