ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ

ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ

ಬರಹ

ಜೀವ ಉಳಿಸುವ ಲೈಫ್‌ಸ್ಟ್ರಾ ಎಂಬ ಹೀರು ನಳಿಗೆ
ನಮ್ಮಲ್ಲಿ ನೀರಿಗೆ ಹೇಳಿಕೊಳ್ಳುವ ಬರವಿರದಿರಬಹುದು. ಆದರೆ ಸ್ವಚ್ಛ ನೀರಿಗೆ ಬರ ತಪ್ಪದ್ದಲ್ಲ. ಕಲುಷಿತ ನೀರಿನಿಂದ ಬರುವ ರೋಗಗಳು ಸಾವಿಗೆ ಪ್ರಧಾನ ಕಾರಣವಾಗುವುದಿದೆ. ಜನರು ಕುಡಿಯುವ ನೀರನ್ನು ಸೋಸಿ ಶುದ್ಧಗೊಳಿಸುವ ಹೀರುನಳಿಕೆಯೊಂದನ್ನು ಸ್ವಿಸ್ ಕಂಪೆನಿಯೊಂದು ಅಭಿವೃದ್ಧಿ ಪಡಸಿದೆ. ಇಂಗಾಲ ಮತ್ತಿತರ ಸಂಯುಕ್ತಗಳನ್ನು ಕೊಳವೆಯೊಂದರಲ್ಲಿ ತುಂಬಿ, ನೀರು ಕುಡಿಯುವಾಗ ಇದನ್ನು ಸ್ಟ್ರಾದಂತೆ ಬಳಸಿ, ನೀರನ್ನು ಸೋಸುವುದು ಕಂಪೆನಿಯು ಕಂಡುಹಿಡಿದ ಅಗ್ಗದ ನೀರು ಶುದ್ಧಕ. ಶೇಕಡಾ ತೊಂಭತ್ತೊಂಭತ್ತು ಬ್ಯಾಕ್ಟಿರಿಯಾಗಳನ್ನು ನಿವಾರಿಸುವ ಈ ಶೋಧಕವು ಏಳುನೂರು ಲೀಟರ್‍ ಸೋಸಿದ ಬಳಿಕವಷ್ಟೇ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತದೆ. ಒಂದು ಕೊಳವೆಗೆ ನೂರೈವತ್ತು ರೂಪಾಯಿ ದುಬಾರಿ ಅನಿಸಿದರೂ ಪ್ರತಿ ಲೀಟರಿಗೆ ತಗಲುವ ಖರ್ಚು ನಗಣ್ಯ. ಆಸ್ಪತ್ರೆ ಖರ್ಚಿನಲ್ಲಿ ಆಗುವ ಉಳಿಕೆ ಗಮನಿಸಿದರೆ ಇದರ ಉಪಯುಕ್ತತೆ ಯಾರಿಗೂ ಮನವರಿಕೆಯಾದೀತು. ಅಂದ ಹಾಗೆ ಇದಕ್ಕೆ ಲೈಫ್‌ಸ್ಟ್ರಾ ಎಂದು ಹೆಸರಿಸಲಾಗಿದೆ.
ಕಂಪ್ಯೂಟರ್‍ ಆಟ ಆಡಲು ಸಂಬಳ
ತಮ್ಮ ಉದ್ಯೋಗಿಗೆ ದಿನವಡೀ ಕಂಪ್ಯೂಟರ್‍ ಗೇಮ್‌ಗಳನ್ನು ಆಡಲು ಕಂಪೆನಿಗಳು ಸಂಬಳ ಕೊಡಬೇಕಾಗುತ್ತದೆ ಎಂದರೆ ನಂಬುವಿರಾ? ಹೌದು-ಕಂಪ್ಯೂಟರ್‍ ಗೇಮ್‌ಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಗಳು ಅಂತಹ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಅನಿವಾರ್ಯ. ಅಭಿವೃದ್ಧಿ ಪಡಿಸಿದ ಆಟ ತಪ್ಪುಗಳಿಂದ ಹೊರತಾಗಿದೆಯೇ ಎಂದು ಕೂಲಂಕಷ ಪರೀಕ್ಷೆ ನಡೆಸಬೇಕಾಗುತ್ತದೆ. ಇದನ್ನು ಪರೀಕ್ಷಿಸಲು ಗಂಟೆಗಟ್ಟಲೆ ಆಟ ಆಡಿಯೇ ನೋಡಬೇಕು.ಆಟವನ್ನು ಬೇರೆ ಬೇರೆ ಕಠಿಣ ಮಟ್ಟದಲ್ಲಿ ಆಡಿ ಪರೀಕ್ಷೆ ನಡೆಸಿ,ಎಲ್ಲೂ ತಪ್ಪುಗಳಾಗುವುದಿಲ್ಲ ಎಂದು ಖಚಿತ ಪಡಿಸಿಕೊಂಡ ನಂತರವಷ್ಟೇ ಅಟವನ್ನು ಬಿಡುಗಡೆ ಮಾಡಬಹುದು. ಹಾಗಾಗಿ ಇದಕ್ಕೆಂದೇ ನಿಯೋಜಿತರಾದ ಪರೀಕ್ಷಕರು ಕಂಪ್ಯೂಟರ್‍ ಮುಂದೆ ಕುಳಿತು ತಾಳ್ಮೆಯಿಂದ ಆಡಿ ಆಟದಲ್ಲಿ ಕಂಡು ಬರುವ ತಪ್ಪುಗಳನ್ನು ಕಂಡುಹಿಡಿದು ಅಭಿವೃದ್ಧಿ ಪಡಿಸಿದ ಇಂಜಿನಿಯರುಗಳಿಗೆ ವರದಿ ಮಾಡಬೇಕು. ಅವರದನ್ನು ಸರಿಪಡಿಸಿ ಮತ್ತೆ ಪರೀಕ್ಷಿಸಲು ನೀಡಬೇಕು.ಮತ್ತೆ ಪರೀಕ್ಷೆ ಮುಂದುವರಿಯಬೇಕು. ಹೀಗೆ ಪದೇ ಪದೇ ಆಡಿದ ಆಟವನ್ನೇ ಆಡುವ ಹಿಂಸೆ ಈ ಪರೀಕ್ಷಕರಿಗೆ.ಈ ಕೆಲಸಕ್ಕೆ ಸಿಗುವ ಸಂಬಳವೂ ಕಡಿಮೆಯೇ.ಚಾ ಕಂಪೆನಿಗಳ ಚಾಹುಡಿಯ ಗುಣಮಟ್ಟ ಪರೀಕ್ಷಕರ ನೆನಪು ನಿಮಗೆ ಬಂತೇ?
ಗುಂಪು ಕರಗಿಸಲು ಹೊಸ ಅಸ್ತ್ರ
ಇರಾಕಿನಂತಹ ಗಲಭೆ ಪೀಡಿತ ಪ್ರದೇಶಗಳಲ್ಲಿ ಪ್ರಭಾವಶಾಲಿಯಾಗಬಲ್ಲ ಕಿರಣಾಸ್ತ್ರವನ್ನು ಸಂಶೋಧಿಸಲಾಗಿದೆ. ಇದರ ಬಳಕೆಗೆ ಅಮೆರಿಕನ್ ಸೇನಾ ಪಡೆಗಳಿಗೆ ಅನುಮತಿಯನ್ನೂ ನೀಡಲಾಗಿದೆ.ಈ ಹೊಸ ಅಸ್ತ್ರವನ್ನು ಬಳಸಲು ಪಡೆಗಳು ಮಾಡಬೇಕಾದ್ದಿಷ್ಟೆ. ಬಂದೂಕದಿಂದ ಅಲೆಗಳನ್ನು ಹೊರಸೂಸಬೇಕು. ಈ ಅಲೆಗೆ ಮೈಯೊಡ್ಡಿದವರಿಗೆ ಮೈಯಲ್ಲಿ ವಿಪರೀತ ಉರಿ ಉಂಟಾಗುತ್ತದೆ.ಅವರಿಗೆ ಬವಳಿ ಬಂದು ಬೀಳುವಂತಾಗುತ್ತದೆ. ಆದರೆ ಅಲ್ಲಿ ನಿಲ್ಲಲೂ ಸಾಧ್ಯವಾಗದೆ, ಅವರು ಜಾಗ ಖಾಲಿ ಮಾಡುವುದು ಅನಿವಾರ್ಯವಾಗುತ್ತದೆ. ಆ ಅಲೆಗಳು ಅತಿ ಕಿರಿಯ ತರಂಗಾಂತರವುಳ್ಳವು.ಕ್ಷಕಿರಣಗಳಿಗೆ ಹೋಲಿಸಿದರೆ ಇವುಗಳ ತರಂಗಾಂತರ ಅಧಿಕ ಆದರೆ ಮೈಕ್ರೋವೇವ್‌ ಅವನ್‌ಗಳಿಗೆ ಹೋಲಿಸಿದರೆ ತರಂಗಾಂತರ ಕಿರಿದು.
ಈ ಅಲೆಗಳಿಗೆ ಈಡಾದವರಿಗೆ ಮೈಯುರಿತ ತುಸು ಹೊತ್ತು ಇರುತ್ತದೆ. ಮೈಸುಟ್ಟ ಅನುಭವ ಹೊತ್ತು ಕಳೆದಂತೆಲ್ಲಾ ಕಡಮೆಯಾಗುತ್ತದೆ.ಈ ಆಯುಧಕ್ಕೆ "ಕ್ರಿಯಾಶೀಲ ನಿರಾಕರಣೆ ವ್ಯವಸ್ಥೆ" ಎಂದು ಹೆಸರಿಸಲಾಗಿದೆ.ಆಯುಧವನ್ನು ಆಯ್ದ ಸ್ವಯಂಸೇವಕರ ಮೇಲೆ ಸಫಲವಾಗಿ ಪ್ರಯೋಗಿಸಲಾಗಿದೆ.ಇದರ ಸಂಶೋಧನೆಗೆ ಹತ್ತು ವರ್ಷ ತಗಲಿದೆ. ಬಂದ ಖರ್ಚು ನಲ್ವುತ್ತು ಮಿಲಿಯನ್ ಡಾಲರು.ಇರಾಕಿನಲ್ಲಿ ಇನ್ನೇನು ಇದರ ಪ್ರಯೋಗ ಶುರುವಾಗಲಿದೆ.
ನದಿ ನೀರು ವಿವಾದ ಬಗೆ ಹರಿಸಲು ತಂತ್ರಾಂಶ!
ನೀರಿನ ವಿಶ್ಲೇಷಣೆ ಮತ್ತು ಯೋಜನೆ ವ್ಯವಸ್ಥೆ(ವೀಪ್-WEAP-Water Evaluation And Planning System) ಎನ್ನುವ ತಂತ್ರಾಂಶ ಜಗತ್ತಿನಾದ್ಯಂತ ನೀರಿನ ಹಂಚಿಕೆ ವಿವಾದಗಳನ್ನು ಬಗೆಹರಿಸಲು ಸಮರ್ಥವಾಗಿದೆಯಂತೆ. ಇದು ನೀರಿನ ಲಭ್ಯತೆ ಮತ್ತು ಸಮರ್ಥ ಬಳಕೆ ಬಗೆಗೆ ವಿಶ್ಲೇಷಣೆ ನಡೆಸಿ ಯೋಜಿಸಲು ಅವಕಾಶ ನೀಡುತ್ತದೆ. ಬದಲಾಗುವ ಪರಿಸ್ಥಿತಿಯಲ್ಲಿ ನೀರನ್ನು ಹೇಗೆ ಹಂಚಬಹುದು ಎಂಬುದನ್ನು ತಂತ್ರಾಂಶದ ಮೂಲಕ ಅಧ್ಯಯನ ನಡೆಸಲು ಬರುತ್ತದೆ.
ಕಾವೇರಿ ನೀರಿನ ಹಂಚಿಕೆ ವಿವಾದ ಬಗೆ ಹರಿಸಲು ಅರ್ಘ್ಯಂ ಎನ್ನುವ ಸಾರ್ವಜನಿಕ ದಾನಶೀಲ ಸಂಸ್ಥೆ ಮತ್ತು ತಂತ್ರಾಂಶ ತಯಾರಿಸಿದ ಮೈದಾಸ್ ಎನ್ನುವ ಸಂಸ್ಥೆ ಇದರ ಪ್ರಾಯೋಗಿಕ ಬಳಕೆಗೆ ಒಪ್ಪಂದಕ್ಕೆ ಬಂದಿವೆ.
ಬಂದಿದೆ ಸುಲಭದಲ್ಲಿ ಕಲಿಯಬಹುದಾದ ಕೀಲಿಮಣೆ
ಟೈಪಿಂಗ್ ಕಲಿಯುವುದನ್ನು ಸುಲಭ ಮಾಡುವ ಹೊಸ ವಿನ್ಯಾಸದ ಕೀಲಿ ಮಣೆ ಈಗ ಲಭ್ಯ. ಇದರಲ್ಲಿ ಕೀಲಿಗಳ ಸ್ಥಾನ ಪಲ್ಲಟಗೊಂಡಿದೆ. ಎ,ಬಿ,ಸಿ,ಡಿಗಳನ್ನು ಕ್ರಮಾನುಸಾರ ಜೋಡಿಸಲಾಗಿದೆ. ಬಲ ಹಾಗೂ ಎಡಗೈಗಳ ಮಧ್ಯೆ ಖಾಲಿ ಸ್ಥಳ ನೀಡುವ ಕೀಲಿಗಳು ಪ್ರತಿ ಹೆಬ್ಬೆರಳಿಗೆ ಪ್ರತ್ಯೇಕ ಪ್ರತ್ಯೇಕವಾಗಿ ಲಭ್ಯವಿವೆ.ಬೆಲೆ ಎಪ್ಪತ್ತು ಡಾಲರು.ಕೀಲಿಗಳ ಸಂಖ್ಯೆಯಲ್ಲೂ ಕಡಿತವಾಗಿದೆ.
*ಅಶೋಕ್‌ಕುಮಾರ್‍ ಎ