ಜೀವಿಜ್ಞಾನ

ಜೀವಿಜ್ಞಾನ

ಪುಸ್ತಕದ ಲೇಖಕ/ಕವಿಯ ಹೆಸರು
ಕ್ಷಮಾ ವಿ ಭಾನುಪ್ರಕಾಶ್
ಪ್ರಕಾಶಕರು
ಸಹನಾ ಪಬ್ಲಿಕೇಷನ್, ರಾಜರಾಜೇಶ್ವರೀನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೭೫.೦೦, ಮುದ್ರಣ: ೨೦೨೩

ಪತ್ರಿಕೆಗಳಲ್ಲಿ ವಿಜ್ಞಾನ ಸಂಬಂಧಿ ಲೇಖನಗಳನ್ನು ಬರೆಯುತ್ತಿರುವ ಕ್ಷಮಾ ಭಾನುಪ್ರಕಾಶ್ ಅವರು ತಮ್ಮ ಬರಹಗಳಿಗೆ ಪುಸ್ತಕರೂಪ ನೀಡಿದ್ದಾರೆ. ಪರಿಸರ ಮತ್ತು ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಸರಳ ಲೇಖನಗಳನ್ನು ಎರಡು ಸಂಪುಟಗಳಲ್ಲಿ ಹೊರ ತಂದಿದ್ದಾರೆ. ಈ ಪುಸ್ತಕಕ್ಕೆ ಖ್ಯಾತ ವಿಜ್ಞಾನ ಲೇಖಕರಾದ ಕೊಳ್ಳೇಗಾಲ ಶರ್ಮ ಇವರು ಮುನ್ನುಡಿಯನ್ನು ಬರೆದಿದ್ದಾರೆ. ಮುನ್ನುಡಿಯಲ್ಲಿ ವಿಜ್ಞಾನ ಲೇಖಕರಾಗುವ ಸವಾಲುಗಳು, ಜನರಿಗೆ ವಿಷ್ಯದ ವಸ್ತುವನ್ನು ಮನನ ಮಾಡುವ ಸಂಕಷ್ಟಗಳ ಬಗ್ಗೆ ಬರೆದಿದ್ದಾರೆ. ಮುನ್ನುಡಿಯ ಆಯ್ದ ಭಾಗ ನಿಮ್ಮ ಓದಿಗಾಗಿ ಇಲ್ಲಿದೆ...

“ಕ್ಷಮಾ ಭಾನುಪ್ರಕಾಶ್ ಅವರ ಲೇಖನಗಳಿಂದ ನನಗೆ ಪರಿಚಿತರು. ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ವಿಜ್ಞಾನ ಲೇಖನಗಳಲ್ಲಿ ಇವರ ಹೆಸರು ಕಾಣುತ್ತಿತ್ತು. ಹೊಸ ಪೀಳಿಗೆಯ ಬರೆಹಗಾರ್ತಿ ಎನ್ನುವ ಕಾರಣಕ್ಕೆ ಅವರ ಬರಹಗಳ ಮೇಲೆ ನಮ್ಮ ಪೀಳಿಗೆಯವರ ಕಣ್ಣು ಸಾಕಷ್ಟು ಢಾಳಾಗಿಯೇ ಬಿದ್ದಿದೆ ಎನ್ನಬೇಕು. ಕೆಲವು ಲೇಖನಗಳನ್ನು ಒತ್ತಾಯ ಪೂರ್ವಕವಾಗಿ ಬರೆಸಿಕೊಂಡದ್ದೂ ಉಂಟು. ನನ್ನ ಲೇಖನಗಳ ಸಂಕಲನಕ್ಕೆ ಮುನ್ನುಡಿ ಬರೆದುಕೊಡಿ ಎಂದಾಗ ಸ್ವಲ್ಪ ಮುಜುಗರವೇ ಆಯಿತು. ಏಕೆಂದರೆ ಮುನ್ನುಡಿ ಎನ್ನುವುದು ಯಾವುದೇ ಪುಸ್ತಕದ ಒಳಹೊಗುವ ದಿಡ್ಡಿ ಬಾಗಿಲು, ಇಡೀ ಪುಸ್ತಕದ ಸತ್ವವನ್ನು ಹಿಡಿದಿಡಬೇಕಾದದ್ದು. ಅಷ್ಟು ಸಾಮರ್ಥ್ಯ ನನಗಿದೆಯೇ ಎನ್ನುವ ಸಂದೇಹ ಕಾಡಿತ್ತು.

ಇದಕ್ಕೆ ಕಾರಣವಿಲ್ಲದಿಲ್ಲ. ಇದು ಕೆಲವು ಲೇಖನಗಳ ಸಂಕಲನವಲ್ಲ. ನಾವು ಸಾಮಾನ್ಯವಾಗಿ ಸಂಕಲನ ಎಂದರೆ ಹತ್ತೋ, ಹದಿನೈದೋ ಲೇಖನಗಳನ್ನು ಕೂಡಿಸಿದ ಪ್ರಕಟಣೆ ಎಂದುಕೊಳ್ಳುತ್ತೇವೆ. ಅಪರೂಪಕ್ಕೆ ಅರವತ್ತು ಆಯಿತು ಅಂತಲೋ, ಅಥವಾ ನಿವೃತ್ತಿ ಪಡೆದರಂತಲೋ ಪ್ರಕಟಿಸುವ ಸಮಗ್ರ ಗ್ರಂಥದಂತೆ ಒಟ್ಟಿಗೇ ಐವತ್ತು ವಿಜ್ಞಾನ ಲೇಖನಗಳನ್ನು ಓದಿ, ಅವುಗಳೆಲ್ಲದರ ಒಟ್ಟಾರೆ ಹೂರಣವನ್ನು ಓದುಗರ ಮುಂದಿಡುವುದು ಸವಾಲೇ ಸರಿ. ಇಂತಹ ಸವಾಲನ್ನು ಕ್ಷಮಾ ನಮ್ಮ ಮುಂದಿಟ್ಟಿದ್ದಾರೆ.

'ಜೀವಿಜ್ಞಾನ' ಎನ್ನುವ ಶೀರ್ಷಿಕೆಯೇ ಕ್ಷಮಾ ಅವರ ಬರೆಹಗಳ ಒಂದು ವೈಶಿಷ್ಟ್ಯವನ್ನು ಮುಂದಿಟ್ಟಿವೆ. ಕನ್ನಡದಲ್ಲಿ ಪನ್ ಎನ್ನುವುದು ಅಪರೂಪ ಎನ್ನುವವರು ಈ ಪುಸ್ತಕದಲ್ಲಿರುವ ಬರಹಗಳ ಶೀರ್ಷಿಕೆಯನ್ನು ಓದಿದರೆ ಸಾಕು. ಕೆಲವು ಶೀರ್ಷಿಕೆಗಳು ಕ್ಲಿಕ್ ಬೈಟ್ ಶೀರ್ಷಿಕೆಗಳಂತೆ ಆಕರ್ಷಿಸುತ್ತವೆ. ಅಲಿಯಮ್ ಸಟೈವಂನಲ್ಲಿ ಅಡಗಿರುವ ಇದೆಂಥ ಶೀರ್ಷಿಕೆ ಎಂದು ನಿಮ್ಮನ್ನು ಸೆಳೆದೊಯ್ದು, ಬೆಳ್ಳುಳ್ಳಿಯ ಸದ್ಗುಣಗಳನ್ನು ಪರಿಚಯಿಸುತ್ತದೆ. ಅತ್ತಿ-ಅಂಜೂರ ಜಾತಿಯ ಹಣ್ಣುಗಳ ವೈಶಿಷ್ಟ್ಯವನ್ನು ಪರಿಚಯಿಸುವ ಇನ್ನೊಂದು ಲೇಖನದಲ್ಲಿ ಕನ್ನಡದ ಸಹಬಾಳ್ವೆ, ಪರಸ್ಪರಾವಲಂಬನೆಯ ಬಗ್ಗೆ ಮ್ಯೂಚುವಾಲಿಸಂ ಎನ್ನುವ ಪದವನ್ನೂ ನಮಗೆ ಪರಿಚಯಿಸುತ್ತಾರೆ ಕ್ಷಮಾ. ಕನ್ನಡದಲ್ಲಿ ಇಂಗ್ಲೀಷು ಸಹಜವಾಗಿಯೇ ಬೆರೆತು ಹೋಗುವಂತೆ ತೋರುವ ಬರೆಹಗಳು ಇವು. ಕ್ಷಮಾ ಬರೆಹಗಳ ಮೂಲಕ ಸರಳವಾದ ಕನ್ನಡದಲ್ಲಿ, ಓದುಗನೊಂದಿಗೆ ಆತ್ಮೀಯವಾದ ಸಂಭಾಷಣೆಯಲ್ಲಿ ತೊಡಗುತ್ತಾರೆ. ಅವರ ಆತ್ಮೀಯತೆಯಿಂದಲೇ ಇರಬೇಕು, ಲೇಖನಗಳ ಭಾಷೆ ಕೆಲವೆಡೆಯಲ್ಲಿ ಆಡುಮಾತಿನಂತೆಯೇ ಧ್ವನಿಸುತ್ತದೆ. ಇದನ್ನು ಪಾಠದ ದೋಷ ಎನ್ನುವುದಾದರೆ, ಸಂವಹನಕ್ಕೆ ಕುಂದು ಬಂದಂತೆ ತೋರುವುದಿಲ್ಲ. ಈ ಬಗೆಯ ಪ್ರಯೋಗಗಳನ್ನು ಎಲ್ಲ ಲೇಖನಗಳಲ್ಲಿಯೂ ಕಾಣಬಹುದು. ಇನ್ನು ವಿಷಯಗಳ ಹೂರಣಕ್ಕೆ ಬಂದರೆ, 'ಜೀವಿಜ್ಞಾನ', ಜೀವಿಗಳ ಬಗೆಗೆ ಅರಿವನ್ನು ಮೂಡಿಸುವ ಪುಸ್ತಕವಷ್ಟೇ ಅಲ್ಲ. ಜೀವಿವಿಜ್ಞಾನದ ಹಲವು ಕೌತುಕಗಳನ್ನು ನಮ್ಮ ಓದಿಗೆ ತೆರೆದಿಡುತ್ತಾ ಸಾಗುತ್ತದೆ. ಜೀವಿ ಜಗತ್ತಿನ ವೈವಿಧ್ಯವನ್ನು ಜಾಲರಿಯ ಮೂಲಕ ನೋಡಿದಂತೆ ಇಷ್ಟಿಷ್ಟೇ ಕಾಣಿಸುತ್ತದೆ.

ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಇನ್ನೂ ಮಾಹಿತಿ ಬೇಕಿತ್ತು ಎಂದು ಓದುಗರಿಗೆ ಅನಿಸಬಹುದು. ಅದು ಬಿಡಿ ಲೇಖನಗಳು ಪುಟ್ಟದಾಗಿರುವುದರಿಂದ ಆಗುವ ಅನುಭವವೆನ್ನಿ. ಒಂದು ರೀತಿಯಲ್ಲಿ ಈ ಅನಿಸಿಕೆಯೂ ಲೇಖಕರ ಗೆಲುವು. ಸಾಮಾನ್ಯವಾಗಿ ನಾವು ಗಮನಿಸಿದ ವಿಷಯಗಳತ್ತ ಒಲವು ಮೂಡಿಸಿ, ದಾಹ ಹೆಚ್ಚಿಸುವುದು ವಿಜ್ಞಾನ ಲೇಖನಗಳ ಒಂದು ಗುರಿಯಲ್ಲವೇ? ಇಲ್ಲಿಂದ ಮುಂದೆ ಇಂತಹ ವಿಷಯಗಳ ಮೇಲೆ ಇನ್ನಷ್ಟು ದೀರ್ಘವಾಗಿ ಚರ್ಚಿಸಿ, ಹೊಸ ಹೊಳಹುಗಳನ್ನು ನೀಡುವ ಪುಸ್ತಕವನ್ನು ಕ್ಷಮಾ ಬರೆಯುತ್ತಾರೆನ್ನುವ ವಿಶ್ವಾಸ, ಹಾಗೂ ಹಾರೈಕೆ ನನ್ನದು.”

ಈ ಪುಸ್ತಕದ ಜೊತೆ ಜೀವಿಜ್ಞಾನದ ಎರಡನೇ ಸಂಪುಟವೂ ಬಿಡುಗಡೆಯಾಗಿದ್ದು, ಅದರ ಬೆಲೆ ರೂ ೧೬೫.೦೦ ಆಗಿದೆ.