ಜೀವಿಸುವುದೇ ಒಂದು ಸಾಧನೆ ಎಂಬ ಅರ್ಥದ ಕಡೆಗೆ ವಿಶ್ವದ ಜನರ ಪಯಣ…!
ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ತೆಲುಗು ಭಾಷಿಕರು ಇದಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಇದು ಉದ್ದೇಶ ಪೂರ್ವಕವೇ ಅಥವಾ ಆಕಸ್ಮಿಕವೇ ಅಥವಾ ಯಾವುದೋ ಅಸಮಾಧಾನದ ಪ್ರತಿರೂಪವೇ ಅಥವಾ ಅದಕ್ಕಿಂತ ಹೆಚ್ಚು ಅರ್ಥ ಹೊಂದಿದೆಯೇ?
ಸುಮಾರು 30 ವರ್ಷಗಳ ಹಿಂದೆ ಭಾರತೀಯ ಸಮಾಜದಲ್ಲಿ ವಿದೇಶದಲ್ಲಿ ಓದುವುದು, ಉದ್ಯೋಗ - ವ್ಯವಹಾರ ಮಾಡುವುದು, ವಿದೇಶ ಪ್ರವಾಸ ಮಾಡುವುದು, ವಿದೇಶದಲ್ಲಿ ವಾಸಿಸುವುದು, ವಿದೇಶಗಳಲ್ಲಿ ಇರುವ ವಧು ವರರನ್ನು ಮದುವೆಯಾಗುವುದು ಒಂದು ಪ್ರತಿಷ್ಠಿತ, ಗೌರವದ, ಶ್ರೀಮಂತಿಕೆಯ, ಹೆಮ್ಮೆಯ, ಸಾಧನೆಯ ಲಕ್ಷಣವಾಗಿತ್ತು.
ಆದರೆ ಜಾಗತೀಕರಣದ ನಂತರ ಮುಕ್ತ ಮಾರುಕಟ್ಟೆ ವ್ಯವಸ್ಥೆ ಭಾರತದೊಳಗೆ ಪ್ರವೇಶಿಸಿದ ಪ್ರಭಾವದಿಂದಾಗಿ ಇಡೀ ವಿಶ್ವ ಸಂಪರ್ಕ ಕ್ರಾಂತಿಯಿಂದಾಗಿ ಚಿಕ್ಕದಾಯಿತು. ಅದರಲ್ಲೂ ಮಾಹಿತಿ ತಂತ್ರಜ್ಞಾನ ( ಸಾಪ್ಟ್ ವೇರ್ ) ಉದ್ಯಮದ ಬೆಳವಣಿಗೆ ಮತ್ತು ಅದರಲ್ಲಿ ಭಾರತ ಸಾಧಿಸಿದ ನಿಯಂತ್ರಣ, ಅದರ ಪರಿಣಾಮ ರಿಯಲ್ ಎಸ್ಟೇಟ್ ಉದ್ಯಮದ ತೀವ್ರ ವೇಗದ ಅಭಿವೃದ್ಧಿ, ಅದರಿಂದ ಸಾಮಾನ್ಯ ಜನರಲ್ಲಿ ಹರಿದಾಡುತ್ತಿರುವ ಹಣ, ವಿಮಾನಯಾನ ಸಂಸ್ಥೆಗಳ ಬೆಳವಣಿಗೆ, ಶಿಕ್ಷಣ ಕ್ಷೇತ್ರದ ಕ್ರಾಂತಿ, ಪ್ರವಾಸೋದ್ಯಮ ಕಂಪನಿಗಳ ಮಾರುಕಟ್ಟೆ ವಿಸ್ತರಣೆ ಎಲ್ಲವೂ ಸೇರಿ ವಿದೇಶ ಪ್ರವಾಸಗಳು ಸಾಮಾನ್ಯವಾದವು.
ಹಾಗೆಂದು ಇದು ಇಡೀ ದೇಶವನ್ನೇ ವ್ಯಾಪಿಸಿದೆ ಎಂದು ಅರ್ಥವಲ್ಲ. ಈಗಲೂ ವಿಮಾನದಲ್ಲಿ ಓಡಾಡುವವರ ಸಂಖ್ಯೆ ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 5% ಗಿಂತ ಕಡಿಮೆ. ಇನ್ನು ವಿದೇಶ ಪ್ರವಾಸ ಅದಕ್ಕಿಂತ ಕಡಿಮೆ. ಆದರೂ 30 ವರ್ಷಗಳ ಹಿಂದಿನ ಅಂಕಿಅಂಶಗಳಿಗೆ ಹೋಲಿಸಿದರೆ ಇಂದು ಅತಿಹೆಚ್ಚು ಎಂದು ಹೇಳಬಹುದು. ಮುಕ್ತ ಮಾರುಕಟ್ಟೆಗೆ ಮೊದಲು ವಿಶ್ವದಲ್ಲಿ ಅಮೆರಿಕ, ರಷ್ಯಾ, ಕೆಲವು ಯೂರೋಪಿಯನ್ ದೇಶಗಳು, ಆಸ್ಟ್ರೇಲಿಯಾ ಮತ್ತು ಕೆಲವೇ ಕೆಲವು ಅರಬ್ ದೇಶಗಳು ಮಾತ್ರ ಶ್ರೀಮಂತ ದೇಶಗಳಾಗಿದ್ದವು. ಆದರೆ ನಂತರದ ಕೆಲವು ವರ್ಷಗಳಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿದ ಭಾರತ - ಚೀನಾ ಮುಂತಾದ ದೇಶಗಳು ಹೆಚ್ಚು ಪ್ರಬಲವಾಗಿ ಬೆಳೆದವು. ಕೆಲವು ಕ್ಷೇತ್ರಗಳಲ್ಲಿ ಪಾಶ್ಚಾತ್ಯರನ್ನೇ ಮೀರಿಸುವಷ್ಟು ಬಲಶಾಲಿಯಾದವು.
ಮುಕ್ತ ಮಾರುಕಟ್ಟೆ ವ್ಯವಸ್ಥೆಯಿಂದ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಬೃಹತ್ ಜನಸಂಖ್ಯೆಯ ಗ್ರಾಹಕರನ್ನು ಸೆಳೆದು ಬಲಿಷ್ಠ ಆರ್ಥಿಕ ಸಾಮ್ರಾಜ್ಯ ಕಟ್ಟಬಹುದು ಎಂಬ ಭ್ರಮೆಯಲ್ಲಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಇದರಿಂದ ಸ್ವಲ್ಪ ಮಟ್ಟಿಗೆ ವಿಚಲಿತವಾಗಿದ್ದು ನಿಜ. ಅದರ ಜೊತೆಗೆ ದಶಕದ ಹಿಂದೆ ಸಂಭವಿಸಿದ ಆರ್ಥಿಕ ಕುಸಿತ ಅಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿತು.
ಇದೇ ಸಮಯದಲ್ಲಿ ಭಾರತದ ಅನೇಕ ವಿದ್ಯಾರ್ಥಿಗಳು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದು ಶಿಕ್ಷಣ ಮಾತ್ರವಲ್ಲದೆ ಉದ್ಯೋಗಗಳಲ್ಲಿ ಪ್ರಾಮುಖ್ಯತೆ ಪಡೆದರು. ರಾಜಕೀಯದಲ್ಲಿ ಸಹ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಹಜವಾಗಿ ಅಲ್ಲಿನ ಕೆಲವು ಜನರಿಗೆ ಈ ಬಗ್ಗೆ ಅಸಮಾಧಾನ ಇರುತ್ತದೆ. ಕೆಲವರು ತೀರಾ ಹತಾಶರು ಆಗಿರಬಹುದು. ಇದು ಒಂದು ಕಾರಣವಾದರೆ ಇನ್ನೊಂದು ಕೆಲವು ಭಾರತೀಯ ವಿದ್ಯಾರ್ಥಿಗಳ ಅತಿರೇಕದ ವರ್ತನೆ ಸಹ ಕಾರಣವಾಗಿರಬಹುದು. ನಾವು ಬೇರೆ ದೇಶಕ್ಕೆ ಹೋದಾಗ ಅಲ್ಲಿನ ಕಾನೂನು ಎಷ್ಟೇ ಸ್ವಾತಂತ್ರ್ಯ ಮತ್ತು ಸಮಾನತೆ ನೀಡಲಿ ನಾವು ಮಾತ್ರ ಅಲ್ಲಿನ ಸಮಾಜದ ಜನಜೀವನದಲ್ಲಿರುವ ಮಾನಸಿಕತೆಯನ್ನು ಸರಿಯಾಗಿ ಗ್ರಹಿಸಿ ಅದಕ್ಕೆ ಸ್ಪಂದನೆ ನೀಡಬೇಕು. ಆದರೆ ಇಲ್ಲಿನ ಕೆಲವು ದಿಢೀರ್ ಶ್ರೀಮಂತಿಕೆ ಪಡೆದ, ಹಣ ಮತ್ತು ಅಧಿಕಾರದ ಅಮಲೇರಿದ ಜನರ ಮಕ್ಕಳು ಅಲ್ಲಿ ಸಾರ್ವಜನಿಕವಾಗಿ ಸ್ವೇಚ್ಛೆಯಿಂದ ವರ್ತಿಸುವ ಘಟನೆಗಳು ಅಲ್ಲಿನ ಸ್ಥಳೀಯರನ್ನು ಪರೋಕ್ಷವಾಗಿ ಉದ್ರೇಕಿಸಿರಲೂ ಬಹುದು. ಅದು ನಿರ್ದಿಷ್ಟ ಕಾರಣ ಇಲ್ಲದೇ ಕೆಲವೊಮ್ಮೆ ಸ್ಪೋಟಿಸಿರಲು ಬಹುದು. ಅಲ್ಲಿನ ಆಚಾರ ವಿಚಾರ ಸಂಪ್ರದಾಯಗಳ ಬಗ್ಗೆ ತಪ್ಪು ತಿಳಿವಳಿಕೆ ಸಹ ಇರಬಹುದು.
ಒಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳ ಅಸಹಜ ಸಾವುಗಳು ವರದಿಯಾಗುತ್ತಿರುವುದು ಮಾತ್ರ ವಾಸ್ತವ. ಅಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಟೀಕಿಸುವ ಜೊತೆಗೆ ನಮ್ಮ ಜವಾಬ್ದಾರಿ ಮತ್ತು ನಡವಳಿಕೆ ಸಹ ಸರಿಪಡಿಸಿಕೊಳ್ಳಬೇಕಾಗುತ್ತದೆ. ಸಂಸ್ಕೃತಿ ಮತ್ತು ನಾಗರಿಕತೆ, ಇತಿಹಾಸದ ಅನುಭವ, ಮಾನವೀಯತೆ ಹಾಗು ಸಾಮಾನ್ಯ ಜ್ಞಾನ ಜೊತೆಗೆ ಇವುಗಳ ಅನುಷ್ಠಾನ ವ್ಯಕ್ತಿಯೊಬ್ಬನ ಕ್ರಿಯೆ ಪ್ರತಿಕ್ರಿಯೆಗಳನ್ನು ರೂಪಿಸುವ ಸಾಧನ ಮತ್ತು ಮಾರ್ಗಗಳು. ಅದು ಸಮಾಜದ ಒಟ್ಟು ಗುಣಮಟ್ಟವನ್ನು ನಿರ್ಧರಿಸುತ್ತದೆ. ಅಪರೂಪದ ಆಕಸ್ಮಿಕಗಳನ್ನು ಹೊರತುಪಡಿಸಿ ಈ ವಿಧಾನಗಳು ವಾಸ್ತವದಲ್ಲಿ ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಅದು ಯಾವ ದೇಶವೇ ಆಗಿರಲಿ.
ಇವುಗಳ ಕೊರತೆ ಆದರೆ ಆಗ ಬದುಕು ಸಂಘರ್ಷಮಯವಾಗುತ್ತದೆ. ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆಗೆ ಇದು ಬಹುಮುಖ್ಯ ಕಾರಣವಾಗಿದೆ. ನಾವು ಎಲ್ಲಿ ಹೇಗೆ ವರ್ತಿಸಬೇಕು ಎಂಬ ತಿಳಿವಳಿಕೆ ಮತ್ತು ನಡವಳಿಕೆ ನಮಗಿರಬೇಕು. ಇದೆಲ್ಲದರ ನಡುವೆಯೂ ಆಕಸ್ಮಿಕ ಆಗಬಹುದು. ಆದರೆ ಸಹಜ ವಾತಾವರಣದಲ್ಲಿ ಇದು ಆಗುವುದಿಲ್ಲ.
ಗ್ರಾಹಕ ಸಂಸ್ಕೃತಿ, ಮಾರುಕಟ್ಟೆಯ ವಿಸ್ತರಣೆ, ಹಣ ಕೇಂದ್ರೀಕೃತ ವ್ಯವಸ್ಥೆ ಮನುಷ್ಯರೊಳಗಿನ ಮೃಗೀಯ ಭಾವನೆಗಳನ್ನು ಉದ್ರೇಕಿಸಿದೆ. ಬದುಕುವುದೇ ಒಂದು ಸಾಧನೆ ಎಂಬಂತಾಗಿದೆ. ಅದು ಬಹುತೇಕ ಅದೃಷ್ಟವನ್ನು ಅವಲಂಬಿಸಿರುತ್ತದೆ ಎಂಬಲ್ಲಿಗೆ ಮನಸ್ಸು ಹತಾಶ ಸ್ಥಿತಿ ತಲುಪಿದೆ. ಮುಕ್ತ ಮಾರುಕಟ್ಟೆ ಕೇವಲ ವಸ್ತುಗಳಿಗೆ ಮಾತ್ರ ಸೀಮಿತವಾಗದೆ ಅದು ಸಂಸ್ಕೃತಿ, ನಾಗರಿಕತೆ ಮತ್ತು ಮಾನವೀಯತೆಗೆ ಮುಕ್ತವಾದಾಗ ಮಾತ್ರ ವಿಶ್ವ ನೆಮ್ಮದಿಯ ತಾಣವಾಗಬಹುದು. ಇಲ್ಲದಿದ್ದರೆ ಅಸಹಜ ಸಾವುಗಳು ಸಹಜವಾಗುತ್ತಾ ಸಾಗುತ್ತದೆ. ನಮ್ಮ ಪ್ರತಿಕ್ರಿಯೆಗಳು ಸಂವೇದನಾ ರಹಿತವಾಗಿ ನಾವು ಅನಾಗರಿಕತೆಯತ್ತಾ ಸಾಗುತ್ತೇವೆ.
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ