ಜೀವನ ಪುಸ್ತಕದ ಬದನೇಕಾಯಿ ಅಲ್ಲ...!

ಜೀವನ ಪುಸ್ತಕದ ಬದನೇಕಾಯಿ ಅಲ್ಲ...!

ಅಂದು 10ನೇ ತರಗತಿಯ ಫಲಿತಾಂಶದ ದಿನ ಗೋಪಾಲನಿಗೆ ಏನೋ ಆತಂಕ! ಶಾಲೆಯಲ್ಲಿ ನೋಟೀಸ್ ಬೋರ್ಡ್ ನೋಡಿದವನಿಗೆ ಒಂದು ಕ್ಷಣ ಎದೆ ಹೊಡೆದು ಹೋಗಿತ್ತು. ಇಂಗ್ಲಿಷ್, ಗಣಿತ 2 ಸಬ್ಜೆಕ್ಟ್ ಅಲ್ಲಿ 28 ಅಂಕ! ಫೇಲ್ ಆಗಿದ್ದ. ಶಾಲೆಯ ಬೇರೆ ಮಕ್ಕಳ ರಿಸಲ್ಟ್ ನೋಡಿದ. ಅರವಿಂದ, ಶ್ರೀಪಾದ, ವಾಣಿಶ್ರೀ 99% ಅಂಕ ಬಂದು ಜಿಲ್ಲೆಗೆ ಮೊದಲ ಸ್ಥಾನ ಹಂಚಿ ಕೊಂಡಿದ್ದಾರೆ, ಉಳಿದವರೆಲ್ಲರದ್ದು 90% ಗೆ ಅಧಿಕ ಅಂಕ ಇತ್ತು. ಫೇಲ್ ಆಗಿದ್ದು ತಾನು ಮಾತ್ರ...

ಶಾಲೆ ಇಂದ ಮನೆಯ ತನಕ ಬರೋವರೆಗೆ 50 ಜನ ಆಡಿ ಕೊಂಡರು ಗೋಪಾಲನ್ನ, ಇನ್ನು ಮನೆಗೆ ಹೋಗುವುದರ ಬದಲು ಇಲ್ಲೇ ಬಾವಿಗೆ ಹಾರುವುದು ಎಂದು ಯೋಚಿಸಿದ. ಯಾಕೆಂದರೆ ಮನೆಯಲ್ಲಿ, ಶಾಲೆಯಲ್ಲಿ, ಅರವಿಂದ, ಶ್ರೀಪಾದ, ವಾಣಿಶ್ರೀ ಹೆಸರು ಹೇಳಿ ಹೇಳಿ ಹಂಗಿಸುವ ಮಂದಿ ಇರುವುದು ಸ್ಪಷ್ಟವಾಗಿ ಗೊತ್ತಿತ್ತು ಅವನಿಗೆ. ಆದರೂ ಧೈರ್ಯ ಮಾಡಿ ಮನೆಗೆ ಹೋದ.

ಅಪ್ಪ ಬೈದರು, ಅಮ್ಮ ಬೈದರು, ನೆರೆ ಹೊರೆಯವರು ಹಂಗಿಸಿದರು, ನೆಂಟರು ಅವಮಾನಿಸಿದರು. ಅವರ ಮಗ 90 %, ಇವರ ಮಗ 95% ಅವರ ಮಗಳು ನೋಡು ಇವರ ಮಗಳು ನೋಡು, ಆ ಶ್ರೀಪಾದ ನೋಡು ಅರವಿಂದ ನೋಡು ವಾಣಿಶ್ರೀ ನೋಡು ನೀನೊಬ್ಬ ಇದ್ದಿ ದಂಡ ಪಿಂಡ ಅವರೆಲ್ಲ ನಾಳೆ ಲಕ್ಷ ಲಕ್ಷ ಸಂಪಾದಿಸುತ್ತಾರೆ, ನೀನು ಅವರ ಮನೆಯ ವಾಚ್ ಮನ್ ಆಗ್ತಿ, ನೀನು ದನ ಮೇಯಿಸು, ಕೂಲಿ ಆಗು ದರಿದ್ರದವ. ಚುಚ್ಚು ಮಾತುಗಳು ಗೋಪಾಲನಿಗೆ ತುಂಬಾ ಚುಚ್ಚಿತ್ತು.

ಎಲ್ಲಕಿಂತ ಜಾಸ್ತಿ ಚುಚ್ಚಿದ್ದು ಅಂದು ಸಂಜೆ ಅಮ್ಮ ಆಡಿದ ಮಾತುಗಳು, ಅವನನ್ನು ಸಂಪೂರ್ಣ ಶೇಕ್ ಮಾಡಿ ಬಿಟ್ಟಿತ್ತು. ನೀನೊಬ್ಬ ನಮ್ಮ ಕುಟುಂಬದ ಮರ್ಯಾದೆ ತೆಗೆದಿ. ದರಿದ್ರದವ ಎಲ್ಲಾ ಆಡಿ ಕೊಳ್ಳುವಂತೆ ಮಾಡಿ ಬಿಟ್ಟಿ. ಹುಟ್ಟಿದಾಗಲೇ ಕತ್ತು ಒತ್ತಿ ಹಿಡಿದು ಸಾಯಿಸಿ ಬಿಟ್ಟಿದ್ದರೆ ಇಂದು ಇಷ್ಟೊಂದು ಅವಮಾನ ಪಡಬೇಕಾಗಿರಲಿಲ್ಲ ಎಂದಿದ್ದಳು ಅಮ್ಮ. ಗೋಪಾಲ ರಾತ್ರಿಯೇ ಯಾರಿಗೂ ಹೇಳದೆ ಮನೆ ಬಿಟ್ಟು. ಅದೇ ಅಂಗಿ ಚಡ್ಡಿಯಲ್ಲಿ ಓಡಿ ಹೋಗಿದ್ದ ಬೊಂಬಾಯಿಗೆ. ಮೊದಲು ಹೋಟೆಲ್ ಒಂದರಲ್ಲಿ ಲೋಟ ತೊಳೆಯಲು ಶುರು ಮಾಡಿದ. 5 ವರ್ಷದಲ್ಲಿ ಹೋಟೆಲ್ ಕ್ಷೇತ್ರದ ಎಲ್ಲಾ ಪಟ್ಟುಗಳನ್ನು ಒಂದೊಂದಾಗಿ ಕಲಿತ, ಒಂದು ಬಾಡಿಗೆ ಕಟ್ಟಡದಲ್ಲಿ ಸ್ವಂತ ಹೋಟೆಲ್ ತೆರೆದೇ ಬಿಟ್ಟ, ಆತನಿಗೆ ಹೋಟೆಲಿನ ಎಲ್ಲಾ ಕೆಲಸ ಗೊತ್ತಿತ್ತು. ಕ್ಯಾಶ್ ಅಲ್ಲಿ, ಕಿಚನ್ ಅಲ್ಲಿ, ಕೊನೆಗೆ ಲೋಟ ತೊಳೆಯುವುದು ಎಲ್ಲಕ್ಕೂ ಸೈ ಎಂದುಬಿಟ್ಟ.  ಕೆಲವೇ ಸಮಯದಲ್ಲಿ ಹೋಟೆಲ್ ಲಾಭದ ಮುಖನೋಡಿತು, ಹೋಟೆಲ್ ಉದ್ಯಮ ಅವನ ಕೈಗೆ ಹತ್ತಿತ್ತು.

ಮತ್ತೆ ಹಿಂತಿರುಗಿ ನೋಡಲಿಲ್ಲ ಗೋಪಾಲ, ಸ್ವಂತ ಹೋಟೆಲ್ ಮಾಡಿದ, ವರ್ಷಕ್ಕೆ 4, 5 ಹೋಟೆಲ್ ಪ್ರಾರಂಭ ಮಾಡತೊಡಗಿದ, 20 ವರ್ಷದೊಳಗೆ ಅವನ ಬಳಿ 17 ಹೋಟೆಲ್ ಗಳಿದ್ದವು. ಕೋಟಿ ಗಟ್ಟಲೆ ಹಣ ಸಂಪಾದಿಸಿದ್ದ, 42 ವರ್ಷದ ಗೋಪಾಲ ಇಂದು ಊರಲ್ಲಿ ಗೋಪಾಲಣ್ಣ ಆಗಿದ್ದಾನೆ.. ಊರಿನ ದೇವಸ್ಥಾನವೊಂದು ಜೀರ್ಣೋದ್ದಾರ ಗೊಂಡಾಗ 25 ಲಕ್ಷ ಡೊನೇಷನ್ ಕೊಟ್ಟಿದ್ದಕ್ಕೆ ಅಂದು ದೇವಾಲಯ ಕಮಿಟಿಯವರು ಗೋಪಾಲಣ್ಣನಿಗೆ ಸನ್ಮಾನ ವೊಂದನ್ನು ಆಯೋಜಿಸಿದ್ದರು.

20 ವರ್ಷದ ನಂತರ ಮೊದಲ ಬಾರಿ ಹುಟ್ಟೂರಿಗೆ ಬಂದ. ಅಂದು ಸೋತು ಪಲಾಯನ ಮಾಡಿದ್ದ ಅದೇ ಊರಿಗೆ ಜಯಶಾಲಿಯಾಗಿ ಬಂದಿದ್ದ ಗೋಪಾಲ. ಗೋಪಾಲನಾಗಿ ಹೋದವ ಗೋಪಾಲಣ್ಣನಾಗಿ ಬಂದ. ಅವಮಾನ ಆದ ಜಾಗದಲ್ಲೇ ಸನ್ಮಾನ ಸ್ವೀಕರಿಸಲು ಬಂದಿದ್ದ. ಸಭೆ ನಡೆಯುತಿತ್ತು ಸುತ್ತ ಅದೇ ಜನರಿದ್ದರು ಅಂದು ಅವಮಾನಿಸಿದ ಅದೇ ಜನ! ನೆಂಟರು, ಊರವರು ಎಲ್ಲರೂ ಇಂದು ಹೋಗಳುತಿದ್ದರು.

ದೇವಸ್ಥಾನದ ಕಮಿಟಿ ಸದಸ್ಯರಲ್ಲೊಬ್ಬರಾದ ಅದೇ ಅಧ್ಯಾಪಕರು ಗೋಪಾಲಣ್ಣ ಚಿನ್ನದಂತ ಮನುಷ್ಯ ಹಾಗೆ ಹೀಗೆ, ಎಂದು ಹೊಗಳಿ ಅಟ್ಟಕ್ಕೆ ಏರಿಸುತ್ತಿದ್ದರು. ಅಂದು ನನ್ನಿಂದ ಶಾಲೆಯ ಸೆಂಟ್ ಪರ್ಸೆಂಟ್ ತಪ್ಪಿತು ಎಂದು ಸಿಟ್ಟಲ್ಲಿ ನೀನ್ ಎಲ್ಲಾದ್ರೂ ಹೋಗಿ ಎಮ್ಮೆ ಸಾಕು ವೇಸ್ಟ್ ಬಾಡಿ ಎಂದಿದ್ದು ಅವರೇ. ಒಮ್ಮೆ ನೆನಪಾಯಿತು ಗೋಪಾಲರಿಗೆ.

ಇನ್ನು ಸಭೆ ನೋಡಿದ ಎದುರಲ್ಲಿ ಕೂತಿದ್ದ ತಂದೆ ಪಕ್ಕ ಕೂತಿದ್ದವನಲ್ಲಿ ಹೇಳುತಿದ್ದರು ನನ್ನ ಮಗ, ಛಲಗಾರ ಹಾಗೆ ಹೀಗೆ ಎಂದು ನಾಳೆ ವಾಚ್ ಮನ್ ಆಗುತ್ತೀಯ ಎಂದ ಅವರ ಮಾತುಗಳು ನೆನಪಾದವು.

ಮತ್ತೆ ದೂರದಲ್ಲಿ ಕೂತಿದ್ದ ತಾಯಿ ಹೇಳುತಿದ್ದರು. ನನ್ನ ಮಗ ನಮ್ಮ ಕುಟುಂಬಕ್ಕೆ ಒಂದು ಮಾಣಿಕ್ಯ ನಮ್ಮ ಕುಟುಂಬದಲ್ಲಿ ಯಾರೂ ಮಾಡದ ಸಾಧನೆ ಮಾಡಿದ್ದಾನೆ ಇಂತಹ ಮಗನನ್ನು ಹೆತ್ತದ್ದು ನನ್ನ ಪುಣ್ಯ ಎನ್ನುತಿದ್ದರು. ನಮ್ಮ ಕುಟುಂಬದ ಮರ್ಯಾದೆ ತೆಗೆದೆ, ಮೊದಲೇ ಗೊತ್ತಿದ್ದರೆ ಹುಟ್ಟಿದ ತಕ್ಷಣ ಕತ್ತು ಹಿಚುಕಿ ಸಾಯಿಸುತ್ತಿದ್ದೆ ಅಂದ ಅದೇ ಬಾಯಲ್ಲಿ ಅಮ್ಮ ಇಂದು ಹೊಗಳುತ್ತಿದ್ದಾರೆ. ಗೋಪಾಲಣ್ಣಗೆ ಆಶ್ಚರ್ಯವಾಗಿತ್ತು ದೊಡ್ಡ ಹೂವಿನ ಮಾಲೆ ಹಾಕಿದ್ದರು. ಅಲ್ಲಿಯೂ ಗೋಪಾಲಣ್ಣಂಗೆ ಆ 3 ಜನರನ್ನು ನೋಡಬೇಕಿತ್ತು ಅಂದು ನನ್ನ ಪಾಲಿಗೆ ವಿಲನ್ ಆಗಿದ್ದ 99% ಅರವಿಂದ, ಶ್ರೀಪಾದ, ಹಾಗು ವಾಣಿಶ್ರೀ.

ಸಭೆಯಲ್ಲಿ ಹುಡುಕಿದ ಅಲ್ಲೆಲ್ಲೂ ಇರಲಿಲ್ಲ, ಅಲ್ಲೇ ಇದ್ದ ಅಧ್ಯಾಪಕರಲ್ಲಿ ಕೇಳಿದ ಸರ್, ಆ 3 ಜನ ಎಲ್ಲಿ ಎಂದು..

ವಾಣಿಶ್ರೀ ಮದುವೆ ಆದ ಕೂಡಲೇ ವಿದ್ಯಾಭ್ಯಾಸ ಬಿಟ್ಟು ಬಿಟ್ಟಳು ಗಂಡ ಯಾವುದೊ ಕಂಪೆನಿಯಲ್ಲಿ ಗುಮಸ್ತ ಅಂತೆ ದೇವಸ್ಥಾನಕ್ಕೆ 1000 ರೂ ಕೊಟ್ಟಿದ್ದಾಳೆ, ಇನ್ನು ಶ್ರೀಪಾದ ಸಾಫ್ಟವೆರ್ ಇಂಜಿನಿಯರ್ ಮೊನ್ನೆ ಲಾಕ್ ಡೌನ್ ಅಲ್ಲಿ ಕೆಲಸ ಕಳಕೊಂಡು ಊರಿಗೆ ಬಂದಿದ್ದ .ಕೆಲಸ ಇಲ್ಲದ ಅವನತ್ರ ಹಣ ಕೇಳೋಕೆ ಮನಸ್ಸಾಗ್ಲಿಲ್ಲ, ಇನ್ನು ಅರವಿಂದ ಡಾಕ್ಟರ್ ಆಗಿ ಒಂದು ದೊಡ್ಡ ಆಸ್ಪತ್ರೆಯಲ್ಲಿ ಒಂದೆರಡು ಲಕ್ಷಕ್ಕೆ ದುಡಿಯುತ್ತಿದ್ದಾನೆ ಮೊನ್ನೆ 10,000 ಕೊಟ್ಟ ಎಂದಾಗ ಗೋಪಾಲನ ಕಣ್ಣಲ್ಲಿ ನೀರಿತ್ತು.

ಜೀವನ ಪುಸ್ತಕದ ಬದನೆ ಕಾಯಿಯಲ್ಲ.... ಸಾಧನೆಗೆ ಅಂಕದ ಅವಶ್ಯಕತೆ ಇಲ್ಲ ಎಂದು ಅರಿವಾಗಿತ್ತು... ಅವನಿಗೆ.. ಗೋಪಾಲನಾಗಿ ಮನೆ ಬಿಟ್ಟವ ಗೋಪಾಲಣ್ಣನ್ನಾಗಿ ಮನೆಗೆ ಮರಳಿ ಬಂದಿದ್ದ. ಎಷ್ಟು ಸತ್ಯ ನೋಡಿ 10 ನೆಯ ತರಗತಿ ಮಕ್ಕಳ ಶೈಕ್ಷಣಿಕ ಜೀವನದ ಅತೀಮುಖ್ಯ ಕಾಲಘಟ್ಟ ಒಪ್ಪೋಣ. ಆದರೆ ಮಕ್ಕಳೆಂದರೆ ಕೇವಲ ಅಂಕ ಗಳಿಸುವ ಯಂತ್ರ ಎಂಬಂತೆ ಬಿಂಬಿಸುವ ಸಮಾಜ, ಶಾಲೆಗಳು, ಹೆತ್ತವರು ಕಡಿಮೆ ಅಂಕ ಬಂತೆoದರೆ  ಜೀವನವೇ ಮುಗಿಯಿತು ಎಂಬ ಅರ್ಥದಲ್ಲಿ ಅ ಎಳೆಯ ಮಕ್ಕಳನ್ನು ಅವಮಾನಿಸುವ, ಹಂಗಿಸುವ ನಾವು ನೀವು ಮಾಡುತ್ತಿರುವುದು ಅದೆಷ್ಟು ಸರಿ?

ಯೋಚನೆ ಮಾಡುವ ಶಕ್ತಿ ಇಲ್ಲದ ಆ ಎಳೆ ವಯಸ್ಸಲ್ಲಿ ಮಕ್ಕಳು ತಪ್ಪು ಹೆಜ್ಜೆ ಇಟ್ಟರೆ ಅದಕ್ಕೆ ಹೊಣೆ ಯಾರು? ಅಂಕ ಎನ್ನುವುದು ಕೇವಲ ಪರೀಕ್ಷೆಗಷ್ಟೇ. ಆದರೆ ಕಲಿಕೆ ನಿರಂತರ ಜೀವನದ ಪ್ರತಿ ದಿನ ಒಂದಲ್ಲ ಒಂದು ಕಲಿಯುತ್ತಿದ್ದರೆ, ಹೊಸತನ್ನು ಕಲಿಯುವ ಪ್ರವೃತ್ತಿ ರೂಪುಗೊಂಡರೆ, ಸೋತಾಗ ಎದ್ದು ನಿಲ್ಲುವ ಮತ್ತೆ ಉತ್ಸಾಹದಿಂದ ಬದುಕುವ ಕಲೆ ಕಲಿಸಿ ಕೊಟ್ಟರೆ ಅದರಿಂದ ಉತ್ತಮ ಶಿಕ್ಷಣ ಬೇರೆ ಇಲ್ಲ ಅಲ್ಲವೇ? ಎಸ್. ಎಸ್. ಎಲ್. ಸಿ ಯಲ್ಲಿ ಕಡಿಮೆ ಅಂಕ ಬಂದ ಮಕ್ಕಳೇ ಹೆದರದಿರಿ..ಧೈರ್ಯ ಇರಲಿ ನೆನಪಿಡಿ.

(ಅಂಕದಲ್ಲಿ ಸೋತ ವಿದ್ಯಾರ್ಥಿಗಳಿಗೋಸ್ಕರ ಈ ಲೇಖನ) 

-(ವಾಟ್ಸಾಪ್ ಮೂಲಕ ಸಂಗ್ರಹಿತ) ಹಾ ಮ ಸತೀಶ್, ಬೆಂಗಳೂರು

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ

Comments

Submitted by addoor Wed, 06/01/2022 - 23:39

ಇದು ವಾಟ್ಸಾಪಿನಲ್ಲಿ ಇತ್ತೀಚೆಗೆ ಪ್ರಕಟವಾದ ಲೇಖನದ ಯಥಾಪ್ರತಿ. ಹೀಗೆ, ಮೂಲ ಲೇಖಕರ ಹೆಸರನ್ನೇ ನಮೂದಿಸದೆ ಬೇರಾರದೋ ಲೇಖನವನ್ನು “ಸಂಪದ"ದಲ್ಲಿ ನಮ್ಮ ಹೆಸರಿನಲ್ಲಿ ಪ್ರಕಟಿಸುವುದು ಯಾಕೆ? ಕಾನೂನಿನ ಭಾಷೆಯಲ್ಲಿ ಈ ಪ್ರವೃತ್ತಿಗೆ ಏನೆನ್ನಲಾಗುತ್ತದೆ?

ಮೂಲ ಲೇಖನದ ವಿಷಯ ಚೆನ್ನಾಗಿದೆ ಎಂದಾದರೆ, ಅದರ ಪ್ರೇರಣೆಯಿಂದ ಹೊಸದಾಗಿ ಲೇಖನ ಬರೆಯಬಹುದಲ್ಲವೇ?

Submitted by JAYARAM NAVAGRAMA Thu, 06/30/2022 - 07:18

In reply to by addoor

ವಾಟ್ಸ್ಯಾಪ್ ಮೂಲಕ ಬಂದದ್ದಾದರೆ ಅದು ಯಾರ ಸ್ವತ್ತೂ ಆಗಲ್ಲ. ಆದ ಕಾರಣ ಅದನ್ನು ಯಾರೂ ತಮ್ಮ ಕೃತಿ ಎಂಬಂತೆ ಪ್ರಕಟಿಸಬಾರದು. ಅದು ಭಿಕ್ಷಾಟನೆಗಿಂತ ಕೀಳು