ಜೀವವೈವಿಧ್ಯಗಳಿಗೆ ಉರುಳಾಗುತ್ತಿರುವ ಮುಚ್ಚಲು ಬೆಳೆ
ಕೃಷಿಕರ ಮನಸ್ಥಿತಿಯೇ ಹೀಗೆ. ಒಂದು ಬೇಕೆಂದು ನಾವು ಹಲವನ್ನು ಕಳೆದುಕೊಳ್ಳುತ್ತೇವೆ. ನಾವು ಒಂದರ ಆಶೆಯಲ್ಲಿ ಮತ್ತೊಂದನ್ನು ನಾಶ ಮಾಡುತ್ತಿದ್ದೇವೆ. ಕೃಷಿ ಮಾಡಬೇಕು, ಆದರೆ ಅದರೊಂದಿಗೆ ಸ್ವಲ್ಪವಾದರೂ ವಿವೇಕವೂ ಬೇಕು ಎಂಬುದಾಗಿ ನಿಷ್ಟುರವಾಗಿ ಹೇಳಲೇ ಬೇಕಾಗುತ್ತದೆ. ಏಕೆಂದರೆ ಬಹುತೇಕ ಕೃಷಿಕರು ಮಾಡುವುದೇ ಹಾಗೆ...!
ಬಹುತೇಕ ಕೃಷಿಕರಿಗೆ ಈಗ ಯಾವುದೇ ಬೆಳೆ ಬೆಳೆಸುವುದಿದ್ದರೂ ಕೋತಿಗಳ, ನವಿಲುಗಳ ಕಾಟದ್ದೇ ತಲೆಬಿಸಿ. ಕಾಡಿನಲ್ಲಿರಬೇಕಾದ ಕೋತಿಗಳು ನಾಡಿಗೆ ಬಂದಿವೆ. ಪ್ರಾಣಿ ಸಂಗ್ರಹಾಲಯದಲ್ಲಿ ಮಾತ್ರ ನೋಡಲು ಸಿಗುತ್ತಿದ್ದ ನವಿಲುಗಳು ಈಗ ಹಳ್ಳಿಗಳ ಪ್ರತೀ ಮನೆ ಬಾಗಿಲಿನಲ್ಲಿ ದಿನಾ ಸುಪ್ರಭಾತ ಕೂಗುತ್ತಿವೆ. ಹೆಬ್ಬಾವು, ಕಾಡು ಹಂದಿ, ಮುಳ್ಳು ಹಂದಿಗಳೂ ಹೆಚ್ಚಾಗಿವೆ. ಕೆಲವೆಡೆ ಆನೆ, ಕಾಡೆಮ್ಮೆಗಳೂ ದಿನನಿತ್ಯ ನೋಡಲು ಸಿಗುತ್ತಿವೆ.
ಕೋತಿ, ನವಿಲು, ಕಾಡೆಮ್ಮೆ, ಆನೆ ಯಂತ್ರಣಕ್ಕೆ ಕ್ರಮ ಕೈಗೊಳ್ಳಿ, ಎನ್ನುತ್ತೇವೆ. ಆದರೆ ಯಾವ ಕಾರಣಕ್ಕೆ ಅವು ನಮ್ಮ ಬಳಿ ಬಂದಿದೆ ಎಂದು ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಂಡದ್ದಿದೆಯೇ? ನಾವು ಯಾವಾಗಲೂ ಹೀಗೆಯೆ. ನಮ್ಮ ಹೊಲ, ನಮ್ಮ ಮನೆ ಸುರಕ್ಷಿತವಾಗಿದ್ದರಾಯಿತು , ನೆರೆಯವನು ಹೇಗಾದರೂ ಇರಲಿ ಎಂಬ ಮನೋಸ್ಥಿತಿಯವರು. ಈ ಮನೋಭಾವನೆಯ ಪರಿಣಾಮದಿಂದಲೇ ನಾವೆಲ್ಲರೂ ಕಷ್ಟ ಅನುಭವಿಸುವಂತಾಗಿದೆ.
ದಶಕದ ಹಿಂದೆ ಕಾಡಿನಂತೆ ಬೆಳೆಯುತ್ತಿದ್ದ ನಮ್ಮ ಸುತ್ತಮುತ್ತಲ ಸೊಪ್ಪಿನ ಬೆಟ್ಟ, ಕುಮ್ಕಿ ಜಮೀನುಗಳಲ್ಲಿ ಈಗ ನೈಸರ್ಗಿಕ ಮರಮಟ್ಟುಗಳಿಲ್ಲ. ಇರುವುದೆಲ್ಲಾ ರಬ್ಬರ್ ತೋಟ. ಇಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಹಲಸು, ಹೆಬ್ಬಲಸು, ಮುರುಗಲು, ಸಳ್ಳೆ, ಉಂಡೆ ಹುಳಿ, ಚಳ್ಳೆಹಣ್ಣು, ಅತ್ತಿ, ಆಲ, ಸಂಪೆ, ಮಾವು, ರೆಂಜೆ, ನೇರಳೆ, ಕುಂಟುನೇರಳೆ, ಮುಳ್ಳುಹಣ್ಣು, ಈಚಲು ಮುಂತಾದ ಮರಮಟ್ಟುಗಳು ಮಾಯವಾಗಿ ರಬ್ಬರ್ ತೋಟ ಬೆಳೆದಿದೆ. ಕಾಡು ಪ್ರಾಣಿಗಳಿಗೆ ಆಹಾರವಾಗಿದ್ದ ಹಣ್ಣು ಹಂಪಲುಗಳಿಲ್ಲದೆ ಅವು ಬದುಕುವ ಹಕ್ಕಿಗಾಗಿ ಆಹಾರ ಹುಡುಕಿ ಹೊಲಕ್ಕೆ ಬರುತ್ತಿವೆ. ನಾವು ಅದನ್ನು ವಿವಿಧ ಕ್ರಮಗಳಿಂದ ನಿಯಂತ್ರಿಸುತ್ತಿದ್ದೇವೆ. ಇದು ಮನುಷ್ಯರಾದ ನಮಗೆ ಮಾತ್ರ ಇಲ್ಲಿ ಬದುಕಿ ಮೆರೆಯುವ ಹಕ್ಕು. ಉಳಿದವುಗಳಿಗೆ ಇಲ್ಲ ಎಂಬಂತಾಗಿದೆ.
ಕೃಷಿಕರು ತಮ್ಮ ಜೀವನ ನಿರ್ವಹಣೆಗಾಗಿ ಕೃಷಿ ಮಾಡಬೇಕು, ಬೇರೆ ಬೇರೆ ಬೆಳೆಗಳನ್ನು ಬೆಳೆಸಿ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನೈಸರ್ಗಿಕವಾಗಿ ಬದುಕುವ ಹಕ್ಕು ಇರುವ ಎಲ್ಲಾ ಪ್ರಾಣಿ ಪಕ್ಷಿಗಳಿಗೂ, ಜೀವ ವೈವಿದ್ಯಗಳಿಗೂ ಬದುಕುವ ಹಕ್ಕನ್ನು ಬಿಟ್ಟುಕೊಡಬೇಕಲ್ಲವೇ? ಈಗ ರಬ್ಬರ್ ಬೆಳೆಸಿದ ಕಾರಣ ಸಾಕಷ್ಟು ಅರಣ್ಯ ನಾಶವಾಯಿತು. ಅದರ ಮಾತು ಬದಿಗಿರಲಿ. ಅಳಿದುಳಿದ ಜಾಗದಲ್ಲಿಯಾದರೂ ಜೀವ ಜಂತುಗಳು, ಸಸ್ಯ ವೈವಿಧ್ಯಗಳು ಬೇರೂರಲು ಆವಕಾಶ ಇದೆಯೇ? ಇಲ್ಲ. ಎಲ್ಲೆಲ್ಲೂ ಅವುಗಳಿಗೆ ದಿಗ್ಭಂಧನ. ರಬ್ಬರ್ ತೋಟ ಇರುವುದು ಹಳ್ಳಿಗಳಲ್ಲಿ. ಇಲ್ಲಿಯೇ ಸಸ್ಯ, ಜೀವ ವೈವಿಧ್ಯಗಳೂ ಇರುವುದು. ಇವುಗಳ ಬದುಕಿಗೇ ಸಂಚಕಾರವಾಗಿ ರಬ್ಬರ್ ತೋಟದ ಮುಚ್ಚಲು ಬೆಳೆ ಪರಿಣಮಿಸುತ್ತಿದೆ. ಅವರವರ ರಬ್ಬರ್ ತೋಟದಲ್ಲಿ ಹಬ್ಬುವುದಕ್ಕಿಂತ ಹೆಚ್ಚಾಗಿ ರಸ್ತೆ ಬದಿ, ಸಾರ್ವಜನಿಕ ಸ್ಥಳ ಮತ್ತು ಹಳ್ಳ ತೋಡುಗಳಲ್ಲಿ ತುಂಬಿಕೊಂಡು ಭಯ ಹುಟ್ಟಿಸುವಂತಾಗಿದೆ. ಸಂಚರಿಸುವಲ್ಲಿ ಸವೆತವಾಗುತ್ತಿರುವ ಕಾಲು ದಾರಿ- ರಸ್ತೆ ಬಿಟ್ಟರೆ ಉಳಿದೆಡೆಯಲ್ಲೆಲ್ಲಾ ಮುಚ್ಚಲು ಬೆಳೆಯ ಬಳ್ಳಿ ತುಂಬಿ ಹೋಗಿದೆ. ಕಾಲು ದಾರಿಯಲ್ಲೇನಾದರೂ ಮೂರು ನಾಲ್ಕು ದಿನ ನಡೆದಾಡದಿದ್ದರೆ ಅಲ್ಲಿಗೂ ಅದು ವ್ಯಾಪಿಸಿ ಮುಚ್ಚುತ್ತದೆ. ಅಂದರೆ ಈ ಬಳ್ಳಿ ದಿನಕ್ಕೆ ಏನಿಲ್ಲವೆಂದರೂ ೧/೨ ಅಡಿ ಬೆಳೆಯುತ್ತದೆ.
ರಬ್ಬರ್ ತೋಟಗಳಲ್ಲಿ ಮುಚ್ಚಲು ಬೆಳೆ ಪ್ರಸ್ತುತ ಇರಬಹುದು. ಇದರಿಂದ ಮಣ್ಣಿನ ಉಷ್ಣತೆ ಕಡಿಮೆಯಾಗಿ, ಹೊಲದಲ್ಲಿ ಅಳಿದುಳಿದು ಬೆಳೆಗೆ ಸ್ಪರ್ಧೆ ಮಾಡುವ ಗಿಡ ಗಂಟಿಗಳೆಂಬ ಕಳೆಗಳನ್ನು ಹತ್ತಿಕ್ಕಿ, ಅಂತರ್ಜಲ ವೃದ್ದಿಯಾಗಿ, ಸೂಕ್ಷ್ಮ ಜೀವಿಗಳ ಚಟುವಟಿಕೆ ಹೆಚ್ಚಿ, ನೀರಾವರಿ ಕ್ಷಾಮದಲ್ಲೂ ರಬ್ಬರ್ ಮರದಲ್ಲಿ ಉತ್ತಮ ಇಳುವರಿ ಪಡೆಯಬಹುದಂತೆ. ಅದಕ್ಕಾಗಿ ರಬ್ಬರ್ ಬೆಳೆಸುವಾಗ ಅಗತ್ಯವಾಗಿ ಮುಚ್ಚಲು ಬೆಳೆಗಳಾದ ಮುಕುನ ಇಲ್ಲವೇ ಪ್ಯುರೇರಿಯಾ ಬಳ್ಳಿಗಳ ಬೀಜವನ್ನು ಬಿತ್ತಬೇಕು ಎಂಬುದಾಗಿ ಹೇಳುತ್ತಾರೆ. ಪ್ರಾರಂಭಿಕ ವರ್ಷಗಳಲ್ಲಿ ರಬ್ಬರ್ ಸಸ್ಯಗಳು ಇನ್ನೂ ಗೆಲ್ಲು ಕೂಡಿರದ ಸಮಯದಲ್ಲಿ ಹೊಲದಲ್ಲೆಲ್ಲಾ ವ್ಯಾಪಿಸುತ್ತಾ ಬೆಳೆದು ನೋಡಲು ಹಚ್ಚ ಹಸುರಾಗಿ ಕಾಣುತ್ತದೆ. ಬೀಜ ಬಿತ್ತನೆ ಮಾಡಿ ಎರಡು ಮೂರು ವರ್ಷದಲ್ಲಿ ಇಡೀ ಹೊಲವನ್ನು ವ್ಯಾಪಿಸುತ್ತದೆ. ಬಳ್ಳಿಯ ಪ್ರತೀ ಗಂಟಿನಲ್ಲೂ ಬೇರು ಬಂದು ಅದು ಬೆಳೆಯುತ್ತಾ ಇರುತ್ತದೆ. ಸಸ್ಯ ಸಹಜ ಗುಣದಂತೆ ಎಲ್ಲಿ ಹೆಚ್ಚು ಬೆಳಕು ಲಭ್ಯವೋ ಅಲ್ಲೆಲ್ಲಾ ತನ್ನ ಬಾಹುಳ್ಯವನ್ನು ವಿಸರಿಸುತ್ತದೆ. ರಬ್ಬರ್ ಮರಗಳು ಬೆಳೆದು ಪೂರ್ತಿ ಗೆಲ್ಲುಗಳು ಪರಸ್ಪರ ಕೂಡಿದ ನಂತರ, ಅಲ್ಲಿ ಬಿಸಿಲು ಲಭ್ಯವಾಗದೇ ಅದು ತೋಟ ಬಿಟ್ಟು ಹೊರ ಭಾಗಕ್ಕೆ ತನ್ನ ಬೆಳವಣಿಗೆಯನ್ನು ಮುಂದುವರಿಸುತ್ತದೆ.
ಹೀಗೆ ಮುಂದುವರಿದ ಬಳ್ಳಿಗಳು ಯಾವುದೇ ಅಡ್ದಿ ಇಲ್ಲದ ಪಕ್ಷದಲ್ಲಿ ಎಷ್ಟು ದೂರಕ್ಕೂ ಹಬ್ಬುತ್ತದೆ. ಅಲ್ಲಿರುವ ಎಲ್ಲಾ ಸಸ್ಯ ಮರಮಟ್ಟುಗಳ ಮೇಲೆ ಬೆಳೆದು ಅದನ್ನು ಹತ್ತಿಕ್ಕಿ ಸಾಯಿಸಿ ತನ್ನ ಪ್ರಾಬಲ್ಯವನ್ನು ಮೆರೆಯುತ್ತದೆ. ಈ ಬಳ್ಳಿಗೂ ಸಹ ನಾನೊಬ್ಬನೇ ಬದುಕಬೇಕು, ಉಳಿದವರು ಬದುಕಬಾರದು ಎಂಬ ಮನೋಬಾವನೆಯೋ ಏನೋ?
ರಬ್ಬರ್ ಮುಚ್ಚಲು ಬೆಳೆ ಈಗ ರಸ್ತೆ ಬದಿ, ಸಾರ್ವಜಕ ಜಮೀಗಳಲ್ಲಿ ಅಳಿದುಳಿದ ಗಿಡ ಗಂಟಿಗಳ ಸಾವಿಗೆ ಕಾರಣವಾಗುತ್ತಿವೆ. ರಸ್ತೆ ಬದಿಯ ಅಥವಾ ಹೊಲದ ಬದಿಯ ಹಳ್ಳ ತೋಡುಗಳನ್ನು ಬಲೆ ಹಾಕಿದಂತೆ ಮುಚ್ಚಿ ನೀರು ಹರಿದಾಡಲು ಕಷ್ಟ ಪರಿಸ್ಥಿತಿ ಉಂಟುಮಾಡಿದೆ. ಈ ಬಳ್ಳಿ ಇರುವಲ್ಲಿ ಕೋತಿಗಳಿಗೂ ನವಿಲುಗಳಿಗೂ ಹಾಗೇ ಕಾಲು ಉಳ್ಳ ಯಾವುದೇ ಜೀವಿಗೂ ಓಡಾಟ ಮಾಡುವುದಕ್ಕೆ ಆಗುವುದಿಲ್ಲ. ಹೆಚ್ಚೇಕೆ ಪಕ್ಷಿಗಳಿಗೂ ಇದು ಆಸರೆಯಲ್ಲ. ರಬ್ಬರ್ ತೋಟ ಮಾಡಿದವರು ಈ ನಮೂನೆ ಬಳ್ಳಿ ಇರುವಾಗ ಅದರಲ್ಲಿ ಟ್ಯಾಪಿಂಗ್ಗಾಗಿ ನಸುಕಿನಲ್ಲಿ ಓಡಾಡುವಾಗ ಹಾವುಗಳು ಸಿಗಲಾರದೇ ಎಂದರೆ ಇಲ್ಲಿ ಹಾವು ಬದುಕುವುದೇ ಇಲ್ಲ ಎನ್ನುತ್ತಾರೆ!
ಸಸ್ಯ, ಹಾವು, ಪ್ರಾಣಿ, ಪಕ್ಷಿ ಮುಂತಾದ ಜೀವ ವೈವಿದ್ಯಗಳ ಬದುಕಿಗೆ ಸಂಚಕಾರವಾದ ಮುಚ್ಚಲು ಬೆಳೆ, ಜೊತೆಗೆ ನೈಮಲ್ಯಕ್ಕೂ ತೊಂದರೆಯಾದ ಮುಚ್ಚಲು ಬೆಳೆ ಬಳ್ಳಿಯನ್ನು ಸಾರ್ವಜಕ ಭೂಮಿಯಲ್ಲಿ ಬೆಳೆಯಲು ಬಿಡುವುದು ತಪ್ಪು. ಅದನ್ನು ಅವರವರ ಹೊಲದಲ್ಲಿ ವ್ಯವಸ್ಥಿತವಾಗಿ ಬೆಳೆಸುವ ಮೂಲಕ ಉದ್ದೇಶ ಸಾಧಿಸಿಕೊಳ್ಳಬಹುದೇ ಹೊರತು ಎಲ್ಲೆಲ್ಲೂ ತಮ್ಮ ಸಾರ್ವಭೌಮತ್ವವನ್ನು ಸ್ಥಾಪಿಸುವುದು ಶಿಷ್ಟಾಚಾರವೆಸುವುದಿಲ್ಲ.
ಚಿತ್ರ: ರಾಧಾಕೃಷ್ಣ ಹೊಳ್ಳ